ಐದು ಸಾವಿರ ಅಂಗನವಾಡಿಗಳಲ್ಲಿ ಎಲ್‌ಕೆಜಿ-ಯುಕೆಜಿ

| Published : Nov 19 2025, 12:15 AM IST

ಸಾರಾಂಶ

ಎಲ್‌ಕೆಜಿ-ಯುಜಿಜಿ ಪೂರ್ವ ಪ್ರಾಥಮಿಕ ಶಾಲೆಗಳನ್ನು ಆರಂಭಿಸುವುದೂ ಸೇರಿದಂತೆ ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿಗೆ ಪೂರಕ ಮಹತ್ತರ ಮೂರು ಯೋಜನೆಗಳಿಗೆ ಚಾಲನೆ ನೀಡಲಾಗುತ್ತಿದೆ

ಕನ್ನಡಪ್ರಭ ವಾರ್ತೆ, ತುಮಕೂರುಸಮಗ್ರ ಶಿಶು ಅಭಿವೃದ್ಧಿ ಸೇವೆಗಳ ಯೋಜನೆಗೆ 50 ವರ್ಷಗಳು ಪೂರೈಸಿದ ಹಿನ್ನೆಲೆಯಲ್ಲಿ ಇದೇ 28 ರಂದು ಬೆಂಗಳೂರಿನಲ್ಲಿ ನಡೆಯುಲಿರುವ ಕಾರ್ಯಕ್ರಮದಲ್ಲಿ ಐದು ಸಾವಿರ ಅಂಗನವಾಡಿಗಳಲ್ಲಿ ಎಲ್‌ಕೆಜಿ-ಯುಜಿಜಿ ಪೂರ್ವ ಪ್ರಾಥಮಿಕ ಶಾಲೆಗಳನ್ನು ಆರಂಭಿಸುವುದೂ ಸೇರಿದಂತೆ ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿಗೆ ಪೂರಕ ಮಹತ್ತರ ಮೂರು ಯೋಜನೆಗಳಿಗೆ ಚಾಲನೆ ನೀಡಲಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ತಿಳಿಸಿದ್ದಾರೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ತುಮಕೂರಿನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಐಸಿಡಿಎಸ್‌ ಸುವರ್ಣ ಮಹೋತ್ಸವ, ಅಕ್ಕಪಡೆ ಲೋಕಾರ್ಪಣೆ ಹಾಗೂ ಗೃಹಲಕ್ಷ್ಮಿ ಬ್ಯಾಂಕ್‌ ಉದ್ಘಾಟನೆ ಕುರಿತ ರಾಜ್ಯ ಮಟ್ಟದ ಸಮಾವೇಶಕ್ಕೆ ಪೂರ್ವಭಾವಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಮಾಜಿ ಪ್ರಧಾನಿ ಇಂದಿರಾಗಾಂಧಿಯವರು ಬಲಿಷ್ಠ ಭಾರತ ನಿರ್ಮಾಣದ ಕನಸು ಹೊತ್ತು 1975 ರಲ್ಲಿ ಆರಂಭಿಸಿದ ಸಮಗ್ರ ಶಿಶು ಅಭಿವದ್ಧಿ ಸೇವೆಗಳ ಯೋಜನೆ ಐಸಿಡಿಎಸ್‌ಗೆ 50 ವರ್ಷ ತುಂಬಿದ ಹಿನ್ನೆಲೆಯಲ್ಲಿ ದಿ. 28 ರಂದು ಬೆಂಗಳೂರಿನಲ್ಲಿ ಬೃಹತ್‌ ಸಮಾವೇಶ ನಡೆಯಲಿದ್ದು, ಈ ಸುಸಂದರ್ಭದಲ್ಲಿ ರಾಜ್ಯದಲ್ಲಿ ಮತ್ತೊಂದು ಮೈಲಿಗಲ್ಲು ಆಗಲಿದೆ. ಮಹಿಳೆ ಮತ್ತು ಮಕ್ಕಳ ಸಬಲೀಕರಣಕ್ಕಾಗಿ ಪ್ರಮುಖ ಮೂರು ಯೋಜನೆಗೆ ರಾಜ್ಯ ಸರ್ಕಾರರ ಮುಂದಾಗಿದ್ದು ರಾಜ್ಯದ ಐದು ಸಾವಿರ ಅಂಗನವಾಡಿ ಕೇಂದ್ರಗಳಲ್ಲಿ ಎಲ್‌ಕೆಜಿ-ಯುಕೆಜಿ ಪೂರ್ವ ಪ್ರಾಥಮಿಕ ಆರಂಭಿಸಲಾಗುತ್ತಿದೆ ಎಂದರು.

ಖಾಸಗಿ ಶಾಲೆಗಳಲ್ಲಿ ಸಿಗುವಂತಹ ಗುಣಮಟ್ಟದ ಹಾಗೂ ಇಂಗ್ಲಿಷ್‌ ಶಿಕ್ಷಣ ಬಡಮಕ್ಕಳಿಗೂ ಸಿಗಬೇಕು ಎಂಬುದನ್ನು ಮನಗಂಡ ರಾಜ್ಯ ಸರ್ಕಾರ ಅಂಗನವಾಡಿಗಳಲ್ಲಿ ಎಲ್‌ಕೆಜಿ-ಯುಕೆಜಿ ತರಗತಿಗಳನ್ನು ಆರಂಭಿಸಲು ಮುಂದಾಗಿದೆ. ರಾಜ್ಯದ ಒಟ್ಟಾರೆ ಎಲ್ಲ ಅಂಗನವಾಡಿಗಳ ಪೈಕಿ 17 ಸಾವಿರ ಕಾರ್ಯತಕರ್ತರು ಪದವೀಧರರಿದ್ದು 4 ಸಾವಿರ ಕಾರ್ಯಕರ್ತರು ಸ್ನಾತಕೋತ್ತರ ಪದವಿ ಪಡೆದಿರುವವರನ್ನು ಗುರುತಿಸಲಾಗಿದೆ. ಇವರನ್ನು ಬಳಸಿಕೊಂಡು ಮೊದಲ ಹಂತದಲ್ಲಿ ಐದು ಸಾವಿರ ಅಂಗನವಾಡಿಗಳನ್ನು ಇದೇ 28 ರಂದು ಆರಂಭಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದರು.

ಸಮಾಜದಲ್ಲಿ ಕಾನೂನು ಬಾಹಿರವಾಗಿ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ, ಹೆಣ್ಣು ಮಕ್ಕಳನ್ನು ಚುಡಾಯಿಸುವುದೂ ಸೇರಿದಂತೆ ಹಲವು ರೀತಿಯ ಪೀಡನೆಗಳು ನಡೆಯುತ್ತಿವೆ. ಇವುಗಳನ್ನು ಹತೋಟಿಗೆ ತರಲು ಹಾಗೂ ಇಂತಹ ಸಮಾಜ ಘಾತುಕರನ್ನು ನಿಯಂತ್ರಿಸಿ ಹೆಣ್ಣು ಮಕ್ಕಳಲ್ಲಿ ಆತ್ಮಸ್ಥೈರ್ಯ ಹೆಚ್ಚಿಸಲು ಅಕ್ಕಪಡೆಯನ್ನು ರಚಿಸಲಾಗುತ್ತಿದೆ. 5 ರಿಂದ 10 ಜನರಿರುವ ಎನ್‌ಸಿಸಿ, ಗೃಹರಕ್ಷಕ ಸಿಬ್ಬಂದಿ ಹಾಗು ಕನಿಷ್ಠ 2 ಮಹಿಳಾ ಪೊಲೀಸ್‌ ಇರುವ ಅಕ್ಕಪಡೆ ದೇವಸ್ಥಾನ, ಉದ್ಯಾನ, ಬಸ್‌ ನಿಲ್ದಾಣ, ರೈಲ್ವೆ ನಿಲ್ದಾಣ, ಮಹಿಳಾ ಹಾಸ್ಟೆಲ್‌ ಹೀಗೆ ವಿವಿಧ ಪ್ರದೇಶಗಳಲ್ಲಿ ಗಸ್ತು ತಿರುಗಲಿದೆ. ಅಲ್ಲದೆ ಅಂತಹ ಘಟನೆಗಳು ಕಂಡು ಬಂದಲ್ಲಿ ಅಥವಾ ಅಕ್ಕಪಡೆಯ ದೂರವಾಣಿಗೆ ಕರೆ ಬಂದಲ್ಲಿ ತಕ್ಷಣ ಅಲ್ಲಿಗೆ ಧಾವಿಸಿ ಅಂತಹ ಶಕ್ತಿಗಳ ವಿರುದ್ಧ ಕಾನೂನು ಕ್ರಮ ಜರುಗಿಸುವುದು ಹಾಗೂ ಹೆಣ್ಣು ಮಕ್ಕಳಗೆ ರಕ್ಷಣೆ ನೀಡುವ ಕೆಲಸ ಮಾಡಲಿದೆ ಎಂದು ಅವರು ತಿಳಿಸಿದರು.

ಮಹಿಳಾ ಸಬಲೀಕರಣಕ್ಕೆ ನಮ್ಮ ಸರ್ಕಾರ ನಿರಂತರ ಯೋಜನೆಗಳನ್ನು ಹಾಕಿಕೊಂಡಿದೆ ಎಂದ ಅವರು, ಈ ಹಿಂದೆ ಎಸ್‌.ಎಂ.ಕೃಷ್ಣ ಅವರು ಮುಖ್ಯಮಂತ್ರಿ ಆಗಿದ್ದಾಗ, ಮೋಟಮ್ಮ ಅವರು ಮಹಿಳಾ ಮತ್ತು ಅಭಿವೃದ್ಧಿ ಇಲಾಖೆ ಸಚಿವರಾಗಿದ್ದ ಸಂದರ್ಭದಲ್ಲಿ ಸ್ತ್ರೀಶಕ್ತಿ ಸ್ವಸಹಾಯಕ ಸಂಘಗಳನ್ನು ಆರಂಭಿಸಿ ಯಶಸ್ವಿಗೊಳಿಸಲಾಗಿತ್ತು. ಮಹಿಳೆಯರಿಗೆ ಆರ್ಥಿಕ ಸ್ವಾವಲಂಬನೆ ಅಲ್ಲಿಂದಲೇ ಆರಂಭವಾಗಿತ್ತು. ಇದೀಗ ಮುಂದುವರಿದ ಭಾಗವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದಲ್ಲಿ ಗೃಹಲಕ್ಷ್ಮೀ ಹೆಸರಿನಲ್ಲಿ ಅಭೂತಪೂರ್ವ ಯೋಜನೆನ್ನು ಸಮಪರ್ಕವಾಗಿ ಅನುಷ್ಠಾನಗೊಳಿಸಲಾಗಿದೆ. ಅದಕ್ಕೆ ಪೂರಕವಾಗಿ ಇದೇ 28 ರಂದು ರಾಜ್ಯಾದ್ಯಂತ ಗೃಹಲಕ್ಷ್ಮೀ ವಿವಿದ್ದೋದ್ಧೇಶ ಸ್ವಸಹಾಯ ಸಹಕಾರ ಬ್ಯಾಂಕ್‌ ಆರಂಭಿಸಲಾಗುತ್ತಿದೆ ಎಂದು ಸಚಿವರು ಮಾಹಿತಿ ನೀಡಿದರು.

ಮಹಿಳೆಯರು ತಮ್ಮ ಗೃಹಲಕ್ಷ್ಮೀ ಹಣದಿಂದ ನೇರವಾಗಿ ಬ್ಯಾಂಕ್‌ಗೆ ಒಂದು ಸಾವಿರ ರು.ಗಳನ್ನು ವರ್ಗಾವಣೆ ಮಾಡುವ ಮೂಲಕ ಷೇರ್‌ ಪಡೆದುಕೊಳ್ಳಬೇಕು ಹಾಗೂ ಪ್ರತಿ ತಿಂಗಳು ಕನಿಷ್ಠ 200 ರೂ.ಗಳನ್ನು ಉಳಿತಾಯ ಮಾಡಿ ಕನಿಷ್ಠ ಆರು ತಿಂಗಳು ಉಳಿತಾಯದಾರರಿಗೆ ಮೂರು ಸಾವಿರ ರು.ಗಳಿಂದ ಆರು ಲಕ್ಷಗಳ ವರೆಗೆ ರಾಷ್ಟ್ರೀಕೃತ ಬ್ಯಾಂಕ್‌ ದರದಲ್ಲಿ ಅತಿ ಕಡಿಮೆ ಬಡ್ಡಿದರದಲ್ಲಿ ಸಾಲಸೌಲಭ್ಯಗಳನ್ನು ನೀಡಲಾಗುವುದು ಎಂದು ಅವರು ವಿವರಿಸಿದರು.

ಅಂಗನವಾಡಿ ಕಾರ್ಯ್ಕರ್ತರ ಗೌರವಧನವನ್ನು ಮುಂದಿನ ದಿನಗಳಲ್ಲಿ ಹೆಚ್ಚಿಸಲಾಗುವುದು.ಇದು ನಮ್ಮ ಸರ್ಕಾರದ ಜವಾಬ್ದಾರಿಯೂ ಹೌದು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಜಿ.ಬಿ.ಜ್ಯೋತಿ ಗಣೇಶ್‌, ದೇಶದ ಬೆಳವಣಿಗೆಯಲ್ಲಿ ಮಹಿಳೆಯರ ಪಾಲು ಹೆಚ್ಚು ಈ ಹಿನ್ನೆಲೆಯಲ್ಲಿ ಕೇಂದ್ರ ಹಾಗೂ ರಾಜ್ಯದ ಸಹಭಾಗಿತ್ವದ ಯೋಜನೆಗಳನ್ನು ಸರ್ಪಹಕವಾಗಿ ಅನುಷ್ಠಾನಗೊಳಿಸುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ ಎಂದರು.

ಜಿಲ್ಲಾಧಿಕಾರಿ ಶುಭಕಲ್ಯಾಣ್‌, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಚಂದ್ರಶೇಖರ್.‌ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಡಾ.ಸಿದ್ದರಾಮಣ್ಣ ಎಸ್.‌ ಮತ್ತಿತರರು ಉಪಸ್ಥಿತರಿದ್ದರು.