ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಅಖಿಲ ಭಾರತ ಸಾಹಿತ್ಯ ಸಮ್ಮೇಳನವನ್ನು ನಗರದಿಂದ ಹೊರಗೆ ನಡೆಸುವುದಕ್ಕಿಂತ ನಗರದೊಳಗೆ ಆಯೋಜಿಸುವುದು ಉತ್ತಮ. ಸ್ಯಾಂಜೋ ಆಸ್ಪತ್ರೆ ಹಿಂಭಾಗ ಸಾಹಿತ್ಯ ಸಮ್ಮೇಳನ ನಡೆಸುವುದಕ್ಕೆ ನಿಗದಿಪಡಿಸಿರುವ ಜಾಗ ಸೂಕ್ತವಲ್ಲ ಎಂದು ಹಿರಿಯ ಸಾಹಿತಿ ಹಾಗೂ ೧೯೯೪ರಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಾರಥ್ಯ ವಹಿಸಿದ್ದ ಪ್ರೊ.ಜಿ.ಟಿ.ವೀರಪ್ಪ ಅಭಿಪ್ರಾಯಪಟ್ಟರು.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ವಾರದ ಸಾಹಿತ್ಯ ಅತಿಥಿ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಸಾಹಿತ್ಯ ಸಮ್ಮೇಳನ ನಡೆಸುವುದಕ್ಕೆ ನಗರದೊಳಗೆ ಬೇಕಾದಷ್ಟು ಸ್ಥಳಾವಕಾಶವಿದೆ. ಸರ್ ಎಂ. ವಿಶ್ವೇಶ್ವರಯ್ಯ ಕ್ರೀಡಾಂಗಣ, ಪಿಇಟಿ ಕ್ರೀಡಾಂಗಣ, ಮಂಡ್ಯ ವಿಶ್ವವಿದ್ಯಾಲಯ ಆವರಣ, ಗೋಷ್ಠಿಗಳನ್ನು ನಡೆಸುವುದಕ್ಕೆ ಅಂಬೇಡ್ಕರ್ ಭವನ, ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರ, ವಿವೇಕಾನಂದ ರಂಗಮಂದಿರ, ರೈತ ಸಭಾಂಗಣದಂತಹ ಸ್ಥಳಗಳಿವೆ. ಅವೆಲ್ಲವನ್ನೂ ಉಪಯೋಗಿಸಿಕೊಂಡು ಸಮ್ಮೇಳನ, ಗೋಷ್ಠಿಗಳನ್ನು ನಡೆಸಬಹುದು.
ಸಾಹಿತ್ಯ ಸಮ್ಮೇಳನಕ್ಕೆ ಬರುವವರಿಗೆ ನಗರದೊಳಗಿರುವ ಶಿಕ್ಷಣ ಸಂಸ್ಥೆಗಳಲ್ಲಿ ವಸತಿ ವ್ಯವಸ್ಥೆ ಕಲ್ಪಿಸಬಹುದು. ಗೋಷ್ಠಿಗಳ ಬಗ್ಗೆ ಆಸಕ್ತಿ ಇರುವ ನಗರದ ಜನರು ಸಂಜೆ ಬಳಿಕ ವಿವಿಧೆಡೆ ನಡೆಯುವ ಗೋಷ್ಠಿಗಳಲ್ಲಿ ಪಾಲ್ಗೊಳ್ಳುವರು. ನಗರದ ಹೊರಗಡೆ ಸಮ್ಮೇಳನ, ಗೋಷ್ಠಿಗಳನ್ನು ಆಯೋಜಿಸಿದರೆ ಹೋಗಿಬರುವುದಕ್ಕೆಲ್ಲಾ ತೊಂದರೆಯಾಗುತ್ತದೆ. ಉಚಿತ ಬಸ್ ವ್ಯವಸ್ಥೆ ಮಾಡಿದರೂ ಎಷ್ಟು ಬಸ್ಸುಗಳನ್ನು ಒದಗಿಸಲು ಸಾಧ್ಯ ಎಂದು ಪ್ರಶ್ನಿಸಿದರು.ಸಮ್ಮೇಳನಗಳಿಗೇನು ಲಕ್ಷ ಲಕ್ಷ ಜನರು ಬರುವುದಿಲ್ಲ. ದೂರದ ಊರುಗಳಿಂದ ಸಾಹಿತ್ಯಾಸಕ್ತರು ಬರುತ್ತಾರೆ. ಊರುಗಳಿಂದ ಜನರನ್ನು ಕರೆತರುವುದಕ್ಕೆ ನಾವಿಲ್ಲಿ ರಾಜಕೀಯ ಸಮ್ಮೇಳನವನ್ನೇನು ಮಾಡುತ್ತಿಲ್ಲ. ಬಲಾಬಲ ಪ್ರದರ್ಶನಕ್ಕಿಳಿಯುತ್ತಿಲ್ಲ. ಸಾಹಿತ್ಯದ ಬಗ್ಗೆ ಒಲವಿರುವವರು ಅವರಾಗಿಯೇ ಬರುತ್ತಾರೆ. ಬಸ್ಸುಗಳಲ್ಲಿ ಜನರನ್ನು ಕರೆತಂದು ಸಾಹಿತ್ಯ ಸಮ್ಮೇಳನ ಮಾಡುವುದರಲ್ಲಿ ಅರ್ಥವಿಲ್ಲ ಎಂದರು.
ಸಾಹಿತ್ಯ ಪರಿಷತ್ತಿನ ಸದಸ್ಯರಾಗಿ ಪ್ರತಿನಿಧಿ ಶುಲ್ಕ ಪಾವತಿಸುವವರಿಗಷ್ಟೇ ಊಟದ ವ್ಯವಸ್ಥೆ ಮಾಡಬೇಕು. ಆಗ ಊಟೋಪಚಾರ ಕಾರ್ಯಕ್ರಮ ಶಿಸ್ತುಬದ್ಧವಾಗಿ ನಡೆಯುತ್ತದೆ. ಸಮ್ಮೇಳನಕ್ಕೆ ಬರುವ ಜನರಿಗೆಲ್ಲಾ ಅಡುಗೆ ಮಾಡಿಸುವುದಾದರೆ ಅವ್ಯವಸ್ಥೆ ಎದುರಾಗುತದೆ ಎಂಬ ಎಚ್ಚರಿಕೆ ನೀಡಿದರು.ಎಸ್.ಎಂ.ಕೃಷ್ಣ, ಜಿ.ಮಾದೇಗೌಡ ರೂವಾರಿಗಳು:
೧೯೯೪ರಲ್ಲಿ ಮಂಡ್ಯದಲ್ಲಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ವ್ಯವಸ್ಥಿತವಾಗಿ ನಡೆಯುವುದಕ್ಕೆ ಪ್ರಮುಖ ರೂವಾರಿಗಳು ಅಂದಿನ ಸ್ಪೀಕರ್ ಆಗಿದ್ದ ಎಸ್.ಎಂ.ಕೃಷ್ಣ ಮತ್ತು ಸಂಸದರಾಗಿದ್ದ ಜಿ.ಮಾದೇಗೌಡರು. ಅವರೆಲ್ಲರ ಸಹಕಾರದಿಂದ ಜಿಲ್ಲಾ ಕಸಾಪ ಅಧ್ಯಕ್ಷನಾಗಿದ್ದ ನಾನು ಗೌರವಯುತವಾಗಿ ಸಮ್ಮೇಳನ ನಡೆಸಿ ಮಂಡ್ಯ ಮರ್ಯಾದೆಯನ್ನು ಕಾಪಾಡಿಕೊಂಡಿದ್ದೆವು ಎಂದು ನೆನಪಿಸಿಕೊಂಡರು.ಸಮ್ಮೇಳನದೊಳಗೆ ರಾಜಕೀಯ ನುಸುಳುವುದಕ್ಕೆ ಅವಕಾಶವಾಗದ ರೀತಿಯಲ್ಲಿ ಹಣಕಾಸಿನ ವ್ಯವಸ್ಥೆ ಮಾಡಿಕೊಟ್ಟು ಅಚ್ಚುಕಟ್ಟಾಗಿ ಸಮ್ಮೇಳನ ನಡೆಯುವುದಕ್ಕೆ ಕಾರಣೀಭೂತರಾದರು. ಪಿ.ಎನ್.ಜವರಪ್ಪಗೌಡರು, ಎಂ.ಲಿಂಗಯ್ಯ, ಕೌಡ್ಲೆ ಚನ್ನಪ್ಪ ಅವರೆಲ್ಲರೂ ಒಂದೊಂದು ಸಮಿತಿಯ ಜವಾಬ್ದಾರಿ ವಹಿಸಿಕೊಂಡು ಸಮ್ಮೇಳನದ ಯಶಸ್ವಿಗೆ ಕಾರಣರಾದರು ಎಂದು ಸ್ಮರಿಸಿದರು.
ಅಂದು ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ ೪೨ ಲಕ್ಷ ರು. ಹಣ ಸಂಗ್ರಹಿಸಲಾಗಿತ್ತು. ಸಮ್ಮೇಳನಕ್ಕೆ ಖರ್ಚಾಗಿದ್ದು ಕೇವಲ ೨೨ ಲಕ್ಷ ರು. ಮಾತ್ರ. ಉಳಿದ ೨೦ ಲಕ್ಷ ರು. ಹಣದಲ್ಲಿ ೬.೨೫ ಲಕ್ಷ ರು. ವೆಚ್ಚದಲ್ಲಿ ಸಾಹಿತ್ಯ ಭವನ, ೪ ಲಕ್ಷ ರು. ವೆಚ್ಚದಲ್ಲಿ ರಾಷ್ಟ್ರಕವಿ ಕುವೆಂಪು ಪ್ರತಿಮೆ ನಿರ್ಮಾಣ, ೮.೫೦ ಲಕ್ಷ ರು. ಹಣವನ್ನು ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರ ನಿರ್ಮಾಣಕ್ಕೆ ಮತ್ತು ೧ ಲಕ್ಷ ರು. ಹಣವನ್ನು ಜಾನಪದ ಲೋಕಕ್ಕೆ ನೀಡಿದ್ದಾಗಿ ವಿವರಿಸಿದರು.ಸಾಹಿತಿಗಳೇ ಅಧ್ಯಕ್ಷರಾಗಬೇಕು:
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಸ್ಥಾನಕ್ಕೆ ಸಾಹಿತಿಗಳೇ ಅಧ್ಯಕ್ಷರಾಗಬೇಕು. ಬೇರೆ ಕ್ಷೇತ್ರದವರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಮಾಡುವುದು ತಪ್ಪಾಗುತ್ತದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗುರುತಿಸುವುದಕ್ಕೆ ಬೇರೆ ಕಡೆ ಅವಕಾಶಗಳಿವೆ. ಸಾಹಿತ್ಯ ಲೋಕದಲ್ಲಿ ಕೆಲಸ ಮಾಡಿರುವವರನ್ನೇ ಸಮ್ಮೇಳನಾಧ್ಯಕ್ಷರನ್ನಾಗಿ ಮಾಡುವುದು ಸೂಕ್ತ ಎಂದರು.ಸಾಹಿತ್ಯ ಸಮ್ಮೇಳನ ಅಧ್ಯಕ್ಷರ ಆಯ್ಕೆ, ವಿಚಾರಗೋಷ್ಠಿಗಳಲ್ಲಿ ಚರ್ಚೆಯಾಗಬೇಕಾದ ವಿಷಯಗಳನ್ನು ಆಯ್ಕೆ ಮಾಡುವುದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರ ಜವಾಬ್ದಾರಿಯಾಗಿದೆ. ಗೋಷ್ಠಿಗೆ ಸೇರಿಸಬೇಕಾದ ವಿಷಯಗಳಿದ್ದರೆ ಅವುಗಳನ್ನು ನೀಡಲು ಅವಕಾಶವಿರುತ್ತದೆ. ಉಪಯುಕ್ತವೆನಿಸಿದಲ್ಲಿ ಅದನ್ನು ಸೇರಿಸಿಕೊಳ್ಳಬಹುದು ಅಥವಾ ಬಿಡಬಹುದು. ಅದು ಅಧ್ಯಕ್ಷರ ವಿವೇಚನೆಗೆ ಬಿಟ್ಟಿದ್ದು ಎಂದು ನುಡಿದರು.
ಗೋಷ್ಠಿಯಲ್ಲಿ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಪಿ.ಪ್ರಕಾಶ್, ಉಪಾಧ್ಯಕ್ಷ ನವೀನ್‌ಕುಮಾರ್, ಮಾಜಿ ಅಧ್ಯಕ್ಷರಾದ ಪಿ.ಜೆ.ಚೈತನ್ಯಕುಮಾರ್, ಸೋಮಶೇಖರ್ ಕೆರಗೋಡು ಇದ್ದರು.ಪ್ರಖ್ಯಾತ ಸಾಹಿತಿಗಳ ಕುಟುಂಬದವರನ್ನು ಆಹ್ವಾನಿಸಿ:ನಾಡಿನ ಹೆಸರಾಂತ ಸಾಹಿತಿಗಳ ಕುಟುಂಬದವರನ್ನು ಸಮ್ಮೇಳನಕ್ಕೆ ಆಹ್ವಾನಿಸುವುದು ಉತ್ತಮ ಎಂಬ ಸಲಹೆ ಪತ್ರಿಕಾ ಮಾಧ್ಯಮದವರಿಂದ ಕೇಳಿಬಂದಿತು. ಕುವೆಂಪು, ಪು.ತಿ.ನ., ಬಿ.ಎಂ.ಶ್ರೀಕಂಠಯ್ಯ, ಕೆ.ಎಸ್.ನರಸಿಂಹಸ್ವಾಮಿ ಸೇರಿದಂತೆ ಹತ್ತು ಹಲವು ಸಾಹಿತಿಗಳ ಕುಟುಂಬದವರನ್ನು ಆಹ್ವಾನಿಸುವುದರಿಂದ ಕವಿಗಳಿಗೆ ಗೌರವ ಸೂಚಿಸಿದಂತಾಗುತ್ತದೆ ಎಂಬ ಮಾತುಗಳು ಕೇಳಿಬಂದವು.
ಸಮ್ಮೇಳನದ ನೀಲಿ ನಕ್ಷೆಯೇ ತಯಾರಾಗಿಲ್ಲ:ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಎಲ್ಲಿ, ಹೇಗೆ ನಡೆಯಲಿದೆ, ವೇದಿಕೆಗಳು ಯಾವ ಮಾದರಿಯಲ್ಲಿರಲಿವೆ, ಗೋಷ್ಠಿಗಳು ನಡೆಯುವ ಜಾಗಗಳು ಹೇಗಿರಲಿವೆ, ಊಟೋಪಚಾರದ ವ್ಯವಸ್ಥೆ, ವಾಹನಗಳ ಪಾರ್ಕಿಂಗ್ ಸೇರಿದಂತೆ ಇನ್ನಿತರ ವ್ಯವಸ್ಥೆಗಳ ಕುರಿತಂತೆ ಇದುವರೆಗೂ ನೀಲಿ ನಕಾಶೆ (ಬ್ಲೂ ಪ್ರಿಂಟ್)ಯನ್ನೇ ಜಿಲ್ಲಾಡಳಿತ ಸಿದ್ಧಪಡಿಸಿಟ್ಟುಕೊಂಡಿಲ್ಲ. ೨೮ ಸಮಿತಿಗಳನ್ನು ರಚಿಸಲಾಗಿದೆ. ಸಮಿತಿ ಸದಸ್ಯರ ಜವಾಬ್ದಾರಿಗಳೇನು ಎಂಬುದನ್ನು ತಿಳಿಸಿಲ್ಲ. ಸಮಿತಿಗಳನ್ನು ರಚಿಸಿಕೊಂಡು ಮುನ್ನಡೆಯಲಾಗುತ್ತಿದೆ. ಇಡೀ ಸಮ್ಮೇಳನದ ಸೂತ್ರಧಾರರು ಯಾರು, ಯಾರ ಅಣತಿಯಂತೆ ಸಮ್ಮೇಳನ ನಡೆಯುತ್ತಿದೆ ಎನ್ನುವುದು ಯಾರಿಗೂ ಗೊತ್ತಾಗುತ್ತಿಲ್ಲ ಎಂಬ ಮಾತುಗಳು ಪತ್ರಕರ್ತರಿಂದ ಕೇಳಿಬಂದವು.