ಕೆರೆಗಳಿಗೆ ಜೀವಕಳೆ, ರೈತರ ಮುಖದಲ್ಲಿ ಮಂದಹಾಸ

| Published : Jul 04 2024, 01:12 AM IST / Updated: Jul 04 2024, 01:13 AM IST

ಸಾರಾಂಶ

ಹಳ್ಳಿಗರ ಜಲಮೂಲ ಎಂದೇ ಪರಿಗಣಿಸಲ್ಪಟ್ಟ ಹುಕ್ಕೇರಿ ತಾಲೂಕಿನ ಕೆರೆಗಳಲ್ಲಿ ಈಗ ನೀರು ಸಂಗ್ರಹಗೊಂಡು ಜೀವಕಳೆ ಬಂದಿದೆ. ಇದರೊಂದಿಗೆ ಕೆರೆಗಳ ತಳ ತಣಿದು ಜಲವೈಭವ ಸೃಷ್ಟಿಯಾಗಿದೆ. ಈ ಮೂಲಕ ಕೃಷಿಕರ ಮೊಗದಲ್ಲಿ ಮಂದಹಾಸ ಮೂಡಿದೆ.

ರವಿ ಕಾಂಬಳೆ

ಕನ್ನಡಪ್ರಭ ವಾರ್ತೆ ಹುಕ್ಕೇರಿ

ಹಳ್ಳಿಗರ ಜಲಮೂಲ ಎಂದೇ ಪರಿಗಣಿಸಲ್ಪಟ್ಟ ಹುಕ್ಕೇರಿ ತಾಲೂಕಿನ ಕೆರೆಗಳಲ್ಲಿ ಈಗ ನೀರು ಸಂಗ್ರಹಗೊಂಡು ಜೀವಕಳೆ ಬಂದಿದೆ. ಇದರೊಂದಿಗೆ ಕೆರೆಗಳ ತಳ ತಣಿದು ಜಲವೈಭವ ಸೃಷ್ಟಿಯಾಗಿದೆ. ಈ ಮೂಲಕ ಕೃಷಿಕರ ಮೊಗದಲ್ಲಿ ಮಂದಹಾಸ ಮೂಡಿದೆ.

ಕಳೆದ ವರ್ಷ ಉಂಟಾದ ಭೀಕರ ಬರ ಪರಿಸ್ಥಿತಿಯಿಂದ ಕೆರೆ-ಕುಂಟೆ, ಹಳ್ಳ-ಕೊಳ್ಳಗಳು ಸಂಪೂರ್ಣ ಬತ್ತಿ ಹೋಗಿದ್ದವು. ಇದೀಗ ಸುರಿಯುತ್ತಿರುವ ಮಳೆಯಿಂದ ಕೆರೆಗಳ ಅಕ್ಕಪಕ್ಕ ನೀರಿನ ಸೆಲೆ ಜಿನುಗತೊಡಗಿದೆ. ಅಲ್ಲದೇ ಜಲಚರ-ಜಾನುವಾರು, ಪಶು-ಪಕ್ಷಿಗಳಿಗೆ ಜೀವಸೆಲೆಯಾಗಿವೆ. ಅಷ್ಟೇ ಅಲ್ಲದೆ ಅಪಾರ ಪ್ರಮಾಣದ ಜಲಸಂಪತ್ತು ಮೈದುಂಬಿ ಜಲವೈಭವದ ದೃಶ್ಯಗಳು ಕಣ್ಮನ ಸೆಳೆಯುತ್ತಿವೆ.

ಈ ದಿಸೆಯಲ್ಲಿ ಜಲಮೂಲ ಹೆಚ್ಚಿಸಿ ಇಡೀ ಹುಕ್ಕೇರಿ ತಾಲೂಕನ್ನು ನೀರಾವರಿಗೆ ಒಳಪಡಿಸುವ ಮಹತ್ವಾಕಾಂಕ್ಷೆ ಹೊತ್ತಿರುವ ಸಣ್ಣ ನೀರಾವರಿ ಇಲಾಖೆಯು ಕೆರೆಗಳ ಪುನಶ್ಚೇತನ, ಏತ ನೀರಾವರಿ, ಹೊಸ ಕೆರೆ ನಿರ್ಮಾಣದಂತ ಯೋಜನೆಗಳನ್ನು ರೂಪಿಸಿ, ಯಶಸ್ವಿಯಾಗಿ ಅನುಷ್ಠಾನಗೊಳಿಸುವಲ್ಲಿ ಸಫಲವಾಗಿದೆ.ಕುಸಿಯುತ್ತಿರುವ ಅಂತರ್ಜಲಮಟ್ಟ ಹೆಚ್ಚಳಕ್ಕೆ ಸಣ್ಣ ನೀರಾವರಿ ಇಲಾಖೆಯು 42ಕ್ಕೂ ಹೆಚ್ಚು ಕೆರೆಗಳ ನಿರ್ಮಾಣ, ಏತ ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ತನ್ಮೂಲಕ ಬೇಸಿಗೆ ಮತ್ತು ಬರಗಾಲವನ್ನು ಸಮರ್ಥವಾಗಿ ಎದುರಿಸುವ ದೂರದೃಷ್ಟಿ ಹೊಂದಿದೆ. ಇದರಿಂದ ರೈತರ ವಾರ್ಷಿಕ ಆದಾಯವೂ ಹೆಚ್ಚಳವಾಗುವ ಆಶಾಭಾವ ಮೂಡಿಸಿದೆ.ಹಳೆ ಕೆರೆಗಳ ಪುನರುಜ್ಜೀವನ, ಹೊಸ ಕೆರೆಗಳನ್ನು ನಿರ್ಮಿಸಿ ಕೃಷಿ ಸಂಬಂಧಿತ ಚಟುವಟಿಕೆಗಳಿಗೆ ಉತ್ತೇಜನ ನೀಡಿದ್ದರಿಂದ ಅಕ್ಕಪಕ್ಕದ ಸುಮಾರು ಸಾವಿರಾರು ಹೆಕ್ಟೇರ್ ಜಮೀನಿನ ಪ್ರದೇಶದಲ್ಲಿ ಇದೀಗ ಹಸಿರು ನಳನಳಿಸುತ್ತಿದೆ. ಸಣ್ಣ ನೀರಾವರಿ ಇಲಾಖೆ ಅಧಿಕಾರಿ-ಸಿಬ್ಬಂದಿಗಳು ಮುತುವರ್ಜಿ ವಹಿಸಿದ ಪರಿಣಾಮ ಕೃಷಿಕರ ಜೀವನಾಡಿ ಕೆರೆಗಳಲ್ಲೀಗ ಜಲವೈಭವ ಸೃಷ್ಟಿಯಾಗಿದೆ.ಕರಜಗಾ, ಬುಗಟೆ ಆಲೂರ, ಅಂಕಲಗುಡಕೇತ್ರ, ಹಟ್ಟಿ ಆಲೂರು, ರಕ್ಷಿ, ಯಾದಗೂಡ, ಬೋಳಶ್ಯಾನಟ್ಟಿ, ಕರಗುಪ್ಪಿ, ಕನವಿನಟ್ಟಿ, ಆಲೂರ ಶಿಡ್ಲಹೊಂಡ, ಮಾಂಗನೂರ ಬೆಲ್ಲದ ಬಾಗೇವಾಡಿಯಲ್ಲಿ ಕೆರೆಗಳನ್ನು ನಿರ್ಮಿಸಲಾಗಿದೆ. ಹಿರಣ್ಯಕೇಶಿ ಮತ್ತು ಘಟಪ್ರಭಾ ನದಿಯಿಂದ ಮಸರಗುಪ್ಪಿ, ಹುಕ್ಕೇರಿ (ಪಚ್ಚಾನಕೆರೆ), ವಂಟಮೂರಿ, ಬಸಾಪುರ, ಕರಗುಪ್ಪಿ, ಶಿರಹಟ್ಟಿ ಬಿ.ಕೆ.ದೊಂಡಗಟ್ಟಿ, ಗುಟಗುದ್ದಿ ಕೆರೆಗಳಿಗೆ ನೀರು ತುಂಬಿಸುವ ಏತ ನೀರಾವರಿ ಯೋಜನೆ ಅನುಷ್ಠಾನಗೊಳಿಸಲಾಗಿದೆ.ಇಲಾಖೆ ಮತ್ತು ಗುತ್ತಿಗೆದಾರ ನಡುವೆ ಸರ್ವೋಚ್ಛ ನ್ಯಾಯಾಲಯದಲ್ಲಿ ಇರುವ ವ್ಯಾಜ್ಯವನ್ನು ಇತ್ಯರ್ಥಗೊಳಿಸಿ ಕಮತನೂರ ಕೆರೆ ಪುನರ್ ನಿರ್ಮಾಣ ಮಾಡಲಾಗಿದೆ. ಇನ್ನು ಗುಡಸ, ಹಡಲಗಾ, ಬಾಡವಾಡಿ, ಬೀರನಹೊಳಿಯಲ್ಲಿ ಹೊಸ ಕೆರೆ ನಿರ್ಮಾಣಕ್ಕೆ ಅಂದಾಜು ಪತ್ರಿಕೆ ಸಿದ್ಧಪಡಿಸಲಾಗಿದೆ. ಈ ಮೂಲಕ ಇಲಾಖೆಯು ಮೂಲ ಉದ್ದೇಶ ಸಫಲಗೊಳಿಸಿ ಮಹತ್ತರ ಸಾಧನೆ ಮಾಡಲು ನಿತ್ಯ ನಿರಂತರ ಯತ್ನ ನಡೆಸಿದೆ.ಬಹುನಿರೀಕ್ಷಿತ ₹42 ಕೋಟಿ ವೆಚ್ಚದ 19 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಮುಕ್ತಾಯ ಹಂತದಲ್ಲಿದ್ದು ಡಿಸೆಂಬರ್‌ನಲ್ಲಿ ಕಾರ್ಯಾರಂಭ ಆಗುವ ಎಲ್ಲ ಲಕ್ಷಣಗಳಿವೆ. ಜೊತೆಗೆ ₹94 ಕೋಟಿ ವೆಚ್ಚದ5 ಬ್ಯಾರೆಜ್‌ಗಳಿಗೆ ನೀರು ತುಂಬಿಸುವ ಯೋಜನೆಗೆ ಶೀಘ್ರವೇ ನೀರು ಹಂಚಿಕೆಯಾಗಿ ಅನುಮೋದನೆ ಪತ್ರ ಸಿಗುವ ವಿಶ್ವಾಸ ಹೊಂದಲಾಗಿದೆ.ಈ ಎಲ್ಲ ನೀರಾವರಿ ಯೋಜನೆಗಳ ಯಶಸ್ವಿ ಅನುಷ್ಠಾನದ ಹಿಂದಿನ ರೂವಾರಿ ಕ್ಷೇತ್ರದ ಶಾಸಕರೂ ಆಗಿದ್ದ ಸಚಿವ ದಿ.ಉಮೇಶ ಕತ್ತಿ ಶ್ರಮ ವಹಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಇನ್ನು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಶಾಸಕ ನಿಖಿಲ್ ಕತ್ತಿ, ಮಾಜಿ ಸಂಸದ ರಮೇಶ ಕತ್ತಿ ಪಾತ್ರ ಪ್ರಮುಖವಾಗಿದೆ. ಇವರೆಲ್ಲ ಅವಿರತ ಪರಿಶ್ರಮದ ಫಲವಾಗಿ ಇಂದು ಹುಕ್ಕೇರಿ ತಾಲೂಕಿನಲ್ಲಿ ನೀರಾವರಿ ಕ್ಷೇತ್ರ ಮತ್ತಷ್ಟು ವಿಸ್ತರಣೆಯಾಗಿದೆ.ರೈತರ ಜೀವನದಲ್ಲಿ ಹಾಸು ಹೊಕ್ಕಾಗಿರುವ ಕೆರೆಗಳ ಒತ್ತುವರಿ ತೆರವು, ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಆಯ್ದ ಕೆರೆಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಇದರಿಂದ ನೂರಾರು ಎಕರೆ ಪ್ರದೇಶ ನೀರಾವರಿಯಾಗಲಿದೆ. ರೈತರ ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗಲಿದೆ.

- ಗುರು ಬಸವರಾಜಯ್ಯ, ಇಇ ಸಣ್ಣ ನೀರಾವರಿ ಇಲಾಖೆ.