ಗದ್ದಲದೊಂದಿಗೆ ಸಾಹಿತಿಗಳ ಸಭೆ ಅಂತ್ಯ..!

| Published : Nov 19 2024, 12:47 AM IST

ಸಾರಾಂಶ

ಸ್ವಪ್ರತಿಷ್ಠೆ, ವೈಯಕ್ತಿಕ ಈರ್ಷೆ, ಅಪಸ್ವರ, ಹಠಮಾರಿ ಧೋರಣೆ, ಪಾಂಡಿತ್ಯ ಪ್ರದರ್ಶನ ಇವೆಲ್ಲವನ್ನೂ ಒಳಗೊಂಡು ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಕುರಿತಂತೆ ಸಾಹಿತಿಗಳ ಸಭೆ ಶಾಂತಿಯುತವಾಗಿ ಆರಂಭಗೊಂಡು ಗದ್ದಲದಲ್ಲಿ ಮುಕ್ತಾಯವನ್ನು ಕಂಡಿತು.

ಕನ್ನಡಪ್ರಭ ವಾರ್ತೆ ಮಂಡ್ಯ

ಸ್ವಪ್ರತಿಷ್ಠೆ, ವೈಯಕ್ತಿಕ ಈರ್ಷೆ, ಅಪಸ್ವರ, ಹಠಮಾರಿ ಧೋರಣೆ, ಪಾಂಡಿತ್ಯ ಪ್ರದರ್ಶನ ಇವೆಲ್ಲವನ್ನೂ ಒಳಗೊಂಡು ನಡೆದ ಸಾಹಿತಿಗಳ ಸಭೆ ಶಾಂತಿಯುತವಾಗಿ ಆರಂಭಗೊಂಡು ಗದ್ದಲದಲ್ಲಿ ಮುಕ್ತಾಯವನ್ನು ಕಂಡಿತು.

ಸೋಮವಾರ ನಗರದ ಹೊರ ವಲಯದಲ್ಲಿರುವ ಖಾಸಗಿ ಹೋಟೆಲ್‌ನಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಕುರಿತಂತೆ ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಸಾಹಿತಿಗಳ ಸಭೆಯಲ್ಲಿ ಸಮ್ಮೇಳನ ಯಾವ ರೀತಿ ನಡೆಯಬೇಕು, ಗೋಷ್ಠಿಗಳ ವಿಚಾರಗಳು ಹೇಗಿರಬೇಕು, ಸಮ್ಮೇಳನ ನಗರದ ಒಳಗೆ-ಹೊರಗೆ ನಡೆಯುವುದರಿಂದ ಆಗುವ ಸಾಧಕ-ಬಾಧಕಗಳೇನು, ಸಮ್ಮೇಳನದಲ್ಲಿ ಸಾಹಿತಿಗಳಾದವರ ಜವಾಬ್ದಾರಿಗಳೇನು, ಸಮ್ಮೇಳನದ ರೂಪು-ರೇಷೆಗಳು ಹೇಗಿರಬೇಕು, ಆಕರ್ಷಣೆಗೆ ಏನೇನು ಮಾಡಬೇಕು ಎಂಬೆಲ್ಲಾ ವಿಚಾರಗಳಿಗಿಂತ ಹೆಚ್ಚಾಗಿ ಸಾಹಿತ್ಯ ಪರಿಷತ್ ಅಧ್ಯಕ್ಷರು ಮತ್ತು ಸಾಹಿತಿಗಳ ನಡುವಿನ ಭಿನ್ನಮತ ಮತ್ತೊಮ್ಮೆ ಸ್ಫೋಟಗೊಂಡಿತು.ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಮಹೇಶ್ ಜೋಶಿ ಹಾಗೂ ಜಿಲ್ಲೆಯ ಸಾಹಿತಿಗಳ ನಡುವಿನ ವಿರಸ, ಭಿನ್ನಾಭಿಪ್ರಾಯಗಳನ್ನು ದೂರ ಮಾಡುವ ವೇದಿಕೆಯಾದಂತೆ ಸಭೆ ಕಂಡು ಬಂದಿತ್ತಾದರೂ ಅಂತಿಮವಾಗಿ ಡಾ.ಮಹೇಶ್ ಜೋಶಿ ಆಡಿದ ಮಾತುಗಳು ಹೊಳೆಯಲ್ಲಿ ಹುಣಸೆಹಣ್ಣನ್ನು ತೊಳೆದಂತೆ ಮಾಡಿತು.

ಚಿಂತಕ ಪ್ರೊ.ಎಂ.ಕೃಷ್ಣೇಗೌಡ ಅವರು ಸಭೆಯ ಕೊನೆಯಲ್ಲಿ ಆಗಮಿಸಿದರೂ ಮೌಲ್ಯಯುತ ಮಾತುಗಳಿಂದ ಎಲ್ಲರ ಗಮನ ಸೆಳೆದರು. ಸಾಹಿತಿಗಳಾದವರು ಸಾಹಿತ್ಯದ ಪರಿಭಾಷೆಯನ್ನು ಮೀರದೆ ವಿನಯದ ಪರಿಧಿಯೊಳಗೆ ಮಾತನಾಡಬೇಕು. ನಮ್ಮೊಳಗೆ ಏನೇ ಭಿನ್ನಮತಗಳಿದ್ದರೂ ಹೊರಗಿನ ಜನರಿಗೆ ಅದು ಕಾಣಿಸದಂತಿರಬೇಕು ಎಂಬ ಮಾತುಗಳ ನಡುವೆಯೂ ಸಭೆ ಅಪಸ್ವರ, ಗದ್ದಲದಲ್ಲಿ ಕೊನೆಗೊಳ್ಳುವಂತೆ ಆಗಿದ್ದು ವಿಪರ್ಯಾಸದ ಸಂಗತಿ.

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಮಹೇಶ್‌ ಜೋಶಿ ಮಾತನ್ನು ಮೊಟಕುಗೊಳಿಸಿದ ಸಚಿವ ಎನ್.ಚಲುವರಾಯಸ್ವಾಮಿ ಅವರು ಸಾಹಿತಿಗಳ ಸಭೆಗೆ ತೆರೆ ಎಳೆಯುವ ಮೂಲಕ ಮಾತುಗಳು ಅತಿರೇಕಕ್ಕೆ ತಲುಪದಂತೆ ತಡೆಯುವಲ್ಲಿ ಯಶಸ್ವಿಯಾದರು.ಯಾರ್ಯಾರು ಏನೇನು ಹೇಳಿದರು?

ಮಂಡ್ಯ ಜಿಲ್ಲೆಯ ವೈಶಿಷ್ಟ್ಯತೆಗಳ ಬಗ್ಗೆ ಗೋಷ್ಠಿಗಳಾಗಬೇಕು. ಜಾನಪದದ ಮೂಲ ಸೆಲೆ ಮಂಡ್ಯ. ಇಲ್ಲಿಯ ಸಾಹಿತ್ಯದ ಮಜಲುಗಳನ್ನು ಇತರೆ ಜಿಲ್ಲೆಯವರಿಗೆ ತಲುಪಿಸಬೇಕು. ಜಾನಪದದಲ್ಲಿ ನಾಗೇಗೌಡರ ಕೊಡುಗೆ ಮಹತ್ವದ್ದಾಗಿದೆ ದೊಡ್ಡಾಟ, ಸಣ್ಣಾಟ ಮಂಡ್ಯದಲ್ಲಿ ಜನ್ಮತಳೆದಿವೆ. ಯಕ್ಷಗಾನದ ಮೂಲ ಮಂಡ್ಯ. ಮೂಲ ಕಲಾವಿದ ವೆಂಕಯ್ಯ. ಮೂಡಲಪಾಯ ಯಕ್ಷಗಾನ ಮಂಡ್ಯದಲ್ಲಿ ಹುಟ್ಟನ್ನು ಪಡೆಯಿತು. ಅದನ್ನು ಸಮ್ಮೇಳನದಲ್ಲಿ ಪ್ರತಿಬಿಂಬಿಸಿ ರಾಜ್ಯಕ್ಕೇ ಆ ಸಂದೇಶವನ್ನು ರವಾನಿಸಬೇಕಿದೆ. ಕರಾವಳಿಯವರು ಯಕ್ಷಗಾನ ನಮ್ಮದು ಎನ್ನುತ್ತಿದ್ದಾರೆ. ಅದು ನಮ್ಮ ಗಂಡುಮೆಟ್ಟಿನ ಕಲೆ ಎಂದು ಎದೆತಟ್ಟಿ ಹೇಳಬೇಕು. ಜಿಲ್ಲೆಯ ಸಾಹಿತ್ಯದ ಮಜಲುಗಳು ಬೇಕಾದಷ್ಟಿವೆ. ಅದನ್ನು ಗುರುತಿಸಿಕೊಳ್ಳುವಲ್ಲಿ ನಾವು ವಿಫಲರಾಗಿದ್ದೇವೆ. ಮಂಡ್ಯಕ್ಕೆ ತನ್ನದೇ ಆದ ಕನ್ನಡತನವಿದೆ. ಅದನ್ನು ಹೆಚ್ಚು ಪ್ರಚುರಪಡಿಸಬೇಕು. ಸಾಹಿತ್ಯಕ್ಕೆ ಒತ್ತು ನೀಡುವ ವಿಚಾರಗಳು ಚರ್ಚೆಯಾಗಬೇಕು.

- ನರಹಳ್ಳಿ ಬಾಲಸುಬ್ರಹ್ಮಣ್ಯ, ಹಿರಿಯ ಸಾಹಿತಿಸಾಹಿತಿಗಳಾದವರು ರಾಜಕೀಯದ ಪರಿಭಾಷೆಗೆ ಹೋಗಬಾರದು. ನಮ್ಮೊಳಗೆ ಏನೇ ಭಿನ್ನಾಭಿಪ್ರಾಯಗಳಿದ್ದರೂ ಮಾತುಗಳು ವಿನಯದ ಪರಿಧಿಯನ್ನು ದಾಟಬಾರದು. ಟೀಕೆಗಳು, ಸಲಹೆ, ಅಭಿಪ್ರಾಯಗಳನ್ನು ಗೌರವದಿಂದ ಸ್ವೀಕರಿಸುವ ಮುಕ್ತ ಮನಸ್ಸಿರಬೇಕು. ನಮ್ಮ ನಡುವೆ ಏನೇ ವೈರುದ್ಯಗಳಿದ್ದರೂ ಹೊರಗಿನ ಪ್ರಪಂಚಕ್ಕೆ ಕಾಣಿಸಬಾರದು. ಸಾಹಿತ್ಯ ಸಮ್ಮೇಳನಗಳು ಸಾಹಿತ್ಯ ಪರಿಷತ್ತಿನ ವ್ಯಾಪ್ತಿಯೊಳಗೆ ನಡೆಯುತ್ತಿದ್ದ ಕಾಲವಿತ್ತು. ಈಗ ಸರ್ಕಾರ ಸಮ್ಮೇಳನಗಳನ್ನು ನಡೆಸುವ ಪರಿಸ್ಥಿತಿಗೆ ನಾವೇ ತಂದುಕೊಂಡಿದ್ದೇವೆ. ಮತ್ತೆ ಅದನ್ನು ಹಿಂದಕ್ಕೆ ತೆಗೆದುಕೊಂಡು ಹೋಗಲಾಗುವುದಿಲ್ಲ. ಆದರೆ, ಸಾಹಿತಿಗಳು ನಮ್ಮ ಸಾಹಿತ್ಯದ ಪರಿಭಾಷೆಯನ್ನು ಉಳಿಸಿಕೊಂಡಿದ್ದೇವೆ ಎನ್ನುವುದನ್ನು ತೋರ್ಪಡಿಸಬೇಕಿದೆ. ಇಲ್ಲದಿದ್ದರೆ ಸಾಹಿತಿಗಳಿಗೂ ರಾಜಕಾರಣಿಗಳಿಗೂ ವ್ಯತ್ಯಾಸವೇ ಇರುವುದಿಲ್ಲ. ಸಾಹಿತ್ಯ ಸಮ್ಮೇಳನದಲ್ಲಿ ನಾವು ಎಷ್ಟು ಜನಕ್ಕೆ ಊಟ ಹಾಕಿದೆವು, ಎಷ್ಟು ದೂರ ಚಪ್ಪರ ಹಾಕಿದೆವು ಎನ್ನುವುದು ಮುಖ್ಯವಾಗಬಾರದು. ಎಷ್ಟು ಸುಸಂಸ್ಕೃತವಾಗಿ ನಡೆಯಿತು. ಭಿನ್ನಾಭಿಪ್ರಾಯಗಳಿಲ್ಲದೆ ಅಚ್ಚುಕಟ್ಟಾಗಿ ನಡೆಸಿ ಯಶಸ್ವಿಗೊಳಿಸಿದ ಸಂದೇಶ ರಾಜ್ಯಕ್ಕೆ ರವಾನೆಯಾಗಬೇಕು.

- ಪ್ರೊ.ಕೃಷ್ಣೇಗೌಡ, ವಾಗ್ಮಿಸಮ್ಮೇಳನಕ್ಕೆ ಖರ್ಚು ಮಾಡುತ್ತಿರುವ ೨೮ ಕೋಟಿ ರು. ಮೂರು ದಿನಕ್ಕೆ ಮುಗಿದುಹೋಗುವುದೇ. ಆ ನಂತರವೂ ನೆನಪಿನಲ್ಲಿ ಉಳಿಯುವಂತಾಗುವುದೇ ಎಂಬುದಕ್ಕೆ ಉತ್ತರ ಸಿಗಬೇಕು. ನಮಗೆ ಹಾವೇರಿ ಮಾದರಿ ಬೇಡ. ನಮ್ಮ ಮಾದರಿ ಇಟ್ಟುಕೊಳ್ಳೋಣ. ನಾವು ಸಮ್ಮೇಳನದ ವಿರೋಧಿಗಳಲ್ಲ. ಅದರ ಯಶಸ್ಸಿಗೆ ಸಂಪೂರ್ಣವಾಗಿ ದುಡಿಯುತ್ತೇವೆ. ಹಾವೇರಿ ಸಮ್ಮೇಳನದಲ್ಲಿ ಸರ್ಕಾರದಿಂದ ಪ್ರಕಟವಾಗಿರುವ ಪುಸ್ತಕಗಳಲ್ಲಿ ಲೇಖಕರ ಹೆಸರಿಲ್ಲ. ಸಮ್ಮೇಳನಾಧ್ಯಕ್ಷರ ಹೆಸರಿದೆ. ಮಂಡ್ಯ ಸಮ್ಮೇಳನದಲ್ಲಿ ಪ್ರಕಟವಾಗುವ ಪುಸ್ತಕಗಳಲ್ಲಿ ಲೇಖಕರ ಹೆಸರು ಮಾತ್ರ ಇರಬೇಕು. ಸಾಹಿತ್ಯ ಪರಿಷತ್ತಿಗೆ, ಜಿಲ್ಲಾಡಳಿತಕ್ಕೆ ಸರ್ಕಾರ ಎಷ್ಟು ಹಣ ಕೊಟ್ಟಿದೆ ಎಂಬುದನ್ನು ತಿಳಿಸಬೇಕು. ಸಮ್ಮೇಳನಕ್ಕೆ ವಿಶ್ವೇಶ್ವರಯ್ಯನವರ ಮೊಮ್ಮಗಳನ್ನು ಕರೆತರುವಾಗ ಬೇರೆ ಸಾಹಿತಿಗಳ ಮೊಮ್ಮಕ್ಕಳು, ಮರಿಮಕ್ಕಳು ಏನಾಗಬೇಕೆಂಬ ಯೋಚನೆಯೂ ಪರಿಷತ್ತಿನ ಅಧ್ಯಕ್ಷರಿಗಿರಬೇಕು.

- ಪ್ರೊ.ಬಿ.ಜಯಪ್ರಕಾಶಗೌಡ, ಅಧ್ಯಕ್ಷರು, ಕರ್ನಾಟಕ ಸಂಘಮಾತುಗಳು ಕಠಿಣವಾಗಬಾರದು, ಧೋರಣೆಗಳು ಬದಲಾಗಬೇಕು. ಒಂದು ಸ್ಥಾನದಲ್ಲಿದ್ದ ಮಾತ್ರಕ್ಕೆ ಎಲ್ಲರೂ ನನ್ನಂತೆಯೇ ನಡೆಯಬೇಕು ಎಂಬ ಮನಸ್ಥಿತಿ ಬದಲಾಗಬೇಕು. ಎಲ್ಲರನ್ನೂ ಸೌಜನ್ಯದಿಂದ ನಡೆಸಿಕೊಂಡು, ಗೌರವಯುತವಾಗಿ ಮುನ್ನಡೆಸಿದಾಗ ಎಲ್ಲರಿಂದಲೂ ಎಲ್ಲ ರೀತಿಯ ಸಹಕಾರಗಳು ದೊರೆಯುತ್ತವೆ. ಯಾರೋ ಒಬ್ಬರಿಂದ ಸಮ್ಮೇಳನ ಯಶಸ್ವಿಯಾಗುವುದಿಲ್ಲ. ಎಲ್ಲರೂ ಕೈಜೋಡಿಸಿದಾಗ ಮಾತ್ರ ಸಮ್ಮೇಳನ ಯಶಸ್ಸು, ಸಾರ್ಥಕತೆ ಪಡೆಯುತ್ತದೆ.

- ಪ್ರೊ.ಎಸ್.ಬಿ.ಶಂಕರೇಗೌಡ, ನಿವೃತ್ತ ಪ್ರಾಂಶುಪಾಲರು

ಪತ್ರಕರ್ತರ ಸಂಘದವರು ಸಂವಾದಕ್ಕೆ ಕರೆದಾಗ ನಾನು ಹೋಗಿ ನನ್ನ ಅಭಿಪ್ರಾಯ ತಿಳಿಸಿದ್ದೇನೆ. ಸಾಹಿತ್ಯ ಪರಿಷತ್ ಅಧ್ಯಕ್ಷರನ್ನು ಡಾ.ಜೋಶಿ ಎಂದು ಕರೆದಿದ್ದೇನೆ. ಅಷ್ಟಕ್ಕೇ ಅವರು ನನ್ನ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎಂದರೆ ಏನರ್ಥ. ನಾನೇನು ತಪ್ಪು ಮಾತನಾಡಿದ್ದೇನೆ. ನಮಗೂ ಗೌರವವಿರುವುದಿಲ್ಲವೇ?

- ಪ್ರೊ.ಜಿ.ಟಿ.ವೀರಪ್ಪ, ಸಾಹಿತಿಡಾ.ಜೋಶಿ ಮಾತಿಗೆ ಪ್ರೊ.ಜೆಪಿ ಅಪಸ್ವರ

ಕನ್ನಡಪ್ರಭ ವಾರ್ತೆ ಮಂಡ್ಯ

ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದವರು ಮುಖ್ಯಮಂತ್ರಿ ಮನೆ ಬಾಗಿಲಿಗೂ ಹೋಗುತ್ತಿರಲಿಲ್ಲ. ಮುಖ್ಯಮಂತ್ರಿಗಳೇ ಸ್ವತಃ ಕಾರು ಕಳುಹಿಸಿ ಅಧ್ಯಕ್ಷರನ್ನು ಕರೆಸಿಕೊಳ್ಳುತ್ತಿದ್ದರು. ಮಂಡ್ಯಕ್ಕೆ ಸಾಹಿತ್ಯ ಸಮ್ಮೇಳನವನ್ನು ತರುವಲ್ಲಿ ಹೆಚ್ಚಿನ ಶ್ರಮ ವಹಿಸಿದ್ದೇನೆ. ಮಧುರ ಮಧುರವೀ ಮಂಜುಳ ಗಾನ ಕಾರ್ಯಕ್ರಮವನ್ನು ಮೊದಲ ಬಾರಿಗೆ ಮಂಡ್ಯಕ್ಕೆ ತರುತ್ತಿದ್ದೇನೆ ಎಂಬ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರ ಮಾತುಗಳು ಇಲ್ಲಿ ಅಪ್ರಸ್ತುತ ಎಂದು ಸಭೆಯಲ್ಲಿದ್ದ ಹಲವು ಸಾಹಿತಿಗಳು ಅಡ್ಡಿಪಡಿಸಿದ್ದರಿಂದ ಸಭೆ ಅಲ್ಲಿಗೇ ಮೊಟಕುಗೊಂಡಿತು.

ಪ್ರೊ.ಕೃಷ್ಣೇಗೌಡರ ಮಾತಿನ ಬಳಿಕ ಕೊನೆಯಲ್ಲಿ ಮಾತಿಗಿಳಿದ ಡಾ.ಮಹೇಶ್ ಜೋಶಿ ಅವರು, ನನಗೂ ಮಂಡ್ಯ ಮೇಲೆ ಅಪಾರ ಗೌರವವಿದೆ. ಚುನಾವಣೆ ಸಮಯದಲ್ಲಿ ಕೊಟ್ಟ ಮಾತಿನಂತೆ ಸಾಹಿತ್ಯ ಸಮ್ಮೇಳನವನ್ನು ಮಂಡ್ಯಕ್ಕೆ ತಂದಿದ್ದೇನೆ. ಚಲುವರಾಯಸ್ವಾಮಿ ಅವರ ಮತ್ತು ನನ್ನ ಸ್ನೇಹ ೩೦ ವರ್ಷಗಳಷ್ಟು ಹಳೆಯದು. ಅವರು ಮಂತ್ರಿಯಾದಾಗ ನಾನೇ ಅವರ ಮನೆಗೆ ಹೋಗಿ ಸ್ವಾಗತಿಸಿದ್ದೇನೆ. ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಮುಖ್ಯಮಂತ್ರಿಗಳ ಮನೆಗೇ ಹೋಗಿರಲಿಲ್ಲ. ಮುಖ್ಯಮಂತ್ರಿಗಳೇ ಕಾರು ಕೊಟ್ಟು ಕರೆಸಿಕೊಳ್ಳುತ್ತಿದ್ದರು ಎಂದು ನಿಜಲಿಂಗಪ್ಪ, ದೇವರಾಜ ಅರಸು ಕಾಲದ ಅಧ್ಯಕ್ಷರನ್ನು ನೆನಪಿಸಿಕೊಂಡು, ಮಂಡ್ಯಕ್ಕೆ ಮಧುರ ಮಧುರವೀ ಮಂಜುಳಗಾನ ಕಾರ್ಯಕ್ರಮ ತರುವ ಬಗ್ಗೆ ಮಾತನಾಡುವಾಗ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶಗೌಡ ಸೇರಿದಂತೆ ಹಲವರು ಈ ಮಾತುಗಳು ಇಲ್ಲಿ ಅಪ್ರಸ್ತುತ ಎಂದು ಹೇಳಿ ಅಡ್ಡಿಪಡಿಸಿದರು.

ಪ್ರೊ.ಜಯಪ್ರಕಾಶಗೌಡರು ಮಾತನಾಡಿ, ಅಧ್ಯಕ್ಷರಿಗೆ ಸಾಂವಿಧಾನಿಕ ಹುದ್ದೆ ಎಂಬುದಿಲ್ಲ. ಅವರು ಸಾಹಿತ್ಯ ಪರಿಷತ್ತಿನ ಪರಿಚಾರಕರಷ್ಟೇ. ಮಾತೃ ಭಾಷೆಯಲ್ಲಿ ಕನ್ನಡ ಶಿಕ್ಷಣ ನೀಡದಿರುವ ಬಗ್ಗೆ, ಹೊಸ ಶಿಕ್ಷಣ ನೀತಿಯಲ್ಲಿ ಪದವಿ ತರಗತಿಗಳಲ್ಲಿ ಕನ್ನಡ ಬೋಧನೆಯ ಅವಧಿ ಕಡಿಮೆಯಾಗಿದೆ. ವಾಣಿಜ್ಯ ಶಾಸ್ತ್ರದಲ್ಲಿ ಕನ್ನಡ ಭಾಷೆಯ ಬಳಕೆ ಅವಶ್ಯಕತೆಯಿಲ್ಲ ಎಂದು ವಿಷಯ ತೇಲಿಬಿಟ್ಟಿರುವ ಬಗ್ಗೆ ಅಧ್ಯಕ್ಷರು ದನಿ ಎತ್ತಿಲ್ಲ. ಸಾಹಿತ್ಯ ಸಮ್ಮೇಳನ ಮಾಡುವುದಷ್ಟೇ ಅಧ್ಯಕ್ಷರ ಜವಾಬ್ದಾರಿಯಾದರೆ ಇದಕ್ಕೆ ಏನೆನ್ನೋಣ ಎಂಬ ಮಾತಿಗೆ ಸಭೆಯಲ್ಲಿದ್ದವರು ದನಿಗೂಡಿಸಿದಾಗ ಗದ್ದಲವೇರ್ಪಟ್ಟಿತು.ನಾನೇ ಜವಾಬ್ದಾರಿ ತೆಗೆದುಕೊಳ್ಳುವೆ, ನಾನೇ ನಿಭಾಯಿಸುವೆ: ಚಲುವರಾಯಸ್ವಾಮಿ

ಕನ್ನಡಪ್ರಭ ವಾರ್ತೆ, ಮಂಡ್ಯ

ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಜವಾಬ್ದಾರಿಯನ್ನು ನಾನೇ ತೆಗೆದುಕೊಳ್ಳುತ್ತೇನೆ. ನಾನೇ ನಿಭಾಯಿಸುತ್ತೇನೆ. ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಏನೇ ಮಾತನಾಡಿದ್ದರೂ ಎಲ್ಲವೂ ಕಾರ್ಯರೂಪಕ್ಕೆ ಬರುವುದಿಲ್ಲ. ಕಾರ್ಯಕಾರಿ ಸಮಿತಿಯಲ್ಲಿ ಆಗುವ ತೀರ್ಮಾನವೇ ಅಂತಿಮ ಎಂದು ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಸಾಹಿತಿಗಳ ಸಭೆಯಲ್ಲಿ ಎಲ್ಲರ ಅಭಿಪ್ರಾಯಗಳನ್ನು ಆಲಿಸಿದ ಬಳಿಕ ಮಾತನಾಡಿ, ಅಧ್ಯಕ್ಷರು ಕೆಲವೊಂದು ವಿಷಯಗಳನ್ನು ಪ್ರಸ್ತ್ತಾಪಿಸುವ ಅವಶ್ಯಕತೆ ಇರಲಿಲ್ಲ. ಸಾಹಿತ್ಯ ಸಮ್ಮೇಳನಕ್ಕೆ ಸಾಹಿತಿಗಳನ್ನೇ ಅಧ್ಯಕ್ಷರನ್ನಾಗಿ ಮಾಡುವುದ ಪರಂಪರಾನುಗತವಾಗಿ ಬೆಳೆದುಬಂದಿದೆ. ಅದನ್ನು ಮೊಟಕುಗೊಳಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ನಾನು ಯಾರನ್ನೂ ದ್ವೇಷ ಮಾಡುವುದಿಲ್ಲ. ಬೇರೆಯವರನ್ನು ಟೀಕಿಸುವ ಸಂಸ್ಕೃತಿಯೂ ನನ್ನದಲ್ಲ. ಕಠಿಣವಾಗಿ, ಮೃದುವಾಗಿ ಹೇಳಿದಾಗಲೂ ಒಂ ದೇ ರೀತಿಯಲ್ಲಿ ಸ್ವೀಕರಿಸುವ ಮನೋಭಾವ ನನ್ನದು. ಅದರಂತೆ ನಿಮ್ಮೆಲ್ಲರ ಸಲಹೆ-ಸಹಕಾರವನ್ನು ಮುಕ್ತವಾಗಿ ಸ್ವೀಕರಿಸಿದ್ದೇನೆ. ಅವೆಲ್ಲವನ್ನೂ ಪ್ರಾಮಾಣಿಕವಾಗಿ ಜಾರಿಗೊಳಿಸಲು ಶ್ರಮವಹಿಸುತ್ತೇನೆ ಎಂದು ಭರವಸೆ ನೀಡಿದರು.

ನಾಲ್ವಡಿ ಪ್ರತಿಷ್ಠಾನ ಮತ್ತು ಪ್ರತಿಮೆ ಸ್ಥಾಪಿಸುವ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸಿದ್ದೇನೆ. ಅದು ಕೂಡ ಈಡೇರಲಿದೆ. ಎಲ್ಲವೂ ಒಂದೇ ಬಾರಿಗೆ ಆಗುವುದಿಲ್ಲ. ನಿಂತಿದ್ದ ಮೈಷುಗರ್‌ಗೆ ಚಾಲನೆ ದೊರಕಿಸಿದ್ದೇವೆ. ಸ್ವಂತ ಹಣದಿಂದ ನಡೆಯುವಂತೆ ಮಾಡಿದ್ದೇವೆ. ಕೃಷಿ ವಿಶ್ವವಿದ್ಯಾಲಯ ಸ್ಥಾಪನೆಯಾಗಲಿದೆ. ಮೈಷುಗರ್ ಪುನಶ್ಚೇತನದ ಪ್ರಕ್ರಿಯೆಯೂ ಕಾರ್ಯರೂಪದಲ್ಲಿದೆ. ಅಭಿವೃದ್ಧಿ ಎನ್ನುವುದು ನಿರಂತರವಾಗಿರುತ್ತದೆ. ಅದಕ್ಕೂ ಸಮ್ಮೇಳನಕ್ಕೂ ಸಂಬಂಧವಿಲ್ಲ ಎಂದು ನೇರವಾಗಿ ಹೇಳಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಸಿಇಓ ಶೇಖ್ ತನ್ವೀರ್ ಆಸಿಫ್, ವಿಧಾನಪರಿಷತ್ ಶಾಸಕ ದಿನೇಶ್ ಗೂಳಿಗೌಡ, ಸಾಹಿತ್ಯ ಸಮ್ಮೇಳನದ ಸಂಚಾಲಕಿ ಮೀರಾ ಶಿವಲಿಂಗಯ್ಯ ಇತರರಿದ್ದರು.