ಸಾಹಿತ್ಯ ನಿಂತ ನೀರಲ್ಲ ಇದು ನಿರಂತರವಾಗಿ ಹರಿಯುವ ನದಿಯಂತೆ ನಿತ್ಯ ನೂತನವಾಗಿದೆ ಎಂದು ಹಂಪಿ ಕನ್ನಡ ವಿವಿ ನಿರ್ದೇಶಕ ಡಾ. ಅಮರೇಶ ಯಾತಗಲ್‌ ಹೇಳಿದರು.

ಕನ್ನಡಪ್ರಭ ವಾರ್ತೆ ಹುಣಸಗಿ

ಸಾಹಿತ್ಯ ನಿಂತ ನೀರಲ್ಲ ಇದು ನಿರಂತರವಾಗಿ ಹರಿಯುವ ನದಿಯಂತೆ ನಿತ್ಯ ನೂತನವಾಗಿದೆ ಎಂದು ಹಂಪಿ ಕನ್ನಡ ವಿವಿ ನಿರ್ದೇಶಕ ಡಾ. ಅಮರೇಶ ಯಾತಗಲ್‌ ಹೇಳಿದರು.

ಶುಕ್ರವಾರ ಪಟ್ಟಣದ ಯುಕೆಪಿ ಕ್ಯಾಂಪಿನ ಆವರಣದಲ್ಲಿ ನಡೆದ ಹುಣಸಗಿ ತಾಲೂಕು ಪ್ರಥಮ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ನಮ್ಮ ಭಾಷೆ ಉಳಿಯಬೇಕು, ಅದರೊಟ್ಟಿಗೆ ಬೆಳೆಯಬೇಕು. ನಮ್ಮ ನೆಲದ ಸಂಸ್ಕೃತಿಯನ್ನು ಯಾವತ್ತು ಅನ್ಯರಿಗೆ ಬಿಟ್ಟುಕೊಡಬಾರದು ಎಂದ ಅವರು, ಹುಣಸಗಿ ತಾಲೂಕಿನ ಈ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ಮುಂಬರುವ ಭವಿಷ್ಯದ ಯುವ ಪೀಳಿಗೆಗೆ ದಾರಿದೀಪವಾಗಲಿ ಎಂದು ಆಶಿಸಿದರು.

ಭತ್ತ-ಗದ್ದೆಗಳ ಬೀಡು, ಜೇನುಗೂಡು ಚಿನ್ನದ ಚೆಲ್ನಾಡು. ಶರಣ ಸಂತ ಸೂಫಿಗಳ ನಾಡು, ಒಲುಮೆಯ ಬೀಡು ನಲುಮೆಯ ನಾಡು, ಕೃಷ್ಣ ಭೀಮೆಯರ ನಡುವಿನ ನಾಡು, ಸಗರನಾಡು. ಕಾಲ ಜ್ಞಾನದ ಕಡು ಬೆಡಗಿನ ನಾಡು, ಅದ್ಯ ವಚನಕಾರರ ನೆಲೆವೀಡು. ಹೊಂಬೆಳಕಿನಲ್ಲಿ ಜಗಜಗಿಸುವ ಹೊನ್ನಾಡು ಈ ಹುಣಸಗಿ ಬೀಡು ಎಂದು ಡಾ. ಯಾತಗಲ್‌ ಸಗರನಾಡಿನ ವೈಭವ ಸಾರಿದರು. ನೈರ್ಸಗಿಕವಾಗಿ ಸಂಪದ್ಭರಿತವಾಗಿರುವ ಕಲ್ಯಾಣ ಕರ್ನಾಟಕ ಹೆಮ್ಮಯ ಭಾಗವಾದ ಹುಣಸಗಿ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆ ಮಾಡಿರುವುದು ಶ್ಲಾಘನೀಯ ಎಂದರು.ಇಸಾಂಪೂರ, ಬೂದಿಹಾಳ ಗ್ರಾಮಗಳು ಸೇರಿದಂತೆ ಹಲವು ಗ್ರಾಮಗಳಲ್ಲಿ ಹಳೆಯ ಶಿಲಾಯುಗದ ಪಳೆಯುಳಿಕೆಗಳನ್ನು ಹೊಂದಿರುವ ಈ ನಮ್ಮ ನೆಲದ ಒಂದೊಂದು ಕಲ್ಲುಗಳೂ ಒಂದೊಂದು ಚರಿತ್ರೆಯ ಸಾರುತ್ತವೆ. ಲಿಪಿ ಕ್ಷೇತ್ರಕ್ಕೆ ಕೊಡುಗೆಯನ್ನು ನೀಡಿದ ಅಮರ ಕಲ್ಯಾಣ ಈ ಭಾಗದ ಹಿರಿಮೆ ಗರಿಮೆಯನ್ನು ಸಾರುತ್ತದೆ. ಕರ್ನಾಟಕದ ಭಕ್ತಿ ಚಳವಳಿಯಲ್ಲಿ ಪ್ರಮುಖ ಸ್ಥಾನ ಪಡೆದಿರುವ ಕೊಡೇಕಲ್ಲ ಬಸವಣ್ಣನವರ ಪರಂಪರೆ ಶ್ರೇಷ್ಠವಾದ ಪರಂಪರೆ ಎಂದರು.

ಹುಣಸಗಿ ಪಟ್ಟಣಕ್ಕೆ ಬಹು ಪ್ರಾಚೀನ ಇತಿಹಾಸವಿದೆ. ಜಾಗತಿಕ ಮಟ್ಟದಲ್ಲಿ ಅತ್ಯಂತ ಪುರಾತನ ಮಾನವ ನೆಲೆಸಿ ಬಾಳಿ ಬದುಕಿರುವ ಸ್ಥಳದಲ್ಲಿ ಹುಣಸಗಿ ಪರಿಸರವೂ ಒಂದು ಎಂದು ಗುರುತಿಸುತ್ತಾರೆ. ಇದಕ್ಕೆ ಕಾರಣ ಹುಣಸಗಿ ಪರಿಸರದಲ್ಲಿ ಲಕ್ಷ ವರ್ಷಗಳಷ್ಟು ಪುರಾತನ ಆದಿ ಮಾನವ ನೆಲೆಸಿ, ಅಲ್ಲಿ ಬಳಸಿದ ಹತ್ತು ಹಲವಾರು ಶಿಲಾಯುಧಗಳು ಅಲ್ಲಲ್ಲಿ ದೊರೆಯುತ್ತವೆ. ಇವುಗಳನ್ನಾಧರಿಸಿ ಪ್ರಾಚೀನ ಆದಿಮಾನವನ ಜೀವನ ಕ್ರಮವನ್ನು ವಿದ್ವಾಂಸರು, ಸಂಶೋಧಕರು ಗುರುತಿಸಲು ಪ್ರಯತ್ನಿಸಿದ್ದಾರೆ. ಹುಣಸಗಿಯ ಪ್ರಾಚೀನ ಇತಿಹಾಸವನ್ನು ವಿಶ್ವ ಮಟ್ಟಕ್ಕೆ ಪರಿಚಯಸಿದವರು ಖ್ಯಾತ ಸಂಶೋಧಕರಾದ ಪುಣೆಯ ಡೆಕ್ಕನ್ ಕಾಲೇಜಿನ ಪ್ರಾಧ್ಯಾಪಕರಾದ ಪ್ರೊಫೆಸರ್‌ ಡಾ. ಕೆ.ಪದ್ದಯ್ಯನವರು. ಅಂತೆಯೇ ಅವರಿಗೆ ಅಂದಿನ ಘನತೆವೆತ್ತ ರಾಷ್ಟ್ರಪತಿಗಳಾಗಿದ್ದ ಪ್ರತಿಭಾ ಪಾಟೀಲ್ ಅವರಿಂದ ಪದ್ಮಶ್ರೀ ಪ್ರಶಸ್ತಿ ದೊರಕಿತು ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ರಾಜಾ ವೇಣಗೋಪಾಲನಾಯಕ, ಮನೆಯಲ್ಲಿ ನಮ್ಮ ತಾಯಿಯನ್ನು ಹೇಗೆ ಗೌರವಿಸುತ್ತೇವೆಯೋ, ಅದೇ ರೀತಿಯಲ್ಲಿ ನಮ್ಮ ಮಾತೃಭಾಷೆಯನ್ನೂ ಗೌರವಿಸಬೇಕು. ಹುಣಸಗಿ ತಾಲೂಕು ಎಂದರೆ ವೈವಿಧ್ಯತೆಗಳ ಬೀಡು ಕೊಡೇಕಲ್‌ ಬಸವಣ್ಣ, ಮುದನೂರಿನ ದೇವರ ದಾಸಿಮಯ್ಯ ಸೇರಿದಂತೆ ಹಲವು ಯೋಧರನ್ನು ಕೊಡುಗೆ ನೀಡಿದ ಈ ಪಾವನ ಭೂಮಿಯಲ್ಲಿ ಜನ್ಮ ತಾಳಿರುವುದು ನಮ್ಮ ಸೌಭಾಗ್ಯ ಎಂದರು.

ಆಶಯ ನುಡಿಗಳನ್ನಾಡಿದ ಕಸಾಪ ಜಿಲ್ಲಾಧ್ಯಕ್ಷ ಸಿದ್ದಪ್ಪ ಹೊಟ್ಟಿ, ವಿಕ್ರಮಪುರವೆಂದು ಖ್ಯಾತವಾಗಿದ್ದ ಹಿಂದಿನ ಹುಣಸಗಿ ಪಟ್ಟಣಲ್ಲಿ ನಡೆಯುತ್ತಿರುವ ಕನ್ನಡ ಸಾಹಿತ್ಯ ಸಮ್ಮೇಳನ ಇತಿಹಾಸ ಪುಟ ಸೇರಿದೆ. ಜಿಲ್ಲಾ ಸಮ್ಮೇಳನ ಮೀರಿಸುವಂತೆ ಆಯೋಜನೆಗೊಂಡಿರುವ ತಾಲೂಕು ಸಾಹಿತ್ಯ ಸಮ್ಮೇಳನ ಎಲೆಮರೆಕಾಯಿಯಂತಿರುವ ಹಲವು ಯುವ ಸಾಹಿತಿಗಳಿಗೆ ಸೂಕ್ತ ಪ್ರತಿಭೆ ಒದಗಿಸಿದೆ ಎಂದು ಹೇಳಿದರು.

ಸಮ್ಮೇಳದ ಸರ್ವಾಧ್ಯಕ್ಷರಾದ ವೀರೇಶ ಹಿರೇಮಠ ಹಳ್ಳೂರ ಮಾತನಾಡಿ, 86ರ ಹರೆಯದ ನನ್ನನ್ನು ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವ ತಾಲೂಕಿನ ಜನರ ಪ್ರೀತಿ ಎತ್ತಿ ತೋರಿಸುತ್ತದೆ. ಇಂತಹ ಪುಣ್ಯ ಭೂಮಿಯಲ್ಲಿ ಸಾಹಿತಿಯಾಗಿ ಬೆಳಕಿಗೆ ಬಂದಿರುವ ನನ್ನ ಸೌಭಾಗ್ಯವೇ ಸರಿ ಎಂದು ಹೇಳಿದ ಅವರು, ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವುದು ನಮ್ಮ ಕರ್ತವ್ಯವಾಗಿದೆ ಎಂದರು.

ಕಸಾಪ ತಾಲೂಕು ಅಧ್ಯಕ್ಷ ವೆಂಕಟಗಿರಿ ದೇಶಪಾಂಡೆ ಮಾತನಾಡಿ, ಕನ್ನಡ ಭಾಷೆ, ಜನ, ಜಲ ಉಳಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಸಂಶೋಧಕ ಡಾ. ಕೆ. ಪದ್ದಯ್ಯ ಸಂಪಾದಕೀಯತ್ವದ, ಹುಣಸಗಿ ತಾಲೂಕಿನ ಹಳೆ ಶಿಲಾಯುಗ ಹಾಗೂ ಸಂಶೋಧಕ ಬಸನಗೌಡ ಪಾಟೀಲ್ ಅವರ ರಚಿಸಿರುವ ಅಮರಗನ್ನಡ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು.

ಸುರಪುರದ ಬಲವಂತ ಬಹರಿ ಬಹದ್ದೂರ್‌ ಸಂಸ್ಥಾನದ ರಾಜರಾದ ರಾಜಾ ಕೃಷ್ಣಪ್ಪನಾಯಕ ಅವರ ಉಪಸ್ಥಿತಿಯಲ್ಲಿ ಜರುಗಿದ ಪ್ರಥಮ ಸಾಹಿತ್ಯ ಸಮ್ಮೇಳದ ಉದ್ಘಾಟನಾ ಸಮಾರಂಭವನ್ನು ನಾಡಗೀತೆ ಹಾಗೂ ರೈತಗೀತೆಯೊಂದಿಗೆ ಆರಂಭವಾಯಿತು. ಈ ಸಂದರ್ಭದಲ್ಲಿ ವಿಶೇಷ ಅಹ್ವಾನಿತರಾದ ಉದ್ಯಮಿ ಡಿ. ಎಸ್. ಮ್ಯಾಕ್ಸ್ ನಿರ್ದೇಶಕ ದಯಾನಂದ ಪಟ್ಟಣಶಟ್ಟಿ, ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ವಿಠಲ ಯಾದವ ಹಾಗೂ ಡಾ. ಕೆ ಪದ್ದಯ್ಯ ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ತಹಸೀಲ್ದಾರ್‌ ಎಂ. ಬಸವರಾಜ, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಬಸಣ್ಣ ನಾಯಕ, ಎಚ್. ಬಿ. ಕಣ್ಣೂರ, ಎಸ್. ಜಿ. ಪಾಟೀಲ್, ಡಾ. ಆರ್.ವಿ ನಾಯಕ, ರವಿಕುಮಾರ ಎಸ್. ಎಂ., ಯಲ್ಲಪ್ಪ ಕಾಡ್ಲೂರ, ಮೊಹ್ಮದ್‌ ರಫೀಕ್‌, ರಾಮನಗೌಡ ಮಾಲಿಪಾಟೀಲ್, ಲಾಲ್‌ಸಾಬ ಪೀರಾಪೂರ, ನಾಗಣ್ಣ ಸಾಹು ದಂಡಿನ್, ತಿಪ್ಪಣ್ಣ ನಾಯಕ ರಾಠೋಡ, ಅರುಣಕುಮಾರ ಚೌಹ್ಹಾಣ, ವೀರೇಶ ಚಿಂಚೋಳಿ, ಸಿದ್ದಣ್ಣ ಮಲಗಲದಿನ್ನಿ, ಬಸವರಾಜ ಮಲಗಲದಿನ್ನಿ, ಎಚ್.ಸಿ ಪಾಟೀಲ್, ರಾಜಾ ಸಂತೋಷನಾಯಕ, ಬಿ.ಎಂ. ಹಳ್ಳಿಕೋಟಿ, ಎಂ.ಎಸ್. ಚಂದಾ, ಬಸವರಾಜ ಸ್ಥಾವರಮಠ, ಸಿದ್ದನಗೌಡ ಕರಿಭಾವಿ, ಡಾ. ಆರ್.ವಿ. ನಾಯಕ ಸೇರಿದಂತೆ ಇನ್ನಿತರರು ಉಪಸ್ಥಿತರಿಂದ ಕಾರ್ಯಕ್ರಮವನ್ನು ಅಮರಯ್ಯಸ್ವಾಮಿ ಜಾಲಿಬೆಂಚಿ ಹಾಗೂ ನೀಲಮ್ಮ ನಾಗರಬೆಟ್ಟ ನಿರೂಪಿಸಿ, ಬಸವರಾಜ ಭದ್ರಗೋಳ ಸ್ವಾಗತಿಸಿ, ಅಂಬಿಕಾ ಮುದನೂರ ವಂದಿಸಿದರು.