ಭ್ರಷ್ಟಾಚಾರರಹಿತ ಸಮಾಜ ನಿರ್ಮಾಣಕ್ಕೆ ಕವಿಗಳ ಪಾತ್ರ ದೊಡ್ಡದು: ನಿಜಲಿಂಗಪ್ಪ

| Published : Nov 15 2024, 12:31 AM IST

ಭ್ರಷ್ಟಾಚಾರರಹಿತ ಸಮಾಜ ನಿರ್ಮಾಣಕ್ಕೆ ಕವಿಗಳ ಪಾತ್ರ ದೊಡ್ಡದು: ನಿಜಲಿಂಗಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ದಿನಕರ ದೇಸಾಯಿ ಅವರು ನಾಡಿನ ಸಂಪತ್ತು. ಅವರನ್ನು ಜಿಲ್ಲೆಯವರು ಸದಾ ಗೌರವಿಸಬೇಕು.

ಅಂಕೋಲಾ: ಸಮಾಜವನ್ನು ಸರಿದಾರಿಯಲ್ಲಿ ಕೊಂಡೊಯ್ಯಲು ಮತ್ತು ನಾಡಿನ ಜನರು ನೆಮ್ಮದಿಯಿಂದ ಬದುಕಲು ಭ್ರಷ್ಟಾಚಾರರಹಿತ ಸಮಾಜ ನಿರ್ಮಾಣದಲ್ಲಿ ಕವಿಗಳ ಪಾತ್ರ ದೊಡ್ಡದಿದೆ. ಶಾಸನ ಬರೆಯುವವರು ಮತ್ತು ಅನುಷ್ಠಾನಗೊಳಿಸುವವರು ಭ್ರಷ್ಟರಾಗಿದ್ದಾರೆ. ಹಾಗಾಗಿ ಕವಿಗಳು ಬರೆದಿರುವುದು ಶಾಸನವಾಗಬೇಕು ಎಂದು ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಕುಲಸಚಿವ ನಿಜಲಿಂಗಪ್ಪ ವೈ. ಮಟ್ಟಿಹಾಳ ಅಭಿಪ್ರಾಯಪಟ್ಟರು.

ಗುರುವಾರ ಗೋಖಲೆ ಸೆಂಟನರಿ ಕಾಲೇಜಿನ ಸಭಾಭವನದಲ್ಲಿ ಆಯೋಜಿಸಿದ್ದ ದಿನಕರ ದೇಸಾಯಿ ಸ್ಮಾರಕ ಪ್ರತಿಷ್ಠಾನದಿಂದ ದಿನಕರ ದೇಸಾಯಿ ಕಾವ್ಯ ಪ್ರಶಸ್ತಿ ಪ್ರದಾನ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡಿ, ದಿನಕರ ದೇಸಾಯಿ ಅವರು ನಾಡಿನ ಸಂಪತ್ತು. ಅವರನ್ನು ಜಿಲ್ಲೆಯವರು ಸದಾ ಗೌರವಿಸಬೇಕು ಎಂದರು.ದಿನಕರ ದೇಸಾಯಿ 25ನೇ ಕಾವ್ಯ ಪ್ರಶಸ್ತಿಯನ್ನು ಪಡೆದ ಸದಾಶಿವ ಸೊರಟೂರು ಹೊನ್ನಾಳಿ ಅವರ ಗಾಯಗೊಂಡ ಸಾಲುಗಳು ಕವನ ಸಂಕಲನಕ್ಕೆ ನೀಡಿ ಗೌರವಿಸಲಾಯಿತು.

ಪ್ರಶಸ್ತಿ ಸ್ವೀಕರಿಸಿದ ಸದಾಶಿವ ಸೊರಟೂರು ಮಾತನಾಡಿ, ಈ ಪ್ರಶಸ್ತಿಯಿಂದ ನನಗೆ ನೀಡಿದ ಗೌರವ ಎನ್ನುವುದಕ್ಕಿಂತಲೂ ದೊಡ್ಡ ಜವಾಬ್ದಾರಿಯನ್ನು ನೀಡಿದಂತಾಗಿದೆ. ದಿನಕರ ದೇಸಾಯಿ ಹೆಸರಿನಲ್ಲಿ ದೊಡ್ಡ ಪ್ರಶಸ್ತಿ ನನಗೆ ದೊರೆತಿರುವುದು ನನ್ನ ಜೀವನದ ದೊಡ್ಡ ಗುರುತರ ಹೊಣೆ ಹೊರುವ ಹಾಗೆ ಮಾಡಿದೆ ಎಂದರು.ತೀರ್ಪುಗಾರ ಶ್ರೀಧರ ಹೆಗಡೆ ಭದ್ರಾನ್ ಧಾರವಾಡ ಮಾತನಾಡಿ, ನಿರಂತರ 40 ವರ್ಷಗಳ ಕಾಲ ಕಾವ್ಯ ಪುರಸ್ಕಾರ ನೀಡಿ ದಿನಕರ ದೇಸಾಯಿ ಅವರನ್ನು ಸ್ಮರಿಸುವ ಕಾರ್ಯ ನಡೆದಿರುವುದು ಅತ್ಯಂತ ಶ್ರೇಷ್ಠವಾಗಿದೆ ಎಂದರು.ಅಧ್ಯಕ್ಷತೆ ವಹಿಸಿದ ದಿನಕರ ದೇಸಾಯಿ ಸ್ಮಾರಕ ಪ್ರತಿಷ್ಠಾನದ ಅಧ್ಯಕ್ಷ ಮೋಹನ ಎಸ್. ಹಬ್ಬು ಮಾತನಾಡಿ, ದಿನಕರ ದೇಸಾಯಿ ಅವರು ದಲಿತ ಮತ್ತು ಶೋಷಿತರ ಪರವಾಗಿ ಕಾವ್ಯವನ್ನು ರಚಿಸಿದರು ಹಾಗೂ ಉತ್ತರ ಕನ್ನಡವನ್ನು ಶೈಕ್ಷಣಿಕವಾಗಿ ಉದ್ಧಾರ ಮಾಡಿದ ಕರ್ಮಯೋಗಿ. ಅವರ ನೆನಪಿಲ್ಲಿ ಪ್ರತಿಷ್ಠಾನದ ಕಾರ್ಯ ನಿರಂತರವಾಗಿ ನಡೆಸಿಕೊಂಡು ಬಂದಿದೆ ಎಂದರು.ಕಾಲೇಜಿನ ಪ್ರಾಚಾರ್ಯ ಸಿದ್ಧಲಿಂಗಸ್ವಾಮಿ ವಸ್ತ್ರದ ಅತಿಥಿಗಳನ್ನು ಪರಿಚಯಿಸಿದರು. ಕಾವ್ಯ ಪ್ರಶಸ್ತಿಯ ಕುರಿತು ಜೆ. ಪ್ರೇಮಾನಂದ, ಪ್ರತಿಷ್ಠಾನದ ಧ್ಯೇಯೋದ್ದೇಶಗಳ ಕುರಿತು ಉಪಾಧ್ಯಕ್ಷರಾದ ರಾಮಕೃಷ್ಣ ಗುಂದಿ ಅವರು ಮಾತನಾಡಿದರು. ಪ್ರತಿಷ್ಠಾನದ ಉಪಾಧ್ಯಕ್ಷೆ ಲಲಿತಾ ನಾಯ್ಕ, ಸಹ ಕಾರ್ಯದರ್ಶಿ ಪ್ರಕಾಶ ಕುಂಜಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಕುಲಸಚಿವ ನಿಜಲಿಂಗಪ್ಪ ಮಟ್ಟಿಹಾಳ ಅವರನ್ನು ಜಿ.ಸಿ. ಕಾಲೇಜಿನ ಪರವಾಗಿ ಸನ್ಮಾನಿಸಲಾಯಿತು.ಪ್ರತಿಷ್ಠಾನದ ವತಿಯಿಂದ ಜಿ.ಸಿ. ಕಾಲೇಜಿನ ಗ್ರಂಥಾಲಯಕ್ಕೆ ಪುಸ್ತಕ ಕೊಡುಗೆ ನೀಡಲಾಯಿತು. ಕಾರ್ಯದರ್ಶಿ ಗೋಪಾಲಕೃಷ್ಣ ನಾಯಕ ಸ್ವಾಗತಿಸಿದರು ಮತ್ತು ದಿನಕರ ದೇಸಾಯಿ ಅವರ ಅಧ್ಯಯನ ಪೀಠ ರಚಿಸುವಂತೆ ಕರ್ನಾಟಕ ವಿಶ್ವವಿದ್ಯಾಲಯದ ಕುಲಸಚಿವರಿಗೆ ಮನವಿ ಸಲ್ಲಿಸಿದರು. ಮಹಾಂತೇಶ ರೇವಡಿ ಕಾರ್ಯಕ್ರಮ ನಿರ್ವಹಿಸಿದರು. ಸಹ ಕಾರ್ಯದರ್ಶಿ ಜಗದೀಶ ಜಿ. ನಾಯಕ ಹೊಸ್ಕೇರಿ ವಂದಿಸಿದರು.