ಕನ್ನಡಪ್ರಭ ವಾರ್ತೆ, ತುಮಕೂರು ಸಾಹಿತ್ಯವೆಂದರೆ ನಾಲ್ಕು ಜನರಿಗೆ ಉಪಯೋಗಕ್ಕೆ ಬರಬೇಕು. ಬರೆದಿದ್ದೆಲ್ಲಾ ಸಾಹಿತ್ಯವಲ್ಲ. ನೋವವನ್ನು ಮರೆಸುವ, ನೋವಿನಲ್ಲಿಯೂ ನಗುವನ್ನು ತರಿಸುವಂತಹ ಸಾಹಿತ್ಯ ಹೆಚ್ಚು ದಿನ ಜನರ ಮಧ್ಯ ಉಳಿಯಲು ಸಾಧ್ಯ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಗೌರವ ಸಲಹೆಗಾರ ನಾಡೋಜ ಗೊ.ರು.ಚನ್ನಬಸವಪ್ಪ ಅಭಿಪ್ರಾಯಪಟ್ಟಿದ್ದಾರೆ. ನಗರದ ಅಕ್ಕಮಹಾದೇವಿ ಸಭಾಂಗಣದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್, ತುಮಕೂರು ಜಿಲ್ಲಾ ಘಟಕ ಹಾಗೂ ಕದಳಿ ಮಹಿಳಾ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ ಶರಣ ಲಿಂ.ಪಂಡಿತ್ ಚನ್ನಪ್ಪ ಎರೇಸೀಮೆ ಅವರ ಬದುಕು ಬರಹ ಕುರಿತು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪಂಡಿತ ಚನ್ನಪ್ಪ ಎರೇಸೀಮೆ ಅವರ ಆತ್ಮಕಥೆ ನನ್ನ ಕಥೆ ಆ ಕಾಲದ ಸಮಗ್ರ ವಿಚಾರಗಳನ್ನು ಒಳಗೊಂಡ ಒಂದು ಉತ್ತಮ ಕೃತಿ. ಇದನ್ನು ಎಲ್ಲರೂ ಓದಿ ಅರ್ಥೈಸಿಕೊಳ್ಳಬೇಕೆಂದರು. ಇಂದು ಜನಕ್ಕೆ ಸ್ವಪ್ರಜ್ಞೆ ಮತ್ತು ಸಾಮಾನ್ಯ ಜ್ಞಾನ ಎರಡು ಇಲ್ಲದಾಗಿದೆ. ಹಾಗಾಗಿ ನೋಡಿದೆಲ್ಲವನ್ನು ಒಪ್ಪಿಕೊಳ್ಳುವ, ಅನುಸರಿಸುವ ಕೆಲಸ ಮಾಡುತ್ತಿದ್ದಾರೆ. ಪ್ರಶ್ನಿಸುವ, ಅಸತ್ಯವನ್ನು ಕಂಡಾಗ ಅಕ್ಷೇಪಿಸುವ ಕೆಲಸ ಮಾಡುವುದಿಲ್ಲ. ಇರಾನ್ ಮತ್ತು ಅಮೇರಿಕಾ ಯುದ್ಧದಲ್ಲಿ ೧೬೫ ಮಕ್ಕಳು ಸತ್ತರೂ ವಿಶ್ವ ಸಂಸ್ಥೆ ಕಣ್ಮುಚ್ಚಿ ಕುಳಿತಿರುವುದು ನೋಡಿದರೆ, ಇದರ ಅಗತ್ಯವಿದೆಯೇ ಎಂಬ ಪ್ರಶ್ನೆ ಮೂಡುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಐಎಎಸ್ ಅಧಿಕಾರಿ ಹಾಗೂ ಸಿದ್ದಗಂಗಾ ವಿದ್ಯಾಸಂಸ್ಥೆಯ ಸಿಇಒ ಜಯವಿಭವಸ್ವಾಮಿ ಮಾತನಾಡಿ, ,ವೀರಶೈವ ಲಿಂಗಾಯಿತ ಸಮುದಾಯದ ಏಳಿಗೆಗಾಗಿ ದುಡಿದ ಹಿರಿಯ ಶರಣ ಶರಣೆಯರನ್ನು ಇಂದಿನ ಯುವ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳವುದರಿಂದ ನಮ್ಮ ಮಕ್ಕಳಿಗೆ ನಮ್ಮ ಹಿರಿಯರ ಸಾಧನೆಗಳ ಪರಿಚಯವಾಗುವುದರ ಜೊತೆಗೆ, ನಮ್ಮ ಸಂಸ್ಕೃತಿ, ಪರಂಪರೆಯ ಅರಿವು ಮೂಡಲಿದೆ ಎಂದರು.ಪ್ರಸ್ತಾವಿಕ ನುಡಿಗಳನ್ನಾಡಿದ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ತುಮಕೂರು ಜಿಲ್ಲಾಧ್ಯಕ್ಷ ವಿದ್ವಾನ್ ಎಂ.ಜಿ.ಸಿದ್ದರಾಮಯ್ಯ, ಮಹಾಮನೆ ಎಂಬ ಹೆಸರಿನ ಪತ್ರಿಕೆಯನ್ನು ಹೊರತರುವ ಮೂಲಕ ಶರಣೆಯರ ಕುರಿತ ಲೇಖನಗಳ ಮೂಲಕ ಜನರನ್ನು ತಲುಪಲು ಪ್ರಯತ್ನಿಸಲಾಗುತ್ತಿದೆ ಎಂದರು.
ಆಶಯ ನುಡಿಗಳನ್ನಾಡಿದ ನಿವೃತ್ತ ಪ್ರಾಚಾರ್ಯ ಎಸ್.ಕುಮಾರಸ್ವಾಮಿ,ಇಂದಿನ ಕಾರ್ಯಕ್ರಮದಲ್ಲಿ ವಚನ ಗಾಯನ, ಶರಣ ರೂಪಕಗಳು ಕಾರ್ಯಕ್ರಮಕ್ಕೆ ಮೆರಗು ನೀಡಿವೆ.ಕದಳಿ ಮಹಿಳಾ ವೇದಿಕೆ ವತಿಯಿಂದ ನಡೆಯುತ್ತಿರುವ ಈ ಕಾರ್ಯಕ್ರಮದಲ್ಲಿ ೧೨ನೇ ಶತಮಾನದ ಶರಣೆಯರ ವೇಷಭೂಷಣದೊಂದಿಗೆ, ವೇದಿಕೆಯ ಮೇಲೆ ಅವರ ವಚನಗಳನ್ನು ಪ್ರಸುತ ಪಡಿಸಿದ್ದಾರೆ.ಇದು ನಮ್ಮ ಮಕ್ಕಳಿಗೆ ಸ್ಪೂರ್ತಿಯಾಗಿದೆ ಎಂದರು.ಕಾರ್ಯಕ್ರಮದಲ್ಲಿ ಡಾ.ತುಳಜಪ್ಪ ರಾಜೇಶ್ವರಿ, ಉಪನ್ಯಾಸಕರಾದ ಎಂ.ಸುರೇಶ್, ಎಸ್.ಕುಮಾರಸ್ವಾಮಿ, ಜೋತಿ ಆನಂದ್, ಶಿವಲಿಂಗಮ್ಮ, ಪಾರ್ವತಿ ಟಿ.ಎಸ್.ಬಸವರಾಜು, ಎಸ್.ಶಿವಕುಮಾರ, ವನಜಾಕ್ಷಿ ಶಿವಕುಮಾರ, ಚಂದ್ರಶೇಖರಯ್ಯ ತಳವಾರನಹಳ್ಳಿ, ಮಂಗಳಾ ಮಹೇಶ್, ಹಂ.ಸಿ.ಕುಮಾರಸ್ವಾಮಿ, ಮಿಮಿಕ್ರಿ ಈಶ್ವರಯ್ಯ, ರಾಜಶೇಖರಯ್ಯ ಈಚನೂರು ಮತ್ತಿತರರು ಪಾಲ್ಗೊಂಡಿದ್ದರು.