ಸಾರಾಂಶ
ಗುರುನಾನಕ ಜಯಂತಿ ಅಂಗವಾಗಿ ನ.15ರಂದು ಮಧ್ಯಾಹ್ನ 3ರಿಂದ ರಾತ್ರಿ 9ರ ವರೆಗೆ ನಗರದಲ್ಲಿ ಭವ್ಯ ಮೆರವಣಿಗೆ ಜರುಗಲಿದೆ.
ಕನ್ನಡಪ್ರಭ ವಾರ್ತೆ, ಬೀದರ್
ಇಲ್ಲಿನ ಪವಿತ್ರ ಗುರುದ್ವಾರಾದಲ್ಲಿ ಶುಕ್ರವಾರ 555ನೇ ಗುರುನಾನಕ ಜಯಂತಿ ಆಚರಣೆಗಾಗಿ ಗುರುದ್ವಾರಾ ಪ್ರಬಂಧಕ ಕಮಿಟಿ ಎಲ್ಲ ಸಿದ್ಧತೆಗಳನ್ನು ಕೈಗೊಂಡಿದೆ.ಸಿಖ್ಖ ಧರ್ಮಗುರುಗಳಾದ ಗುರುನಾನಕರ ಜಯಂತಿ ಅಂಗವಾಗಿ ಇಡೀ ಗುರುದ್ವಾರಾ ವಿದ್ಯುತ್ ದೀಪಾಲಂಕಾರದಿಂದ ಝಗಮಗಿಸುತ್ತಿದ್ದು, ರಾಜ್ಯ ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಬರುವ ಭಕ್ತಾದಿಗಳಿಗೆ ವಸತಿ, ಊಟದ ವ್ಯವಸ್ಥೆ ಮಾಡಲಾಗಿದೆ.
ಗುರುದ್ವಾರಾ ಕಮಾನ್‌ನಿಂದ ಪವಿತ್ರ ಗುರುದ್ವಾರಾ ವರೆಗೆ ರಸ್ತೆಯ ಎರಡು ಕಡೆಗಳಲ್ಲಿ ವಿದ್ಯುತ್ ಅಲಂಕಾರ ಮಾಡಲಾಗಿದೆ. ಗುರುದ್ವಾರಕ್ಕೆ ಬರುವ ಎಲ್ಲ ಭಕ್ತಾದಿಗಳ ದೊಡ್ಡ ವಾಹನಗಳು ನಗರದ ಹೊರ ವಲಯದ ಚಿಕ್‌ಪೇಟ್ ರಸ್ತೆಯ ಮೂಲಕವೇ ಗುರುದ್ವಾರಕ್ಕೆ ಬರುವ ವ್ಯವಸ್ಥೆ ಮಾಡಲಾಗಿದೆ.ಜಯಂತಿ ಕಾರ್ಯಕ್ರಮಗಳು:
ಪವಿತ್ರ ಗುರುದ್ವಾರಾದಲ್ಲಿ ನ.15ರಂದು ಬೆಳಿಗ್ಗೆ 1ಕ್ಕೆ ಗುರುಗ್ರಂಥ ಸಾಹೇಬ್‌ರ ಪ್ರಕಾಶ ಜರುಗಲಿದೆ. ಬೆಳಿಗ್ಗೆ 2ರಿಂದ 3ರವರೆಗೆ ಹಜೂರಿ ರಾಗಿ ಜತ್ಥಾದಿಂದ ಕಿರ್ತನ ನಡೆಯಲಿದೆ. ಬೆಳಿಗ್ಗೆ 3ರಿಂದ 3.30ರ ವರೆಗೆ ಆರ್ಥಾ ಮತ್ತು ಅರದಾಸ, ಬೆಳಿಗ್ಗೆ 3.30ರಿಂದ 5.30ರ ವರೆಗೆ ಪಾಠ ಜರುಗಲಿದೆ.ಬೆಳಿಗ್ಗೆ 5.30ರಿಂದ 8ರ ವರೆಗೆ ಕಿರ್ತನ, ಬೆಳಿಗ್ಗೆ 8ರಿಂದ 8.45ರ ವರೆಗೆ ಹಜೂರ ರಾಗಿ ನಡೆಯಲಿದೆ. ಬೆಳಿಗ್ಗೆ 9.30ರಿಂದ 10ರ ವರೆಗೆ ಅಖಂಡ ಪಾಠ ಸಮಾಪ್ತಿ ನಡೆಯಲಿದೆ.
ಭವ್ಯ ಮೆರವಣಿಗೆ :ಗುರುನಾನಕ ಜಯಂತಿ ಅಂಗವಾಗಿ ನ.15ರಂದು ಮಧ್ಯಾಹ್ನ 3ರಿಂದ ರಾತ್ರಿ 9ರ ವರೆಗೆ ಭವ್ಯ ಮೆರವಣಿಗೆ ಜರುಗಲಿದೆ. ಗುರುದ್ವಾರಾದಿಂದ ಆರಂಭವಾಗುವ ಮೆರವಣಿಗೆ, ಮಡಿವಾಳ ವೃತ್ತ, ಡಾ. ಅಂಬೇಡ್ಕರ್ ವೃತ್ತ, ಶಿವಾಜಿ ವೃತ್ತ, ಹರಳಯ್ಯ ವೃತ್ತದ ಮೂಲಕ ಮರಳಿ ಗುರುನಾನತ್ ಕಾಲೋನಿಯಲ್ಲಿರುವ ನಿಶಾನ್ ಸಾಹೇಬ್‌ಗೆ ತಲುಪಿ ಸಮಾರೋಪಗೊಳ್ಳಲಿದೆ. ಸಿಖ್ ಸಮುದಾಯದ ಪ್ರಮುಖರು ಈ ಸಂದರ್ಭದಲ್ಲಿ ಉಪಸ್ಥಿತರಿರಲಿದ್ದಾರೆ.