ಶರಣರ ವಚನಗಳಲ್ಲಿರುವ ತತ್ವ ಅರಿತು ಜೀವನ ಮಾಡಿ

| Published : Sep 05 2024, 02:15 AM IST

ಸಾರಾಂಶ

೧೨ನೇ ಶತಮಾನದ ಬಸವಾದಿ ಶರಣರು ತಮ್ಮ ವಚನಗಳ ಮೂಲಕ ನಾಡಿಗೆ ಸರಳ ಬದುಕು ನಡೆಸುವುದು, ಪರೋಪಕಾರ, ಒಳ್ಳೆಯ ಕಾರ್ಯ ಮಾಡುವ ಕುರಿತು ಸರಳ ವಾಕ್ಯಗಳ ಮೂಲಕ ನಮಗೆ ನೀಡಿದ್ದಾರೆ. ಬಸವಾದಿ ಶರಣರ ವಚನಗಳಲ್ಲಿರುವ ತತ್ವಗಳನ್ನು ಅರಿತುಕೊಂಡು ಜೀವನವನ್ನು ಮಾಡಿದರೇ ಜೀವನ ಪಾವನವಾಗುತ್ತದೆ ಎಂದು ಮುಗಳಖೋಡ-ಜಿಡಗಾಮಠದ ಷಡಕ್ಷರಿ ಶಿವಯೋಗಿ ಡಾ.ಮುರಘರಾಜೇಂದ್ರ ಸ್ವಾಮೀಜಿ ನುಡಿದರು.

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

೧೨ನೇ ಶತಮಾನದ ಬಸವಾದಿ ಶರಣರು ತಮ್ಮ ವಚನಗಳ ಮೂಲಕ ನಾಡಿಗೆ ಸರಳ ಬದುಕು ನಡೆಸುವುದು, ಪರೋಪಕಾರ, ಒಳ್ಳೆಯ ಕಾರ್ಯ ಮಾಡುವ ಕುರಿತು ಸರಳ ವಾಕ್ಯಗಳ ಮೂಲಕ ನಮಗೆ ನೀಡಿದ್ದಾರೆ. ಬಸವಾದಿ ಶರಣರ ವಚನಗಳಲ್ಲಿರುವ ತತ್ವಗಳನ್ನು ಅರಿತುಕೊಂಡು ಜೀವನವನ್ನು ಮಾಡಿದರೇ ಜೀವನ ಪಾವನವಾಗುತ್ತದೆ ಎಂದು ಮುಗಳಖೋಡ-ಜಿಡಗಾಮಠದ ಷಡಕ್ಷರಿ ಶಿವಯೋಗಿ ಡಾ.ಮುರಘರಾಜೇಂದ್ರ ಸ್ವಾಮೀಜಿ ನುಡಿದರು.

ಪಟ್ಟಣದ ಮಸಬಿನಾಳ ರಸ್ತೆಯಲ್ಲಿರುವ ಗಣೇಶ ನಗರದಲ್ಲಿರುವ ಯಲ್ಲಾಲಿಂಗ ಪುಣ್ಯಾಶ್ರಮದ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸುಕ್ಷೇತ್ರ ಮುಗಳಖೋಡ-ಜಿಡಗಾಮಠದ ಪೂಜ್ಯರ ಪಾದಪೂಜೆ ಮತ್ತು ಬಸವನಬಾಗೇವಾಡಿಯ ಸದ್ಭಕ್ತರಿಂದ ತುಲಾಭಾರ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಭಕ್ತಿ ಪ್ರಾಧ್ಯಾನ್ಯತೆಯನ್ನು ೧೨ನೇ ಶತಮಾನದ ಬಸವಾದಿ ಶರಣರು ತಮ್ಮ ವಚನಗಳ ಮೂಲಕ ತಿಳಿಸಿಕೊಟ್ಟಿದ್ದಾರೆ. ಭಕ್ತಿಯಿಂದ ಗುರು-ಭಗವಂತನನ್ನು ಒಲಿಸಿಕೊಳ್ಳಲು ಸಾಧ್ಯ. ನಾಡಿನಲ್ಲಿ ಗುರುಪರಂಪರೆ, ಬಸವತತ್ವ ಬೆಳಗಬೇಕು. ಬಸವ ತತ್ವದಡಿಯಲ್ಲಿ ಮುಗಳಖೋಡ-ಜಿಡಗಾಮಠದ ಪರಂಪರೆ ನಡೆಯುತ್ತಿದೆ ಎಂದರು.ಒಂದೊಂದು ಸ್ಥಳವನ್ನು ನೆನಪಿಸಿಕೊಂಡರೆ ಅಲ್ಲಿನ ಮಹಾನ್ ಚೇತನರ ಸ್ಮರಣೆಯಾಗುತ್ತದೆ. ಬಸವನಬಾಗೇವಾಡಿಯ ನೆನಪಾದರೆ ಇಡೀ ವಿಶ್ವಕ್ಕೆ ಬೆಳಕಾಗಿರುವ ಬಸವೇಶ್ವರರು ನೆನಪಿಗೆ ಬರುತ್ತಾರೆ. ಇಂತಹ ಮಹಾನ್ ಚೇತನ ಜನಿಸಿದ ಪಾವನ ಸ್ಥಳ ಇದಾಗಿದೆ. ಇಲ್ಲಿನ ಜನರಲ್ಲಿ ಭಕ್ತಿಯಿರುವದರಿಂದಾಗಿ ಇಷ್ಟೊಂದು ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಇದು ಗುರುವಿನ ಮೇಲಿನ ಭಕ್ತಿ ತೋರಿಸುತ್ತದೆ ಎಂದರು.ಇಲ್ಲಿನ ಯಲ್ಲಾಲಿಂಗ ಪುಣ್ಯಾಶ್ರಮಕ್ಕೆ ಶ್ರೀಮಠದ ಸಿದ್ದಾರಾಮೇಶ್ವರರು ಅಡಿಗಲ್ಲು ಹಾಕಿದ್ದರು. ಅವರು ಅಡಿಗಲ್ಲು ಹಾಕಿದ ಸಂದರ್ಭದಲ್ಲಿ ಈ ಪುಣ್ಯಾಶ್ರಮಕ್ಕೆ ಅನೇಕ ಮಹಾನ್ ಶ್ರೀಗಳು ಬಂದು ಹೋಗುತ್ತಾರೆ ಎಂದು ಹೇಳಿದ್ದರು. ಗುರುವಾಣಿಯಂತೆ ಅದು ನಿಜವಾಗಿದೆ ಎಂದ ಅವರು, ಇಲ್ಲಿನ ಪುಣ್ಯಾಶ್ರಮದ ಮಹಾರಾಜರು ಎಲೆಮರೆಯ ಕಾಯಿಯಂತೆ ಗುರು ಸೇವೆ ಮಾಡುವ ಮೂಲಕ ಸಾಮಾಜಿಕ ಸೇವೆ ಮಾಡುತ್ತಿದ್ದಾರೆ. ಇವರ ನಿಸ್ವಾರ್ಥ ಸೇವೆ ನಮಗೆ ಮೆಚ್ಚುಗೆಯಾಗಿದೆ. ವರ್ಷದಲ್ಲಿ ಒಂದು ಸಲವಾದರೂ ಈ ಪುಣ್ಯಾಶ್ರಮಕ್ಕೆ ಭೇಟಿ ನೀಡಿ ಈ ಭಾಗದ ಭಕ್ತರಿಗೆ ದರ್ಶನಾಶೀರ್ವಾದ ಕಲ್ಪಿಸುತ್ತೇವೆ. ನಾಡಿನ ಶ್ರೀಮಠಗಳು ಬೆಳೆಯಲು ಭಕ್ತರ ಸಹಕಾರ ಬಹಳ ಮುಖ್ಯವಾಗಿದೆ. ಉತ್ತಮ ಮಳೆಯಾಗಿ ಉತ್ತಮ ಬೆಳೆ ಬರುವಂತಾಗಿ ರೈತರ ಬೆಳೆಗೆ ಬೆಲೆ ಸಿಗುವಂತಾಗಲಿ. ರೈತರ ಬಾಳು ಬಂಗಾರವಾಗಲೆಂದು ಶುಭ ಹಾರೈಸಿದರು.ಈ ಸಂದರ್ಭದಲ್ಲಿ ಸದ್ಭಕ್ತರಿಂದ ಪೂಜ್ಯರಿಗೆ ನಾಣ್ಯಗಳಿಂದ ತುಲಾಭಾರ ನೆರವೇರಿತು. ಯಲ್ಲಾಲಿಂಗ ಪುಣ್ಯಾಶ್ರಮದಿಂದ ಪೂಜ್ಯರ ಪಾದಪೂಜೆ ನೆರವೇರಿತು. ಪೂಜ್ಯರನ್ನು ಬಸವೇಶ್ವರ ಸೇವಾ ಸಮಿತಿಯಿಂದ ಐ.ಸಿ.ಪಟ್ಟಣಶೆಟ್ಟಿ, ಬಸವರಾಜ ಹಾರಿವಾಳ, ಬಸವರಾಜ ಗೊಳಸಂಗಿ, ಎಂ.ಜಿ.ಆದಿಗೊಂಡ, ಸಂಗಮೇಶ ಓಲೇಕಾರ, ಶಂಕರಗೌಡ ಬಿರಾದಾರ, ರಾಜೇಂದ್ರ ಪತ್ತಾರ ಸೇರಿದಂತೆ ಜಂಗಮ ಕ್ಷೇಮಾಭಿವೃದ್ಧಿ ಸಂಘ, ವಿವಿಧ ಜನತೆ ಸತ್ಕರಿಸಿದರು. ಎಚ್.ಬಿ.ಬಾರಿಕಾಯಿ ನಿರೂಪಿಸಿದರು. ಮುಗಳಖೋಡ-ಜಿಡಗಾ ಮಠದ ಸಂಗೀತ ಕಲಾವಿದರರು ಸಂಗೀತ ಸೇವೆ ನೆರವೇರಿಸಿದರು. ಪೂಜ್ಯರ ದರ್ಶನ ಪಡೆಯಲು ಅಪಾರ ಸಂಖ್ಯೆಯ ಸದ್ಭಕ್ತರು ಆಗಮಿಸಿದ್ದರು. ಇದೇ ಸಂದರ್ಭದಲ್ಲಿ ಪೂಜ್ಯರು ಪರಣಕೋಟೆ ಕಾಮಗಾರಿಗೆ ಅಡಿಗಲ್ಲು ನೆರವೇರಿಸಿದರು.