ಸಾರಾಂಶ
ರಾಜ್ಯದಲ್ಲಿನ ಅಂಗನವಾಡಿ ಕೇಂದ್ರಗಳನ್ನು ‘ಸರ್ಕಾರಿ ಮಾಂಟೆಸ್ಸರಿ’ ಶಾಲೆಗಳಾಗಿ ಮೇಲ್ದರ್ಜೆಗೇರಿಸಲು ತೀರ್ಮಾನಿಸಿದ್ದು, ಮೊದಲ ಹಂತದಲ್ಲಿ 9 ಸಾವಿರ ಅಂಗನವಾಡಿ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಿ ಎಲ್‌ಕೆಜಿ ಹಾಗೂ ಯುಕೆಜಿ ಬೋಧನೆ ಶುರು ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸೋಮವಾರ ನಡೆದ ಸಭೆಯಲ್ಲಿ ನಿರ್ಧರಿಸಲಾಗಿದೆ.
ಕನ್ನಡಪ್ರಭ ವಾರ್ತೆ, ಬೆಂಗಳೂರು
ರಾಜ್ಯದಲ್ಲಿನ ಅಂಗನವಾಡಿ ಕೇಂದ್ರಗಳನ್ನು ‘ಸರ್ಕಾರಿ ಮಾಂಟೆಸ್ಸರಿ’ ಶಾಲೆಗಳಾಗಿ ಮೇಲ್ದರ್ಜೆಗೇರಿಸಲು ತೀರ್ಮಾನಿಸಿದ್ದು, ಮೊದಲ ಹಂತದಲ್ಲಿ 9 ಸಾವಿರ ಅಂಗನವಾಡಿ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಿ ಎಲ್‌ಕೆಜಿ ಹಾಗೂ ಯುಕೆಜಿ ಬೋಧನೆ ಶುರು ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸೋಮವಾರ ನಡೆದ ಸಭೆಯಲ್ಲಿ ನಿರ್ಧರಿಸಲಾಗಿದೆ.ಅಲ್ಲದೆ, ಈಗಾಗಲೇ ಆದೇಶ ಹೊರಡಿಸಿರುವಂತೆ 2,600 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ತೆರೆದರೂ ಯಾವುದೇ ಕಾರಣಕ್ಕೂ ಅಂಗನವಾಡಿ ಕಾರ್ಯಕರ್ತರು ಅಥವಾ ಸಹಾಯಕಿಯರನ್ನು ಕೆಲಸದಿಂದ ತೆಗೆಯಬಾರದು ಎಂದು ತೀರ್ಮಾನಿಸಲಾಗಿದೆ.
ರಾಜ್ಯದಲ್ಲಿ ಖಾಸಗಿ ಶಾಲೆಗಳ ಹಾವಳಿ ಹೆಚ್ಚಾಗಿದ್ದು, ಸರ್ಕಾರಿ ಶಾಲೆಗಳಲ್ಲಿ ಪ್ರವೇಶಾತಿ ಕುಸಿಯುತ್ತಿದೆ. ಹೀಗಾಗಿ ಬಡ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ಒದಗಿಸಲು ಅಂಗನವಾಡಿಗಳನ್ನು ಮಾಂಟೆಸ್ಸರಿ ಶಾಲೆಗಳಾಗಿ ಮೇಲ್ದರ್ಜೆಗೇರಿಸಲು ಮುಖ್ಯಮಂತ್ರಿಗಳು ಒಪ್ಪಿಗೆ ನೀಡಿದ್ದಾರೆ. ಈ ಶಾಲೆಗಳಲ್ಲಿ ಕನ್ನಡ ಮತ್ತು ಇಂಗ್ಲೀಷ್‌ನಲ್ಲಿ ಎಲ್‌ಕೆಜಿ ಹಾಗೂ ಯುಕೆಜಿ ಬೋಧನೆ ನಡೆಯಲಿದೆ.ಅಲ್ಲದೆ, ಈ ಮಕ್ಕಳಿಗೆ ಸರ್ಕಾರದಿಂದಲೇ ಸಮವಸ್ತ್ರ, ಶೂ, ಶಾಲಾ ಬ್ಯಾಗ್ ನೀಡಲಾಗುವುದು. ಬೇರೆ ಶಾಲೆಗೆ ವರ್ಗಾವಣೆಯಾಗುವ ವೇಳೆ ವರ್ಗಾವಣೆ ಪತ್ರ (ಟಿ.ಸಿ.) ನೀಡಲೂ ತೀರ್ಮಾನಿಸಲಾಗಿದ್ದು, ಈ ಬಗ್ಗೆ ಹಣಕಾಸು ಇಲಾಖೆಗೆ ಪ್ರಸ್ತಾವನೆ ಕಳುಹಿಸಲು ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ.
ರಾಜ್ಯದಲ್ಲಿ 2,600 ಕರ್ನಾಟಕ ಪಬ್ಲಿಕ್ ಶಾಲೆ ಶುರು ಮಾಡಲು ಪ್ರಾಥಮಿಕ ಶಿಕ್ಷಣ ಇಲಾಖೆ ಆದೇಶ ಮಾಡಿದೆ. ಇವುಗಳಲ್ಲಿ ಎಲ್‌ಕೆಜಿ, ಯುಕೆಜಿ ಶುರುವಾಗುತ್ತಿರುವುದರಿಂದ ಕೆಲಸ ಕಳೆದುಕೊಳ್ಳುವ ಭೀತಿಗೆ ಗುರಿಯಾಗಿರುವ ಅಂಗನವಾಡಿ ಕಾರ್ಯಕರ್ತರು ಕಳೆದ ಒಂದು ವಾರದಿಂದ ಕೆಪಿಎಸ್ ಶಾಲೆಗಳ ಪ್ರಾರಂಭವನ್ನು ವಿರೋಧಿಸಿ ಧರಣಿ ನಡೆಸಿದ್ದಾರೆ.ಈ ಕುರಿತು ಸೋಮವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಪ್ರಾಥಮಿಕ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು.
ತಜ್ಞರ ಸಮಿತಿ ನೇಮಕಕ್ಕೆ ಸೂಚನೆ:ಮುಖ್ಯಮಂತ್ರಿಗಳೊಂದಿಗಿನ ಸಭೆ ಬಳಿಕ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, 2,600 ಕೆಪಿಎಸ್ ಶಾಲೆ ತೆರೆಯುವುದು ಹಾಗೂ ಕಲ್ಯಾಣ ಕರ್ನಾಟಕ ಭಾಗದಲ್ಲಿ 600 ಪ್ರತ್ಯೇಕ ಕೆಪಿಎಸ್ ಶಾಲೆಗಳನ್ನು ಮಾಡಲು ಆದೇಶ ಆಗಿದೆ. ಇವುಗಳಲ್ಲಿ ಎಲ್‌ಕೆಜಿ, ಯುಕೆಜಿಯಿಂದ ಪಿಯುವರೆಗೆ ಶಿಕ್ಷಣ ದೊರೆಯಲಿದೆ. ಹೀಗಾಗಿ ಅಂಗನವಾಡಿ ಸಹಾಯಕಿಯರು ಕೆಲಸ ಕಳೆದುಕೊಳ್ಳುವ ಭೀತಿಯಿಂದ ಪ್ರತಿಭಟನೆ ನಡೆಸುತ್ತಿದ್ದರು. ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಲಾಗಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳಲು ತಜ್ಞರ ಸಮಿತಿ ನೇಮಕಕ್ಕೆ ಸೂಚಿಸಿದ್ದು, ಅಲ್ಲಿಯವರೆಗೆ ಪ್ರಸ್ತುತ ಆದೇಶವಾಗಿರುವ ಕೆಪಿಎಸ್ ಶಾಲೆಗಳ ಹೊರತಾಗಿ ಯಾವುದೇ ಹೊಸ ಕೆಪಿಎಸ್ ಶಾಲೆಯನ್ನು ಆರಂಭ ಮಾಡಬಾರದು ಎಂದು ಸ್ಪಷ್ಟಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.ಅಂಗನವಾಡಿ ಸಹಾಯಕರನ್ನು ತೆಗೆಯಲ್ಲ:
ಅಂಗನವಾಡಿ ಸಹಾಯಕರನ್ನು ಯಾವುದೇ ಕಾರಣಕ್ಕೂ ಕೆಲಸದಿಂದ ತೆಗೆಯುವುದಿಲ್ಲ. ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಅವರ ಪಾತ್ರ ಬಹಳ ದೊಡ್ಡದು. ಜತೆಗೆ ಪೋಷಣ್ ಅಭಿಯಾನದಡಿ ಮಕ್ಕಳ ಪೌಷ್ಟಿಕ ಆಹಾರ ಒದಗಿಸುವುದರಲ್ಲೂ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಹೀಗಾಗಿ ಅವರನ್ನೇ ಮುಂದುವರೆಸಿ ಪೂರ್ವ ಪ್ರಾಥಮಿಕ ( ಎಲ್‌ಕೆಜಿ, ಯುಕೆಜಿ ) ಶಿಕ್ಷಣ ನೀಡಲಾಗುವುದು ಎಂದು ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದರು.6,000 ಪದವಿ ಶಿಕ್ಷಕರಿದ್ದಾರೆ:
ಅಂಗನವಾಡಿಗಳನ್ನು ಮಾಂಟೆಸ್ಸರಿಗಳನ್ನಾಗಿ ಮಾಡಲು ಶಿಕ್ಷಕರ ಕೊರತೆ ಆಗುವುದಿಲ್ಲವೇ? ಎಂಬ ಪ್ರಶ್ನೆಗೆ, ಮೊದಲ ಹಂತದಲ್ಲಿ 9 ಸಾವಿರ ಅಂಗನವಾಡಿಗಳನ್ನು ಮಾಂಟೆಸ್ಸರಿ ಶಾಲೆಗಳನ್ನಾಗಿ ಮಾಡಲು ತೀರ್ಮಾನಿಸಲಾಗಿದೆ. ನಮ್ಮ ಅಂಗನವಾಡಿ ಸಹಾಯಕಿಯರು ಬಹುತೇಕ ಉತ್ತಮ ವಿದ್ಯಾರ್ಹತೆ ಹೊಂದಿದ್ದಾರೆ. 6,000 ಮಂದಿ ಪದವೀಧರರು, 1,500 ಮಂದಿ ಸ್ನಾತಕೋತ್ತರ ಪದವೀಧರರು ಅಂಗನವಾಡಿ ಸಹಾಯಕರಾಗಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಮಾಂಟೆಸ್ಸರಿ ಶಿಕ್ಷಣ ಕಲಿಕೆ ನಮಗೆ ಸಮಸ್ಯೆಯಾಗುವುದಿಲ್ಲ. ಗುಣಮಟ್ಟದಲ್ಲಿ ಯಾವುದೇ ಕೊರತೆ ಆಗುವುದಿಲ್ಲ ಎಂದು ಭರವಸೆ ನೀಡಿದರು.