ಸಾರಾಂಶ
ಕನ್ನಡಪ್ರಭ ವಾರ್ತೆ ಬಂಟ್ವಾಳ ಬುದ್ಧಿಕೋಶವನ್ನು ಬಲಪಡಿಸುವುದರ ಜೊತೆಗೆ ಸಾಮೂಹಿಕ ಸಾಮರಸ್ಯ ಹಾಗೂ ಸಮುದಾಯದ ಹಿತ ಕಾಯುವ ಶಕ್ತಿ ಸಾಹಿತ್ಯಕ್ಕಿದೆ, ಇದನ್ನು ತುಂಬುವ ಕೆಲಸ ಶಾಲೆಗಳಿಂದಲೇ ಆಗಬೇಕಿದೆ ಎಂದು ಸಾಹಿತಿ, ಕನ್ನಡ ಪ್ರಾಧ್ಯಾಪಕಿ ಡಾ. ನಾಗವೇಣಿ ಮಂಚಿ ಹೇಳಿದ್ದಾರೆ.
ದ.ಕ. ಜಿಲ್ಲಾ ಕಸಾಪ ಬಂಟ್ವಾಳ ತಾಲೂಕು ಘಟಕದ ಆಶ್ರಯದಲ್ಲಿ ಮಂಚಿ- ಕೊಳ್ಳಾಡು ಸರಕಾರಿ ಪ್ರೌಢಶಾಲೆ ಹಿರಿಯ ವಿದ್ಯಾರ್ಥಿ ಸಂಘದ ಸಹಯೋಗದಲ್ಲಿ ಪ್ರೌಢಶಾಲೆಯ ಬಿ.ವಿ. ಕಾರಂತ ಸಭಾಂಗಣ, ದಿ. ಕನ್ನಡ ಪಂಡಿತ ಎ.ಪಿ. ತಿಮ್ಮಯನ್ ವೇದಿಕೆಯಲ್ಲಿ ಶನಿವಾರ ಸಂಜೆ ಎರಡು ದಿನಗಳ ಬಂಟ್ವಾಳ ತಾಲೂಕು 23ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. ಆಶಯ ನುಡಿಗಳನ್ನಾಡಿದ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ.ಎಂ.ಪಿ. ಶ್ರೀನಾಥ, ಬಂಟ್ವಾಳ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕವಾಗಿ ಹೆಚ್ಚು ಮುಂಚೂಣಿಯಲ್ಲಿದೆ ಎಂದರು.ಸ್ವಾಗತ ಸಮಿತಿ ಅಧ್ಯಕ್ಷ ಸತೀಶ್ ಕುಮಾರ್ ಆಳ್ವ ಮಾತನಾಡಿದರು. ಇದೇ ವೇಳೆ ನೂತನ ಮೂರು ಕೃತಿಗಳನ್ನು ಬಿಡುಗಡೆಗೊಳಿಸಲಾಯಿತು. ಸಮ್ಮೇಳನಾಧ್ಯಕ್ಷ ಮುಳಿಯ ಶಂಕರ ಭಟ್ಟ ಅಧ್ಯಕ್ಷತೆ ವಹಿಸಿದ್ದರು. ನಿಕಟಪೂರ್ವ ಸಮ್ಮೇಳನಾಧ್ಯಕ್ಷ, ನಿವೃತ್ತ ಪ್ರಾಧ್ಯಾಪಕ ಪ್ರೊ. ಬಾಲಕೃಷ್ಣ ಗಟ್ಟಿ, ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ವಿಶ್ವನಾಥ ಬಂಟ್ವಾಳ, ಪೂನಾದ ಡಿ.ವೈ. ಪಾಟೀಲ್ ಅಂತಾರಾಷ್ಟ್ರೀಯ ವಿ.ವಿ. ಕುಲಸಚಿವ ಡಾ. ಬೀರಾನ್ ಮೊಯ್ದಿನ್ ಪಾಟೀಲ್ , ಅಮ್ಟೂರು ಲಯನ್ಸ್ ಕ್ಲಬ್ ಸ್ಥಾಪಕಾಧ್ಯಕ್ಷ ನೋಯಲ್ ಲೋಬೋ, ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥನ್, ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ವಿನಯ್ ಆಚಾರ್ಯ, ಮೂಲ್ಕಿ ಘಟಕದ ಅಧ್ಯಕ್ಷ ಮಿಥುನ್ ಉಡುಪ, ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ಎಂ.ಡಿ. ಮಂಚಿ, ಬಂಟ್ವಾಳ ಕಸಾಪ ಪದಾಧಿಕಾರಿಗಳಾದ ರಮಾನಂದ ನೂಜಿಪ್ಪಾಡಿ, ಡಿ.ಬಿ. ಅಬ್ದುಲ್ ರಹಿಮಾನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಶಾಲಾ ಮುಖ್ಯ ಶಿಕ್ಷಕಿ ಸುಶೀಲಾ ವಿಟ್ಲ, ಹೋಬಳಿ ಅಧ್ಯಕ್ಷ ಪಿ. ಮಹಮ್ಮದ್, ಗಣೇಶ್ ಪ್ರಸಾದ್ ಪಾಂಡೇಲು, ಸ್ವಾಗತ ಸಮಿತಿ ಪದಾಧಿಕಾರಿಗಳಾದ ಅಬ್ಬಾಸ್ ಆಲಿ ಬಿ.ಎಂ. ಉಮಾನಾಥ ರೈ ಮೇರಾವು, ರವೀಂದ್ರ ಕುಕ್ಕಾಜೆ, ಪಡಾರ ಮಹಾಬಲೇಶ್ವರ ಭಟ್, ಸುರೇಶ್ ನೆಗಳಗುಳಿ ಮೊದಲಾದವರಿದ್ದರು.ಮಂಗಳೂರು ಸಂತ ಅಲೋಶಿಯಸ್ ಕಾಲೇಜಿನ ಸಹ ಪ್ರಾಧ್ಯಾಪಕರಾದ ಡಾ.ಮುಕುಂದ ಪ್ರಭು ವಸ್ತು ಪ್ರದರ್ಶನ ಹಾಗೂ ಉದ್ಯಮಿ ಲ.ಚಂದ್ರಹಾಸ ರೈ ಬಾಲಾಜಿಬೈಲು ಅವರು ಪುಸ್ತಕ ಮಳಿಗೆಯ ಉದ್ಘಾಟನೆಯನ್ನು ನೆರವೇರಿಸಿದರು.ಸ್ವಾಗತ ಸಮಿತಿಯ ಪ್ರಧಾನ ಸಂಯೋಜಕ ರಾಮ್ ಪ್ರಸಾದ್ ರೈ ಸ್ವಾಗತಿಸಿದರು.ರೇಖಾ ವಿಶ್ವನಾಥ್ ಪ್ರಸ್ತಾವನೆಗೈದರು. ಬಂಟ್ವಾಳ ಕಸಾಪ ಗೌರವ ಕಾರ್ಯದರ್ಶಿ ವಿ. ಸುಬ್ರಹ್ಮಣ್ಯ ಭಟ್ ವಂದಿಸಿದರು. ಶಿಕ್ಷಕ ತಾರಾನಾಥ್ ಕೈರಂಗಳ,ಪುಷ್ಪರಾಜ್ ಕುಕ್ಕಾಜೆ ಕಾರ್ಯಕ್ರಮ ನಿರ್ವಹಿಸಿದರು.ದೇವದಾಸ್ ಅರ್ಕುಳ, ಹರ್ಷಿತ್ ಶೆಟ್ಟಿ, ಮಂಚಿ ಸಹಕರಿಸಿದರು.ಆಕರ್ಷಕ ಮೆರವಣಿಗೆ: ಕುಕ್ಕಾಜೆ ಶ್ರೀ ಸಿದ್ಧಿವಿನಾಯಕ ಭಜನಾಮಂದಿರದ ವಠಾರದಿಂದ ಕನ್ನಡ ಭುವನೇಶ್ವರಿಯ ಆಕರ್ಷಕ ಮೆರವಣಿಗೆಯು ಸಮ್ಮೇಳನದ ಸಭಾಂಗಣದವರೆಗೆ ಸಾಗಿಬಂತು. ಶಾಲಾ ಬ್ಯಾಂಡ್, ಸ್ಯಾಕ್ಸೋಫೋನ್, ಕಲಶ ಹಿಡಿದ ಮಹಿಳೆಯರು, ಭಜನಾ ತಂಡ, ಗೊಂಬೆ ಕುಣಿತ, ಕೋಣಗಳು ಹಾಗೂ ಶಾರ್ದೂಲ ಕುಣಿತ, ತ್ರೀಶೂರ್ ಕೊಡೆಗಳು, ಸ್ಕೌಟ್ಸ್ ಗೈಡ್ಸ್ ವಿದ್ಯಾರ್ಥಿಗಳು, ಎನ್ ಸಿಸಿ ಕೆಡೆಟ್ ಗಳು, ಚೆಂಡವಾದನದ ಮಕ್ಕಳ ತಂಡ ಗಮನ ಸೆಳೆದವು.ಸಭಾ ಕಾರ್ಯಕ್ರಮದ ಬಳಿಕ ಮಂಚಿ- ಕೊಳ್ಳಾಡು ಸರಕಾರಿ ಪ್ರೌಢಶಾಲೆಯ ಹಿರಿಯ ವಿದ್ಯಾರ್ಥಿಗಳು ಮತ್ತು ಹವ್ಯಾಸಿ ಕಲಾವಿದರಿಂದ ಯಕ್ಷಗಾನ ನಡೆಯಿತು.ಸಾಹಿತ್ಯ ಲೈಕ್ ಮಾಡಿ, ಶೇರ್ ಮಾಡಿಗೆ ಸೀಮಿತ..!
ಬಹಳ ಹಿಂದಿನಿಂದ ಇಂದಿನವರೆಗೂ ಉಳಿದುಕೊಂಡಿರುವ ರನ್ನ, ಪಂಪ, ಬಸವಣ್ಣ, ದಾಸ ಸಾಹಿತ್ಯ ಸಹಿತ ಕುವೆಂಪು ಅವರ ಸಾಹಿತ್ಯಗಳು ನಮಗೆ ದಾರಿಯಾಗಬೇಕು ಆದರೆ, ಕಾಲ ಬದಲಾದಂತೆ ಜೀವನಮೌಲ್ಯಗಳ ಜೊತೆಗೆ ಸಾಹಿತ್ಯದ ರೂಪವೂ ಬದಲಾಗಿದೆ. ಇಂದಿನ ಬರವಣಿಗೆ ಕೇವಲ ಲೈಕ್ ಮಾಡಿ, ಶೇರ್ ಮಾಡಿ ಮತ್ತು ಸಬ್‌ಸ್ಕ್ರೈಬ್ ಮಾಡಿಗೆ ಸೀಮಿತವಾಗುತ್ತಿದೆ ಎಂದು ನಾಗವೇಣಿ ಮಂಚಿ ಆತಂಕ ವ್ಯಕ್ತಪಡಿಸಿದರು. ಅಂತರಂಗದಲ್ಲಿ ಕನ್ನಡ ಉಸಿರಾಗಬೇಕು, ಸರ್ವಸ್ವವಾಗಬೇಕು: ಸಮ್ಮೇಳನಾಧ್ಯಕ್ಷ ಮುಳಿಯ ಶಂಕರಭಟ್ಟಬಂಟ್ವಾಳ : ಸಾಹಿತ್ಯ ಸಮ್ಮೇಳನಗಳು ನಮ್ಮ ಹಿಂದಿನ ಬರಹಗಾರರು ಕಂಡ ಕನ್ನಡದ ಉಜ್ವಲ ಭವಿಷ್ಯದ ಕನಸನ್ನು ಸಾಕಾರಗೊಳಿಸುವಲ್ಲಿ ಪೂರಕ ಭೂಮಿಕೆಗಳಾಗುತ್ತಿವೆ. ಆದರೆ ಅದಕ್ಕಾಗಿ ನಾವು ಬಹಿರಂಗವಾಗಿ ಹೇಗೋ ಹಾಗೆಯೇ ಅಂತರಂಗದಲ್ಲೂ ಕನ್ನಡ ಉಸಿರಾಗಬೇಕು, ಸರ್ವಸ್ವವಾಗಬೇಕು ಎಂದು ಬಂಟ್ವಾಳ ತಾಲೂಕು 23 ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಎಳೆಯರ ಗೆಳೆಯ ಮುಳಿಯ ಶಂಕರ ಭಟ್ಟ ಆಶಯ ವ್ಯಕ್ತಪಡಿಸಿದ್ದಾರೆ.ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಾಹಿತ್ಯವು ಸಂಸ್ಕೃತಿಯ ಸಂಬಂಧಿಯಾಗಿದ್ದು, ಇದು ಜನಜೀವನದ ಕೈಗನ್ನಡಿ ಎಂಬುದನ್ನು ನಾವು ಒಪ್ಪಿಕೊಳ್ಳಬೇಕು. ಸಾಹಿತ್ಯವು ಸಾಮಾಜಿಕ ಬದುಕನ್ನು ಉಜ್ವಲಗೊಳಿಸಿ, ಜನಜೀವನಕ್ಕೆ ಉತ್ತಮ ಪ್ರೇರಣೆ ಕೊಡುವ ಪ್ರಧಾನ ಸಲಕರಣೆಯಾಗಿದೆ, ಸಮಗ್ರ ಸಾಮಾಜಿಕ ಹಿತದ ಕೃತಿಗಳೆಲ್ಲವೂ ಸಾಹಿತ್ಯವೇ ಆಗಿದ್ದರೂ ಬರೆದ ಬರಹಗಳೆಲ್ಲವೂ ‘ಸಾಹಿತ್ಯ’ ಎನಿಸಲಾರದು. ಬರಹಗಳಲ್ಲಿ ಸಾಮಾಜಿಕ-ಸಾಂಸ್ಕೃತಿಕ ಹಿತವನ್ನು ಸಾಧಿಸುವ ಗುಣ ಅಗತ್ಯ ಎಂದವರು ಅಭಿಪ್ರಾಯಿಸಿದರು. ಸಮಾಜ ಹಳಿ ತಪ್ಪುವ ಆತಂಕ..?: ಯಾವುದೇ ಭಾಷೆಯ ಕಲಿಕೆ ತಪ್ಪಲ್ಲ, ಆದರೆ ನಮ್ಮಲ್ಲಿ ಬೇರೂರಿಸುವ ಆಂಗ್ಲ ಭಾಷಾ ವ್ಯಾಮೋಹ ಕೆಲವು ಸರಕಾರಿ ಶಾಲೆಗಳು, ಖಾಸಗಿ ಶಾಲೆಗಳು ಸ್ಥಗಿತಗೊಳ್ಳುವಂತೆ ಮಾಡಿದೆ ಎಂದು ವಿಷಾದ ವ್ಯಕ್ತಪಡಿಸಿದ ಅವರು, ಸರ್ಕಾರದ ಶಿಕ್ಷಣ ನೀತಿ, ಪೋಷಕರು ಎದುರಿಸುವ ಭೀತಿ, ಎಳೆಯ ಪೀಳಿಗೆಯ ಶಿಕ್ಷಣ ವ್ಯವಸ್ಥೆಯ ರೀತಿ - ಎಲ್ಲವೂ ಮುಂದೊಂದು ದಿನ ಸಮಾಜವನ್ನು ಹಳಿ ತಪ್ಪಿಸುವ ಆತಂಕ ವ್ಯಕ್ತಪಡಿಸಿದರು. ಭಾಷೆಯ ಅಧ್ಯಯನ-ಅಧ್ಯಾಪನ-ಅವಿರತ ಬಳಕೆಯಿಂದ ಮಾತ್ರ ಸಾಹಿತ್ಯ ಕೃಷಿಗೆ ಪೂರಕ ವಾತಾವರಣ ನೆಲೆಗೊಳ್ಳಬಹುದು ಎಂದವರು ಕಿವಿಮಾತು ಹೇಳಿದರು.