ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಸಾಹಿತ್ಯ ಪೂರಕ

| Published : Jul 06 2025, 01:48 AM IST

ಸಾರಾಂಶ

ಮಕ್ಕಳು ಉತ್ತಮ ಸಾಹಿತ್ಯ ಕೃತಿಗಳನ್ನು ಓದುತ್ತ ಸಂಸ್ಕೃತಿಯ ಅರಿವನ್ನು ಹೆಚ್ಚಿಸಿಕೊಳ್ಳಬೇಕು

ಧಾರವಾಡ: ಸಾಹಿತ್ಯದ ಸ್ವಾರಸ್ಯಕರ ಸಂಗತಿಗಳು, ಮನರಂಜನೆಯ ಅಂಶಗಳು, ಭಾಷೆಯ ಲಯ, ಸೌಂದರ್ಯ, ಆಕರ್ಷಣೆಗಳ ಮುಖಾಂತರ ಸಂದೇಶ ಕಳಿಸಿದರೆ, ಬೆಳೆಯುತ್ತಿರುವ ಮಕ್ಕಳಲ್ಲಿ ಸಾಹಿತ್ಯದ ಆಸಕ್ತಿ ಹೆಚ್ಚಾಗುತ್ತದೆ ಎಂದು ಕಥೆಗಾರ ಡಾ. ಬಸು ಬೇವಿನಗಿಡದ ಹೇಳಿದರು.

ಇಲ್ಲಿಯ ಮಾಳಮಡ್ಡಿಯ ಕೆ.ಇ.ಬೋರ್ಡ್ ಸಂಸ್ಥೆಯ ಸಭಾಂಗಣದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಏರ್ಪಡಿಸಿದ್ದ ಬಾಲ ಸಾಹಿತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಮಕ್ಕಳು ಉತ್ತಮ ಸಾಹಿತ್ಯ ಕೃತಿಗಳನ್ನು ಓದುತ್ತ ಸಂಸ್ಕೃತಿಯ ಅರಿವನ್ನು ಹೆಚ್ಚಿಸಿಕೊಳ್ಳಬೇಕು. ಸಮಕಾಲೀನ ಬದುಕಿನಲ್ಲಿ ಇರುವ ಒಳ್ಳೆಯ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಮಕ್ಕಳ ಸಣ್ಣಪುಟ್ಟ ಸಾಧನೆಗಳನ್ನೂ ಕೂಡ ಪ್ರೋತ್ಸಾಹಿಸುವುದರ ಮುಖಾಂತರ ಅವರ ಆತ್ಮವಿಶ್ವಾಸ ಹೆಚ್ಚಿಸಬಹುದು ಎಂದರು.

ಕಥೆಗಾರ್ತಿ ಸುನಂದಾ ಕಡಮೆ ಮಾತನಾಡಿ, ಮಕ್ಕಳು ತಮ್ಮ ಹಕ್ಕುಗಳು, ಸುರಕ್ಷತೆ, ಸವಲತ್ತುಗಳು, ಕಾನೂನುಗಳ ಬಗ್ಗೆ ತಿಳಿದುಕೊಳ್ಳುವುದು ಅಗತ್ಯವಿದೆ. ಶಿಕ್ಷಕರು ಸಾಹಿತ್ಯದ ಕೃತಿಗಳನ್ನು ಓದಲು ಮಕ್ಕಳಲ್ಲಿ ಪ್ರೇರಣೆ ತುಂಬಿ ಭವಿಷ್ಯದ ಬಗೆಗೆ ಮಕ್ಕಳು ಸಕಾರಾತ್ಮಕವಾಗಿ ಯೋಚಿಸುವಂತೆ ಮಾಡಬೇಕು ಎಂದರು.

ಬಾಲ ಸಾಹಿತಿಗಳಾದ ನೇಹಾ ರಾಮಾಪೂರ ಮತ್ತು ವಿದ್ಯಾ ಭಗವತಿ ಅನಿಸಿಕೆ ಹಂಚಿಕೊಂಡರು.

ಕೆ.ಇ.ಬೋರ್ಡ್ ಸಂಸ್ಥೆಯ ಕಾರ್ಯದರ್ಶಿ ಡಿ.ಎಸ್. ರಾಜಪುರೋಹಿತ, ಮಕ್ಕಳ ಸಾಹಿತಿ ಡಾ.ಆನಂದ ಪಾಟೀಲ ಹಾಗೂ ಡಾ.ಶರಣಮ್ಮ ಗೋರೆಬಾಳ ಮಾತನಾಡಿದರು. ನಿವೃತ್ತ ಜಿಲ್ಲಾ ನ್ಯಾಯಾಧೀಶ ಎನ್.ಎಸ್. ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು.

ಸಾಹಿತ್ಯ ಅಕಾಡೆಮಿಯ ಕನ್ನಡ ಸಲಹಾ ಸಮಿತಿಯ ಸದಸ್ಯ ಚನ್ನಪ್ಪ ಅಂಗಡಿ ಅಕಾಡೆಮಿಯ ಯೋಜನೆ ಮತ್ತು ಸಾಧನೆಗಳ ಕುರಿತು ಮಾತನಾಡಿದರು. ಎಂ.ಎ.ಅಳವಂಡಿ, ಪ್ರಕಾಶ ಕಡಮೆ, ಶ್ರೀಧರ ಉದಗಟ್ಟಿ, ವೈ.ಜಿ. ಭಗವತಿ, ಡಾ. ಲಿಂಗರಾಜ ರಾಮಾಪೂರ ಮತ್ತಿತರರು ಇದ್ದರು. ಹರ್ಷಾಚಾರ್ಯ ಮತ್ತು ವಿಜಯಲಕ್ಷ್ಮಿ ನಿರೂಪಿಸಿದರು. ಎನ್.ಎಸ್. ಗೋವಿಂದರೆಡ್ಡಿ ಸ್ವಾಗತಿಸಿದರು. ಸಂಗಮೇಶ ಹಡಪದ ವಂದಿಸಿದರು.