ಇನ್ನೂರು ಅಡಿ ಉದ್ದದ ನಾಡಧ್ವಜದೊಂದಿಗೆ ಕನ್ನಡ ತೇರು ಎಳೆದು ಕನ್ನಡಾಭಿಮಾನ ತೋರಿದ ಪುಟ್ಟ ಮಕ್ಕಳು

| Published : Dec 21 2024, 01:16 AM IST

ಇನ್ನೂರು ಅಡಿ ಉದ್ದದ ನಾಡಧ್ವಜದೊಂದಿಗೆ ಕನ್ನಡ ತೇರು ಎಳೆದು ಕನ್ನಡಾಭಿಮಾನ ತೋರಿದ ಪುಟ್ಟ ಮಕ್ಕಳು
Share this Article
  • FB
  • TW
  • Linkdin
  • Email

ಸಾರಾಂಶ

ಪೋಷಕರ ಬೆಂಬಲ, ಶಾಲಾ ಶಿಕ್ಷಕರ ಸಹಕಾರದಲ್ಲಿ ಶಾಲಾ ಮಕ್ಕಳನ್ನು ಕನ್ನಡಹಬ್ಬದಲ್ಲಿ ಬಳಕೆ ಮಾಡಿಕೊಂಡು ಅವರಿಗೆ ಮಾತೃಭಾಷೆ ಕನ್ನಡ ಭಾಷೆ ಬಗ್ಗೆ ಅಭಿಮಾನ ಮೂಡಿಸಿದ್ದು, ಮೆರವಣಿಗೆ ಉದ್ದಕ್ಕೂ ನೋಡುತ್ತಿದ್ದ ಸಾವಿರಾರು ವಿದ್ಯಾರ್ಥಿಗಳು, ಸಾಹಿತಿಗಳು, ಕನ್ನಡಾಭಿಮಾನಿಗಳ ಮೆಚ್ಚುಗೆಗೆ ಕಾರಣವಾಯಿತು.

ಎಚ್.ಕೆ.ಅಶ್ವಥ್ , ಹಳುವಾಡಿ

ಕನ್ನಡಪ್ರಭ ವಾರ್ತೆ ಮಂಡ್ಯ

87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷರ ಮೆರವಣಿಗೆಯಲ್ಲಿ ಶಾಲೆಯ ಪುಟ್ಟ ಮಕ್ಕಳು ಸುಮಾರು ನಾಲ್ಕೂವರೆ ಕಿ.ಮೀಗೂ ಹೆಚ್ಚು ದೂರ ಇನ್ನೂರು ಅಡಿ ಉದ್ದದ ನಾಡಧ್ವಜದೊಂದಿಗೆ ಕನ್ನಡ ತೇರು ಎಳೆದು ಕನ್ನಡಾಭಿಮಾನವನ್ನು ತೋರಿಸಿ ಗಮನ ಸೆಳೆದರು.

ಶ್ರೀರಂಗಪಟ್ಟಣ ತಾಲೂಕಿನ ಅರಕೆರೆ ಗ್ರಾಮದ ಶ್ರೀ ಭುವನೇಶ್ವರಿ ಮಾದರಿ ಅನುದಾನಿತ ಪ್ರಾಥಮಿಕ ಶಾಲೆಯ ಸುಮಾರು 20ಕ್ಕೂ ಹೆಚ್ಚು ಮಂದಿ ಪುಟ್ಟ ಮಕ್ಕಳು ಭುವನೇಶ್ವರಿ ರಥದೊಂದಿಗೆ 200 ಅಡಿ ಉದ್ದ, 13 ಅಡಿ ಎತ್ತರ ಹೊಂದಿರುವ, ಆರೂವರೆ ಅಡಿ ಕನ್ನಡ ಬಾವುಟ ಹೊಂದಿದ ರಥವನ್ನು ಬಹಳ ಉತ್ಸಹದಿಂದಲೇ ಎಳೆದು ಮಾತೃಭಾಷೆ ಅಭಿಮಾನ ತೋರಿ ಮಾದರಿಯಾದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಮೀಪ ಸಮ್ಮೇಳನಾಧ್ಯಕ್ಷ ಗೊ.ರು.ಚನ್ನಬಸಪ್ಪರೊಂದಿಗೆ ನೂರಾರು ಜನಪದ ಕಲಾತಂಡಗಳೊಂದಿಗೆ ಕನ್ನಡತೇರು ಮೆರವಣಿಗೆಯಲ್ಲಿ ಸಾಗಿತು. ಬೆಳಗ್ಗೆ 8.30ಕ್ಕೆ ಆರಂಭಗೊಂಡ ರಥವನ್ನು ಮೈಸೂರು - ಬೆಂಗಳೂರು ಹೆದ್ದಾರಿ ಮೂಲಕ ಸಮ್ಮೇಳನ ಆಯೋಜಿಸಿದ್ದ ನಗರದ ಹೊರವಲಯದ ಅಮರಾವತಿ ಹೋಟೆಲ್ ವರೆಗೂ ಸುಮಾರು 11 ಗಂಟೆವರೆಗೂ ಮಕ್ಕಳು ಎಳೆದು ನೋಡುಗರಿಗೆ ಅಚ್ಚರಿ ತರುವಂತೆ ಮಾಡಿದರು.

ಕನ್ನಡ ತೇರಿನ ಮುಂದೆ ನಾಲ್ವರು ಮಕ್ಕಳು ಹಗ್ಗ ಹಿಡಿದು ಎಳೆದರೆ, ಇದಕ್ಕೆ ಸಹಾಯಕರಾಗಿ ರಥದ ಸುಮಾರು 20 ಅಡಿಗೆ ಅಳವಡಿಸಿದ್ದ ಎರಡು ಚಕ್ರಗಳ ಬಂಡಿ ಬಳಿ ಒಬ್ಬೊಬ್ಬ ವಿದ್ಯಾರ್ಥಿ ಇದ್ದು ರಥವನ್ನು ತಳ್ಳಿ ಮುಂದೆ ಸಾಗಲು ಕಾರಣರಾದರು. ಮೆರವಣಿಗೆ ಮಧ್ಯೆ ಮಕ್ಕಳು ನಿಲ್ಲಿಸಿ (ಬ್ರೇಕ್) ಎಂದಾಗ ತಕ್ಷಣ ರಥ ನಿಲ್ಲುತ್ತಿತ್ತು. ಹೀಗೆ ಸುಮಾರು ನಾಲ್ಕುವರೆ ಕಿ.ಮೀವರೆಗೆ ಕನ್ನಡತೇರು ಮುಂದೆ ಸಾಗಿ ಎಲ್ಲರ ಗಮನ ಸೆಳೆಯಿತು.

ಈ ಹಿಂದೆಯೆ ನಿರ್ಮಾಣಗೊಂಡಿದ್ದ ಶ್ರೀ ಭುವನೇಶ್ವರಿ ತಾಯಿ ಪ್ರತಿಮೆ ಹೊಂದಿರುವ ಕನ್ನಡತೇರನ್ನು ಶ್ರೀರಂಗಪಟ್ಟಣದಲ್ಲಿ ಎಲ್ಲೆಡೆ ಕನ್ನಡ ಹಬ್ಬ ನಡೆದರೂ ಬಳಸುತ್ತಿದ್ದರು. ಆದರೆ, ಕನ್ನಡತೇರಿಗೆ ಕಬ್ಬಿಣದ ಕಂಬಿಗಳನ್ನು ಅಳವಡಿಸಿ ಅದಕ್ಕೆ ಸುಮಾರು 200 ಅಡಿ ಉದ್ದದ ಕನ್ನಡ ಬಾವುಟ ಕಟ್ಟಿ ಗಮನ ಸೆಳೆಯುವಂತೆ ಮಾಡಲು ಕಾರಣರಾಗಿದ್ದು ಅರಕೆರೆ ಗ್ರಾಮದ ಶ್ರೀ ಭುವನೇಶ್ವರಿ ಶಾಲೆ ಕಾರ್ಯದರ್ಶಿ ಜೆ.ರಾಮಕೃಷ್ಣ ಅವರು.

ಶ್ರೀರಂಗಪಟ್ಟಣ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಕೆಲಸ ಮಾಡಿದ್ದ ಜೆ.ರಾಮಕೃಷ್ಣ ಅವರು, 30 ವರ್ಷಗಳ ನಂತರ ಜಿಲ್ಲೆಯಲ್ಲಿ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನದಲ್ಲಿ ವಿಶೇಷತೆ ಇರಲಿ ಎಂದು ಕನ್ನಡ ಬಾವುಟದ ರಥವನ್ನು ತರಲು ನಿರ್ಧರಿಸಿ ಕಳೆದ ಒಂದು ವಾರದಿಂದ ಪರಿಶ್ರಮ ಪಟ್ಟು ಸುಮಾರು 60 ಸಾವಿರ ರು. ವೆಚ್ಚದಲ್ಲಿ ಕಬ್ಬಿಣ ಕಂಬಿ, 22 ಬಂಡಿಗಳನ್ನು ಒಳಗೊಂಡ 200 ಅಡಿ ಉದ್ದದ ಬಾವುಟವಿರುವ ರಥ ಸಿದ್ಧಪಡಿಸಿ ಜಾನಪದ ಕಲಾತಂಡಗಳ ಜೊತೆ ಮೆರವಣಿಗೆಯಲ್ಲಿ ಪಾಲ್ಗೊಳ್ಳು ಕಾರಣರಾದರು.

ಪೋಷಕರ ಬೆಂಬಲ, ಶಾಲಾ ಶಿಕ್ಷಕರ ಸಹಕಾರದಲ್ಲಿ ಶಾಲಾ ಮಕ್ಕಳನ್ನು ಕನ್ನಡಹಬ್ಬದಲ್ಲಿ ಬಳಕೆ ಮಾಡಿಕೊಂಡು ಅವರಿಗೆ ಮಾತೃಭಾಷೆ ಕನ್ನಡ ಭಾಷೆ ಬಗ್ಗೆ ಅಭಿಮಾನ ಮೂಡಿಸಿದ್ದು, ಮೆರವಣಿಗೆ ಉದ್ದಕ್ಕೂ ನೋಡುತ್ತಿದ್ದ ಸಾವಿರಾರು ವಿದ್ಯಾರ್ಥಿಗಳು, ಸಾಹಿತಿಗಳು, ಕನ್ನಡಾಭಿಮಾನಿಗಳ ಮೆಚ್ಚುಗೆಗೆ ಕಾರಣವಾಯಿತು.

‘ಸಾಹಿತ್ಯ ಸಮ್ಮೇಳನದ ಕಲಾ ತಂಡಗಳ ಮೆರವಣಿಗೆಯಲ್ಲಿ ಅಳವಡಿಸಿದ್ದ ಕನ್ನಡತೇರನ್ನು ನಮ್ಮ ಶಾಲೆ ಮಕ್ಕಳು ಮಾತ್ರ ಎಳೆಯುತ್ತಿದ್ದರು. ಸಾವಿರಾರು ಕೆಜಿ ತೂಕವಿರುವ ಕನ್ನಡದ ರಥ ಎಳೆಯುವಾಗ ಮಕ್ಕಳ ಜೊತೆ ಸಾರ್ವಜನಿಕರು, ಕನ್ನಡಾಭಿಮಾನಿಗಳು ಕೈ ಜೋಡಿಸದೇ ನೋಡುತ್ತಾ ನಿಂತಿದ್ದು ಬೇಸರ ತರಿಸಿತು.’

ಜೆ.ರಾಮಕೃಷ್ಣ, ಕಾರ್ಯದರ್ಶಿ, ಶ್ರೀ ಭುವನೇಶ್ವರಿ ಮಾದರಿ ಅನುದಾನಿತ ಪ್ರಾಥಮಿಕ ಶಾಲೆ, ಅರಕೆರೆ.