ಅಕ್ರಮವಾಗಿ ಇಟ್ಟಿದ್ದ ಜಿಂಕೆ ಮಾಂಸ ವಶ

| Published : Sep 28 2024, 01:16 AM IST

ಸಾರಾಂಶ

ಕನಕಪುರ: ತಾಲೂಕಿನ ಉಯ್ಯಂಬಳ್ಳಿ ಹೋಬಳಿ ಹಾರೋಬೆಲೆಯ ಜ್ಯೋತಿ ನಗರದಲ್ಲಿ ಅಕ್ರಮವಾಗಿ ಸಂಗ್ರಹಿಸಿ ಇಟ್ಟಿದ್ದ ಜಿಂಕೆ ಮಾಂಸವನ್ನು ಸಾತನೂರು ಪ್ರಾದೇಶಿಕ ವಲಯ ಅರಣ್ಯಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಕನಕಪುರ: ತಾಲೂಕಿನ ಉಯ್ಯಂಬಳ್ಳಿ ಹೋಬಳಿ ಹಾರೋಬೆಲೆಯ ಜ್ಯೋತಿ ನಗರದಲ್ಲಿ ಅಕ್ರಮವಾಗಿ ಸಂಗ್ರಹಿಸಿ ಇಟ್ಟಿದ್ದ ಜಿಂಕೆ ಮಾಂಸವನ್ನು ಸಾತನೂರು ಪ್ರಾದೇಶಿಕ ವಲಯ ಅರಣ್ಯಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಆರೋಪಿಗಳಾದ ಪ್ರದೀಪ, ಶಶಿಕುಮಾರ,ಮಣಿಕಂಠ ಹಾಗೂ ಇತರರು ಸೇರಿ ನಾದ ಬಂದೂಕು ಬಳಸಿ,ಸುತ್ತ ಮುತ್ತ ಅರಣ್ಯ ಪ್ರದೇಶದಲ್ಲಿ ಮೂರು ಜಿಂಕೆಗಳನ್ನು ಬೇಟೆಯಾಡಿ ಆರೋಪಿ ಪ್ರದೀಪನ ತೋಟದ ಮನೆಗೆ ತಂದು ಮಾಂಸವನ್ನಾಗಿ ಪರಿವರ್ತಿಸಿ ಜಿಂಕೆ ಮಾಂಸವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದರು. ಈ ಬಗ್ಗೆ ಮಾಹಿತಿ ತಿಳಿದು ಅರಣ್ಯ ಇಲಾಖೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ರಾಮಕೃಷ್ಣಪ್ಪ ಮಾರ್ಗದರ್ಶನದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪುಟ್ಟಮ್ಮ ನೇತೃತ್ವದಲ್ಲಿ ಇತರ ಅರಣ್ಯ ಅಧಿಕಾರಿಗಳು ಆರೋಪಿ ಪ್ರದೀಪ ಮನೆಯಲ್ಲಿರುವುದನ್ನು ಖಚಿತಪಡಿಸಿಕೊಂಡು ಮನೆಯ ಮೇಲೆ ದಾಳಿ ಮಾಡಿದರು. ಅಧಿಕಾರಿಗಳು ಬರುವ ಮಾಹಿತಿ ತಿಳಿದು ಆರೋಪಿ ಪ್ರದೀಪ ಮನೆಯ ಹಿಂದಿನ ಬಾಗಿಲಿನಿಂದ ಪರಾರಿಯಾಗಿದ್ದಾನೆ.

ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಮನೆಯಲ್ಲಿ ಪರಿಶೀಲನೆ ನಡೆಸಿದಾಗ ಸ್ಥಳದಲ್ಲಿ ಮೂರು ಜಿಂಕೆಯ ತಲೆಗಳು, ಹನ್ನೆರಡು ಕಾಲುಗಳು, ಒಂಭತ್ತು ಪ್ಲಾಸ್ಟಿಕ್ ಚೀಲದಲ್ಲಿದ್ದ ಸುಮಾರು ಹತ್ತು ಕೆ.ಜಿ. ಜಿಂಕೆ ಮಾಂಸ ಹಾಗೂ ಗನ್ ಪೌಡರ್, ಮದ್ದಿನ ಪುಡಿ, ಗುಂಡುಗಳು, ಹಣೆ ಬ್ಯಾಟರಿ, ಎರಡು ಮಚ್ಚು, ಎರಡು ಚಾಕು ಹಾಗೂ ಮಾಂಸ ಕತ್ತರಿಸಲು ಬಳಸಿದ್ದ ಒಂದು ಮರದ ತುಂಡನ್ನು ವಶಪಡಿಸಿಕೊಂಡು, ಆರೋಪಿಗಳ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿ ದೂರು ದಾಖಲು ಮಾಡಿ, ನ್ಯಾಯಾಲಯಕ್ಕೆ ವರದಿ ನೀಡಿದೆ.

ಅರಣ್ಯಾಧಿಕಾರಿಗಳು ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗಾಗಿ ಪ್ರತ್ಯೇಕ ಎರಡು ತಂಡಗಳನ್ನು ರಚಿಸಿ ಶೋಧಕಾರ್ಯ ನಡೆಸುತ್ತಿದ್ದಾರೆ.

ದಾಳಿಯ ಸಂದರ್ಭದಲ್ಲಿ ಅರಣ್ಯರಕ್ಷಕರಾದ ಹನುಮಂತು ಚನ್ನವೀರ್ ಹಾಗೂ ಸಿಬ್ಬಂದಿ ಗೋಪಾಲ್, ಮುತ್ತುರಾಜ್ ಹಾಜರಿದ್ದರು.