ಕನ್ನಡ ಸಾಹಿತ್ಯ ಪರಿಷತ್ತಿಗೆ ಸಾರ್ವಜನಿಕರು ಸಹಕಾರ ನೀಡಿದರೆ ಕನ್ನಡ ಭಾಷೆ ಮತ್ತು ಸಾಹಿತ್ಯ ಬೆಳೆಯಲು ಸಾಧ್ಯವಾಗುತ್ತದೆ.
ಗಂಗಾವತಿ: ಕನ್ನಡ ಮತ್ತು ಸಾಹಿತ್ಯ ಉಳಿಯಬೇಕು ಎಂದರೆ ಕೇವಲ ಪರಿಷತ್, ಸರ್ಕಾರ ಪ್ರಯತ್ನ ಮಾಡಿದರೆ ಸಾಲದು. ಬದಲಿಗೆ ಜನರ ಸಹಕಾರದಿಂದ ಮಾತ್ರ ಕನ್ನಡ ಉಳಿಯಲು ಸಾಹಿತ್ಯ ಸಂರಕ್ಷಣ ಸಾಧ್ಯ ಎಂದು ಮಾಜಿ ಶಾಸಕ ಪರಣ್ಣ ಮುನವಳ್ಳಿ ಹೇಳಿದರು.
ಸಮೀಪದ ವಡ್ಡರಹಟ್ಟಿಯಲ್ಲಿರುವ ಕೆಎಲ್ ಇ ಕಾಲೇಜಿನಲ್ಲಿ ಮಂಗಳವಾರ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಹಮ್ಮಿಕೊಳ್ಳಲಾಗಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಕನ್ನಡ ಸಾಹಿತ್ಯ ಪರಿಷತ್ತಿಗೆ ಸಾರ್ವಜನಿಕರು ಸಹಕಾರ ನೀಡಿದರೆ ಕನ್ನಡ ಭಾಷೆ ಮತ್ತು ಸಾಹಿತ್ಯ ಬೆಳೆಯಲು ಸಾಧ್ಯವಾಗುತ್ತದೆ. ಕಸಾಪ ಶಾಲಾ-ಕಾಲೇಜುಗಳಲ್ಲಿ ಇಂತಹ ಕಾರ್ಯಕ್ರಮ ಆಯೋಜಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಕನ್ನಡ ಬಗ್ಗೆ ಅಭಿಮಾನ ಮೂಡಿಸುವ ಕೆಲಸ ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕೆಎಲ್ಇ ಕಾಲೇಜಿನ ಸ್ಥಾನಿಕ ಆಡಳಿತ ಮಂಡಳಿ ಅಧ್ಯಕ್ಷ ಹೊಸ್ಕೇರಿ ಗಿರಿಯಪ್ಪ ಮಾತನಾಡಿ, ಕನ್ನಡ ಉಳಿದರೆ ಮಾತ್ರ ನಮ್ಮ ಆಸ್ಮಿತೆ ಇರಲಿದೆ. ಈ ನಿಟ್ಟಿನಲ್ಲಿ ನಾವು ಪ್ರತಿ ಸಾಹಿತ್ಯದ ಚಟುವಟಿಕೆಗೆ ಪ್ರೋತ್ಸಾಹ ನೀಡುತ್ತಲೆ ಬಂದಿದ್ದೇವೆ. ಇತರೆ ಶಿಕ್ಷಣ ಸಂಸ್ಥೆಗಳು ಮುಂದೆ ಬಂದು ಕನ್ನಡ ಕಾರ್ಯಕ್ರಮಕ್ಕೆ ಕೈ ಜೋಡಿಸಬೇಕು ಎಂದು ಕರೆ ನೀಡಿದರು.ಅಧ್ಯಕ್ಷತೆ ವಹಿಸಿದ್ದ ಕಸಾಪದ ಜಿಲ್ಲಾಧ್ಯಕ್ಷ ಶರಣೇಗೌಡ ಪೊಲೀಸ್ ಪಾಟೀಲ್ ಮಾತನಾಡಿ, ವರ್ಷದುದ್ದಕ್ಕೂ ಕನ್ನಡದ ಕಾರ್ಯಕ್ರಮ ಆಯೋಜಿಸುವ ಮೂಲಕ ಕನ್ನಡ ಭಾಷೆಗೆ ಆದ್ಯತೆ ನೀಡಿದೆ ಎಂದರು.
ದತ್ತಿ ನಿಧಿ ಸ್ಥಾಪಿಸಲು ಜನ ಮುಂದೆ ಬರುತ್ತಿಲ್ಲ.ಬಹುಶಃ ದತ್ತಿನಿಧಿಗೆ ಠೇವಣಿ ಇಡಬೇಕಿರುವ ಹಣದ ಮೊತ್ತ ಹೆಚ್ಚಾಗಿದೆಯೋ ಅಥವಾ ಜನರಲ್ಲಿ ಆಸಕ್ತಿ ಇಲ್ಲವೋ ಗೊತ್ತಿಲ್ಲ.ಆದರೆ ಕಸಾಪ ಈ ಬಗ್ಗೆ ಗಂಭೀರ ಚಿಂತನೆ ನಡೆಸಿದ್ದು ಪರ್ಯಾಯ ವ್ಯವ್ಯಸ್ಥೆ ಮಾಡಲಾಗುವುದು ಎಂದರು.ಕಾರ್ಯಕ್ರಮ ಉದ್ದೇಶಿಸಿ ಕಸಾಪದ ತಾಲೂಕಾಧ್ಯಕ್ಷ ರುದ್ರೇಶ ಆರಾಳ ಮಾತನಾಡಿದರು. ಕೆಎಲ್ಇ ಕಾಲೇಜಿನ ಪ್ರಾಂಶುಪಾಲೆ ಡಾ. ಮಾನಸ ಡಿ.ಎ.ಕಸಾಪದ ಜಿಲ್ಲಾ ಕೋಶಾಧಿಕಾರಿ ರಮೇಶ ಕುಲಕರ್ಣಿಲ್ಲಿದ್ದರು.
ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಕೀಲ ಸೋಮನಾಥ ಪಟ್ಟಣಶೆಟ್ಟಿ, ಪತ್ರಕರ್ತ ಎಸ್.ಎಂ.ಪಟೇಲ್, ವೈ. ನಾಗರಾಜ್, ಸುರೇಶ ಸಂಕನೂರು ಅವರನ್ನು ಸನ್ಮಾನಿಸಲಾಯಿತು. ದತ್ತಿದಾನಿ ಮಹಾಂತೇಶ ಕೋಟೆ, ಪಾಂಡುರಂಗ ದರೋಜಿ ಭಾಗವಹಿಸಿದ್ದರು.ವಚನ ಸಾಹಿತ್ಯದಲ್ಲಿ ಸ್ತ್ರಿ ಸಂವೇದನೆ ಎಂಬ ವಿಷಯದ ಕುರಿತು ಸಾಹಿತಿ ಅರಳಿ ನಾಗಭೂಷಣ, ಶೋಷಣೆ ರಹಿತ ಸಮಾಜ ನಿರ್ಮಾಣದಲ್ಲಿ ಬಸವಣ್ಣನ ಪಾತ್ರ ಎಂಬ ವಿಷಯದ ಬಗ್ಗೆ ಹಿರಿಯ ಉಪನ್ಯಾಸಕ ಎ.ಕೆ.ಮಹೇಶ ಕುಮಾರ ಹಾಗೂ ಜಾನಪದ ಸಾಹಿತ್ಯದ ಬಗ್ಗೆ ಜಾನಪದ ಹಾಡುಗಾರ ಸುಖಮುನಿ ಉಪನ್ಯಾಸ ನೀಡಿದರು.
ರಾಜಶೇಖರಪ್ಪ ಹೊಸಕೇರಿ, ಚನ್ನಬಸಮ್ಮ ಈಶ್ವರಪ್ಪ ಮುನವಳ್ಳಿ, ಬಸವರಾಜ ಕೋಟೆ, ಡಿ.ಗೋವರ್ಧನ ರಾಮಚಂದ್ರಪ್ಪ ದರೋಜಿ ಸ್ಮರಣಾರ್ಥ ಉಪನ್ಯಾಸ ಏರ್ಪಡಿಸಲಾಗಿತ್ತು.