ಸ್ವ ಉದ್ಯೋಗದಿಂದ ಸ್ವಾವಲಂಬಿ ಬದುಕು: ಡಾ. ವೀರೇಂದ್ರ ಹೆಗ್ಗಡೆ

| Published : Aug 28 2024, 12:58 AM IST

ಸ್ವ ಉದ್ಯೋಗದಿಂದ ಸ್ವಾವಲಂಬಿ ಬದುಕು: ಡಾ. ವೀರೇಂದ್ರ ಹೆಗ್ಗಡೆ
Share this Article
  • FB
  • TW
  • Linkdin
  • Email

ಸಾರಾಂಶ

ಸ್ವ-ಉದ್ಯೋಗದಿಂದ ಆರ್ಥಿಕ ಪ್ರಗತಿಯೊಂದಿಗೆ ಸ್ವಾವಲಂಬಿ ಜೀವನ ಸಾಧ್ಯವಾಗುತ್ತದೆ ಎಂದು ಧರ್ಮಸ್ಥಳ ಕ್ಷೇತ್ರ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ. ಧರ್ಮಸ್ಥಳದಲ್ಲಿ ಶ್ರೀಸನ್ನಿಧಿ ಅತಿಥಿಗೃಹದಲ್ಲಿ ಇತ್ತೀಚೆಗೆ, ಗ್ರಾಮಾಭಿವೃದ್ಧಿ ಮತ್ತು ಸ್ವ-ಉದ್ಯೋಗ ತರಬೇತಿ (ರುಡ್‌ಸೆಟ್) ಸಂಸ್ಥೆಗಳ ನಿರ್ದೇಶಕರ ವಾರ್ಷಿಕ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ಸ್ವ-ಉದ್ಯೋಗದಿಂದ ಆರ್ಥಿಕ ಪ್ರಗತಿಯೊಂದಿಗೆ ಸ್ವಾವಲಂಬಿ ಜೀವನ ಸಾಧ್ಯವಾಗುತ್ತದೆ ಎಂದು ಧರ್ಮಸ್ಥಳ ಕ್ಷೇತ್ರ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.

ಧರ್ಮಸ್ಥಳದಲ್ಲಿ ಶ್ರೀಸನ್ನಿಧಿ ಅತಿಥಿಗೃಹದಲ್ಲಿ ಇತ್ತೀಚೆಗೆ, ಗ್ರಾಮಾಭಿವೃದ್ಧಿ ಮತ್ತು ಸ್ವ-ಉದ್ಯೋಗ ತರಬೇತಿ (ರುಡ್‌ಸೆಟ್) ಸಂಸ್ಥೆಗಳ ನಿರ್ದೇಶಕರ ವಾರ್ಷಿಕ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ತರಬೇತಿ ಪಡೆದವರು ಇರುವ ಊರಿನಲ್ಲೆ ಅಲ್ಪ ಬಂಡವಾಳದೊಂದಿಗೆ ಸ್ವ-ಉದ್ಯೋಗ ಪ್ರಾರಂಭಿಸಿದರೆ ಗ್ರಾಮೀಣ ಪ್ರದೇಶವರು ನಗರಪ್ರದೇಶಗಳಿಗೆ ವಲಸೆ ತಡೆಗಟ್ಟಬಹುದು ಎಂದರು.

ಬ್ಯೂಟಿಪಾರ್ಲರ್, ಛಾಯಾಗ್ರಹಣ, ವೀಡಿಯೋಗ್ರಫಿ ಮೊದಲಾದ ಸೇವಾ ಕ್ಷೇತ್ರಗಳಲ್ಲಿ ಆಧುನಿಕ ತಂತ್ರಜ್ಞಾನ ಮತ್ತು ವಿಜ್ಞಾನದ ಬಳಕೆಯಿಂದ ಅನೇಕ ಕ್ಷಿಪ್ರ ಪರಿವರ್ತನೆಗಳಾಗುತ್ತಿದ್ದು, ಬದಲಾದ ವಿದ್ಯಮಾನಕ್ಕೆ ಸ್ವ-ಉದ್ಯೋಗಿಗಳು ಹೊಂದಿಕೊಳ್ಳಬೇಕು ಎಂದು ಹೆಗ್ಗಡೆ ಕಿವಿಮಾತು ಹೇಳಿದರು.

ಕೆನರಾ ಬ್ಯಾಂಕ್ ಪ್ರಧಾನ ಕಾರ್ಯಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಭವೇಂದ್ರ ಕುಮಾರ್ ಶುಭಾಶಂಸನೆ ಮಾಡಿ, ನಿರುದ್ಯೋಗ ಸಮಸ್ಯೆ ನಿವಾರಣೆಯೊಂದಿಗೆ ಸಮಾಜದ ಆರ್ಥಿಕ ಪ್ರಗತಿಗೆ ರುಡ್‌ಸೆಟ್ ಸಂಸ್ಥೆಗಳ ಸೇವೆ, ಕೊಡುಗೆ ಅಮೂಲ್ಯ ಎಂದು ಶ್ಲಾಘಿಸಿದರು.

ಕೆನರಾ ಬ್ಯಾಂಕ್‌ ಮುಖ್ಯ ಮಹಾಪ್ರಬಂಧಕ ಕೆ.ಜೆ. ಶ್ರೀಕಾಂತ್ ಮಾತನಾಡಿ, ಕೇಂದ್ರ ಸರ್ಕಾರವು ಆರ್ಥಿಕ ಪ್ರಗತಿಗೆ ಆದ್ಯತೆ ನೀಡುತ್ತಿದ್ದು ಬ್ಯಾಂಕ್‌ಗಳಲ್ಲಿ ಸಾಲ ಮಂಜೂರಾತಿ ಸರಳಗೊಳಿಸಲಾಗಿದೆ. ಸ್ವಯಂ ಉದ್ಯೋಗ ಮಾಡುವವರು ವ್ಯಕ್ತಿತ್ವ ವಿಕಸನದೊಂದಿಗೆ ಉತ್ತಮ ಕೌಶಲವನ್ನೂ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕೆನರಾ ಬ್ಯಾಂಕ್ ಮಂಗಳೂರು ವೃತ್ತದ ಮಹಾಪ್ರಬಂಧಕ ಸುಧಾಕರ ಕೊಠಾರಿ ಮಾತನಾಡಿದರು.

ರುಡ್‌ಸೆಟ್ ಸಂಸ್ಥೆಗಳ ಕೇಂದ್ರೀಯ ಕಾರ್ಯಾಲಯದ ನಿರ್ವಾಹಕ ನಿರ್ದೇಶಕ ಬಿ.ಪಿ. ವಿಜಯಕುಮಾರ್ ಸ್ವಾಗತಿಸಿದರು. ರುಡ್‌ಸೆಟ್ ಸಂಸ್ಥೆಯ ನಿರ್ದೇಶಕ ಅಜೇಯ ವಂದಿಸಿದರು. ಹಿರಿಯ ಉಪನ್ಯಾಸಕಿ ಅನಸೂಯ ನಿರ್ವಹಿಸಿದರು.

.......................

ಮುಖ್ಯಾಂಶಗಳು• ಪ್ರಸಕ್ತ ವರ್ಷ ೭೮೩ ತರಬೇತಿ ಕಾರ್ಯಕ್ರಮಗಳ ಮೂಲಕ ೨೨,೨೬೪ ಮಂದಿ ನಿರುದ್ಯೋಗಿಗಳಿಗೆ ಸ್ವಯಂ-ಉದ್ಯೋಗ ತರಬೇತಿ ನೀಡಲಾಗಿದೆ. ೧೯೮೨ ರಿಂದ ಈ ವರೆಗೆ ೧೮,೫೯೨ ತರಬೇತಿ ಕಾರ್ಯಕ್ರಮಗಳ ಮೂಲಕ ೫,೬೨,೮೮೦ ನಿರುದ್ಯೋಗಿಗಳಿಗೆ ಸ್ವಯಂ ಉದ್ಯೋಗ ತರಬೇತಿ ನೀಡಲಾಗಿದೆ.• ೨,೯೧೯ ಜಾಗೃತಿ ಶಿಬಿರಗಳ ಮೂಲಕ ಸ್ವಯಂ ಉದ್ಯೋಗದ ಬಗ್ಯೆ ಮಾಹಿತಿ, ಮಾರ್ಗದರ್ಶನ ನೀಡಲಾಗಿದೆ.• ಈ ವರ್ಷ ೧೭,೦೧೧ ಮಂದಿ ಸ್ವ-ಉದ್ಯೋಗ ತರಬೇತಿ ಪಡೆದವರು ಸ್ವಯಂ ಉದ್ಯೋಗ ಪ್ರಾರಂಭಿಸಿದ್ದಾರೆ. ವಿವಿಧ ಬ್ಯಾಂಕ್‌ಗಳು ಇವರಿಗೆ ೪೨.೧೩ ಕೋಟಿ ರೂ. ಸಾಲ ನೀಡಿರುತ್ತವೆ.