ಬಮೂಲ್‌ನ ಡಾ. ಅಜಯ್ ಕುಮಾರ್, ಹೈನು ರಾಸುಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಬರಡುತನ, ಫಲವಂತಿಕೆ ಕೊರತೆ ಹಾಗೂ ಕೆಚ್ಚಲು ಬಾವು ಮುಂತಾದ ಸಮಸ್ಯೆಗಳಿಗೆ ತಪಾಸಣೆ ನಡೆಸಿ, ಸೂಕ್ತ ಚುಚ್ಚುಮದ್ದು ಮತ್ತು ಶಿಫಾರಿತ ಪೋಷಕಾಂಶಗಳ ಮಿಶ್ರಣವನ್ನು ವಿತರಿಸಿದರು.
ಮಾಗಡಿ: ಪಶುಗಳ ಕಾಳಜಿ- ರೈತನ ಏಳಿಗೆ ಎಂಬ ಧ್ಯೇಯದೊಂದಿಗೆ ತಾಲೂಕಿನ ಕರಲಮಂಗಲ ಗ್ರಾಮದಲ್ಲಿ ಐ.ಸಿ.ಎ.ಆರ್.-ಕೃಷಿ ವಿಜ್ಞಾನ ಕೇಂದ್ರ, ಕ್ರೆಡಿಟ್ ಆಕ್ಸೆಸ್ ಇಂಡಿಯಾ ಫೌಂಡೇಷನ್ ಬೆಂಗಳೂರು, ಪಶು ಸಂಗೋಪನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಹಾಗೂ ಬಮೂಲ್ ವಲಯದ ಸಹಯೋಗದಲ್ಲಿ ಉಚಿತ ಜಾನುವಾರು ಆರೋಗ್ಯ ತಪಾಸಣಾ ಶಿಬಿರ ನಡೆಯಿತು.
ಪಶು ಸಂಗೋಪನೆ ಹಾಗೂ ಪಶು ವೈದ್ಯಕೀಯ ಸೇವಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ನಾಗಭೂಷಣ್ ಮಾತನಾಡಿ, ರೈತರು ಹೈನುಗಾರಿಕೆಯಲ್ಲಿ ಲಾಭ ಗಳಿಸಲು ಪಶುಗಳ ಆರೋಗ್ಯ ನಿರ್ವಹಣೆ, ಕೃತಕ ಗರ್ಭಧಾರಣೆ ಹಾಗೂ ಸಮರ್ಪಕ ಪಾಲನೆ-ಪೋಷಣೆ ಅತ್ಯಗತ್ಯ ಎಂದು ತಿಳಿಸಿ, ಸ್ಥಳದಲ್ಲೇ ಜಾನುವಾರುಗಳ ತಪಾಸಣೆ ನಡೆಸಿದರು.ಬಮೂಲ್‌ನ ಡಾ. ಅಜಯ್ ಕುಮಾರ್, ಹೈನು ರಾಸುಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಬರಡುತನ, ಫಲವಂತಿಕೆ ಕೊರತೆ ಹಾಗೂ ಕೆಚ್ಚಲು ಬಾವು ಮುಂತಾದ ಸಮಸ್ಯೆಗಳಿಗೆ ತಪಾಸಣೆ ನಡೆಸಿ, ಸೂಕ್ತ ಚುಚ್ಚುಮದ್ದು ಮತ್ತು ಶಿಫಾರಿತ ಪೋಷಕಾಂಶಗಳ ಮಿಶ್ರಣವನ್ನು ವಿತರಿಸಿದರು.
ಕೃಷಿ ವಿಜ್ಞಾನ ಕೇಂದ್ರದ ವಿಸ್ತರಣಾ ವಿಜ್ಞಾನಿ ಡಾ. ಎಸ್. ಸೌಜನ್ಯ ಮಾತನಾಡಿ, ಕೃಷಿ ವಿಜ್ಞಾನ ಕೇಂದ್ರದಲ್ಲಿ ಸುಧಾರಿತ ಮೇವಿನ ತಳಿಗಳ ಬಿತ್ತನೆ ಬೀಜ ಹಾಗೂ ಕಡ್ಡಿಗಳು ಲಭ್ಯವಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಜಾನುವಾರುಗಳಿಗೆ ಕಾಲಕಾಲಕ್ಕೆ ಸೂಕ್ತ ಲಸಿಕೆಗಳನ್ನು ಹಾಕಿಸಬೇಕು ಎಂದು ಕರೆ ನೀಡಿದರು.ಪಶುವೈದ್ಯಾಧಿಕಾರಿ ಡಾ. ಹರೀಶ್ ರಾಸುಗಳಿಗೆ ಅಗತ್ಯ ಲಸಿಕೆ ನೀಡಿದರು. ಕ್ರೆಡಿಟ್ ಆಕ್ಸೆಸ್ ಇಂಡಿಯಾ ಫೌಂಡೇಷನ್‌ನ ಶಿವರಾಮು ಸಂಸ್ಥೆಯ ಸಾಮಾಜಿಕ ಕಾಳಜಿ ಹಾಗೂ ಶಿಬಿರಗಳ ಮಹತ್ವದ ಕುರಿತು ಮಾಹಿತಿ ಹಂಚಿಕೊಂಡರು.
ಶಿಬಿರದಲ್ಲಿ 50ಕ್ಕೂ ಹೆಚ್ಚು ಹಸುಗಳು, ಕುರಿ ಹಾಗೂ ಮೇಕೆಗಳನ್ನು ತಪಾಸಣೆ ನಡೆಸಿ ಉಚಿತವಾಗಿ ಚಿಕಿತ್ಸೆ ಮತ್ತು ಲಸಿಕೆ ನೀಡಲಾಯಿತು.ಕಾರ್ಯಕ್ರಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ಹನುಮಂತಯ್ಯ, ಇಲಾಖೆಯ ಸಿಬ್ಬಂದಿ ಹಾಗೂ ಗ್ರಾಮದ ನೂರಾರು ರೈತರು ಮತ್ತು ರೈತ ಮಹಿಳೆಯರು ಪಾಲ್ಗೊಂಡಿದ್ದರು.