ಸಾರಾಂಶ
ಹಳಿಯಾಳ: ಕುಸ್ತಿಗೆ ತಾರಾ ಮೌಲ್ಯ ನೀಡಿದ ಕೀರ್ತಿಯು ಬುಡಕಟ್ಟು ಸಿದ್ದಿ ಸಮುದಾಯದ ಅಗ್ನೇಲ್ ಹಾಗೂ ಜುಜೆ ಸಹೋದರರಿಗೆ ಸಲ್ಲುತ್ತದೆ. ಬ್ಲ್ಯಾಕ್ ಟೈಗರ್ ಹಾಗೂ ಬ್ಲ್ಯಾಕ್ ಪ್ಯಾಂಥರ್ ಎಂದು ಬಿರುದಿನಿಂದ ಜನಪ್ರಿಯರಾದ ಈ ಸಹೋದರರ ಕುಸ್ತಿಗೆ ಇಡೀ ಬಾಲಿವುಡ್ ಮರುಳಾಗಿತ್ತು ಎಂದು ತಾಲೂಕು ಜೈ ಹನುಮಾನ ಕುಸ್ತಿ ಸಂಘದ ಅಧ್ಯಕ್ಷ ಮೋನು ದೊಡ್ಮಣಿ ತಿಳಿಸಿದರು.
ಪಟ್ಟಣದ ಜಿಲ್ಲಾ ಕುಸ್ತಿ ಕ್ರೀಡಾಂಗಣದಲ್ಲಿ ಮಂಗಳವಾರ ಸಂಜೆ ತಾಲೂಕು ಕುಸ್ತಿ ಸಂಘ ಹಾಗೂ ಕುಸ್ತಿ ಅಭಿಮಾನಿಗಳ ಸಹಯೋಗದಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಮಟ್ಟದ ಕುಸ್ತಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕವನ್ನು ಗೆದ್ದು ಹಳಿಯಾಳದ ಕೀರ್ತಿ ಬೆಳಗಿಸಿದ ತಾಲೂಕಿನ ಹೆಮ್ಮೆಯ ಕುಸ್ತಿಪಟು ಶ್ವೇತಾ ಸಂಜು ಅಣ್ಣಿಕೇರಿ ಅವರನ್ನು ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಹಳಿಯಾಳ ತಾಲೂಕು ಹಿಂದಿನಿಂದಲೂ ಕುಸ್ತಿ ಕ್ರೀಡೆಯಲ್ಲಿ ಅದ್ವಿತೀಯ ಸಾಧನೆಯನ್ನು ಮಾಡುತ್ತಾ ಬಂದಿದೆ. ಈಗಿನ ಯುವಪೀಳಿಗೆಯ ಕುಸ್ತಿಪಟುಗಳು ಕುಸ್ತಿಯಲ್ಲಿ ಹಳಿಯಾಳದ ಪ್ರಭುತ್ವವನ್ನು ಮುಂದುವರಿಸಿದ್ದು, ಹಳಿಯಾಳದ ಕುಸ್ತಿಗೆ ಗತಕಾಲದ ವೈಭವವನ್ನು ಮರಳಿ ತಂದಿರಿಸಿದ್ದಾರೆ ಎಂದರು.ಜಿಲ್ಲಾ ಕುಸ್ತಿ ಕ್ರೀಡಾಂಗಣದ ಮುಖ್ಯ ತರಬೇತುದಾರ, ಕುಸ್ತಿಪಟು ತುಕಾರಾಮ ಗೌಡ ಮಾತನಾಡಿ, ಹಳಿಯಾಳದ ಕುಸ್ತಿ ಕ್ರೀಡಾ ವಸತಿ ನಿಲಯದ ಕುಸ್ತಿಪಪಟುಗಳು ರಾಷ್ಟ್ರ ಮಟ್ಟದಲ್ಲಿ ಅತ್ಯುತ್ತಮ ಸಾಧನೆಯನ್ನು ಮಾಡುತ್ತಿದ್ದಾರೆ ಎಂದರು.
ಸಮಾರಂಭದಲ್ಲಿ ಕುಸ್ತಿಪಟು ಶ್ವೇತಾ ಅವರನ್ನು ಹಾಗೂ ಅವರ ಪಾಲಕರಾದ ಹಳಿಯಾಳ ಠಾಣೆಯ ಎಎಸ್ಐ ಸಂಜು ಅಣ್ಣಿಕೇರಿ ದಂಪತಿಗಳನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ವಿನೋದ ಕಮ್ಮಾರ, ರಘುನಾಥ ಗೌಡ, ಪಠ್ಯಪ್ಪ ಉರಬಿನಟ್ಟಿ, ಸುರೇಶ ಕೊಕಿತಕರ, ಅಪ್ಪು ಲಾಂಬೋರೆ, ಸಲೀಂ ನದಾಫ, ಸಂತೋಷ ಗೌಡ, ರವಿ ಮೇತ್ರಿ, ದೀಪಕ ಪವಾರ, ನಾರಾಯಣ ಹಣಬರ, ದಾವಲಸಾಬ ಹುಲಕೊಪ್ಪ, ಹಾಗೂ ಕುಸ್ತಿ ತರಬೇತುದಾರರಾದ ಶಿವಾನಂದ ಆರ್., ಬಾಳಕೃಷ್ಣ ದಡ್ಡಿ, ಅಂತಾರಾಷ್ಟ್ರೀಯ ಕುಸ್ತಿಪಟು ಮಮತಾ ಕೇಳೋಜಿ ಹಾಗೂ ಕುಸ್ತಿ ಅಭಿಮಾನಿಗಳು ಇದ್ದರು.