ಭಾಷೆಯೊಂದಿಗಿನ ಸಂವಾದದಿಂದಲೇ ಸಾಹಿತ್ಯ ಸೃಷ್ಟಿ: ಶಿಕ್ಷಕ ಸದಾಶಿವ ಸೊರಟೂರು

| Published : Oct 14 2024, 01:16 AM IST

ಭಾಷೆಯೊಂದಿಗಿನ ಸಂವಾದದಿಂದಲೇ ಸಾಹಿತ್ಯ ಸೃಷ್ಟಿ: ಶಿಕ್ಷಕ ಸದಾಶಿವ ಸೊರಟೂರು
Share this Article
  • FB
  • TW
  • Linkdin
  • Email

ಸಾರಾಂಶ

ಕಥಾಗೋಷ್ಠಿ ಅಪರೂಪದ್ದು. ಕವಿ ಗೋಷ್ಠಿ ನಡೆಸಲು ತೋರುವ ಆಸಕ್ತಿ ಕಥೆಯ ವಿಚಾರದಲ್ಲಿ ಇಲ್ಲ. ಕಥೆ ಬರೆಯುವುದು ಸುಲಭವಲ್ಲ. ಕಥೆಗಾರನಿಗೆ ಭಾಷೆಯ ಬಗ್ಗೆ ಹಿಡಿತವಿರಬೇಕು. ಸಂಸ್ಕೃತಿಯ ಅರಿವು ಇರಬೇಕು. ಅದಿಲ್ಲದೆ ಕಥೆ ಶುಷ್ಕವಾಗುತ್ತೆ ಎಂದು ಶಿಕ್ಷಕ ಸದಾಶಿವ ಸೊರಟೂರು ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಸಮಾಜ ಸಾಹಿತ್ಯ ಸಂಪರ್ಕದಿಂದ ದೂರವಿರಬಾರದು. ಭಾಷೆಯಿಂದ ದೂರ ಸರಿಯುವುದು ಎಂದರೆ ಒಂದು ಸಂಸ್ಕೃತಿಯನ್ನು ನಾಶ ಮಾಡಿದ ಹಾಗೆ. ಭಾಷೆಯೊಂದಿಗಿನ ಸಂವಾದವೇ ಸಾಹಿತ್ಯ ಸೃಷ್ಟಿಗೆ ಕಾರಣ ಎಂದು ಶಿಕ್ಷಕ ಸದಾಶಿವ ಸೊರಟೂರು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಸಮಿತಿ ನೇತೃತ್ವದಲ್ಲಿ ಸಾಹಿತ್ಯ ಗ್ರಾಮದಲ್ಲಿ ಏರ್ಪಡಿಸಿದ್ದ ದಸರಾ ಕಥೆ-ಕಾವ್ಯ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ, ಕಥಾಗೋಷ್ಠಿ ಅಪರೂಪದ್ದು. ಕವಿ ಗೋಷ್ಠಿ ನಡೆಸಲು ತೋರುವ ಆಸಕ್ತಿ ಕಥೆಯ ವಿಚಾರದಲ್ಲಿ ಇಲ್ಲ. ಕಥೆ ಬರೆಯುವುದು ಸುಲಭವಲ್ಲ. ಕಥೆಗಾರನಿಗೆ ಭಾಷೆಯ ಬಗ್ಗೆ ಹಿಡಿತವಿರಬೇಕು. ಸಂಸ್ಕೃತಿಯ ಅರಿವು ಇರಬೇಕು. ಅದಿಲ್ಲದೆ ಕಥೆ ಶುಷ್ಕವಾಗುತ್ತೆ ಎಂದು ವಿವರಿಸಿದರು.

ಕುವೆಂಪು ವಿ.ವಿ. ಸಿಂಡಿಕೆಟ್ ಸದಸ್ಯರಾಗಿ ನೇಮಕರಾದ ವಕೀಲ ಕೆ.ಪಿ.ಶ್ರೀಪಾಲ್ ಅವರನ್ನು ಸನ್ಮಾನಿಸಲಾಯಿತು. ಬಳಿಕ ಮಾತನಾಡಿದ ಅವರು, ಶಿವಮೊಗ್ಗ ಕನ್ನಡ ಸಾಹಿತ್ಯ ಪರಿಷತ್ತು ನಿತ್ಯ ಸಾಹಿತ್ಯ ದಾಸೋಹ ನಡೆಸುತ್ತಿದೆ. ಒಂದಲ್ಲ ಒಂದು ಕಾರ್ಯಕ್ರಮ ನಿರಂತರವಾಗಿ ನಡೆಸುತ್ತಿದೆ. ಸಮಾಜದ ಒಳಿತಿಗಾಗಿ ನಾವು ನಿರಂತರ ಒಳ್ಳೆಯ ಕೆಲಸ ಮಾಡಲೇಬೇಕು. ಅದರಿಂದ ಸ್ವಲ್ಪವಾದರೂ ಬದಲಾವಣೆ ಸಾಧ್ಯ. ದುಡ್ಡು, ಆಸ್ತಿ ಮಾಡುವುದೇ ಸಮಾಜ ಸೇವೆಯ ಕೆಲಸವಲ್ಲ ಎಂದು ವಿವರಿಸಿದವರು.

ಕೆಲವರಿಗೆ ಯಾವುದೇ ನೇಮಕಾತಿ ಆದರೂ ಅದು ಲಾಭದಾಯಕ ಹುದ್ದೆ ಎಂದು ಭಾವಿಸುತ್ತಾರೆ. ಆದರೆ ಗೌರವ ತೋರಿ ನೀಡಿದ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ ಎಂದು ಹೇಳಿದರು.

ರೈತನಾಯಕ ಕೆ. ಟಿ.ಗಂಗಾಧರ ಮಾತನಾಡಿ, ಸಮಾಜ ಮಾಡುತ್ತಿರುವ ತಪ್ಪುಗಳನ್ನು ತಿದ್ದಿ ತೀಡುವ ಜವಾಬ್ದಾರಿ ಸಾಹಿತ್ಯದ ಮೇಲಿದೆ. ಜನರ ಬದುಕಿನ ಸಂಕಷ್ಟ ಹೇಳುವಾಗ ಸಾಹಿತ್ಯದ ಅಗತ್ಯವಿದೆ. ಜನರಾಡುವ ಭಾಷೆಯಲ್ಲಿ ಸಾಹಿತ್ಯದ ಹೂರಣದೊಂದಿಗೆ ಹೇಳಿದಾಗ ಮನಸ್ಸಿಗೆ ನಾಟುತ್ತೆ ಎಂದು ವಿವರಿಸಿದರು.

ಕಸಾಪ ಜಿಲ್ಲಾ ಅಧ್ಯಕ್ಷರಾದ ಡಿ.ಮಂಜುನಾಥ ಪ್ರತಿ ದಸರಾ ಸೇರಿದಂತೆ ಪ್ರಮುಖ ಸಂದರ್ಭಗಳಲ್ಲಿ ಕಥೆ, ಕಾವ್ಯಗೋಷ್ಠಿ ನಿರಂತರ ನಡೆಸಲಾಗುತ್ತಿದೆ. ಹೊಸ ಪ್ರತಿಭೆಗಳನ್ನು ಉತ್ತೇಜಿಸಲಾಗುತ್ತಿದೆ ಎಂದರು.

ಕಥೆಗಾರರಾದ ಶಾರದಾ ಉಳಿವಿ, ಡಾ.ಕೆ.ಜಿ.ವೆಂಕಟೇಶ್, ಅಂಬಿಕಾ ಸಂತೋಷ, ಪರಶುರಾಮ ಮಟ್ಟೇರ, ಸೊರಬ ರಾಮಕೃಷ್ಣ ಗೋಕಲೆ, ಎಂ. ಬಾಲರಾಜ್, ಶಿವಮೂರ್ತಿ ಕೆ.ಪಿ.,ಅಣ್ಣಪ್ಪ ಅರಬಗಟ್ಟೆ, ವಿನಯಕುಮಾರ್ ಆಯನೂರು ಅವರು ತಾವು ಬರೆದ ಕಥೆ ಹೇಳಿದರು. ಕವಿಗಳಾದ ರಚಿತ ಚೇತನ, ಪ್ರೊ.ಸತ್ಯನಾರಾಯಣ, ನಿಸಾರ್‌ಖಾನ್ ಕೆಂಚಾಯಿಕೊಪ್ಪ, ಗಾಯತ್ರಿ ರಮೇಶ್ ಕವನ ವಾಚಿಸಿದರು.

ಕೆ.ಎಸ್.ಮಂಜಪ್ಪ ಜನಪದ ಗೀತೆ ಹಾಡಿದರು. ಮಹಾದೇವಿ ಅವರು ಅತಿಥಿಗಳ ಪರಿಚಯ ಮಾಡಿದರು. ಎಂ.ನವೀನ್ ಕುಮಾರ್ ಸ್ವಾಗತಿಸಿದರು. ಡಿ.ಗಣೇಶ್ ನಿರೂಪಿಸಿದರು. ಎಂ.ಎಂ.ಸ್ವಾಮಿ ವಂದಿಸಿದರು.