ಕನ್ನಡಪ್ರಭ ವಾರ್ತೆ ಹಲಗೂರು

ಸಮೀಪದ ಕಬ್ಬಾಳು ಅರಣ್ಯ ಪ್ರದೇಶದಿಂದ ಒಂಟಿ ಸಲಗ ಶನಿವಾರ ಬೆಳಗಿನ ಜಾವ ನಾಟಿ ಹಸುವಿನ ಮೇಲೆ ದಾಳಿ ಮಾಡಿದ್ದು, ದಂತದಿಂದ ತಿವಿದು ಪರಿಣಾಮ ತೀವ್ರವಾಗಿ ಗೊಯಗೊಂಡು ಮೃತಪಟ್ಟಿರುವ ಘಟನೆ ವಡ್ಡರದೊಡ್ಡಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ವೆಂಕಟೇಶ್ ಅವರಿಗೆ ಸೇರಿದ ನಾಟಿ ಹಸುವಿನ ಬಾಲವನ್ನು ದಂತದಿಂದ ತಿವಿದಿದೆ. ತೀವ್ರವಾಗಿ ಗಾಯಗೊಂಡ ಹಸು ಮೃತಪಟ್ಟಿದೆ. ಕಾಡಾನೆಯನ್ನು ಕಂಡ ರೈತರು ತಕ್ಷಣ ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದ ಆರ್ ಎಫ್‌ ಪ್ರಮೋದ್ ದೇವ್ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿ ಹೊಲಗದ್ದೆಗಳಿಗೆ ಹೋಗದಂತೆ ತಿಳಿವಳಿಕೆ ನೀಡಿದ್ದಾರೆ.

ಹಲಗೂರು ಸಮೀಪದ ಕೊನ್ನಾಪುರ, ಗುಡ್ಡದ ಹತ್ತಿರ ಅರಣ್ಯ ಇಲಾಖೆ ಕಚೇರಿಯ ಸಮೀಪ ಹಾಗೂ ವಡ್ಡರ ದೊಡ್ಡಿ ಗ್ರಾಮಗಳಲ್ಲಿ ಒಂಟು ಸಲಗ ಕಾಣಿಸಿಕೊಂಡಿದೆ. ನಂತರ ಅರಣ್ಯಾಧಿಕಾರಿಗಳು, ಸಿಬ್ಬಂದಿ, ಒಂಟಿಸಲಗವನ್ನು ರಾಷ್ಟ್ರೀಯ ಹೆದ್ದಾರಿಯನ್ನು ದಾಟಿಸಿ ಬಸವನ ಬೆಟ್ಟದ ಅರಣ್ಯ ಪ್ರದೇಶಕ್ಕೆ ಓಡಿಸಿದ್ದಾರೆ.

ವಡ್ಡರದೊಡ್ಡಿ ಗ್ರಾಮದ ವೆಂಕಟೇಶ್ ಮಾತನಾಡಿ, ನಾವು ವ್ಯವಸಾಯ ಮಾಡಿ ಜೀವನ ನಡೆಸುತ್ತಿದ್ದು, ಎಂದಿನಂತೆ ತೋಟದ ಮನೆಯಲ್ಲಿ ರೇಷ್ಮೆ ಹುಳುವಿಗೆ ಸೊಪ್ಪು ಹಾಕುತ್ತಿದ್ದಾಗ ಹಸು ಚಿರಾಟ ಸದ್ದಿನಿಂದ ಹೊರಗೆ ಬಂದು ನೋಡಿದಾಗ ಒಂಟಿ ಸಲಗ ನಮ್ಮ ಹಸುವಿನ ಮೇಲೆ ದಾಳಿ ಮಾಡಿದೆ.


ಪಕ್ಕದಲ್ಲಿದ್ದ ಹಸುವಿನ ಕರು ಕಟ್ಟಿದ್ದ ದಾರವನ್ನು ಕಿತ್ತುಕೊಂಡು ಗಾಬರಿಯಿಂದ ಓಡಿ ಬಂದಿದ್ದರಿಂದ ಬದುಕುಳಿದಿದೆ. ನಮ್ಮ ಹಸು ಫಲ ಹೊಂದಿತ್ತು. ನಾಟಿ ಹಸು ಸಾವಿನಿಂದ ಸುಮಾರು 40 ಸಾವಿರ ರು. ನಷ್ಟ ಉಂಟಾಗಿದೆ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ಪರಿಹಾರ ನೀಡುವಂತೆ ಮನವಿ ಸಲ್ಲಿಸಿದ್ದಾರೆ.

ಕಾಡಿನಿಂದ ಕಾಡಾನೆಗಳು ನಾಡಿನತ್ತ ಬರದಂತೆ ಕಾಡಿನಂಚಿನಲ್ಲಿ ಆನೆ ಕಂದಕಗಳನ್ನು ತೆಗೆಯುವ ಮೂಲಕ ನಾವು ಬೆಳೆದ ಫಸಲು ಹಾಗೂ ಸಾಕು ಪ್ರಾಣಿಗಳು, ರೈತರ ಪ್ರಾಣರಕ್ಷಣೆ ಮಾಡುವಂತೆ ಅರಣ್ಯ ಅಧಿಕಾರಿಗಳಿಗೆ ಮನವಿ ಮಾಡಿದರು.

ಮನವಿ ಪತ್ರ ಸ್ವೀಕರಿಸಿದ ಅರಣ್ಯ ಅಧಿಕಾರಿಗಳು ನಮ್ಮ ಮೇಲಿನ ಅಧಿಕಾರಿಗಳಿಗೆ ವಿಷಯ ತಿಳಿಸಿ ಸರ್ಕಾರದಿಂದ ಸಿಗುವ ಪರಿಹಾರ ಕೊಡಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ.

ಮುಂಜಾಗ್ರತೆ ಕ್ರಮವಾಗಿ ಸಬ್ ಇನ್ಸ್ ಪೆಕ್ಟರ್ ಲೋಕೇಶ್ ಮತ್ತು ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ರಾಷ್ಟ್ರೀಯ ಹೆದ್ದಾರಿಯನ್ನು ಒಂಟಿ ಸಲಗ ದಾಟುವ ಸಮಯದಲ್ಲಿ ವಾಹನಗಳನ್ನು ನಿಲ್ಲಿಸಿ ರಸ್ತೆ ಆನೆ ದಾಟಿದ ನಂತರ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಕಾರ್ಯಾಚರಣೆಯಲ್ಲಿ ಅರಣ್ಯ ಅಧಿಕಾರಿಗಳಾದ ಆರ್‌ಎಫ್ ಪ್ರಮೋದ್ ಕುಮಾರ್ ದೇವ್ ಮತ್ತು ಸಿಬ್ಬಂದಿ ಸಿದ್ದರಾಮ ಪೂಜಾರಿ, ಯಲಗುರೇಶ ಹಕ್ಕಲ್, ಪಿ.ಎಂ.ಕೃಷ್ಣಾ, ರಿಜ್ವಾನ್, ಫಾರೆಸ್ಟರ್ ನಬಿಲಾಲ್ ಹಾಗೂ ಚನ್ನಪಟ್ಟಣ ಇಟಿಎಫ್ ಸ್ಟಾಫ್ಸ್,

ಅರಣ್ಯ ವೀಕ್ಷಕರು ಹಾಗೂ ವಾಹನ ಚಾಲಕರು ಸೇರಿದಂತೆ ಪೊಲೀಸ್ ಸಿಬ್ಬಂದಿ ಮೋಹನ್ ,ಶ್ರೀಕಾಂತ ಸೇರಿದಂತೆ ಇತರರು ಇದ್ದರು.