ಸಾರಾಂಶ
ಗ್ರಾಮೀಣ ಭಾಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರಕಿಸುವ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ಎಲ್‌ಕೆಜಿ, ಯುಕೆಜಿ ಮಾದರಿಯಲ್ಲಿ ಮಕ್ಕಳ ಮನೆ ಎಂಬ ಉಚಿತ ಶಾಲೆ ಪ್ರಾರಂಭಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಎ.ಮಂಜು ತಿಳಿಸಿದರು. ಅರಕಲಗೂಡಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಗ್ರಾಮೀಣ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶ
ಕನ್ನಡಪ್ರಭ ವಾರ್ತೆ ಅರಕಲಗೂಡುಗ್ರಾಮೀಣ ಭಾಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರಕಿಸುವ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ಎಲ್‌ಕೆಜಿ, ಯುಕೆಜಿ ಮಾದರಿಯಲ್ಲಿ ಮಕ್ಕಳ ಮನೆ ಎಂಬ ಉಚಿತ ಶಾಲೆ ಪ್ರಾರಂಭಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಎ.ಮಂಜು ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ನನ್ನ ಸ್ವಗ್ರಾಮ ಹನ್ಯಾಳು ಗ್ರಾಮದಲ್ಲಿ ಕಳೆದ ವರ್ಷ ಪ್ರಾಯೋಗಿಕವಾಗಿ ಮಕ್ಕಳ ಮನೆ ತೆರೆಯಲಾಗಿತ್ತು. ಮೂರು ಮಕ್ಕಳಿದ್ದ ಶಾಲೆಗೆ ಈಗ 25 ಮಕ್ಕಳು ಸೇರ್ಪಡೆಯಾಗಿದ್ದಾರೆ. ಉತ್ತಮ ಸ್ಪಂದನೆ ದೊರೆತ ಹಿನ್ನೆಲೆಯಲ್ಲಿ ಅರಕಲಗೂಡು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪಟ್ಟಣದ ಕೋಟೆ, ಸಂತೆಮರೂರು, ಬೈಚನಹಳ್ಳಿ, ಮಲ್ಲಿಪಟ್ಟಣ, ಹುಲಿಕಲ್, ಹಂಡ್ರಂಗಿ, ರಾಮನಾಥಪುರ, ಮಧುರನಹಳ್ಳಿ, ಕೇರಳಾಪುರ ಹಾಗೂ ಹಳ್ಳಿಮೈಸೂರು ಹೋಬಳಿಯ ಬಿದರಕ್ಕ, ಓಡನಹಳ್ಳಿ ಗ್ರಾಮಗಳಲ್ಲಿ ಮೊದಲ ಹಂತದಲ್ಲಿ ಈ ಶಾಲೆಗಳನ್ನು ತೆರೆಯಲು ಉದ್ದೇಶಿಸಲಾಗಿದೆ’ ಎಂದು ತಿಳಿಸಿದರು.ಮಕ್ಕಳ ಮನೆಯಲ್ಲಿ ಮೂರು ವರ್ಷದಿಂದ ಆರು ವರ್ಷದ ಮಕ್ಕಳಿಗೆ ಕಾನ್ವೆಂಟ್ ಮಾದರಿಯಲ್ಲಿ ಸಮವಸ್ತ್ರ, ಪಠ್ಯ ಪುಸ್ತಕ, ನುರಿತ ಶಿಕ್ಷಕರಿಂದ ಬೊಧನೆ, ಕ್ರೀಡಾ ಚಟುವಟಿ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ಒದಗಿಸಲಾಗುವುದು. ಶಾಲೆ ಬೆಳಿಗ್ಗೆ 10 ರಿಂದ ಮಧ್ಯಾಹ್ನ 1ರ ವರೆಗೆ ನಡೆಯಲಿದೆ. ಇಲ್ಲಿ ಕಲಿಸುವ ಶಿಕ್ಷಕರು ಮಧ್ಯಾಹ್ನದ ಬಳಿಕ ಸರ್ಕಾರಿ ಶಾಲೆಗಳ 1 ರಿಂದ 4 ನೇ ತರಗತಿಯ ಮಕ್ಕಳಿಗೆ ಆಂಗ್ಲ ಭಾಷಾ ಬೋಧನೆ ಮಾಡುವರು. ಶಾಲೆಗೆ ಅಗತ್ಯವಾದ ಪೀಠೋಪಕರಣ, ಶಿಕ್ಷಕರ ವೇತನ ಮುಂತಾದ ಸೌಲಭ್ಯಗಳನ್ನು ತಮ್ಮ ಶಾಸಕರ ವೇತನದಿಂದ ಭರಿಸಲಾಗುವುದು ಎಂದು ಹೇಳಿದರು.
ಶಿಕ್ಷಣ ಇಲಾಖೆ ಮತ್ತು ಸಿಡಿಪಿಒ ಇಲಾಖೆ ಅನುಮತಿ ಪಡೆದು ಪ್ರಾರಂಭಿಸಿರುವ ಈ ಶಾಲೆ ಸರ್ಕಾರಿ ಶಾಲೆಗಳಿಗೆ ಪೂರಕವಾಗಲಿದೆ. ತಾಲೂಕಿನಲ್ಲಿ ಮೊದಲ ಬಾರಿಗೆ ತಮ್ಮ ಕಲ್ಪನೆಯ ಶಾಲೆ ಪ್ರಾರಂಭವಾಗುತ್ತಿದ್ದು ಸರ್ಕಾರ ಇದನ್ನು ರಾಜ್ಯದಾದ್ಯಂತ ತೆರೆಯಬೇಕು. ರಾಜ್ಯದ ಶಾಸಕ ಮಿತ್ರರು ತಮ್ಮ ಕ್ಷೇತ್ರಗಳಲ್ಲಿ ಇದನ್ನು ಪ್ರಾರಂಭಿಸುವಂತೆ ಮನವಿ ಮಾಡಿದರು.ಈ ವೇಳೆ ಸಿಡಿಪಿಒ ವೆಂಕಟೇಶ್ ಇದ್ದರು.