ಬಳ್ಳಾರಿ: ಗಮಕ ಕಲಾನಿಧಿ ಜೋಳದರಾಶಿ ದೊಡ್ಡನಗೌಡರ ಡೈರಿಗಳು, ಕ್ಯಾಸೆಟ್‌ಗಳು, ಹಸ್ತಪ್ರತಿಗಳು ಹಾಗೂ ಇತರೆ ಸಾಹಿತ್ಯಿಕ ಬರಹಗಳನ್ನು ಸಮಗ್ರವಾಗಿ ಡಿಜಿಟಲೀಕರಣಗೊಳಿಸುವ ಕಾರ್ಯವಾಗಬೇಕು ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಆಶಿಸಿದರು.

ತಾಲೂಕಿನ ಜೋಳದರಾಶಿ ಗ್ರಾಮದಲ್ಲಿ ನವೀಕೃತ ರಾಮೇಶ ಕಲಾಮಂದಿರದ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ದೊಡ್ಡನಗೌಡರು ಕನ್ನಡ ಸಾಹಿತ್ಯ, ಗಮಕ ಕಲೆ ಹಾಗೂ ಸಾಂಸ್ಕೃತಿಕ ಕ್ಷೇತ್ರಕ್ಕೆ ಸಲ್ಲಿಸಿರುವ ಕೊಡುಗೆ ಅಪಾರವಾಗಿದೆ. ಅವರ ಸಾಧನೆಗಳು ಕೇವಲ ಒಂದು ಪ್ರದೇಶಕ್ಕೆ ಸೀಮಿತವಾಗದೆ, ಇಡೀ ರಾಜ್ಯದ ಸಾಂಸ್ಕೃತಿಕ ಪರಂಪರೆಯ ಅಮೂಲ್ಯ ಸಂಪತ್ತಾಗಿವೆ. ಇಂತಹ ಮಹನೀಯರ ಬದುಕು, ಚಿಂತನೆ ಹಾಗೂ ಸಾಹಿತ್ಯವನ್ನು ಮುಂದಿನ ತಲೆಮಾರಿಗೆ ಪರಿಚಯಿಸುವ ಜವಾಬ್ದಾರಿ ಸಮಾಜದ ಪ್ರತಿಯೊಬ್ಬರ ಮೇಲಿದೆ. ಅವರ ಅಮೂಲ್ಯ ದಾಖಲೆಗಳನ್ನು ಸಂರಕ್ಷಿಸಿ ಡಿಜಿಟಲ್ ರೂಪದಲ್ಲಿ ಉಳಿಸುವ ಮೂಲಕ ಸಂಶೋಧಕರು, ವಿದ್ಯಾರ್ಥಿಗಳು ಹಾಗೂ ಸಾಹಿತ್ಯಾಸಕ್ತರಿಗೆ ಸುಲಭವಾಗಿ ಲಭ್ಯವಾಗುವಂತೆ ಮಾಡಬೇಕು. ಈ ಮಹತ್ವದ ಕಾರ್ಯಕ್ಕೆ ಅಗತ್ಯ ಸಹಕಾರ ನೀಡಲು ತಾವು ಸದಾ ಸಿದ್ಧರಾಗಿರುವುದಾಗಿ ಶ್ರೀರಾಮುಲು ಭರವಸೆ ನೀಡಿದರು.

ವಿಧಾನಪರಿಷತ್‌ ಪ್ರತಿಪಕ್ಷದ ಮುಖ್ಯ ಸಚೇತಕ ಎನ್. ರವಿಕುಮಾರ್ ಮಾತನಾಡಿ, ಭಾರತದ ನೈಜ ಸಂಸ್ಕೃತಿ, ಸಂಪ್ರದಾಯ ಮತ್ತು ಮೌಲ್ಯಗಳು ಇಂದಿಗೂ ಗ್ರಾಮೀಣ ಬದುಕಿನಲ್ಲಿ ಜೀವಂತವಾಗಿವೆ. ಹಳ್ಳಿಗಳಲ್ಲಿ ಸಂಸ್ಕೃತಿ, ಪರಂಪರೆ ಹಾಗೂ ಜೀವನ ಮೌಲ್ಯಗಳು ಉಳಿದು ಬೆಳೆದರೆ ಮಾತ್ರ ಭಾರತದ ಸಾಂಸ್ಕೃತಿಕ ವೈಭವವೂ ಅಷ್ಟೇ ಸದೃಢವಾಗಿ ಮುಂದುವರಿಯಲಿದೆ.

ಆಧುನಿಕತೆಯ ಭರಾಟೆಯಲ್ಲಿ ಗ್ರಾಮೀಣ ಸಂಸ್ಕೃತಿ ಮರೆಯಾಗದಂತೆ ಪ್ರತಿಯೊಬ್ಬರೂ ಕಾಳಜಿ ವಹಿಸುವ ಅಗತ್ಯವಿದೆ. ಪುಟ್ಟ ಹಳ್ಳಿಯೊಂದರಲ್ಲಿ ಜನಿಸಿದ ಜೋಳದರಾಶಿ ದೊಡ್ಡನಗೌಡರು ತಮ್ಮ ಪ್ರತಿಭೆ, ಪರಿಶ್ರಮ ಹಾಗೂ ಕಲಾಸೇವೆಯ ಮೂಲಕ ರಾಜ್ಯಾದ್ಯಂತ ಮಾತ್ರವಲ್ಲದೆ ನಾಡಿನಾದ್ಯಂತ ವಿಶಿಷ್ಟ ಗುರುತನ್ನು ಮೂಡಿಸಿಕೊಂಡಿದ್ದಾರೆ. ಸಾಮಾನ್ಯ ಕುಟುಂಬದಿಂದ ಬೆಳೆದು ಕನ್ನಡ ಸಾಹಿತ್ಯ, ಜನಪದ ಮತ್ತು ಗಮಕ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡುವ ಮೂಲಕ ತಮ್ಮ ಜನ್ಮಭೂಮಿಗೆ ಕೀರ್ತಿ ತಂದಿರುವುದು ಪ್ರತಿಯೊಬ್ಬರಿಗೂ ಹೆಮ್ಮೆಯ ಸಂಗತಿಯಾಗಿದೆ. ಇಂತಹ ಮಹನೀಯರ ಜೀವನ ಮತ್ತು ಸಾಧನೆಗಳು ಇಂದಿನ ಯುವಜನತೆಗೆ ಸ್ಫೂರ್ತಿದಾಯಕವಾಗಿದ್ದು, ಅವರ ಆದರ್ಶಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸ ನಿರಂತರವಾಗಿ ನಡೆಯಬೇಕು. ಸಮಾಜದ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.


ಸಾನ್ನಿಧ್ಯ ವಹಿಸಿದ್ದ ಉರವಕೊಂಡ ಗವಿಮಠ ಸಂಸ್ಥಾನದ ಜಗದ್ಗುರು ಡಾ. ಕರಿಬಸವರಾಜೇಂದ್ರ ಮಹಾಸ್ವಾಮಿಗಳು, ಉರವಕೊಂಡ ಸಂಸ್ಥಾನ ಮಠದ 6ನೇ ಜಗದ್ಗುರು ಶ್ರೀ ಚನ್ನಬಸವರಾಜೇಂದ್ರ ಸ್ವಾಮಿಗಳ ಜೊತೆ ದೊಡ್ಡನಗೌಡರ ಅವಿನಾಭಾವ ಸಂಬಂಧ ಕುರಿತು ಮಾತನಾಡಿದರು.

ಕಲೆ, ಸಾಹಿತ್ಯ, ಗಮಕ, ಸಂಸ್ಕೃತಿಯಿಂದ ಮಾತ್ರ ಭಾರತೀಯ ಸಂಸ್ಕೃತಿ ಉಳಿಯಲು ಸಾಧ್ಯವಾಗಿದ್ದು, ಅಪರೂಪ ಎನ್ನುವಂತೆ ಬಳ್ಳಾರಿ ಜಿಲ್ಲೆಗೆ ಸಿಕ್ಕಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಶೀಘ್ರವೇ ಜರುಗುವಂತಾಗಲಿ ಎಂದು ಶ್ರೀಚನ್ನಬಸವರಾಜೇಂದ್ರಸ್ವಾಮಿಗಳು ಒತ್ತಾಸೆ ವ್ಯಕ್ತಪಡಿಸಿದರು.

ಲೆಕ್ಕಪರಿಶೋಧಕ ಎರಿಸ್ವಾಮಿ ಚಿಲ್ಕರಾಯಿ ಮಾತನಾಡಿದರು. ಜೋಳದರಾಶಿ ದೊಡ್ಡನಗೌಡ ಪ್ರತಿಷ್ಠಾನದ ಅಧ್ಯಕ್ಷ ಪಂಪನಗೌಡ ಅವರು ಜೋಳದರಾಶಿ ಗ್ರಾಮದ ಸಾಂಸ್ಕೃತಿಕ ಹಿನ್ನಲೆ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ರಂಗತೋರಣ ಕಾರ್ಯದರ್ಶಿ ಪ್ರಭುದೇವ ಕಪ್ಪಗಲ್ಲು, ಎರ್ರಿತಾತ ಜೀವಸಮಾಧಿ ಟ್ರಸ್ಟ್‌ನ ಧರ್ಮದರ್ಶಿ ಎಚ್. ಬಾಳನಗೌಡ, ಜಿಪಂ ಸದಸ್ಯ ಮಲ್ಲಿಕಾರ್ಜುನ ಉಪಸ್ಥಿತರಿದ್ದರು. ಗಮಕ ಕಲಾವಿದ ಎರ್ರೆಪ್ಪಗೌಡ ಹಾಗೂ ಜೋಳದರಾಶಿ ಬಸವರಾಜ ಕಾರ್ಯಕ್ರಮ ನಿರ್ವಹಿಸಿದರು.

ಕೊನೆಯಲ್ಲಿ ಪ್ರದರ್ಶನಗೊಂಡ ಧಾರವಾಡದ ಆಟಮಾಟ ತಂಡದ ಮಹಾದೇವ ಹಡಪದ ರಚನೆ, ನಿರ್ದೇಶನದ "ಗುಡಿಯ ನೋಡಿರಣ್ಣ " ಆಧ್ಯಾತ್ಮಿಕ ನಾಟಕ ನೆರೆದಿದ್ದ ಪ್ರೇಕ್ಷಕರನ್ನು ಆಧ್ಯಾತ್ಮಿಕ ಲೋಕಕ್ಕೆ ಕರೆದೊಯ್ದಿತು.