ಹಗರಿಬೊಮ್ಮನಹಳ್ಳಿ: ಭೋಗ- ವೈಭೋಗ ಕೈಬಿಟ್ಟು ಪ್ರಾಕೃತಿಕ ಸಂಪನ್ಮೂಲಗಳನ್ನು ವಿವೇಚನಾಸಹಿತವಾಗಿ ಹಿತ ಮಿತವಾಗಿ ಬಳಸಬೇಕು. ಸರಳವಾಗಿ ಬದುಕುವ ಮೂಲಕ ಪರಿಸರ ಸಂರಕ್ಷಣೆ ಮತ್ತು ಅಭಿವೃದ್ಧಿಗೆ ಒತ್ತು ನೀಡಬೇಕು ಎಂದು ಗುಡೇಕೋಟೆ ಪೊಲೀಸ್ ಠಾಣೆಯ ಮುಖ್ಯ ಪೇದೆ, ಬರಹಗಾರ ಸ್ವರೂಪ್ ಕೊಟ್ಟೂರು ಪ್ರತಿಪಾದಿಸಿದರು.
ತಾಲೂಕಿನ ಮಾಲವಿ ಗ್ರಾಮದ ತೋಟಗಾರಿಕೆ ತರಬೇತಿ ಕೇಂದ್ರದಲ್ಲಿ ಕೃಷಿ ತಂತ್ರಜ್ಞಾನ ಸಂಸ್ಥೆ ಹಾಗೂ ಜಿಲ್ಲಾ ಕೃಷಿ ಇಲಾಖೆ ಜಂಟಿಯಾಗಿ ಆಯೋಜಿಸಿದ್ದ ಪರಿಸರ ದಿನಾಚರಣೆಯಲ್ಲಿ ವಿಶೇಷ ಆಹ್ವಾನಿತರಾಗಿ ಪಾಲ್ಗೊಂಡು ಮಾತನಾಡಿದರು.ಭೂಮಿ ಮಾನವರಿಗಾಗಿ ಅಲ್ಲ, ಪ್ರತಿ ಜೀವರಾಶಿಗಳಿಗೂ ಇಲ್ಲಿ ಬದುಕುವ ಹಕ್ಕಿದೆ. ನಮ್ಮ ಐಷಾರಾಮಿ ಜೀವನದ ಪರಿಣಾಮವಾಗಿ ಪ್ರಕೃತಿ ವಿನಾಷದಂಚಿನತ್ತ ಸಾಗುತ್ತಿದೆ. ಜೀವ ವಿಕಾಸಕ್ಕೆ ಪೂರಕವಾಗಿರುವ ಭೂಮಿಯಲ್ಲಿ ಬಹುತೇಕ ಜೀವಿಗಳ ಆಸ್ತಿತ್ವಕ್ಕೆ ಸಂಚಕಾರ ಬಂದಿದೆ. ಅತಿವೃಷ್ಠಿ, ಅನಾವೃಷ್ಠಿ, ಸುನಾಮಿ, ಭೂಕಂಪ, ಭೂಕುಸಿತ, ತಾಪಮಾನ ಏರಿಕೆ ಹಾಗೂ ಹವಾಮಾನ ವೈಪರೀತ್ಯ ನಮ್ಮ ದುರಾಸೆಯ ಫಲವಾಗಿದೆ ಎಂದು ಖೇದ ವ್ಯಕ್ತಪಡಿಸಿದರು.
ಪರಿಸರ ತಜ್ಞರು ನೀಡುತ್ತಿರುವ ಎಚ್ಚರಿಕೆಯನ್ನು ನಿರ್ಲಕ್ಷಿಸಿದರೆ ಭವಿಷ್ಯದಲ್ಲಿ ಭಾರೀ ಬೆಲೆ ತೆರಬೇಕಾಗುವ ಜೊತೆಗೆ ಮುಂದಿನ ಪೀಳಿಗೆ ನಮ್ಮನ್ನು ಕ್ಷಮಿಸುವುದಿಲ್ಲ. ಸ್ವಚ್ಛ ಪರಿಸರ ಸಂಕಲ್ಪದೊಂದಿಗೆ ಎಲ್ಲರೂ ಮುನ್ನಡೆಯಬೇಕು ಎಂದು ಆಶಿಸಿದರು.ಸಮಾರಂಭದಲ್ಲಿ ಕೃಷಿ ತಂತ್ರಜ್ಞಾನ ಸಂಸ್ಥೆಯ ಪದವೀಧರರು ಪ್ಲಾಸ್ಟಿಕ್ ಬಳಕೆ ತಗ್ಗಿಸುವ ನಿಟ್ಟಿನಲ್ಲಿ ಸ್ಟೀಲ್ ತಟ್ಟೆ ಮತ್ತು ಲೋಟಗಳನ್ನು ಬಳಸುವ ಕುರಿತು ಜಾಗೃತಿ ಮೂಡಿಸಿದರು.
ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಡಿ.ಟಿ. ಮಂಜುನಾಥ್, ಉಪ ಕೃಷಿ ನಿರ್ದೇಶಕ ವಾಮದೇವ ಕೊಳ್ಳಿ, ಹಡಗಲಿಯ ಕೃಷಿ ವಿಜ್ಞಾನಿಗಳಾದ ಡಾ.ಸಿ.ಎಂ. ಕಾಳಿಬಾವಿ, ಮಂಜುನಾಥ್ ಬಾನಳ್ಳಿ, ಸುನಿತಾ, ತಾಲೂಕು ಸಹಾಯಕ ಕೃಷಿ ನಿರ್ದೇಶಕ ಎಸ್.ಬಿ.ಪಾಟೀಲ್, ಮನೋಹರಗೌಡ, ತೇಜವರ್ಧನ್, ಮಹಮದ್ ಅಶ್ರಫ್, ಕೆ.ಟಿ.ಮಂಜುನಾಥ್, ಕೃಷಿ ತಂತ್ರಜ್ಞಾನ ಸಂಸ್ಥೆಯ ಶಿವಮೂರ್ತಿ, ಶ್ರಣಕುಮಾರ್, ಚೇತನ್ ಗುಂಡಿ, ನಾಗರಾಜ ಸಕ್ರಗೌಡ್ ಮತ್ತಿತರರು ಉಪಸ್ಥಿತರಿದ್ದರು.