ಲಿವಿಂಗ್ ಟುಗೆದರ್ ಎಂಬ ಸಂಸ್ಕೃತಿ ಮೂಲಕ ನಮ್ಮ ಪರಂಪರೆ ಹದೆಗೆಟ್ಟು ಹೋಗುತ್ತಿದೆ ಎಂದು ನಿವೃತ್ತ ಪ್ರಾಚಾರ್ಯ ಬಿ.ಸಿ. ಐಗೋಳ ಕಳವಳ ವ್ಯಕ್ತಪಡಿಸಿದ್ದರು. ಕೊಪ್ಪಳ ಜಿಲ್ಲೆಯ ಚರಿತ್ರೆ, ಸಾಹಿತ್ಯ, ಸಂಸ್ಕೃತಿ, ಪರಂಪರೆಯ ಕುರುತಾದ ಮೊದಲ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕಾರಟಗಿ: ಲಿವಿಂಗ್ ಟುಗೆದರ್ ಎಂಬ ಸಂಸ್ಕೃತಿ ಮೂಲಕ ನಮ್ಮ ಪರಂಪರೆ ಹದೆಗೆಟ್ಟು ಹೋಗುತ್ತಿದೆ ಎಂದು ನಿವೃತ್ತ ಪ್ರಾಚಾರ್ಯ ಬಿ.ಸಿ. ಐಗೋಳ ಕಳವಳ ವ್ಯಕ್ತಪಡಿಸಿದ್ದರು.

ಕೊಪ್ಪಳ ಜಿಲ್ಲೆಯ ಚರಿತ್ರೆ, ಸಾಹಿತ್ಯ, ಸಂಸ್ಕೃತಿ, ಪರಂಪರೆಯ ಕುರುತಾದ ಮೊದಲ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಮ್ಮ ಇಂದಿನ ಯುವ ಸಮುದಾಯಕ್ಕೆ ಸಾಹಿತ್ಯ ಓದುವ ಹವ್ಯಾಸ ಅತಿ ಕಡಿಮೆಯಾಗಿದೆ. ಪುಸ್ತಕ ಕೊಂಡು ಓದುವ ಯುವ ಸಮೂಹದಲ್ಲಿ ಕೊರತೆಯಿದೆ. ತಾಯಿ ಊಟ ಮಾಡಿಸಲು ಚಿಕ್ಕಮಕ್ಕಳು ಮೊಬೈಲ್ ಕೇಳುವ ಪರಿಸ್ಥಿತಿಯಿದೆ. ಪ್ರತಿನಿತ್ಯ ಪತ್ರಿಕೆಗಳಲ್ಲಿ ಓದುತ್ತಿದ್ದೇವೆ. ನಮ್ಮ ಸಾಹಿತ್ಯ ಗೋಷ್ಠಿಗಳಲ್ಲಿ ಪ್ರಚಲಿತ ಸಮಸ್ಯೆ ಪರಿಹರಿಸಲು ಮಾರ್ಗೋಪಾಯ ಕಂಡುಕೊಂಡರೆ ಸುಂದರ ಭವಿಷ್ಯ ರೂಪಿಸಿಕೊಳ್ಳಬಹುದು ಎಂದರು.

ಇತಿಹಾಸ ಸಂಶೋಧಕ ಡಾ. ರವಿ ಚೌವ್ಹಾಣ್ ಮಾತನಾಡಿ, ಅಂದಿನ ಸಾಹಿತ್ಯದಲ್ಲಿ ಕೊಪಣ ಪ್ರದೇಶ ವಿಶೇಷವಾಗಿತ್ತು. ನಮ್ಮ ರಾಜರ ಬಿರುದುಗಳು, ಅವರ ದಾನ ಪರಂಪರೆ, ಸಂಸ್ಕೃತಿ, ಸಾಹಿತ್ಯ ಕಲೆಯ ಬಗ್ಗೆ ಶಾಸನಗಳು ತಿಳಿಸಿಕೊಡುತ್ತವೆ. ಇಟಗಿ ಮಹಾದೇವ ದೇವಾಲಯವನ್ನು ದೇವಾಲಯಗಳ ದೇವಾಲಯ ಎಂದು ಕರೆಯಲಾಗಿದೆ. ಇತಿಹಾಸ ಎಂದರೆ ಗತಕಾಲದ ಘಟನೆಗಳ ದಾಖಲೆಯಲ್ಲ, ಒಂದು ಪ್ರದೇಶದ ಅಸ್ಮಿತೆ ಹಾಗೂ ನಾಗರಿಕತೆ ಪರಿಚಯಿಸುವುದು. ರಾಷ್ಟ್ರಕೂಟರ ಕಾಲದಲ್ಲಿ ಕೊಪಣ ನಗರ ಎಂದು ಉಲ್ಲೇಖವಿದೆ ಎಂದರು.

ಲೇಖಕ ಜಾಜಿ ದೇವೇಂದ್ರಪ್ಪ ಮಾತನಾಡಿ, ಬರವಣಿಗೆ ಪ್ರಶಸ್ತಿಗಾಗಿ ಬರೆಯಬಾರದು. ನನ್ನ ಬರವಣಿಗೆ ಜಲ, ನೆಲ, ಭಾಷೆಗಾಗಿ ಅದರಲ್ಲೂ ನನ್ನ ಜನರಿಗೆ ಬರೆಯುತ್ತೇನೆ ಎನ್ನುವ ಜ್ಞಾನವಿರಬೇಕು. ಬರವಣಿಗೆಯಲ್ಲಿ ಈಗೀಗ ಒಂದೊಂದು ಪಕ್ಷದ ಪರವಾದ ಲೇಖಕರಾಗಿರುವುದು ದುರದೃಷ್ಟಕರ. ಬಲ್ಡೋಟ ಕಾರ್ಖಾನೆ ವಿರುದ್ಧ ಕೇವಲ ಬೆರಳೆಣಿಕೆ ಕವಿಗಳು ಹಾಗೂ ಸಾಹಿತಿಗಳು ಮಾತ್ರ ನಿರಂತರ ಹೋರಾಟ ಮಾಡಿದ್ದಾರೆ. ಉಳಿದವರ ಕಥೆ ಏನು? ಅನೇಕ ಬರಹಗಾರರು ಹಿಂದೆ ಸರಿದಿದ್ದಾರೆ ಎಂದರೆ ಅವರಲ್ಲಿ ಭಯ ಇದೆ ಎಂದರ್ಥ. ಸಾಹಿತ್ಯದಲ್ಲಿ ಕವಿಗಳ ಹೆಸರು ಉಲ್ಲೇಖದಲ್ಲಿಯೂ ಪ್ರಾದೇಶಿಕ ಅಸಮಾನತೆಯಿದೆ ಎಂದರು.

ಪ್ರಾಚಾರ್ಯ ಸಿದ್ದಲಿಂಗಪ್ಪ ಕೊಟ್ನೇಕಲ್ ಮಾತನಾಡಿ, ಕೊಪ್ಪಳ ಹಾಗೂ ಕನಕಗಿರಿ ಬೌದ್ಧ ಧಾರ್ಮಿಕ ಕೇಂದ್ರಗಳಾಗಿವೆ. ಶ್ರವಣಬೆಳಗೋಳಕ್ಕಿಂತ ಮುಂಚೆ ಇಲ್ಲಿ ಜೈನ ಧರ್ಮದ ಪರಂಪರೆಯಿತ್ತು. ನಮ್ಮ ಜಿಲ್ಲೆಯ ಕುದುರೆಮೋತಿಯ ಅಲೆಮಾರಿ ಸಮುದಾಯ ಹಾಗೂ ಬಹದ್ದೂರಬಂಡಿಯ ಬಂಜಾರ್ ಸಮುದಾಯ ಆಚರಣೆಗಳು ವಿಶಿಷ್ಟವಾಗಿವೆ ಎಂದು ಹೇಳಿದರು.

ಬಂಜಾರ ಸಮುದಾಯದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಕಾರಣವಾಗಿವೆ. ಬಹದ್ದೂರ ಬಂಡಿಯಲ್ಲಿ ಅಲೆ ಮಾರಿ ಸಮುದಾಯ ತಮ್ಮ ವ್ಯವಹಾರ ಹಾಗೂ ವ್ಯವಹಾರ ವ್ಯಾಜ್ಯಗಳ ಬಗ್ಗೆ ಸಭೆ ನಡೆಸುವ ಪದ್ಧತಿ ಇಂದಿಗೂ ಇದೆ. ಆಧುನಿಕ ಭರಾಟೆಯಲ್ಲಿ ನಮ್ಮ ಪರಂಪರೆ ಮಾರೆಯಾಗಬಾರದು. ಈ ಹಿನ್ನೆಲೆಯಲ್ಲಿ ಇತಿಹಾಸವನ್ನು ಮಕ್ಕಳಿಗೆ ತಿಳಿಸಬೇಕು ಎಂದರು.

ಪಿಡಿಒ ರಾಮು ನಾಯಕ ಆಶಯ ನುಡಿಗಳನ್ನಾಡಿದರು.