ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ರಾಜ್ಯಮಟ್ಟದ ಸಿಪಿಕೆ ಕಾವ್ಯ ಪ್ರಶಸ್ತಿ ಪುರಸ್ಕೃತ ಮಂಜು ಕೋಡಿಉಗನೆ ಅವರು ಬುದ್ಧ, ಅಂಬೇಡ್ಕರ್‌ರವರ ಚಿಂತನೆಗಳನ್ನು ಮೈಗೂಡಿಸಿಕೊಂಡು ತಮ್ಮ ಪ್ರತಿಭಾ ಜಗತ್ತಿಗೆ ತುಂಬಿಕೊಂಡಿರುವುದರಿಂದ ಸಮರ್ಥವಾದದ್ದನ್ನು ದಿಟ್ಟತನದಿಂದ ಬರೆಯಲು ಸಾಧ್ಯವಾಗಿದೆ ಎಂದು ಮೈಸೂರಿನ ಸಾಹಿತಿ ಡಾ.ನೀಲಗಿರಿ ತಳ್ವಾರ್ ಹೇಳಿದರು.ನಗರದ ರೋಟರಿ ಭವನದಲ್ಲಿ ಚೇತನ ಕಲಾವಾಹಿನಿ, ರೋಟರಿ ಸಂಸ್ಥೆ ಇವರ ಸಹಯೋಗದಲ್ಲಿ ರಾಜ್ಯಮಟ್ಟದ ಡಾ.ಸಿಪಿಕೆ ಕಾವ್ಯ ಪ್ರಶಸ್ತಿಗೆ ಭಾಜನರಾದ ಸಿ. ಮಂಜನಾಥ ಪ್ರಸನ್ನ (ಮಂಜು ಕೋಡಿಉಗನೆ) ರವರ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ದಲಿತ ಸಾಹಿತ್ಯ, ಬಂಡಾಯ ಸಾಹಿತ್ಯ ಬಗ್ಗೆ ಸ್ವಲ್ಪ ಜನರು ಬರೆಯುವವರು, ಮಾತಾಡುವವರು ಇದ್ದಾರೆ. ಈ ಪೈಕಿಯಲ್ಲಿ ಮಂಜು ಕೋಡಿಉಗನೆ ಅವರು ಕೂಡ ಬರಹಗಳ ಮೂಲಕ ದಲಿತ ಸಾಹಿತ್ಯವನ್ನು ಮುಂದುವರಿಸಿ ಮೌಲ್ಯಯುತವಾಗಿ ಮಾಡಿದ್ದಾರೆ. ದಲಿತ ಸಾಹಿತ್ಯ ಕೃತಿಯಲ್ಲಿ ದಲಿತ ಲೋಕದ ಗಮನ ಸೆಳೆದಿದ್ದಾರೆ ಎಂದರು. ಸಾಹಿತ್ಯಕ್ಕೆ ಮುಗ್ಧತೆ, ಪ್ರಬುದ್ಧತೆ ಶ್ವಾಸಕೋಶ ಇದ್ದಂತೆ. ಮಂಜು ಕೋಡಿಉಗನೆ ಸುಶೀಕ್ಷಿತರು. ಅಪರೂಪದ ಗುಣವುಳ್ಳವರು. ಬಹುಮುಖ ಪ್ರತಿಭೆ, ಉತ್ತಮ ಆಡಳಿತರಾಗರಾಗಿದ್ದಾರೆ. ಅವರ ವಿಶೇಷತೆ ಗುಣ ಎಂದರೆ ತಮ್ಮ ಕಾವ್ಯವನ್ನು ಸ್ವಯಂ ಪರೀಕ್ಷೆಗೆ ಒಳಪಡಿಸುತ್ತಾರೆ. ತಮ್ಮನ್ನು ತಾವು ವಿಮರ್ಶೆ ಮಾಡಿಕೊಳ್ಳುವವರು ದೊಡ್ಡಮಟ್ಟದಲ್ಲಿ ಬೆಳೆಯುತ್ತಾರೆ. ಅವರ ಸಾಹಿತ್ಯ ಇನ್ನಷ್ಟು, ಮತ್ತಷ್ಟು ವಿಸ್ತಾರವಾಗಲಿ, ದೊಡ್ಡದೊಡ್ಡ ಪ್ರಶಸ್ತಿಗಳು ಲಭಿಸಲಿ, ಚೇತನ ಕಲಾವಾಹಿನಿ ಸಂಸ್ಥೆಯು ಇನ್ನಷ್ಟು ದಾಖಲೆಗಳ ಕಾರ್ಯಕ್ರಮ ಮಾಡುವ ಮೂಲಕ ಸಾಹಿತ್ಯ ಲೋಕವನ್ನು ಬೆಳಗಿಸುವಂತಾಗಲಿ ಎಂದು ಶುಭ ಕೋರಿದರು. ಅಭಿನಂದನೆ ನನ್ನ ಜವಾಬ್ದಾರಿ ಹೆಚ್ಚಿಸಿದೆ:ಸಾಹಿತಿ ಮಂಜು ಕೋಡಿಉಗನೆ ಮಾತನಾಡಿ, ಚೇತನ ಕಲಾವಾಹಿನಿ, ರೋಟರಿ ಸಂಸ್ಥೆ ಹಾಗೂ ಇತರ ಸಂಘ-ಸಂಸ್ಥೆಗಳ, ಸ್ನೇಹಿತರು ನನ್ನನ್ನು ಅಭಿನಂದಿಸುತ್ತಿರುವುದು ನನ್ನ ಜವಾಬ್ದಾರಿ ಹೆಚ್ಚು ಮಾಡಿದೆ. ನಾನು ಈ ಮಟ್ಟಕ್ಕೆ ಬೆಳೆಯಲು ನನ್ನ ಸ್ವಗ್ರಾಮ ಕೋಡಿಉಗನೆ ಹಾಗೂ ಜಿಲ್ಲೆಯ ಜನತೆಯ ಸಹಕಾರ ಕಾರಣವಾಗಿದೆ. ಸಾಹಿತ್ಯ ಲೋಕವಲ್ಲ ಯಾವುದೇ ಕೆಲಸವನ್ನು ಪರಿಪೂರ್ಣವಾಗಿ ನಿರ್ವಹಿಸಿದರೆ ಯಶಸ್ಸು ಕಾಣಬಹುದು ಎಂದರು.ಸಿಪಿಕೆ ಪ್ರಶಸ್ತಿ ಜಿಲ್ಲೆಗೆ ಹೆಮ್ಮೆ: ಜಿಪಂ ಉಪಕಾರ್ಯದರ್ಶಿ ಪಿ.ಲಕ್ಷ್ಮೀ ಅಭಿನಂದಿಸಿ ಮಾತನಾಡಿ, ಸಾಹಿತಿ ಮಂಜು ಕೋಡಿಉಗನೆ ಅವರ ಪುಸ್ತಕಗಳಲ್ಲಿ ತೀಕ್ಷ್ಣವಾದ ಬರಹಗಳಿವೆ. ಅವರಿಗೆ ಸಿಪಿಕೆ ಪ್ರಶಸ್ತಿ ಲಭಿಸಿರುವುದು ಜಿಲ್ಲೆಗೆ ಹೆಮ್ಮೆಯಾಗಿದೆ. ಇವರ ಪುಸ್ತಕಗಳನ್ನು ಜಿಪಂ ವತಿಯಿಂದ ಖರೀದಿಸಿ ಜಿಲ್ಲೆಯ ಗ್ರಾಪಂ ಮಟ್ಟದಲ್ಲಿರುವ ಗ್ರಂಥಾಲಯಗಳಲ್ಲಿ ಇಟ್ಟು ಯುವಪೀಳಿಗೆಗೆ ಅವರ ಮೌಲ್ಯಯುತ ಬರವಣೆಗೆ ತಲುಪಿಸಲು ಚಿಂತಿಸಲಾಗಿದೆ. ಅವರಿಗೆ ಮತ್ತಷ್ಟು, ಮೊಗೆದಷ್ಟು ಪ್ರಶಸ್ತಿಗಳು ಲಭಿಸಲಿ ಎಂದು ಆಶಿಸಿದರು.
ಸೃಜನಶೀಲ ಬರಹಗಾರರು:ಸಾಹಿತಿ ಹನೂರು ಚೆನ್ನಪ್ಪ ಮಾತನಾಡಿ, ಮಂಜು ಕೋಡಿಉಗನೆ ಸೃಜನಶೀಲ ಬರಹಗಾರರಾಗಿದ್ದು, ಅವರನ್ನು ಅಭಿನಂದಿಸುತ್ತಿರುವುದು ಒಂದು ಅರ್ಥಪೂರ್ಣವಾಗಿದೆ. ಈ ನೆಲದಲ್ಲಿ ನಾನು, ಮಂಜು ಕೋಡಿಉಗನೆ ಬರಹಗಾರರಾಗಿ ಗುರುತಿಸಿಕೊಂಡಿದ್ದೇವೆ. ಮಂಜುನಾಥ ಪ್ರಸನ್ನ ಜಿಲ್ಲೆಯ ದೊಡ್ಡಪ್ರತಿಭೆಯಾಗಿದ್ದಾರೆ. ಅವರು ಬಾಲ್ಯದಿಂದಲೂ ಸಾಹಿತಿ ಅಭಿರುಚಿ ಹೊಂದಿದ್ದಾರೆ. ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ಇಂದು ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾಗಿದ್ದು, ನಾಡಿನ ಬರಹಗಾರರಾಗಿ ಗುರುತಿಸಿಕೊಂಡಿದ್ದು ಅವರ ಕೃತಿಗಳು ಮೈಸೂರು, ಮಂಗಳೂರು ವಿಶ್ವವಿದ್ಯಾನಿಲಯಗಳಲ್ಲಿ ಪಠ್ಯವಾಗಿರುವುದು ಹೆಮ್ಮೆ ವಿಚಾರವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕಸಾಪ ಮಾಜಿ ಜಿಲ್ಲಾಧ್ಯಕ್ಷ ಎ.ಎಂ.ನಾಗಮಲ್ಲಪ್ಪ, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮುನಿರಾಜು, ರೋಟರಿ ಸಂಸ್ಥೆ ಅಧ್ಯಕ್ಷ ರಾಮಸಮುದ್ರ ನಾಗರಾಜು, ನೋಟರಿ ವಕೀಲರಾದ ನಾಗಣ್ಣ, ಮಹೇಶ್ ಹರವೆ, ಗಾಯಕಿ ಲತಾಪುಟ್ಟಸ್ವಾಮಿ, ಚೇತನ ಕಲಾವಾಹಿನಿ ಅಧ್ಯಕ್ಷ ಜಿ.ರಾಜಪ್ಪ, ಕಾರ್ಯದರ್ಶಿ ಎಂ.ಮಂಜುನಾಥ್, ಎಂ ಪುಟ್ಟಸ್ವಾಮಿ.ನಾಗೇಂದ್ರ. ದೊರೆಸ್ವಾಮಿ ಅಲೂರು ಇತರರು ಹಾಜರಿದ್ದರು.