ಸಾರಾಂಶ
ಕವಿತಾಳ ಸಮೀಪದ ಇರಕಲ್ ಶಿವಶಕ್ತಿ ಪೀಠದಲ್ಲಿ ಜಾತ್ರಾ ಮಹೋತ್ಸವದ ಪ್ರಯುಕ್ತ ಉಚಿತ ಸಾಮೂಹಿಕ ವಿವಾಹ ಸಮಾರಂಭ ನಡೆಯಿತು.
ಕನ್ನಡಪ್ರಭ ವಾರ್ತೆ ಕವಿತಾಳ
ಪರಸ್ಪರ ಹೊಂದಾಣಿಕೆಯಿಂದ ಜೀವನ ನಡೆಸುವ ಮೂಲಕ ನೂತನ ದಂಪತಿ ಸಮಾಜಕ್ಕೆ ಮಾದರಿಯಾಗಿ ಬದುಕಬೇಕು ಎಂದು ಮುದಗಲ್ ತಿಮ್ಮಾಪುರ ಕಲ್ಯಾಣಾಶ್ರಮದ ಮಹಾಂತ ಸ್ವಾಮೀಜಿ ಹೇಳಿದರು.ಸಮೀಪದ ಇರಕಲ್ ಶಿವಶಕ್ತಿ ಪೀಠದಲ್ಲಿ ಜಾತ್ರಾ ಮಹೋತ್ಸವದ ಪ್ರಯುಕ್ತ ಆಯೋಜಿಸಿದ್ದ ಉಚಿತ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಮಾತನಾಡಿದ ಅವರು, ವಿವಿಧ ಧಾರ್ಮಿಕ, ಸಾಮಾಜಿಕ ಕೆಲಸಗಳ ಮೂಲಕ ಭಕ್ತರ ಅಶೋತ್ತರಗಳಿಗೆ ಸ್ಪಂದಿಸುವುದು ಮತ್ತು ಸಮಾಜಕ್ಕೆ ಅಗತ್ಯವಾದ ಕೆಲಸಗಳನ್ನ ಕೈಗೊಂಡು ಇರಕಲ್ ಮಠ ಮಾದರಿಯಾಗಿದೆ ಎಂದರು.
ಇರಕಲ್ ಮಠದ ವತಿಯಿಂದ ನೀಡುವ ರೈತರತ್ನ ಪ್ರಶಸ್ತಿ ಪಡೆದ ಸಾವಯವ ಕೃಷಿ ಮಿಷನ್ ಅಧ್ಯಕ್ಷ ಶಿವಮೊಗ್ಗದ ಆನಂದ ಮಾತನಾಡಿ, ಅಧಿಕ ರಸಗೊಬ್ಬರ, ಕ್ರಿಮಿನಾಶಕ ಬಳಸುವ ಮೂಲಕ ಭೂಮಿಗೆ ವಿಷ ಹಾಕಿ ಮನುಷ್ಯರಿಗೆ ವಿಷ ಉಣ್ಣಿಸುತ್ತಿದ್ದೇವೆ. ನಾವು ಸೇವಿಸುವ ಪ್ರತಿಯೊಂದು ಆಹಾರದಲ್ಲೂ ವಿಷದ ಪ್ರಮಾಣ ಹೆಚ್ಚುತ್ತಿದೆ. ಸಾವಯವ ಪದ್ಧತಿ ಅಳವಡಿಸುವ ಮೂಲಕ ನಮ್ಮ ಮುಂದಿನ ಪೀಳಿಗೆಯನ್ನು ವಿಷಯುಕ್ತ ಆಹಾರದಿಂದ ದೂರವಿಡಬೇಕಿದೆ ಎಂದರು.ಸಾಮೂಹಿಕ ವಿವಾಹ ಸಮಾರಂಭದಲ್ಲಿ 7 ಜೋಡಿ ನೂತನ ವಧುವರರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಶ್ರೀಮಠದಿಂದ ಸನ್ಮಾನಿಸಿ ಗೌರವಿಸಲಾಯಿತು.
ಡಾ.ಶಾಂತವೀರ ಸ್ವಾಮಿ, ಜಯ ಬಸವಕುಮಾರಸ್ವಾಮಿ, ಇಮ್ಮಡಿ ಸಿದ್ದರಾಮೇಶ್ವರ ಸ್ವಾಮಿ, ಅನ್ನದಾನ ಭಾರತಿ ಅಪ್ಪಣ್ಣ ಸ್ವಾಮಿ, ಮಹಾಲಿಂಗ ಸ್ವಾಮಿ, ಇಮ್ಮಡಿ ಕೇತೇಶ್ವರ ಸ್ವಾಮಿ, ಬಸವಪ್ರಸಾಧ ಸ್ವಾಮೀಜಿ, ಮಾಜಿ ಶಾಸಕ ಪ್ರತಾಪಗೌಡ ಪಾಟೀಲ, ಅಮರೇಶ ಸ್ವಾಮಿ ಉಪ್ಪಳಮಠ ವಕೀಲ, ವೆಂಕನಗೌಡ ಪಾಟೀಲ ಮತ್ತಿತರರು ವೇದಿಕೆ ಮೇಲೆ ಉಪಸ್ಥಿತರಿದ್ದರು. ಶಿವನಗೌಡ ವಟಗಲ್, ಸಂಗಮೇಶ ಸಾಲ್ಮನಿ ನಿರೂಪಣೆ ಮಾಡಿದರು.