ಸಾರಾಂಶ
ಇತ್ತೀಚಿನ ದಿನಗಳಲ್ಲಿ ದಲಿತರೇ ರಚನೆ ಮಾಡುವ ಸಾಹಿತ್ಯ ದಲಿತ ಸಾಹಿತ್ಯವೇ ಅಥವಾ ದಲಿತರನ್ನು ಕುರಿತು ದಲಿತೇತರರು ಬರೆಯುವ ಸಾಹಿತ್ಯ ದಲಿತ ಸಾಹಿತ್ಯವಾಗುತ್ತದೆಯೇ ಎನ್ನುವುದನ್ನು ಅರಿಯಬೇಕು. ದಲಿತರ ಸಮಸ್ಯೆಗಳನ್ನು ಸ್ವತಃ ಅನುಭವಿಸಿ, ಅದನ್ನು ಸಾಹಿತ್ಯ ರೂಪದಲ್ಲಿ ಕಟ್ಟಿಕೊಟ್ಟಾಗ ದಲಿತ ಸಾಹಿತ್ಯ ಎನ್ನುವುದಕ್ಕೆ ಅರ್ಥಬರುತ್ತದೆ.
ಕನ್ನಡಪ್ರಭ ವಾರ್ತೆ ಮಂಡ್ಯ
ಸಾಹಿತ್ಯ ಸಮಾಜದ ಒಂದು ಪ್ರತಿಬಿಂಬ, ಜೀವನ ಮತ್ತು ಸಮಾಜದಲ್ಲಿ ನಡೆಯುವ ಆಗು-ಹೋಗುಗಳನ್ನು ಅಕ್ಷರ ರೂಪದಲ್ಲಿ ಕಟ್ಟಿಕೊಡುವುದು ಸಾಹಿತ್ಯವಾಗಿದೆ ಎಂದು ದಲಿತ ಸಾಹಿತ್ಯ ಪರಿಷತ್ ಜಿಲ್ಲಾ ಗೌರವಾಧ್ಯಕ್ಷ ಪ್ರೊ.ಬಿ.ಎಸ್.ಚಂದ್ರಶೇಖರನ್ ಹೇಳಿದರು.ನಗರದ ಪತ್ರಕರ್ತರ ಭವನದಲ್ಲಿ ಭಾನುವಾರ ದಲಿತ ಸಾಹಿತ್ಯ ಪರಿಷತ್ ತಾಲೂಕು ಘಟಕ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಸಾಹಿತ್ಯದಲ್ಲಿ ದಲಿತ ಸಾಹಿತ್ಯ ಎಂದರೆ ದಲಿತರ ಸಮಸ್ಯೆ, ಸಂಕಟ, ಅವಮಾನ, ಅಸ್ಪೃಶ್ಯತೆ, ಜಾತೀಯತೆ ಈ ಎಲ್ಲಾ ನೋವುಗಳನ್ನು ದಾಖಲಿಸುವುದು. ಲಯಬದ್ಧವಾಗಿ ರಚನೆ ಮಾಡುವುದು ಸಾಹಿತ್ಯವಾಗುತ್ತದೆ ಎಂದು ನುಡಿದರು.
ಇತ್ತೀಚಿನ ದಿನಗಳಲ್ಲಿ ದಲಿತರೇ ರಚನೆ ಮಾಡುವ ಸಾಹಿತ್ಯ ದಲಿತ ಸಾಹಿತ್ಯವೇ ಅಥವಾ ದಲಿತರನ್ನು ಕುರಿತು ದಲಿತೇತರರು ಬರೆಯುವ ಸಾಹಿತ್ಯ ದಲಿತ ಸಾಹಿತ್ಯವಾಗುತ್ತದೆಯೇ ಎನ್ನುವುದನ್ನು ಅರಿಯಬೇಕು. ದಲಿತರ ಸಮಸ್ಯೆಗಳನ್ನು ಸ್ವತಃ ಅನುಭವಿಸಿ, ಅದನ್ನು ಸಾಹಿತ್ಯ ರೂಪದಲ್ಲಿ ಕಟ್ಟಿಕೊಟ್ಟಾಗ ದಲಿತ ಸಾಹಿತ್ಯ ಎನ್ನುವುದಕ್ಕೆ ಅರ್ಥಬರುತ್ತದೆ ಎಂದು ಅಭಿಪ್ರಾಯಿಸಿದರು.ತಾಲೂಕು ಅಧ್ಯಕ್ಷ ಕೊತ್ತತ್ತಿ ಮಹದೇವ್ ಮಾತನಾಡಿ, ದಲಿತ ಸಮಾಜವನ್ನು ಎಚ್ಚರಿಸುವುದು ಮತ್ತು ಸಾಹಿತ್ಯದಲ್ಲಿ ಜನರ ಜೀವನ, ನೋವು-ನಲಿವುಗಳನ್ನು ದಾಖಲಿಸುವುದಕ್ಕಾಗಿ ದಲಿತ ಸಾಹಿತ್ಯ ಪರಿಷತ್ ಹುಟ್ಟಿಕೊಂಡಿದೆ, ರಚನಾತ್ಮಕವಾಗಿ ಕಾರ್ಯರೂಪಿಸಲು ಮುಂದಾಗಿದೆ ಎಂದರು.
ದಲಿತ ಸಮುದಾಯದಲ್ಲಿ ಇರುವ ಎಲೆಮರೆಕಾಯಿ ಸಾಹಿತಿಗಳು, ಕವಿಗಳು, ಬರಹಗಾರರನ್ನು ವೇದಿಕೆ ಮೂಲಕ ಮುನ್ನಲೆಗೆ ತಂದು ಅವರಿಗೆ ಉತ್ತೇಜನ ನೀಡುವುದು, ಸಾಹಿತ್ಯ ಪ್ರಕಟಗೊಳ್ಳಲು ನೆರವಾಗುವುದು ಪರಿಷತ್ತಿನ ಉದ್ದೇಶವಾಗಿದೆ ಎಂದರು.ಇದೇ ವೇಳೆ ದಲಿತರ ದೃಷ್ಟಿಯಲ್ಲಿ ಭಾರತದ ಸ್ವಾತಂತ್ರ್ಯ ಕುರಿತು ದಸಾಪ ಜಿಲ್ಲಾ ಉಪಾಧ್ಯಕ್ಷ ಲೋಕೇಶ್ ಕಲ್ಲಹಳ್ಳಿ ವಿಷಯ ಮಂಡಿಸಿದರು. ಗಾಯಕರು ಹೋರಾಟದ ಗೀತೆಗಳನ್ನು ಹಾಡಿದರು. ಬಳಿಕ ಅಭಿನಂದನೆ ನಡೆಯಿತು.
ಕಾರ್ಯಕ್ರಮದಲ್ಲಿ ದಲಿತ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಹುರುಗಲವಾಡಿ ರಾಮಯ್ಯ, ಪ್ರಧಾನ ಕಾರ್ಯದರ್ಶಿ ದೇವರಾಜ್‌ಕೊಪ್ಪ, ತಾಲೂಕು ಗೌರವಾಧ್ಯಕ್ಷ ಮುಕುಂದ, ರಘು ಹೊಸಕೆರೆ, ನಿರ್ದೇಶಕಿ ಮಂಜುಳಾ, ಸಂಘಟನಾ ಕಾರ್ಯದರ್ಶಿ ಎ.ಎಚ್.ಬಾಲಕೃಷ್ಣ, ಖಚಾಂಚಿ ಜಯರಾಮು, ಮಾರ್ಕಾಲು ದೇವರಾಜು, ವೆಂಕಕೇಶ್ ಎಚ್.ಮಠ, ಸಿದ್ದನಂಜಯ್ಯ ಮತ್ತಿತರರಿದ್ದರು.