ಸಂಸ್ಕೃತಿ ಪರಂಪರೆಯತ್ತ ಅಭಿಮಾನ ಶೂನ್ಯತೆಯಿಂದ ಸಾಹಿತ್ಯ ಬಡವಾಗಿದೆ : ಲೇಖಕಿ ಸಹನಾ ವಿಜಯಕುಮಾರ್

| Published : Dec 23 2024, 01:02 AM IST / Updated: Dec 23 2024, 12:11 PM IST

ಸಂಸ್ಕೃತಿ ಪರಂಪರೆಯತ್ತ ಅಭಿಮಾನ ಶೂನ್ಯತೆಯಿಂದ ಸಾಹಿತ್ಯ ಬಡವಾಗಿದೆ : ಲೇಖಕಿ ಸಹನಾ ವಿಜಯಕುಮಾರ್
Share this Article
  • FB
  • TW
  • Linkdin
  • Email

ಸಾರಾಂಶ

ಸಂಸ್ಕೃತ ಪರಭಾಷೆ ಎಂಬ ಸ್ಥಿತಿ ನಡುವೆಯೇ ಐತಿಹಾಸಿಕ ಕಾದಂಬರಿ ರಚನೆ ಆಗುತ್ತಿದ್ದರೆ ಅದಕ್ಕೆ ನಾಂದಿ ಹಾಡಿದವರು ಎಸ್. ಎಲ್. ಭೈರಪ್ಪ. ತನ್ನ ಸಂಸ್ಕೃತಿ ಮತ್ತು ಇತಿಹಾಸದ ಬಗೆಗೆ ನಾಚಿಕೆ ಪಡುವ, ದ್ವೇಷ ಮತ್ತು ಸಿನಿಕತನವಲ್ಲದೆ ಇತ್ಯಾತ್ಮಕ ಭಾವವಿಲ್ಲದ ಯಾವ ಲೇಖಕನೂ ದೊಡ್ಡದನ್ನು ಸೃಷ್ಟಿಸಲಾರ  

 ಮಂಡ್ಯ : ಕನ್ನಡ ಸಾಹಿತ್ಯ ಜಗತ್ತು ಸಂಸ್ಕೃತದಿಂದ ದೂರವಾಗುತ್ತಾ ನಮ್ಮ ಧರ್ಮಸಂಸ್ಕೃತಿಗಳ ಮೇಲಿನ ಆಸ್ಥೆ ಕಳೆದುಕೊಂಡಿತು. ಇದರಿಂದಾಗಿ ನವೋದಯ-ಪ್ರಗತಿಶೀಲ ಯುಗಗಳಲ್ಲಿ ವಿಪುಲವಾಗಿದ್ದ ಐತಿಹಾಸಿಕ ಕಾದಂಬರಿಗಳು ನವ್ಯ-ಬಂಡಾಯ ಯುಗದಲ್ಲಿ ನಾಪತ್ತೆಯಾದವು. ಸಂಸ್ಕೃತಿ ಪರಂಪರೆಗಳಲ್ಲಿ ಆದರ ಅಭಿಮಾನಗಳು ಶೂನ್ಯವಾದರೆ ಸಾಹಿತ್ಯ ಸೃಷ್ಟಿಯ ಕೊರತೆ ಕಾಣಿಸಿಕೊಳ್ಳುತ್ತದೆ ಎಂದು ಲೇಖಕಿ ಸಹನಾ ವಿಜಯಕುಮಾರ್ ಹೇಳಿದರು.

ಸಮ್ಮೇಳನದ ಕೊನೆಯ ದಿನವಾದ ‍ಭಾನುವಾರ ನಡೆದ ಹೊಸ ತಲೆಮಾರಿನ ಸಾಹಿತ್ಯ ಗೋಷ್ಠಿಯಲ್ಲಿ ಅವರು ಚರಿತ್ರೆ ಕೇಂದ್ರಿತ ಸಾಹಿತ್ಯ ಪ್ರಕಾರದ ಕುರಿತು ಮಾತನಾಡಿದರು.

ಸಂಸ್ಕೃತ ಪರಭಾಷೆ ಎಂಬ ಸ್ಥಿತಿ ನಡುವೆಯೇ ಐತಿಹಾಸಿಕ ಕಾದಂಬರಿ ರಚನೆ ಆಗುತ್ತಿದ್ದರೆ ಅದಕ್ಕೆ ನಾಂದಿ ಹಾಡಿದವರು ಎಸ್. ಎಲ್. ಭೈರಪ್ಪ. ತನ್ನ ಸಂಸ್ಕೃತಿ ಮತ್ತು ಇತಿಹಾಸದ ಬಗೆಗೆ ನಾಚಿಕೆ ಪಡುವ, ದ್ವೇಷ ಮತ್ತು ಸಿನಿಕತನವಲ್ಲದೆ ಇತ್ಯಾತ್ಮಕ ಭಾವವಿಲ್ಲದ ಯಾವ ಲೇಖಕನೂ ದೊಡ್ಡದನ್ನು ಸೃಷ್ಟಿಸಲಾರ ಎಂದು ಭೈರಪ್ಪ ಹೇಳಿದ್ದಾರೆ. ಅವರ ಸಾರ್ಥ ಕಾದಂಬರಿ ಬೌದ್ಧಮತದ ಪ್ರಸರಣದ ಹಪಹಪಿ, ಸೂರ್ಯ ದೇವಾಲಯದ ಮೇಲಿನ ಮುಸಲ್ಮಾನರ ದಾಳಿ ಮುಂತಾದ ಸಂಘರ್ಷಗಳನ್ನು ಭಾವಾತಿರೇಕವಿರದೆ ಚಿತ್ರಿಸುತ್ತದೆ. ಭೈರಪ್ಪನವರದು ಮಾಸ್ತಿಯವರಂತೆ ಅತಿ ನಯಗಾರಿಕೆಯಲ್ಲ. ನಿಷ್ಠುರ ಸತ್ಯವನ್ನು ಕಾಣಿಸುವ ಕಲಾತ್ಮಕ ಪರಿ ಎಂದು ಸಹನಾ ವಿವರಿಸಿದರು.

ಭೈರಪ್ಪನವರ ಆವರಣ ಕೃತಿಯ ಯಶಸ್ಸಿಗೆ ಅಲ್ಲಿಯ ತನಕ ಸಾಹಿತ್ಯಪ್ರೇಮಿಗಳನ್ನು ಪ್ರಾಚೀನ ಭಾರತದ ಸಂಸ್ಕೃತಿ-ಸತ್ಯಗಳಿಂದ ದೂರವಿರಿಸಿದ್ದು ಮತ್ತು ಆರ್ಷಧರ್ಮದ ಮೇಲೆ ನಡೆದ ಆಕ್ರಮಣಗಳನ್ನು ಪಠ್ಯಗಳಲ್ಲಿ ಉಲ್ಲೇಖಿಸದಿರುವುದು ಕಾರಣ. ನಮ್ಮ ದೇಶದ ಇತಿಹಾಸದಲ್ಲಿ ನಡೆದ ಘೋರ ಪಾತಕವೆಂದರೆ ವರ್ಣಾಶ್ರಮ ವ್ಯವಸ್ಥೆ ಎಂಬುದು ಬ್ರಿಟಿಷರ ಕಾಲದಿಂದ ಹೇಳುತ್ತಾ ಬಂದ ಸುಳ್ಳು ಅನ್ನುವುದನ್ನು ಆವರಣ ಕಾದಂಬರಿಯನ್ನು ಕೊಳ್ಳುವ ಮೂಲಕ ಕನ್ನಡಿಗರು ನಿರೂಪಿಸಿದರು ಎಂದು ಸಹನಾ ಪ್ರತಿಪಾದಿಸಿದರು.

ಹೊಸ ತಲೆಮಾರಿನ ಸಾಹಿತ್ಯ ಮತ್ತು ಬಹುಮುಖಿ ಕ್ಷೇತ್ರಗಳ ಬರಹಗಾರರ ಕುರಿತು ಮಾತಾಡಿದ ಲೇಖಕಿ ಮೇಘನಾ ಸುಧೀಂದ್ರ ಹೊಸ ತಲೆಮಾರಿನ ಲೇಖಕರು ಹಿಂಜರಿಕೆ ಇಲ್ಲದೆ, ಸಾಹಿತ್ಯ ಪ್ರಕಾರದ ವ್ಯತ್ಯಾಸ ಗಮನಿಸದೆ, ನಿರ್ಭಿಡೆಯಿಂದ ಬರೆಯುತ್ತಿದ್ದಾರೆ. ಸಿದ್ಧಮಾದರಿಗಳನ್ನು ತೊರೆಯುತ್ತಿದ್ದಾರೆ. ಈ ಕಾಲದ ಎಲ್ಲ ಸಂಕೀರ್ಣತೆಗಳನ್ನು ಮುಜುಗರವಿಲ್ಲದೇ ತೆರೆದಿಡುತ್ತಿದ್ದಾರೆ. ಅವರು ಆಧುನಿಕ ಮಾಧ್ಯಮಗಳಲ್ಲಿ ಬರೆಯುವುದನ್ನು ಸಾಹಿತ್ಯದ ಶುದ್ಧತೆಯಲ್ಲಿ ನಂಬಿಕೆ ಇಟ್ಟವರು ಒಪ್ಪುತ್ತಿಲ್ಲ. ಆದರೂ ಹಳೆಯದು ಶ್ರೇಷ್ಠ ಎಂದು ನಂಬದೇ, ತಮ್ಮ ಓದುಗರನ್ನು ತಾವೇ ಸೃಷ್ಟಿಸುತ್ತಾ ಹೊಸಬರು ತಮ್ಮ ದಾರಿಯನ್ನು ಕಂಡುಕೊಳ್ಳುತ್ತಿದ್ದಾರೆ ಎಂದು ಮೇಘನಾ ಪ್ರತಿಪಾದಿಸಿದರು.

ಇವತ್ತು ಕಾವ್ಯದಲ್ಲಿ ವೈವಿಧ್ಯಮಯ ರೂಪಗಳು ಬರುತ್ತಿವೆ. ಗಜಲ್, ಹಾಯ್ಕು, ರುಬಾಯತು, ಶಾಯರಿ, ಮುಕ್ತಕ, ಹನಿಗವನ, ಟಂಕ ಮುಂತಾದ ಹೊಸ ಹೊಸ ಕಾವ್ಯಪ್ರಕಾರಗಳು ಜನಪ್ರಿಯವಾಗುತ್ತಿವೆ. ಅನೇಕರು ಈ ಹೊಸ ಮಾರ್ಗಗಳಲ್ಲಿ ಸಕ್ರಿಯವಾಗಿದ್ದಾರೆ ಎಂದು ಇತ್ತೀಚಿನ ಸಾಹಿತ್ಯದ ವಸ್ತುವೈವಿಧ್ಯದ ಕುರಿತು ಮಾತನಾಡಿದ ರಮೇಶ್ ಎಸ್. ಕತ್ತಿ ವಿವರಿಸಿದರು.

ಮಾರುಕಟ್ಟೆಯ ಹುಚ್ಚಿಗೆ ಬಿದ್ದ ಲೇಖಕರ ಸಂಖ್ಯೆ ಹೆಚ್ಚುತ್ತಿದೆ: ವಿಕ್ರಮ್ ವಿಸಾಜಿ

ಬಂಡಾಯ ಮತ್ತು ದಲಿತ ಚಳವಳಿ ನಂತರದ ತಲೆಮಾರನ್ನು ಹೊಸ ತಲೆಮಾರು ಎನ್ನಬಹುದು. ಈ ತಲೆಮಾರಿನಲ್ಲಿ ಸಾಹಿತಿಗಳಿಗೆ ಸ್ಟಾರ್‌ಗಿರಿ ಅಷ್ಟು ಸುಲಭವಾಗಿ ಸಿಗುವುದಿಲ್ಲ. ಇವರು ಬದಲಾಗುತ್ತಿರುವ ಮೌಲ್ಯ, ವ್ಯಕ್ತಿತ್ವವನ್ನು ಸೀಳಿ ಅಭಿವ್ಯಕ್ತಿಸುವ ಕ್ರಮ, ಸಮಷ್ಟಿಯನ್ನು ಒಳಗೊಳ್ಳುವ ರೀತಿಯ ಬಗ್ಗೆ ಚಿಂತಿಸುತ್ತಿದ್ದಾರೆ ಎಂದು ವಿಮರ್ಶಕ ವಿಕ್ರಮ್ ವಿಸಾಜಿ ಹೇಳಿದರು.

ಹೊಸ ತಲೆಮಾರಿನ ಸಾಹಿತ್ಯ ಗೋಷ್ಠಿಯ ಅಧ್ಯಕ್ಷ ಭಾಷಣ ಮಾಡಿದ ವಿಸಾಜಿ, ಬಹುತ್ವದ ಮಾದರಿಯೇ ಹೊಸ ತಲೆಮಾರಿನ ಗುಣ. ಇದು ಯಾರನ್ನೂ ವಿರೋಧಿಸದ, ಭಾಷೆ ಮತ್ತು ಸಂವೇದನೆ ಮೂಲಕ ಎಲ್ಲರನ್ನೂ ಒಳಗೊಳ್ಳುತ್ತಿದೆ. ಕೆಲವೇ ದೃಷ್ಟಿಕೋನಗಳ ಮೂಲಕ ಓದಲು ಪ್ರೇರೇಪಿಸುವುದು ದುರ್ಬಲ ಸಾಹಿತ್ಯ. ಅದರಿಂದ ಅಪಾಯ ಹೆಚ್ಚು ಎಂದು ವಿಸಾಜಿ ಎಚ್ಚರಿಸಿದರು.

ಚರಿತ್ರೆಯನ್ನು ಯಾವ ಕಾರಣಕ್ಕೆ ಮುನ್ನೆಲೆಗೆ ತರುತ್ತಿದ್ದಾರೆ ಎಂದು ಗೊತ್ತಾಗುತ್ತಿಲ್ಲ. ವರ್ತಮಾನದ ಬಿಕ್ಕಟ್ಟನ್ನು ಅರ್ಥಮಾಡಿಕೊಳ್ಳಲು ಲಂಕೇಶ್, ಕಾರ್ನಾಡ್ ಚರಿತ್ರೆಯನ್ನು ಬಳಸಿಕೊಂಡರು. ಹೊಸ ತಲೆಮಾರಿಗೆ ಚರಿತ್ರೆಯನ್ನು ಹೊಸಕಣ್ಣಿನಿಂದ ನೋಡಲು ಸಾಧ್ಯವಾಗಿದೆಯಾ ಅನ್ನುವುದು ಸ್ಪಷ್ಟವಾಗಿಲ್ಲ ಎಂದು ಐತಿಹಾಸಿಕ ಕಾದಂಬರಿಗಳ ಮಾದರಿಯನ್ನು ವಿಕ್ರಮ್ ಅನುಮಾನಿಸಿದರು.

ಮಾರುಕಟ್ಟೆಯ ಹುಚ್ಚಿಗೆ ಬಿದ್ದಂತೆ ಲೇಖಕರು ವರ್ತಿಸುತ್ತಿದ್ದಾರೆ. ಮಾರುಕಟ್ಟೆಯ ಹಂಬಲ ಅವರನ್ನು ಬಾಧಿಸುತ್ತಿದೆ. ಮಾರುಕಟ್ಟೆಗೆ ದಾಸರಾದಾಗ ಅದು ಉದ್ಯಮವನ್ನಷ್ಟೇ ಅಲ್ಲ, ಮನಸ್ಸನ್ನೂ ಪ್ರಭಾವಿಸುತ್ತದೆ. ತಮ್ಮ ಕೃತಿಗಳನ್ನು ಕೂಗಿ ಕೂಗಿ ಮಾರಾಟ ಮಾಡುವವರ ನಡುವೆ ಗ್ರಾಮೀಣ ಪ್ರದೇಶದ ಲೇಖಕರು ಕಂಗಾಲಾಗಿದ್ದಾರೆ ಎಂದು ವಿಸಾಜಿ ಕಳವಳಪಟ್ಟರು.