ಸಂಸ್ಕಾರದೊಂದಿಗೆ ಜ್ಞಾನ ಬಿತ್ತುವುದೇ ಅಕ್ಷರಾಭ್ಯಾಸ: ಗುಣನಾಥ ಸ್ವಾಮೀಜಿ

| Published : Jul 04 2025, 12:32 AM IST

ಸಂಸ್ಕಾರದೊಂದಿಗೆ ಜ್ಞಾನ ಬಿತ್ತುವುದೇ ಅಕ್ಷರಾಭ್ಯಾಸ: ಗುಣನಾಥ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಮಕ್ಕಳಿಗೆ ಸಂಸ್ಕಾರವನ್ನು ಕೊಡುವ ಜೊತೆಗೆ ವಿಶೇಷ ಜ್ಞಾನವನ್ನು ಬಿತ್ತುವ ಕಾರ್ಯಕ್ರಮ ಅಕ್ಷರ ಅಭ್ಯಾಸ ಎಂದು ಆದಿಚುಂಚನಗಿರಿ ಶೃಂಗೇರಿ ಶಾಖಾಮಠದ ಗುಣನಾಥ ಸ್ವಾಮೀಜಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಮಕ್ಕಳಿಗೆ ಸಂಸ್ಕಾರವನ್ನು ಕೊಡುವ ಜೊತೆಗೆ ವಿಶೇಷ ಜ್ಞಾನವನ್ನು ಬಿತ್ತುವ ಕಾರ್ಯಕ್ರಮ ಅಕ್ಷರ ಅಭ್ಯಾಸ ಎಂದು ಆದಿಚುಂಚನಗಿರಿ ಶೃಂಗೇರಿ ಶಾಖಾಮಠದ ಗುಣನಾಥ ಸ್ವಾಮೀಜಿ ತಿಳಿಸಿದರು.

ನಗರದ ಜಿಲ್ಲಾ ಒಕ್ಕಲಿಗರ ಸಮುದಾಯ ಭವನದಲ್ಲಿ ಜೆವಿಎಸ್ ಶಾಲೆಯಿಂದ ಗುರುವಾರ ಏರ್ಪಡಿಸಲಾಗಿದ್ದ ನರ್ಸರಿ, ಪ್ರೈಮರಿ, ಹೈಯರ್ ಪ್ರೈಮರಿ ಮತ್ತು ಜೆವಿಎಸ್‌ ಆಂಗ್ಲ ಮಾಧ್ಯಮ ಪ್ರೌಢಶಾಲೆ ವಿದ್ಯಾರ್ಥಿಗಳಿಗಾಗಿ ನಿಮ್ಮ ಮಗುವಿನ ಭದ್ರ ಬುನಾದಿಯ ಪ್ರಾರಂಭ ಅಕ್ಷರ ಅಭ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.

ಜ್ಞಾನಕ್ಕೆ ಧರ್ಮ, ಜಾತಿ ಇಲ್ಲ. ನೀರು, ಗಾಳಿ, ಭೂಮಿ, ಆಕಾಶ, ಅಗ್ನಿ ಈ ಪಂಚಭೂತಗಳಿಗೂ ಧರ್ಮ, ಜಾತಿ ಇಲ್ಲ. ಅಕ್ಷರಕ್ಕೂ ಯಾವುದೇ ಜಾತಿ, ಧರ್ಮದ ಹಂಗು ಇಲ್ಲ, ಸಂಸ್ಕಾರ ಮತ್ತು ಸಂಸ್ಕೃತಿ ಮೂಲಕ ಹರಿಶಿಣ ಕೊಂಬಿನಿಂದ ಪೂರ್ವಿಕರು ಅಕ್ಷರಾಭ್ಯಾಸ ಮಾಡುತ್ತಾ ಬಂದಿರುವುದೇ ಮುಂದುವರೆದ ಈ ಅಕ್ಷರಭ್ಯಾಸ. ಮಕ್ಕಳಲ್ಲಿ ಒಳ್ಳೆಯ ಭಾವನೆ ಬೆಳೆಸಿ ಶಿಕ್ಷಣವಂತರಾದಾಗ ಪೋಷಕರ ಶ್ರಮ ಸಾರ್ಥಕ ಎಂದರು.

ವಿದ್ಯಾರ್ಥಿಗಳಿಗೆ ಉತ್ತಮವಾದ ಶಿಕ್ಷಣ ಕೊಟ್ಟಾಗ ಸಂಸ್ಕಾರ, ಸಂಸ್ಕೃತಿ ಬೆಳೆದು ಉತ್ತಮ ಸಮಾಜಕಟ್ಟುವ ವ್ಯಕ್ತಿಯಾಗಿ ರೂಪುಗೊಳ್ಳುತ್ತಾರೆ. ಹರಿಶಿಣ ಕೊಂಬಿನಲ್ಲಿ ಓಂಕಾರ ಬರೆಸುತ್ತಿರುವುದು ಚೈತನ್ಯ ಪ್ರಣವ ಸ್ವರೂಪಿಯಾಗಿದೆ ಎಂದರು.

ಹರಿಶಿಣ ಭಗವಂತನ ಸೃಷ್ಟಿ, ಭೂಮಿಯಿಂದ ಬಂದ ಇದು ಅತ್ಯಂತ ಶ್ರೇಷ್ಠವಾಗಿದ್ದು, ಅದರ ಮೂಲಕ ಅಕ್ಷರಾಭ್ಯಾಸ ಮಾಡಿಸುತ್ತಿರುವುದು ವಿದ್ಯಾರ್ಥಿಗಳ ಮುಂದಿನ ಜೀವನ ಹಸನ್ಮುಖಿಯಾಗಿ ಭವಿಷ್ಯ ರೂಪಿಸಲು ಸಹಕಾರಿಯಾಗಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ.ರಾಜಶೇಖರ್ ಮಾತನಾಡಿ, ಇಂದು ನಡೆಸುತ್ತಿರುವ ಅಕ್ಷರಾಭ್ಯಾಸ ಮಕ್ಕಳ ಜೀವನದಲ್ಲಿ ಮರೆಯಲಾಗದ ಕ್ಷಣ. ಶ್ರೀಗಳ ನೇತೃತ್ವದಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮ ವಿದ್ಯಾರ್ಥಿಗಳ ಜೀವನ ಉಜ್ವಲವಾಗಿ ವಿದ್ಯೆ, ಬುದ್ಧಿ, ಸಂಸ್ಕಾರ, ಸಂಸ್ಕೃತಿ ಈ ನಾಡಿನ ಬಗ್ಗೆ ಗೌರವವನ್ನು ಬೆಳೆಸಲಿ ಎಂದು ಹಾರೈಸಿದರು.

ಹಿರಿಯರನ್ನು ಗೌರವಿಸುವುದನ್ನು ಪೋಷಕರು ಮಕ್ಕಳಲ್ಲಿ ಮನವರಿಕೆ ಮಾಡುವ ಜೊತೆಗೆ ವಿವಿಧತೆಯಲ್ಲಿ ಏಕತೆ, ಐಕ್ಯತೆಯನ್ನು ಹೊಂದಿರುವ ಭಾರತದಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತರು ಈ ದೇಶದ ಬೆನ್ನೆಲುಬು ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ವಕೀಲ ಎಸ್.ಎಸ್. ವೆಂಕಟೇಶ್‌, ಈ ಹಿಂದೆ ಗುರುಕುಲಗಳಲ್ಲಿ ಅಕ್ಷರಾಭ್ಯಾಸ ಮಾಡಿಸುತ್ತಿದ್ದರು, ನಂತರದ ದಿನಗಳಲ್ಲಿ ಆಧುನಿಕ ಶಿಕ್ಷಣವಾಗಿ ಮಾರ್ಪಟ್ಟಿತ್ತು. ಆದರೆ, ಸಂಸ್ಕೃತಿಯ ಮೂಲ ಬೇರು ಮರೆಯಬಾರದೆಂಬುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶ ಎಂದು ತಿಳಿಸಿದರು.

ಶಿಕ್ಷಣ, ಸಂಸ್ಕಾರ ಒಂದು ನಾಣ್ಯದ ಎರಡು ಮುಖಗಳು, ಮಕ್ಕಳಿಗೆ ಶಿಕ್ಷಣ ಕೊಟ್ಟರೆ ಸಾಲದು, ಅದರೊಟ್ಟಿಗೆ ಸಂಸ್ಕಾರವನ್ನೂ ಕಲಿಸಬೇಕು, ಈ ನಿಟ್ಟಿನಲ್ಲಿ ಜೆವಿಎಸ್ ಶಿಕ್ಷಣ ಸಂಸ್ಥೆ ನಡೆಸುತ್ತಿರುವುದನ್ನು ಶ್ಲಾಘಿಸಿದರು.

ವಿಜ್ಞಾನ ಎಷ್ಟೇ ಮುಂದುವರೆದರೂ ವಿಶ್ವದಲ್ಲಿ ಭಾರತದ ಸಂಸ್ಕೃತಿಗೆ ಅದರದೇ ಆದ ಅತೀ ದೊಡ್ಡ ಮಹತ್ವವಿದೆ, ಅದನ್ನು ಮರೆಯಬಾರದು. ಆ ಸಂಸ್ಕೃತಿ ಇದ್ದಾಗ ನಮ್ಮ ಮಕ್ಕಳು ಸಮರ್ಪಕವಾಗಿ ಅಭಿವೃದ್ಧಿ ಹೊಂದುತ್ತಾರೆಂದು ತಿಳಿಸಿದರು.

ವೇದಿಕೆಯಲ್ಲಿ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಟಿ.ಡಿ.ಮಲ್ಲೇಶ್, ಕಾರ್ಯದರ್ಶಿ ಎಂ.ಎಸ್.ಪ್ರದೀಪ್‌ಕುಮಾರ್, ಸಹ ಕಾರ್ಯದರ್ಶಿ ರತೀಶ್‌ಕುಮಾರ್, ನಿರ್ದೇಶಕರುಗಳಾದ ಬಿ.ಸಿ.ಲೋಕಪ್ಪಗೌಡ, ಹರಿಣಾಕ್ಷಿ ನಾಗರಾಜ್, ಪವಿತ್ರ ರತೀಶ್, ಪಿ.ರಾಜು, ಪ್ರಕಾಶ್, ಸಲಹಾ ಸಮಿತಿ ಸದಸ್ಯ ಎಚ್.ಜಿ.ಸುರೇಂದ್ರ, ಮಹಿಳಾ ಒಕ್ಕಲಿಗರ ಸಂಘದ ಅಧ್ಯಕ್ಷೆ ರೀನಾ ಸುಚೇಂದ್ರ, ಸಿಇಓ ಕುಳ್ಳೇಗೌಡ, ಪ್ರಾಂಶುಪಾಲ ವಿಜಿತ್, ವ್ಯವಸ್ಥಾಪಕರಾದ ತೇಜಸ್‌, ಶಿಕ್ಷಕಿಯರಾದ ಪ್ರಮೀಳಾ, ಲೀಲಾವತಿ ಉಪಸ್ಥಿತರಿದ್ದರು.

ಶಿಕ್ಷಕಿ ನಾಗವೇಣಿ ಸ್ವಾಗತಿಸಿ, ರತೀಶ್‌ಕುಮಾರ್ ವಂದಿಸಿದರು.

Related Stories
Top Stories