ಸಾರಾಂಶ
ಕನ್ನಡಪ್ರಭ ವಾರ್ತೆ ಪಾಂಡವಪುರ
ಸಾಹಿತಿಗಳಿಗೆ ಪ್ರತಿಭೆ ಜತೆ ಲೋಕಜ್ಞಾನ ಇದ್ದರೆ ಮಾತ್ರ ಒಂದು ಉತ್ತಮ ಕೃತಿ ರಚನೆ ಮಾಡಲು ಸಾಧ್ಯ ಎಂದು ಕಾರ್ಮಿಕ ಇಲಾಖೆಯ ಜಂಟಿ ಆಯುಕ್ತ ಡಾ.ಎಸ್.ಬಿ.ರವಿಕುಮಾರ್ ಹೇಳಿದರು.ಪಟ್ಟಣದ ಕಸಾಪ ಭವನದಲ್ಲಿ ನಡೆದ ಸಾಹಿತಿ, ಉಪನ್ಯಾಸಕ ಸಿ.ಎಸ್.ಮಂಜುನಾಥ್ ಚಿನಕುರಳಿ ಅವರ ಮೇಲುಕೋಟೆ (ಪಾಂಡವಪುರ ತಾಲೂಕು ದರ್ಶನ) ಕೃತಿ ಬಿಡುಗಡೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಕೃತಿ ರಚನೆ ಮಾಡುವುದು ಸುಲಭವಲ್ಲ. ಪ್ರತಿಭೆಯೊಬ್ಬರಲ್ಲೂ ಪ್ರತಿಭೆ ಇರುತ್ತದೆ. ಆ ಪ್ರತಿಭೆ ಅಭಿವ್ಯಕ್ತಪಡಿಸಿಕೊಳ್ಳಲು ಲೋಕಜ್ಞಾನ ಇರಬೇಕು. ಇದರಿಂದ ಒಬ್ಬ ಸಾಹಿತಿ ಒಳ್ಳೆಯ ಕೃತಿ ರಚನೆ ಮಾಡಲು ಸಾಧ್ಯವಾಗುತ್ತದೆ ಎಂದರು.ಮಂಡ್ಯ ಜಿಲ್ಲೆಯಲ್ಲಿ ಹೆಚ್ಚು ಕನ್ನಡ ಭಾಷೆ ಮಾತನಾಡುವ ಜನರಿದ್ದಾರೆ. ಪಾಂಡವಪುರ ತಾಲೂಕಿನಲ್ಲಿ ಸಾಹಿತ್ಯ, ಕಲೆ, ಸಂಸ್ಕೃತಿ, ಕ್ರೀಡೆ, ಐತಿಹಾಸಿಕವಾಗಿ ಸಾಕಷ್ಟು ಶ್ರೀಮಂತವಾಗಿದೆ. ಸಾಹಿತಿ ಮಂಜುನಾಥ್ ಚಿನಕುರಳಿ ಅವರು ಪಾಂಡವಪುರ ದರ್ಶನದ ಕೃತಿ ಮೂಲಕ ತಾಲೂಕಿನ ಎಲ್ಲಾ ರಂಗವನ್ನು ವಿಸ್ತಾರವಾಗಿ ಪರಿಚಹಿಸುವ ಕೆಲಸ ಮಾಡಿದ್ದಾರೆ. ಇನ್ನಷ್ಟು ವಿಸ್ತಾರವಾಗಿ ಸಂಶೋಧನೆ ಮಾಡಿ ಬರೆದರೆ ಅತ್ಯುತ್ತಮ ಪ್ರಬಂಧ ರಚನೆ ಮಾಡಬಹುದು ಎಂದರು.
ಸಾಹಿತಿಗಳು, ಕಲೆಗಾರರು ಸೇರಿದಂತೆ ಯಾರೆ ಆದರೂ ನಾನು, ನನ್ನದು ಎನ್ನುವುದು ಇರಬಾರರು. ನಾನು ಎನ್ನುವ ಪರದೆಯನ್ನು ಸರಿಸಿ ಪ್ರಪಂಚ ನೋಡಿದಾಗ ಮಾತ್ರ ನಿಜವಾದ ಜಗತ್ತಿನ ಸೌಂದರ್ಯ ಕಾಣುತ್ತದೆ. ಸಾಹಿತಿ ಮಂಜುನಾಥ್ ಚಿನಕುರಳಿ ಅವರು ಆ ನಿಟ್ಟಿಯಲ್ಲಿ ಸಾಹಿತ್ಯ ಕ್ಷೇತ್ರದ ಮುನ್ನಡೆಯುವ ಮೂಲಕ ಸಾಹಿತ್ಯ ಲೋಕಕ್ಕೆ ತಮ್ಮದೆಯಾದ ಮತ್ತಷ್ಟು ಕೊಡುಗೆ ನೀಡುವ ಕೆಲಸ ಮಾಡಬೇಕು ಎಂದರು.ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಮಾತನಾಡಿ, ರೈತನ ಮಗನಾದ ಸಾಹಿತಿ ಮಂಜುನಾಥ್ ಚಿನಕುರಳಿ ಅವರು ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಕೆಲಸ ಮಾಡುತ್ತಿದ್ದಾರೆ. ನಾಡಿನ ದಿಗ್ಗಜ ಸಾಹಿತಿಗಳು ನಡೆದು ಬಂದಿರುವ ಹೆಜ್ಜೆಗಳನ್ನು ತುಳಿದು ಹಿರಿಯ ಸಾಹಿತಿಗಳ ಸಲಹೆ, ಮಾರ್ಗದರ್ಶನ ಪಡೆದುಕೊಂಡು ಮುನ್ನಡೆಯಬೇಕು ಎಂದರು.
ಮುಂದಿನ ದಿನಗಳಲ್ಲಿ ಮತ್ತಷ್ಟು ಕೃತಿಗಳನ್ನು ರಚನೆ ಮಾಡುವ ಮೂಲಕ ಜಿಲ್ಲೆ, ರಾಜ್ಯಮಟ್ಟದಲ್ಲಿ ಕೃತಿ ಬಿಡುಗಡೆ ಮಾಡುವಷ್ಟರ ಮಟ್ಟಕ್ಕೆ ಸಾಹಿತ್ಯ ಕ್ಷೇತ್ರದಲ್ಲಿ ಬೆಳೆಯಬೇಕು. ನಿಮ್ಮ ಬೆಳವಣಿಗೆಗೆ ನಿಮ್ಮ ಮಾವ ಹಾಗೂ ನನ್ನ ಸಹಕಾರ, ಬೆಂಬಲ ಸದಾ ಇರುತ್ತದೆ ಎಂದರು.ಪ್ರೊ.ಡಾ.ಎಚ್.ಆರ್.ತಿಮ್ಮೇಗೌಡ ಮಾತನಾಡಿ, ಸಾಹಿತಿ ಮಂಜುನಾಥ್ ಚಿನಕುರಳಿ ಅವರು ಮೇಲುಕೋಟೆ ಪಾಂಡವಪುರ ದರ್ಶನ ಎಂಬ ಕೃತಿ ಮೂಲಕ ತಾಲೂಕಿನ ಚಿತ್ರಣವನ್ನು ಪುಸ್ತಕದ ಮೂಲಕ ಹೊರತರುವ ಕೆಲಸ ಮಾಡಿದ್ದಾರೆ. ಮೇಲುಕೋಟೆ ಎಂಬ ಐತಿಹಾಸಿಕ ಸ್ಥಳವನ್ನು ನಾಡಿನ ಕಣ್ಣಿಗೆ ಹೆಚ್ಚು ಪ್ರಚಲಿಸುವಂತೆ ಅಭಿವೃದ್ದಿ ಮಾಡಿದ ಕೀರ್ತಿ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರಿಗೆ ಸಲ್ಲುತ್ತದೆ ಎಂದರು.
ಕಾವೇರಿ ನದಿಯಿಂದ ಮೇಲುಕೋಟೆಯ ದಳವಾಯಿ ಕೆರೆಗೆ ನೀರು ತಂಬಿಸುವ ಮೂಲಕ ಈ ಭಾಗದ ಜನರಿಗೆ ಕಾವೇರಿ ನೀರು ದೊರೆಯುವಂತೆ ಮಾಡಿದ ಪುಣ್ಯಾತ್ಮ ಸಿ.ಎಸ್.ಪುಟ್ಟರಾಜು ಎಂದು ಬಣ್ಣಿಸಿದರು.ಇದೇ ವೇಳೆ ಹಿರಿಯ ಸಾಹಿತಿಗಳಾದ ನಿವೃತ್ತ ಪ್ರಾಂಶುಪಾಲರಾದ ಎಸ್.ನಾಗರಾಜು, ಬಿ.ನಾರಾಯಣಗೌಡ, ಸಂತ ಜೋಸೆಫರ್ ಕೇಂದ್ರೀಯ ಶಾಲೆ ಶಿಕ್ಷಕ ಅಮುದ ಅವರನ್ನು ಅಭಿನಂಧಿಸಿದರು. ಕೃತಿ ರಚನೆಗಾರ ಸಿ.ಎಸ್.ಮಂಜುನಾಥ್ ಚಿನಕುರಳಿ ದಂಪತಿಗಳನ್ನು ಸನ್ಮಾನಿಸಿದರು. ಮನ್ಮುಲ್ ಚುನಾವಣೆಯಲ್ಲಿ ನಿರ್ದೇಶಕನಾಗಿ ನೂತನವಾಗಿ ಆಯ್ಕೆಯಾದ ಸಿ.ಶಿವಕುಮಾರ್ ಅವರನ್ನು ಸನ್ಮಾನಿಸಿದರು.
ಸಮಾರಂಭದಲ್ಲಿ ವಿದ್ಯಾ ಪ್ರಚಾರ ಸಂಘದ ಕಾರ್‍ಯದರ್ಶಿ ಕೆ.ವಿ.ಬಸವರಾಜು, ಕಸಾಪ ಅಧ್ಯಕ್ಷ ಮೇನಾಗರ ಪ್ರಕಾಶ್, ತಾಪಂ ಮಾಜಿ ಸದಸ್ಯ ಸಿ.ಎಸ್.ಗೋಪಾಲಗೌಡ, ಸಾಹಿತಿ ಚಂದ್ರಶೇಖರಯ್ಯ, ಕಸಾಪ ಹಿರಿಯ ಉಪಾಧ್ಯಕ್ಷ ಸಿ.ಎ.ಶಾಂತರಾಮು, ಶಿಕ್ಷಕರಾದ ವೆಂಕಟೇಶ್, ಪುಟ್ಟೇಗೌಡ ಸೇರಿದಂತೆ ಹಲವರು ಇದ್ದರು.