ಸಾರಾಂಶ
ಗದಗ: ಸ್ವಾಮಿ ವಿವೇಕಾನಂದರ ಬದುಕು ಮತ್ತು ಮಾತುಗಳು ಇಂದಿನ ಯುವಕರಿಗೆ ದಾರಿದೀಪವಾಗಲಿ, ಅವುಗಳನ್ನು ನಿತ್ಯ ನೂತನ ಮಾಡಿಕೊಂಡು ಸಮೃದ್ಧ ಬದುಕು ಕಟ್ಟಿಕೊಳ್ಳುವತ್ತ ಎಲ್ಲರು ಗಮನ ನೀಡಬೇಕು ಎಂದು ಕಾನೂನು,ಪ್ರವಾಸೋದ್ಯಮ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಅವರು ಬುಧವಾರ ಗದಗ ತಾಲೂಕಿನ ಆರ್.ಡಿ.ಪಿ.ಆರ್. ವಿಶ್ವವಿದ್ಯಾಲಯದಲ್ಲಿ ವಿಶ್ವ ಚೇತನ ಸ್ವಾಮಿ ವಿವೇಕಾನಂದರ ಕಂಚಿನ ಪುತ್ಥಳಿ ಅನಾವರಣಗೊಳಿಸಿ ಮಾತನಾಡಿದರು.ಸೆ.11ರಂದೇ ಸ್ವಾಮಿ ವಿವೇಕಾನಂದರು ಚಿಕಾಗೋದಲ್ಲಿ ಭಾಷಣ ಮಾಡಿ ಸಹೋದರ ಮತ್ತು ಸಹೋದರಿಯರೇ ಎಂಬ ಅವರ ಎರಡು ಪದಗಳು ಜಗತ್ತಿನ್ನೇ ಆಕರ್ಷಿಸಿದ್ದವು. ಅದೇ ದಿನದಂದೇ ಗ್ರಾಮೀಣಾಭಿವೃದ್ಧಿ ವಿವಿ ಆವರಣದಲ್ಲಿ ವಿವೇಕಾನಂದರ ಕಂಚಿನ ಪುತ್ಥಳಿ ಅನಾವರಣಗೊಂಡಿರುವುದು ಯೋಗಾಯೋಗವಾಗಿದೆ ಇದು ಎಲ್ಲರ ಸೌಭಾಗ್ಯ ಮತ್ತು ಅಭಿವೃದ್ಧಿಯ ಶುಭ ಚಿಹ್ನೆಯಾಗಿದೆ ಎಂದರು.
ಗದಗ ಮತ್ತು ವಿಜಯಪುರ ರಾಮಕೃಷ್ಣ ಆಶ್ರಮದ ನಿರ್ಭಾಯನಂದ ಶ್ರೀಗಳ ಪ್ರೇರಣೆ ಮತ್ತು ಶಕ್ತಿ ಪಡೆದು ಅಂದಿನ ಕುಲಪತಿ ಪ್ರೋ.ವಿಷ್ಣುಕಾಂತ ಚಟಪಲ್ಲಿ, ಸಹೋದರ ಮಾಜಿ ಶಾಸಕ ಡಿ. ಆರ್.ಪಾಟೀಲ ಅವರ ಸತತ ಪ್ರಯತ್ನದಿಂದ ಪುತ್ಥಳಿ ಸ್ಥಾಪನೆ ಸಾಧ್ಯವಾಗಿದೆ. ಪುತ್ಥಳಿ ನೋಡಿದಾಕ್ಷಣ ವಿವೇಕಾನಂದರು ನೀಡಿರುವ ಸಂದೇಶಗಳು ನೆನಪಾಗುತ್ತವೆ ಎಂದರು.ಗ್ರಾಮೀಣಾಭಿವೃದ್ಧಿ ವಿವಿ ಅಧ್ಯಯನಕ್ಕೆ ಬರುವ ವಿದ್ಯಾರ್ಥಿಗಳಿಗೆ ವಿವೇಕಾನಂದರ ಪುತ್ಥಳಿ ನೋಡಿದಾಕ್ಷಣ ಸದೃಢವಾದ ಬದುಕು ರೂಪಿಸಿಕೊಳ್ಳುವಲ್ಲಿ ಯುವಕರು ಹೊಂದಿರಬೇಕಾದ ಪ್ರೇರಣೆ ನೀಡುವಂತಾ ಸ್ಥಳವಾಗಲಿದೆ. ಗದಗದಲ್ಲಿರುವ ಐತಿಹಾಸಿಕ ಪ್ರಸಿದ್ಧ ಸ್ಥಳವಾದ ವೀರನಾರಾಯಣ ದೇವಸ್ಥಾನ ನೋಡಲು ಬಂದವರು ವಿಶ್ವವಿದ್ಯಾಲಯದ ಆವರಣದಲ್ಲಿರುವ ಸಾಬರಮತಿ ಆಶ್ರಮಕ್ಕೆ ಭೇಟಿ ನೀಡುತ್ತಿದ್ದಾರೆ. ಈಗ ಅದಕ್ಕೆ ಮತ್ತೊಂದು ಸೇರ್ಪಡೆಯಾಗಿ ಸ್ವಾಮಿ ವಿವೇಕಾನಂದರ ಪುತ್ಥಳಿ ಸ್ಥಾಪನೆಯಾಗಿರುವುದು ಗದಗ ಜಿಲ್ಲೆಯ ಹೆಮ್ಮೆ ಹೆಚ್ಚಿಸಿದೆ.
ವಿಪ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ಪಂಚಾಯತ್ ರಾಜ್ ವಿಶ್ವವಿದ್ಯಾಲಯದಲ್ಲಿ ಸ್ವಾಮಿ ವಿವೇಕಾನಂದರ ಕಂಚಿನ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ಹೆಮ್ಮೆಯ ಮತ್ತು ಗರ್ವದ ಸಂಗತಿ ಈ ಮೂಲಕ ಮಕ್ಕಳಿಗೆ ಶಿಕ್ಷಣ ಜತೆಗೆ ಸಂಸ್ಕಾರ ನೀಡಲು ಪ್ರೇರಣೆಯಾಗಿದೆ. ಸ್ವಾಮಿ ವಿವೇಕಾನಂದರ ಮೂರ್ತಿ ಸ್ಪೂರ್ತಿಯಿಂದ ಎಲ್ಲ ವಿದ್ಯಾರ್ಥಿಗಳು ಶ್ರೇಷ್ಠ ವ್ಯಕ್ತಿಗಳಾಗಿ ತಂದೆ ತಾಯಿ ಗುರುಗಳ ಪ್ರೀತಿ ವಿಶ್ವಾಸ ಗಳಿಸಬೇಕು, ಶಿಕ್ಷಣ ವ್ಯವಸ್ಥೆ ಕೇವಲ ಪಾಠ ಪ್ರವಚನಕ್ಕೆ ಸೀಮಿತವಾಗಿದೆ ಬಸವಣ್ಣ,ಗಾಂಧೀಜಿಯಂತ ಮಹನೀಯರ ಜತೆಗೆ ಹೋರಾಟಗಾರರ ಆಶಯ ಮಾರ್ಗದರ್ಶನ ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ ಖರ್ಗೆ ವಿಡಿಯೋ ಸಂದೇಶದ ಮೂಲಕ ಶುಭಾಶಯ ಕೋರಿದರು. ವಿವಿ ಪ್ರಭಾರ ಕುಲಪತಿ ಸುರೇಶ ನಾಡಗೌಡರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಮಿ ವಿವೇಕಾನಂದ ಪುತ್ಥಳಿ ಸ್ಥಾಪನೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಮಾತನಾಡಿ, ಸ್ವಾಮಿ ವಿವೇಕಾನಂದ ಅವರ ಜೀವಿತಾವಧಿ ಪ್ರತಿ ಬಿಂಬಿಸುವ 39.5ಅಡಿಯ ಕಂಚಿನ ಪುತ್ಥಳಿ ಸ್ಥಾಪನೆಯಾಗಿದೆ ಎಂದರು.
ಗದಗಿನ ರಾಮಕೃಷ್ಣ ವಿವೇಕಾನಂದ ಆಶ್ರಮದ ನಿರ್ಭಯಾನಂದ ಶ್ರೀಗಳು ಮಾತನಾಡಿ, ಸ್ವಾಮಿ ವಿವೇಕಾನಂದರನ್ನು ಒಂದು ಧರ್ಮಕ್ಕೆ ಸೀಮಿತಗೊಳಿಸಿ ಆಧಾರ ರಹಿತ ವಿಚಾರ ಮಾಡುತ್ತಾರೆ. ಅದೇಲ್ಲ ತಪ್ಪು ಎಂದ ಅವರು, ಸ್ವಾಮಿ ವಿವೇಕಾನಂದರ ಬಗ್ಗೆ ಯುವ ಸಮುದಾಯದ, ದೇಶದ ಶಿಕ್ಷಣ ವ್ಯವಸ್ಥೆ ರೂಪಿಸುವವರ ತೆಗೆದುಕೊಳ್ಳಬೇಕು ಕ್ರಮಗಳ ಕುರಿತು ಸುಧೀರ್ಘವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ವಿಪ ಸದಸ್ಯ ಎಸ್.ವಿ. ಸಂಕನೂರ, ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ವಿವಿ ಮೊದಲ ಕುಲಪತಿ ಪ್ರೋ. ಬಿ. ತಿಮ್ಮೇಗೌಡ, ವಿಷ್ಣುಕಾಂತ ಚಟಪಲ್ಲಿ ಸೇರಿದಂತೆ ವಿವಿಯ ಅನೇಕ ಹಿರಿಯ ಅಧಿಕಾರಿಗಳು, ನಾಗಾವಿ, ಅಸುಂಡಿ ಗ್ರಾಪಂ ಅಧ್ಯಕ್ಷರು ಹಾಜರಿದ್ದರು. ಪ್ರಕಾಶ ಮಾಚೇನಹಳ್ಳಿ ನಿರೂಪಿಸಿದರು, ಪ್ರಶಾಂತ ಜೆ.ಸಿ. ವಂದಿಸಿದರು.