ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಹಿಂದಿನವರು ತಮ್ಮ ಸಂವೇದನೆ, ನೋವು, ನಲಿವು ಅಭಿವ್ಯಕ್ತಿಗೆ ಜನಪದ ಹಾಡು, ಕಲೆಯ ಮರೆಹೋಗುತ್ತಿದ್ದರು. ಆಧುನಿಕ ವ್ಯವಸ್ಥೆ ಒಳಗೆ ಹಿರಿಯರು ಹಾಕಿಕೊಟ್ಟ ಸಂಸ್ಕಾರ ಮರೆತು ಹಾದಿ ತಪ್ಪುತ್ತಿರುವುದನ್ನು ನೋಡುತ್ತಿದ್ದೇವೆ. ಈ ವ್ಯವಸ್ಥೆ ಸರಿದಾರಿಗೆ ತರಲು ಸಾಹಿತ್ಯ ಹುಣ್ಣಿಮೆ ಉತ್ತಮ ವೇದಿಕೆಯಾಗಿದೆ ಎಂದು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀ ಸಾಯಿನಾಥ ಸ್ವಾಮೀಜಿ ಹೇಳಿದರು.ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ನೇತೃತ್ವದಲ್ಲಿ ವಿದ್ಯಾನಗರದ 6ನೇ ತಿರುವಿನಲ್ಲಿರುವ ಶ್ರೀ ಚೌಡೇಶ್ವರಿ ದೇವಾಲಯದ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಾಹಿತ್ಯ ಹುಣ್ಣಿಮೆ 228ನೇ ತಿಂಗಳ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿ, ಸಾಹಿತ್ಯ ಹುಣ್ಣಿಮೆ ಅನೇಕ ಬಡಾವಣೆಗಳಲ್ಲಿ ಏರ್ಪಡಿಸುವುದು, ಮನೆ ಮನೆಗೆ ಬಂದು ಆಹ್ವಾನ ನೀಡಿ ಕರೆಯುವುದು. ಅಲ್ಲಿರುವ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವುದು. ಒಳ್ಳೆಯ ವಿಚಾರಗಳನ್ನು ಬಿತ್ತುವ ಕೆಲಸ ಅತ್ಯಮೂಲ್ಯವಾಗಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಪಾಲಿಕೆ ಮಾಜಿ ಸದಸ್ಯೆ ಯಮುನಾ ರಂಗೇಗೌಡ ಮಾತನಾಡಿ, ಶ್ರಾವಣಬಂದಿದೆ. ಹಬ್ಬಗಳು ಸಾಲು ಸಾಲಾಗಿ ಬರುತ್ತಿವೆ. ಎಲ್ಲರೂ ಮನೆಗಳನ್ನು ಶುದ್ಧ ಮಾಡಿಕೊಂಡು ಹಬ್ಬಕ್ಕೆ ಸಿದ್ಧರಾಗುತ್ತಿದ್ದಾರೆ. ನಮ್ಮ ಮನಸ್ಸುಗಳು ಕಲುಷಿತ ವಾಗುತ್ತಿವೆ. ಮನಸ್ಸಿನ ಕೊಳೆ ತೊಳೆಯಲು ಸಾಹಿತ್ಯ ಹುಣ್ಣಿಮೆ ಕಾರ್ಯಕ್ರಮ ಅರ್ಥಪೂರ್ಣವಾಗಿದೆ ಎಂದು ಹೇಳಿದರು.ಭಾರತೀಯ ಕುಟುಂಬ ಯೋಜನಾ ಸಂಘದ ರಾಷ್ಟ್ರೀಯ ಅಧ್ಯಕ್ಷ ಉಮೇಶ್ ಆರಾಧ್ಯ ಮಾತನಾಡಿ, ಮನುಷ್ಯ ತನ್ನ ತಪ್ಪು ಅರಿಯದೆ ಮತ್ತೊಬ್ಬರ ತಪ್ಪು ಹುಡುಕುವ ತೀರ್ಪುಗಾರ ರಂತೆ ವರ್ತಿಸುತ್ತಿರುವುದು ತೊಲಗಬೇಕು. ಮನಸ್ಸು ಕಟ್ಟುವ ಇಂತಹ ಕಾರ್ಯಕ್ರಮದ ಅಗತ್ಯ ಬಹಳವಿದೆ ಎಂದರು.
ಮಲೆನಾಡು ಕ್ರೆಡಿಟ್ ಕೋ. ಸೊಸೈಟಿ ನಿರ್ದೇಶಕ ಎನ್. ದಿನೇಶ್ ಮಾತನಾಡಿ, ಬಡಾವಣೆ ಜನರು ಸಾಹಿತ್ಯ ಹುಣ್ಣಿಮೆ ಮಹತ್ವ ಅರಿಯಬೇಕು. ನಮ್ಮ ಜಿಲ್ಲೆಯ ಹೆಮ್ಮೆಯ ಕಾರ್ಯಕ್ರಮ ಎಂದು ಶ್ಲಾಘಿಸಿದರು. ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಅಧ್ಯಕ್ಷ ಡಿ.ಮಂಜುನಾಥ ಮಾತನಾಡಿ, ಸಾಹಿತ್ಯ ಹುಣ್ಣಿಮೆ ಸಾಂಸ್ಕೃತಿಕ ಚಳುವಳಿಯಂತೆ ನಡೆಸಿಕೊಂಡು ಬಂದಿದ್ದೇವೆ. ಅದಕ್ಕಾಗಿ ಕೈಜೋಡಿಸಿದ ಎಲ್ಲರನ್ನೂ ಸ್ಮರಿಸಿಕೊಳ್ಳುತ್ತೇವೆ ಎಂದರು.ಆತಿಥ್ಯ ವಹಿಸಿದ್ದ ಎಸ್. ನಾರಾಯಣ ಮತ್ತು ನಳಿನಾಕ್ಷಿ ಅವರು ಸೊಗಸಾದ ಹಾಡು ಹೇಳಿ ರಂಜಿಸಿದರು. ಹಂಸವಿ, ದಿಶಾ ಹಾಡು ಹೇಳಿದರು. ಉಪನ್ಯಾಸಕರು, ರಂಗಕರ್ಮಿ ಡಾ. ಜಿ. ಆರ್. ಲವ ಕಥೆ ಹೇಳಿದರು. ಗಂಗಾಧರ ಹಾಸ್ಯ ಪ್ರಹಸನ ನಡೆಸಿಕೊಟ್ಟರು. ರಮೇಶ್, ಪರಶುರಾಮ ಕವನ ವಾಚಿಸಿದರು. ಕು. ಧನ್ಯಶ್ರೀ ಭರತನಾಟ್ಯ ನೃತ್ಯ ಪ್ರದರ್ಶನ ಮಾಡಿದರು. ಮಹಾದೇವಿ ನಿರೂಪಿಸಿದರು. ಎಂ. ಎಂ. ಸ್ವಾಮಿ ಸ್ವಾಗತಿಸಿದರು, ನಾರಾಯಣ ವಂದಿಸಿದರು.