ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ವೈಜ್ಞಾನಿಕ ಸಂದೇಶ ಸಾರಿದ ಬುದ್ಧ ಹಾಗೂ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ವಿಚಾರ - ಆದರ್ಶಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಂಡು ಬದುಕಬೇಕು ಎಂದು ಟಿ.ನರಸೀಪುರ ನಳಂದ ಬುದ್ಧ ವಿಹಾರದ ಮುಖ್ಯಸ್ಥ ಬೋಧಿರತ್ನ ಬಂತೇಜಿ ಹೇಳಿದರು.ನಗರದ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಸಭಾಂಗಣದಲ್ಲಿ ಇಂಗಳೇ ಫೌಂಡೇಶನ್, ಎವಿಎಸ್‌ಎಸ್ ಮಂಡ್ಯ ತಾಲೂಕು ಶಾಖೆ ಹಾಗೂ ವಿಶ್ವಜ್ಞಾನಿ ನೌಕರರ ಅಭಿವೃದ್ಧಿ ಸಹಕಾರ ಸಂಘ ಆಶ್ರಯದಲ್ಲಿ ನಡೆದ 2568ನೇ ವೈಶಾಖ ಬುದ್ಧ ಪೂರ್ಣಿಮೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಪ್ರಸ್ತುತ ದಿನಗಳಲ್ಲಿ ಬೌದ್ಧಧರ್ಮದ ವೈಜ್ಞಾನಿಕ ಚಿಂತನೆಗಳು ಪ್ರತಿ ಮನೆ-ಮನಗಳಿಗೆ ತಲುಪಬೇಕಿದೆ. ವಿದ್ಯಾವಂತ ಸಮುದಾಯ ಮೌಢ್ಯತೆಯಿಂದ ದೂರ ಉಳಿದು ವೈಜ್ಞಾನಿಕ ಸಂದೇಶ ಸಾರಿದ ಬುದ್ಧ ಹಾಗೂ ಅಂಬೇಡ್ಕರ್ ವಿಚಾರ- ಆದರ್ಶವನ್ನು ಅಳವಡಿಸಿಕೊಂಡು ಮುನ್ನಡೆಯಬೇಕು ಎಂದರು.ಬುದ್ಧಗುರು ಭೋದಿಸಿದ ಪಂಚಶೀಲ ಮತ್ತು ಅಷ್ಟಾಂಗ ಮಾರ್ಗಗಳಿಂದ ಎಲ್ಲಾ ನೆಮ್ಮದಿ ಲಭ್ಯವಾಗುತ್ತದೆ. ದುಡಿಯದೆ ದೇವರಿಂದ ಬೇಡಿಕೊಂಡೆ ಫಲ ಲಭಿಸದು. ಆರ್ಥಿಕ ಬೆಳೆವಣಿಗೆ ಸಾಧ್ಯವಾಗದು. ಬುದ್ಧ ಮತ್ತು ಅಂಬೇಡ್ಕರ್ ಅಭಿಮಾನಿ, ಅನುಯಾಯಿಗಳಾಗಿ ಅವರಂತೆ ಬದುಕಲು, ಸಾಧಿಸಲು ಪ್ರಯತ್ನಿಸಿ, ಆಗ ಪ್ರತಿಫಲ ದೊರೆಯುತ್ತದೆ ಎಂದು ಕಿವಿಮಾತು ಹೇಳಿದರು.ಬಿಎಸ್ಪಿ ರಾಜ್ಯ ಸಂಯೋಜಕ ಎಂ. ಕೃಷ್ಣಮೂರ್ತಿ, ಬುದ್ಧನನ್ನು ಒಪ್ಪಿಕೊಳ್ಳುವಂತಹ ಮನೋಭಾವ ಈ ರಾಜ್ಯದಲ್ಲಿ ಪ್ರಾರಂಭವಾಗಿದೆ. ಇದು ಹೆಮ್ಮೆಪಡುವಂತಹ ವಿಷಯ. ಬುದ್ಧ ಪೂರ್ಣಿಮೆ ಕಾರ್ಯಕ್ರಮವನ್ನು ಇಡೀ ದೇಶಾದ್ಯಂತ ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತಿದೆ ಎಂದರು.ಡಾ.ಬಿ.ಆರ್.ಅಂಬೇಡ್ಕರ್ ತಮ್ಮ ಭಾಷಣದಲ್ಲಿ ಹಿಂದುವಾಗಿ ಹುಟ್ಟಿ ಹಿಂದುವಾಗಿ ಸಾಯಲಾರೆನು ಎಂದು ಹೇಳಿಕೆಯನ್ನು ನೀಡುವುದರ ಮೂಲಕ ಹಿಂದೂ ಧರ್ಮದಲ್ಲಿ ಇದ್ದ ಅಮಾನವೀಯ ನಡವಳಿಕೆ ಹಾಗೂ ಹಲವು ದೋಷಗಳಿಂದಾಗಿ ಬೇಸರಗೊಂಡು ಭಾರತದ ಮೂಲ ಧರ್ಮವಾದ ಬೌದ್ಧ ಧರ್ಮವನ್ನು ಪಾಲನೆ ಮಾಡಿ ಈ ಧರ್ಮಕ್ಕೆ ಮತ್ತಷ್ಟು ಶಕ್ತಿಯನ್ನು ತಂದುಕೊಟ್ಟರು ಎಂದು ಸ್ಮರಿಸಿದರು.ಕರ್ನಾಟಕ ಉಚ್ಚ ನ್ಯಾಯಾಲಯದ ವಕೀಲ ಎಂ.ಬಿ.ಹರಿಪ್ರಸಾದ್ ಮಾತನಾಡಿ, ಬುದ್ಧ ಎಂದರೆ ಜ್ಞಾನದ ಪ್ರತೀಕ. ಅಂಬೇಡ್ಕರ್ ಎಂದರೆ ಸಾಮರ್ಥ್ಯ ಸ್ಪೂರ್ತಿ, ಜ್ಞಾನ ಮತ್ತು ಸಾಧನೆಗೆ ರಹದ್ದಾರಿ. ಮುಂದಿನ ದಿನಗಲ್ಲಿ ಬುದ್ದರ ಧಮ್ಮ ಸಂದೇಶವನ್ನು ಮನೆ ಮನೆಗಳಿಗೆ, ಊರುಕೇರಿಗಳಿಗೆ ತಲುಪಿಸುವ ಕಾರ್ಯ ಮಾಡುತ್ತೇವೆ ಎಂದು ತಿಳಿಸಿದರು.ವೇದಿಕೆಯಲ್ಲಿ ಕರ್ನಾಟಕ ಬೌದ್ಧ ಸಮಾಜದ ರಾಜ್ಯಾಧ್ಯಕ್ಷ ಹ.ರಾ.ಮಹೇಶ್, ಎವಿಎಸೆಸ್ ಸಂಸ್ಥೆ ರಾಜ್ಯಾಧ್ಯಕ್ಷ ತುಂಬಲ ರಾಮಣ್ಣ, ಪಂಚಾಯತ್ ರಾಜ್ ಇಲಾಖೆ ನಿವೃತ್ತ ಅಧೀಕ್ಷಕ ಅಭಯಂತರ ಚಂದ್ರಹಾಸ್, ಜಿಲ್ಲಾ ಆಯುಷ್ ಅಧಿಕಾರಿ ಡಾ.ಬಿ.ಎಸ್.ಸೀತಾಲಕ್ಷ್ಮಿ. ವಿಶ್ವಜ್ಞಾನಿ ನೌಕರರ ಅಭಿವೃದ್ಧಿ ಸಹಕಾರ ಸಂಘದ ಅಧ್ಯಕ್ಷ ನಂಜುಂಡಸ್ವಾಮಿ, ಆಟೋ ಗುರುಶಂಕರ್ ಚಂದಗಾಲು, ಆಟೋ ಜಯಶಂಕರ್ ಹೊಳಲು, ರಾಜೇಶ್, ಮುರುಗನ್, ಕುಮಾರ್, ವಜ್ರಮುನಿ ಇನ್ನಿತರರು ಉಪಸ್ಥಿತರಿದ್ದರು.