ಭಿಕ್ಷೆ ಬೇಡದೇ ಸ್ವಾವಲಂಬಿ ಜೀವನ ನಡೆಸಿ: ನಿರ್ಭಯಾನಂದ ಸ್ವಾಮೀಜಿ

| Published : Feb 21 2025, 11:49 PM IST

ಭಿಕ್ಷೆ ಬೇಡದೇ ಸ್ವಾವಲಂಬಿ ಜೀವನ ನಡೆಸಿ: ನಿರ್ಭಯಾನಂದ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ವಿವೇಕಾನಂದರ ಮಾತಿನಂತೆ ಯುವ ಜನಾಂಗ ಜಗತ್ತಿನ ಭಿಕ್ಷುಕರಾಗದೇ, ಸ್ವಾಭಿಮಾನಿ ಹಾಗೂ ಸ್ವಾವಲಂಬಿಗಳಾಗಬೇಕು ಎಂದು ನಿರ್ಭಯಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.

ಧಾರವಾಡ: ಭಾರತದ ಯುವ ಜನಾಂಗ ಜಗತ್ತಿನ ಎದುರಿಗೆ ಭಿಕ್ಷ ಬೇಡದೆ, ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವಂತೆ ಗದಗ-ವಿಜಯಪುರ ರಾಮಕೃಷ್ಣ-ವಿವೇಕಾನಂದ ಆಶ್ರಮದ ಪೀಠಾಧ್ಯಕ್ಷ ನಿರ್ಭಯಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.

ಇಲ್ಲಿಯ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಶುಕ್ರವಾರ ಧಾರವಾಡದ ಭಗವಾನ್ ರಾಮಕೃಷ್ಣ ಭಾವೈಕ್ಯ ಮಂದಿರದ 20ನೇ ವಾರ್ಷಿಕೋತ್ಸವದ ಪ್ರಯುಕ್ತ ನಡೆದ ಯುವ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

ಉದ್ಯೋಗ ಅರಸಿ ತಾಯ್ನಾಡು ತೊರೆದು, ಅನ್ಯ ದೇಶಗಳಿಗೆ ಹೋಗುವುದು ಭಿಕ್ಷೆ ಬೇಡಿದಂತೆಯೇ ಸರಿ. ವಿವೇಕಾನಂದರ ಮಾತಿನಂತೆ ಯುವ ಜನಾಂಗ ಜಗತ್ತಿನ ಭಿಕ್ಷುಕರಾಗದೇ, ಸ್ವಾಭಿಮಾನಿ ಹಾಗೂ ಸ್ವಾವಲಂಬಿಗಳಾಗಬೇಕು. ನೀನು ಯಾರು? ಪೃಥ್ವಿಗೆ ಬಂದಿದ್ದೇಕೆ? ನಿನ್ನ ಶಕ್ತಿ ಏನು? ನಿನ್ನ ಗುರಿ ಏನು? ಹೀಗೆ ಯುವ ಜನಾಂಗ ಅನೇಕ ಪ್ರಶ್ನೆಗಳನ್ನು ಹಾಕಿಕೊಂಡು ಛಲ ಬಿಡದೆ, ಗುರಿಯ ಕಡೆಗೆ ಸಾಗಬೇಕು. ಸಾಧನೆಯ ಶಿಖರ ಏರಿಸಬೇಕು ಎಂದು ಸಲಹೆ ನೀಡಿದರು.

ಜಗತ್ತಿನ ಮುಂದುವರಿದ ರಾಷ್ಟ್ರಗಳಲ್ಲಿ ಭಾರತವೇ ಹೆಚ್ಚು ವಿಜ್ಞಾನಿಗಳು ಹೊಂದಿದ ದೇಶ. ಅಮೇರಿಕಾ, ಯೂರೋಪ, ಆಸ್ಟ್ರೇಲಿಯಾ ಹೀಗೆ ಅನೇಕ ದೇಶಗಳ ಹತ್ತು ಜನರಲ್ಲಿ ಎಂಟು ಭಾರತೀಯ ವಿಜ್ಞಾನಿಗಳಿರುವುದು ಹೆಮ್ಮೆ ಸಂಗತಿ ಎಂದರು.

ಸ್ಥಳೀಯ ಆಶ್ರಮದ ಪೀಠಾಧ್ಯಕ್ಷ ಸ್ವಾಮಿ ವಿಜಯಾನಂದ ಸರಸ್ವತಿ, ಯುವಕರಲ್ಲಿ ಆತ್ಮವಿಶ್ವಾಸ, ಧೈರ್ಯ, ರಾಷ್ಟ್ರಪ್ರೇಮ, ವ್ಯಕಿತ್ವ, ಸಾಮಾಜಿಕ ಪ್ರಜ್ಞೆ ಬೆಳೆಸಲು ಪ್ರತಿವರ್ಷ ಯುವ, ಶಿಕ್ಷಕರ ಸಮ್ಮೇಳನ ಏರ್ಪಡಿಸುತ್ತಿದೆ ಎಂದರು.

ದೇಶದ ಯುವ ಜನಾಂಗ ಪಾಶ್ಚಿಮಾತ್ಯ ಅಂಧಾಃನುಕರಣೆ ಬಿಡಬೇಕು. ಜತೆಗೆ ಮಹಾನ್ ಪುರುಷರ ಸನ್ಮಾರ್ಗದಲ್ಲಿಯೂ ನಡೆದು, ದುಶ್ಚಟಗಳ ಮುಕ್ತ ಜೀವನ ನಡೆಸುವ ಮೂಲಕ ದೇಶದ ಆಸ್ತಿಗಳಾಗಿಯೂ ಮಾರ್ಪಾಡುಗೊಳ್ಳುವಂತೆ ತಿಳಿಸಿದರು.

ಸಮಾರಂಭ ಉದ್ಘಾಟಿಸಿದ ಉಪ ಪೊಲೀಸ್ ಆಯುಕ್ತ ರವೀಶ, ಯುವ ಜನಾಂಗ ಜೀವನದಲ್ಲಿ ದೊಡ್ಡ ಗುರಿ ಹೊಂದಿ, ಅದರ ಸಾಧನೆಗೆ ನಿರಂತರ ಪ್ರಯತ್ನ ಮಾಡಬೇಕು. ಉತ್ತಮ ಬದುಕು ಸಾಗಿಸುವ ಜೊತೆ ಅನ್ಯರಿಗೂ ಬದುಕಲು ಬಿಡಬೇಕು ಎಂದರು.

ಇಂದಿನ ಸಮಸ್ಯೆಗಳಿಗೆ ಸ್ವಾಮಿ ವಿವೇಕಾನಂದರೇ ಪರಿಹಾರ ವಿಷಯ ಕುರಿತು ರಾಣಿಬೆನ್ನೂರಿನ ಸ್ವಾಮಿ ಪ್ರಕಾಶನಂದಜಿ ಮಹಾರಾಜ ಮತ್ತು ಸ್ವಾಮಿ ವಿವೇಕಾನಂದರ ದೃಷ್ಟಿಯಲ್ಲಿ ಸಚ್ಛಾರಿತ್ರ್ಯ ಬಗ್ಗೆ ಪ್ರೊ. ಮೋಹನ ಸಿದ್ಧಾಂತಿ ಉಪನ್ಯಾಸ ನೀಡಿದರು.

ಸಮ್ಮೇಳನದಲ್ಲಿ ಸ್ವಾಮಿ ಜಿತಕಮಾನಂದ, ಸ್ವಾಮಿ ಸುಮೇದಾನಂದ, ಸ್ವಾಮಿ ಜ್ಞಾನಾನಂದ, ಮಂಜುನಾಥ ಮಕ್ಕಳಗೇರಿ, ಮೋಹನ ರಾಮದುರ್ಗ, ಸುಭಾಷ ಗೌಡರ, ಅರ್ಜುನ ಅರಗಾಡೆ, ಸಿದ್ದನಗೌಡರ, ಗಣೇಶ ಕುಂದರಗಿ ಇದ್ದರು.