ಸ್ವಾತಂತ್ರ್ಯ ಪೂರ್ವದಲ್ಲಿ ಮೊಟ್ಟಮೊದಲ ಸರ್ಕಾರಿ ಶಾಲೆ ಸ್ಥಾಪನೆಯಾದ ಹೆಗ್ಗಳಿಕೆಗೆ ತೌಡೂರು ತಾಂಡಾ ಪಾತ್ರವಾಗಿದೆ
ಹರಪನಹಳ್ಳಿ: ಸರ್ಕಾರಿ ಶಾಲೆಗಳ ಅಭಿವೃದ್ಧಿಯಲ್ಲಿ ಸ್ಥಳೀಯರ ಕೊಡುಗೆ ಪ್ರಮುಖವಾಗಿದೆ. ದೇವಸ್ಥಾನಗಳ ಜತೆಗೆ ಶಾಲಾ ನಿರ್ಮಾಣಕ್ಕೂ ಮುಂದಾಗಬೇಕು ಎಂದು ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಬಸವಂತಪ್ಪ ಹೇಳಿದರು. ತಾಲೂಕಿನ ತೌಡೂರು ತಾಂಡಾದಲ್ಲಿ ನಡೆದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಶತಮಾನ ಆಚರಿಸಿಕೊಂಡ ಸರ್ಕಾರಿ ಶಾಲೆಗಳಲ್ಲಿ ಪ್ರೌಢಶಾಲೆ ಹಾಗೂ ಕಾಲೇಜು ಆರಂಭ ಮಾಡುವ ಕೆಲಸ ನಡೆಯಬೇಕಿದೆ. ಶಿಕ್ಷಣದಿಂದ ಮಾತ್ರ ಪ್ರಗತಿ ಸಾಧ್ಯ, ಶಿಕ್ಷಣ ಕಾರ್ಯಕ್ರಮಗಳು ನಿಜವಾದ ಜಾತ್ರೆ. ಇಂತಹ ಶೈಕ್ಷಣಿಕ ಜಾತ್ರೆ ನಡೆದಾಗ ನೈಜ ದೇವರು ಕಾಣುತ್ತಾನೆ, ಇಂತಹ ದೇವಾಲಯದ ಶತಮಾನದ ಉತ್ಸವ ಮಾದರಿಯಾಗಿದೆ ಎಂದರು.
ರಾಜ್ಯ ಗ್ಯಾರಂಟಿ ಯೋಜನೆ ಉಪಾಧ್ಯಕ್ಷ ಪಿ.ಟಿ. ಪರಮೇಶ್ವರನಾಯ್ಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸ್ವಾತಂತ್ರ್ಯ ಪೂರ್ವದಲ್ಲಿ ಮೊಟ್ಟಮೊದಲ ಸರ್ಕಾರಿ ಶಾಲೆ ಸ್ಥಾಪನೆಯಾದ ಹೆಗ್ಗಳಿಕೆಗೆ ತೌಡೂರು ತಾಂಡಾ ಪಾತ್ರವಾಗಿದೆ ಎಂದು ಹೇಳಿದರು.1924ರಲ್ಲಿ ಶಾಲೆ ಸ್ಥಾಪನೆಗೊಂಡ ಬಳಿಕ ತಾಂಡಾದಲ್ಲಿನ ಸಮುದಾಯದ ಜನರಿಗೆ ನಾಗರಿಕ ಭಾವನೆ ಹುಟ್ಟಿತು. ಹಿಂದುಳಿದ ಜಾತಿಗಳ ಗ್ರಾಮದಲ್ಲಿ ಶಾಲೆ ಆರಂಭದಿಂದ ಬಡಜನರ ಬದುಕಿನಲ್ಲಿ ಬೆಳಕು ಕಾಣುವಂತಾಯಿತು. ಪೋಷಕರು ಮಕ್ಕಳಿಗೆ ಸಂಸ್ಕಾರಯುಕ್ತ ಶಿಕ್ಷಣ ನೀಡಬೇಕು. ಶಿಕ್ಷಣ ಪಡೆದ ವ್ಯಕ್ತಿ ಅಹಂಕಾರಿಯಾಗದೆ, ಮಾದರಿ ವ್ಯಕ್ತಿ ಆಗಬೇಕು ಎಂದರು.
2008ರ ಈಚೆಗೆ ತಾಂಡಾಗಳಲ್ಲಿ ರಾಜಕೀಯ ಪ್ರಭಾವಕ್ಕೆ ಒಳಗಾಗಿ ಶಾಂತಿ ಕದಡಿದೆ. ಪಕ್ಷ ಪ್ರತಿಷ್ಠೆ ಬಿಟ್ಟು ಸಮುದಾಯ ಒಗ್ಗೂಡಬೇಕು. ಕಷ್ಟ-ಸುಖಗಳಿಗೆ ಸ್ಥಳೀಯರೆ ಬೇಕಾಗಿರುವುದು, ಅದನ್ನು ಅರಿಯಬೇಕು ಎಂದು ಸಲಹೆ ನೀಡಿದರು.ಹರಪನಹಳ್ಳಿ ಡಿವೈಎಸ್ಪಿ ಡಾ. ಸಂತೋಷ್ ಚವ್ಹಾಣ್ ಮಾತನಾಡಿ, ಖಾಸಗಿ ಶಾಲೆಗಳ ಭರಾಟೆಯಲ್ಲಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಕುಸಿತವಾಗಿದೆ. ಶಿಕ್ಷಣದಲ್ಲಿ ಖಾಸಗಿ ಹಾಗೂ ಸರ್ಕಾರಿ ಶಾಲೆಗಳ ವ್ಯತ್ಯಾಸ ಇರಿವುದಿಲ್ಲ. ಓದುವ ಹಂಬಲ, ಪರಿಶ್ರಮ ಇದ್ದರೆ ಯಶಸ್ಸು ಸಿಗಲಿದೆ ಎಂದು ಹೇಳಿದರು.
ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಹಿರಿಯ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಕಾಲಕ್ಕೆ ತಕ್ಕಂತೆ ಶಾಲೆಗೆ ಪರಿಕಾರಗಳನ್ನು ನೀಡಿ ಉತ್ತೇಜಿಸಬೇಕು, ಮನೆ ಪರಿಸ್ಥಿತಿ ಹಾಗೂ ಕುಟುಂಬದ ಜವಾಬ್ದಾರಿ ಅರಿತು ಉತ್ತಮ ವಿದ್ಯಾರ್ಥಿ ಆಗಬೇಕು ಎಂದರು.ಕಾರ್ಯಕ್ರಮಕ್ಕೂ ಮೊದಲು ಶಾರದಾದೇವಿಯ ಭಾವಚಿತ್ರದೊಂದಿಗೆ ನಿವೃತ್ತ ಶಿಕ್ಷಕರನ್ನು ಟ್ರ್ಯಾಕ್ಟರ್ನಲ್ಲಿ ಕೂರಿಸಿ ಅದ್ಧೂರಿ ಮೆರವಣಿಗೆ ನಡೆಸಲಾಯಿತು. ತಾಂಡಾದ ಪ್ರಮುಖ ಬೀದಿಗಳಲ್ಲಿ ನಡೆದ ಮೆರವಣಿಗೆಯುದ್ದಕ್ಕೂ ಡೊಳ್ಳು, ಸಮಾಳ ಕಲಾತಂಡಗಳು ಮೆರಗು ಹೆಚ್ಚಿಸಿದವು.
1924ರಲ್ಲಿ ಆರಂಭಗೊಂಡ ಶಾಲೆ 102 ವರ್ಷಗಳನ್ನು ಪೂರೈಸಿದ್ದು, ಶಾಲೆಯ ಶತಮಾನೋತ್ಸವವನ್ನು ಅರ್ಥ ಪೂರ್ಣಗೊಳಿಸಲು ಅನೇಕ ಕಾರ್ಯಕ್ರಮಗಳನ್ನು ರೂಪಿಸಲಾಗಿತ್ತು.ತಾಲೂಕು ಅಕ್ಷರ ದಾಸೋಹ ನಿರ್ದೇಶಕ ನಾಗರಾಜ್, ದೈಹಿಕ ಶಿಕ್ಷಣಾಧಿಕಾರಿ ಷಣ್ಮುಖಪ್ಪ, ಪಿಎಸ್ಐ ವಿಜಯ್ ಕೃಷ್ಣ, ವಲಯ ಸಂಪನ್ಮೂಲ ವ್ಯಕ್ತಿ ಸಿದ್ದೇಶ್, ಮುಖಂಡ ಯರಬಳ್ಳಿ ಉಮಾಪತಿ, ಡಿ. ಸಿದ್ದೇಶ್, ನಿ.ಶಿ. ಚನ್ನಬಸವನ ಗೌಡ, ಹಾಲಪ್ಪ, ಯರಬಳ್ಳಿ ಕೊಟ್ರೇಶ್, ಗೀತಾ, ಕಥೆಗಾರ ಮಂಜಪ್ಪ, ಗುರುಶಾಂತಪ್ಪ, ಮುಖ್ಯ ಶಿಕ್ಷಕಿ ಚಂದ್ರಮ್ಮ ಇದ್ದರು.