ಸಾರಾಂಶ
ಹುಬ್ಬಳ್ಳಿ:
ಪ್ರತಿ ತಿಂಗಳು ಪಾಲಿಕೆಯ ಸಾಮಾನ್ಯ ಸಭೆ ನಡೆಸುವುದಾಗಿ ಮೇಯರ್ ರಾಮಣ್ಣ ಬಡಿಗೇರ ಘೋಷಿಸಿದ್ದಂತೆ ಬುಧವಾರ ಮೊದಲ ಸಭೆ ನಡೆಯಿತು. ಆದರೆ, ಸಭೆಯು ಸದಸ್ಯರ ಅಹವಾಲು ಆಲಿಕೆಗೆ ಸೀಮಿತವಾಯಿತು.ಮಹಾನಗರದಲ್ಲಿ ಕಲುಷಿತ ಕುಡಿಯುವ ನೀರು ಪೂರೈಕೆ, ಕಸದ ವಾಹನಗಳ ದುರವಸ್ಥೆ, ಒಳಚರಂಡಿ ಅವ್ಯವಸ್ಥೆ, ಕಸ ವಿಲೇವಾರಿ ಸಮಸ್ಯೆ, ಶೌಚಾಲಯ ಅವ್ಯವಸ್ಥೆ ಹೀಗೆ ಸಾಲು ಸಾಲು ಸಮಸ್ಯೆಗಳನ್ನು ಸದಸ್ಯರು ಸಭೆಯಲ್ಲಿ ತಿಳಿಸಿದರು.
ಹಾಳಾದ ಫಿಲ್ಟರ್ ಬೆಡ್:ಈ ವೇಳೆ ಸದಸ್ಯ ಸಂತೋಷ ಚವ್ಹಾಣ ಮಾತನಾಡಿ, ಮಹಾನಗರದಲ್ಲಿ ಇತ್ತೀಚೆಗೆ ಪೂರೈಕೆಯಾಗುತ್ತಿರುವ ಕುಡಿಯುವ ನೀರು ಮಣ್ಣು ಮಿಶ್ರಣದಿಂದ ಕೂಡಿದ್ದು, ಜನರು ನಾನಾ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುವಂತಾಗಿದೆ. ಇದನ್ನು ಗಮನಿಸಿದರೆ ಎಲ್ ಆ್ಯಂಡ್ ಟಿ ಸಂಸ್ಥೆ ನೀರನ್ನು ಪೂರೈಕೆ ಮುನ್ನ ಸಂಸ್ಕರಿಸುತ್ತಿಲ್ಲ ಎಂಬುದು ಕಂಡು ಬರುತ್ತಿದೆ. ಸಂಸ್ಕರಣೆಗೆ ಬೇಕಾದ ರಾಸಾಯನಿಕ ದಾಸ್ತಾನು ಮಾಡಿಲ್ಲ, ನಿಗದಿತ ರಾಸಾಯನಿಕ ಬಳಕೆ ಮಾಡುತ್ತಿಲ್ಲ ಎಂಬುದು ಕಂಡು ಬರುತ್ತಿದೆ ಎಂದು ಸಂಶಯ ವ್ಯಕ್ತಪಡಿಸಿದರು.
ಕೆಯುಐಡಿಎಫ್‌ಸಿ ಎಕ್ಸಿಕ್ಯುಟಿವ್ ಎಂಜಿನಿಯರ್ ಸಾಲಿ ಮಾತನಾಡಿ, ಸಂಸ್ಕರಣೆಗೆ ಬೇಕಾದ ಎಲ್ಲ ರಾಸಾಯನಿಕಗಳು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿದೆ. ಆದರೆ, ನೀರು ಸಂಸ್ಕರಿಸುವ ಬೆಡ್ ಹಾಳಾಗಿವೆ. ಹಾಗಾಗಿ ಸರಿಯಾಗಿ ನೀರು ಸಂಸ್ಕರಣವಾಗುತ್ತಿಲ್ಲ. ಈ ಬೆಡ್‌ಗಳ ಪೂರೈಕೆಗೆ ಪ್ರಸ್ತಾವನೆ ಸಲ್ಲಿಸಿದ್ದು ಇನ್ನೂ ಮಂಜೂರಿ ಸಿಕ್ಕಿಲ್ಲ ಎಂದು ಸ್ಪಷ್ಟಪಡಿಸಿದರು. ಪಾಲಿಕೆ ಆಯುಕ್ತ ಡಾ. ಈಶ್ವರ ಮಾತನಾಡಿ, ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿ ವಾಸ್ತವ ಸ್ಥಿತಿ ಪಡೆದೆ ಸಮಸ್ಯೆ ಪರಿಹರಿಸುವ ಭರವಸೆ ನೀಡಿದರು.ಸ್ಮಾರ್ಟ್‌ಸಿಟಿಯಡಿ ಕೈಗೊಂಡ ಬಹುತೇಕ ಕಾಮಗಾರಿ ಅಪೂರ್ಣವಾಗಿದ್ದು ಜನರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಸದಸ್ಯರು ಸಭೆಯ ಗಮನಕ್ಕೆ ತಂದರು. ನಿರ್ವಹಣೆಯಡಿ ₹ 58 ಕೋಟಿ ಇದ್ದು, ಎಲ್ಲೆಲ್ಲಿ ಈ ತೆರನಾದ ಸಮಸ್ಯೆಗಳಿವೆ ಎಂಬುದನ್ನು ಸ್ಮಾರ್ಟ್‌ಸಿಟಿ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಕ್ರಮಕೈಗೊಳ್ಳುವುದಾಗಿ ಆಯುಕ್ತರು ಹೇಳಿದರು.ಆಯುಕ್ತರ ವಿರುದ್ಧ ಹರಿಹಾಯ್ದ ಸದಸ್ಯರು
ಕಳೆದ ಒಂದು ವರ್ಷದಿಂದ ನಿರೀಕ್ಷಿತ ಪ್ರಮಾಣದಲ್ಲಿ ವಾರ್ಡ್‌ಗಳಲ್ಲಿ ಅಭಿವೃದ್ಧಿ ಕಾರ್ಯಗಳಾಗುತ್ತಿಲ್ಲ. ಆಯುಕ್ತರ ಹಂತದಲ್ಲಿ ಹಲವು ಫೈಲ್‌ಗಳು ಉಳಿದಿವೆ. ವಾರ್ಡ್ ಫಂಡ್, ಜನರಲ್ ಫಂಡ್‌ಗಳ ಕಥೆ ಏನಾಯಿತು ಎಂದು ಸಭೆಯಲ್ಲಿ ಹಾಜರಿದ್ದ ಬಿಜೆಪಿ, ಕಾಂಗ್ರೆಸ್, ಎಐಎಂಐಎಂ ಸದಸ್ಯರು ಆಯುಕ್ತರ ವಿರುದ್ಧ ಹರಿಹಾಯ್ದರು. ಸದಸ್ಯರ ಆಕ್ಷೇಪಕ್ಕೆ ಉತ್ತರಿಸಿದ ಆಯುಕ್ತ, ಎಲ್ಲ ಅನುದಾನಗಳನ್ನು ಪ್ರಸಕ್ತ ಆರ್ಥಿಕ ವರ್ಷದಲ್ಲೇ ಖರ್ಚು ಮಾಡಲಾಗುತ್ತದೆ. ಹಾಗಾಗಿ ಯಾರೂ ಆತಂಕಕ್ಕೆ ಒಳಗಾಗಬೇಕಿಲ್ಲ ಎಲ್ಲ ಸದಸ್ಯರು ಕಡ್ಡಾಯವಾಗಿ ಎಂಐಎಸ್ ಮಾಡಿಸುವಂತೆ ತಿಳಿಸಿದರು.