ಸ್ಥಳೀಯ ಕಬ್ಬು ಬೆಳೆಗಾರರಿಗೆ ಸಿಗದ ಆದ್ಯತೆ

| Published : Nov 28 2023, 12:30 AM IST

ಸಾರಾಂಶ

ಸುಮಾರು ವರ್ಷಗಳಿಂದ ತಾಲೂಕಿನಲ್ಲಿ ಸಕ್ಕರೆ ಕಾರ್ಖಾನೆಗಳಿಲ್ಲದ ಕಾರಣ ಕಬ್ಬು ಬೆಳೆಯಲು ರೈತರು ನಿರಾಸಕ್ತಿ ತೋರುತ್ತಿದ್ದರು. ಆದರೆ ಕೋಣನಕೇರಿ ಹತ್ತಿರದ ವಿಐಎನ್‌ಪಿ ಸಕ್ಕರೆ ಕಾರ್ಖಾನೆ ಸ್ಥಾಪನೆಯಿಂದಾಗಿ ತಾಲೂಕಿನಲ್ಲಿ ಲಕ್ಷಕ್ಕೂ ಅಧಿಕ ಎಕರೆಯಷ್ಟು ಕಬ್ಬು ಬೆಳೆದಿದ್ದಾರೆ. ಆದರೆ ಸ್ಥಳೀಯರಿಗೆ ಆದ್ಯತೆ ನೀಡದೆ ಮುಂಡಗೋಡ, ಕಲಘಟಗಿ ಭಾಗಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಇದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ವಿಐಎನ್‌ಪಿ ಸಕ್ಕರೆ ಕಾರ್ಖಾನೆ ವಿರುದ್ಧ ರೈತರ ಆಕ್ರೋಶ । ಸಕಾಲಕ್ಕೆ ಕಬ್ಬು ಕಟಾವು ಕಾರ್ಮಿಕರು ಸಿಗುತ್ತಿಲ್ಲ । ಬೆಳೆ ಒಣಗುವ ಮುನ್ನ ಕಾರ್ಖಾನೆಗಳಿಗೆ ಕಬ್ಬು ಸಾಗಿಸಲು ತಾಲೂಕಿನ ಹರಸಾಹಸ ಪಡುತ್ತಿರುವ ರೈತರು

ಬಸವರಾಜ ಹಿರೇಮಠ

ಕನ್ನಡಪ್ರಭ ವಾರ್ತೆ ಶಿಗ್ಗಾಂವಿ

ಸುಮಾರು ವರ್ಷಗಳಿಂದ ತಾಲೂಕಿನಲ್ಲಿ ಸಕ್ಕರೆ ಕಾರ್ಖಾನೆಗಳಿಲ್ಲದ ಕಾರಣ ಕಬ್ಬು ಬೆಳೆಯಲು ರೈತರು ನಿರಾಸಕ್ತಿ ತೋರುತ್ತಿದ್ದರು. ಆದರೆ ಕೋಣನಕೇರಿ ಹತ್ತಿರದ ವಿಐಎನ್‌ಪಿ ಸಕ್ಕರೆ ಕಾರ್ಖಾನೆ ಸ್ಥಾಪನೆಯಿಂದಾಗಿ ತಾಲೂಕಿನಲ್ಲಿ ಲಕ್ಷಕ್ಕೂ ಅಧಿಕ ಎಕರೆಯಷ್ಟು ಕಬ್ಬು ಬೆಳೆದಿದ್ದಾರೆ. ಆದರೆ ಸ್ಥಳೀಯರಿಗೆ ಆದ್ಯತೆ ನೀಡದೆ ಮುಂಡಗೋಡ, ಕಲಘಟಗಿ ಭಾಗಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಇದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ಮೊದಲೇ ಮಳೆ ಕೊರತೆಯಿಂದಾಗಿ ಹೆಚ್ಚಿನ ಇಳುವರಿ ಬಾರದಿದ್ದರೂ, ಅಲ್ಪಸ್ವಲ್ಪ ಬಂದ ಕಬ್ಬನ್ನು ಸಕಾಲಕ್ಕೆ ಕಾರ್ಖಾನೆಗೆ ಸಾಗಿಸಲು ಬೆಳೆಗಾರರು ಕಾರ್ಮಿಕರ ಕೊರತೆ ಎದುರಿಸುವಂತಾಗಿದೆ. ಕಬ್ಬು ಕಟಾವು ಮಾಡಿಕೊಂಡು ಹೋಗಿ ಎಂದು ಕಾರ್ಖಾನೆಯವರಿಗೆ ಮನವಿ ಮಾಡಿದರೂ ಯಾರೂ ಮುಂದೆ ಬರುತ್ತಿಲ್ಲ. ಕಾರ್ಖಾನೆ ಕರೆಸಿರುವ ಮಹಾರಾಷ್ಟ್ರದ ಬೀಡ, ಸತಾರಾ, ಬಳ್ಳಾರಿ ಜಿಲ್ಲೆಯಿಂದ ಬಂದಿರುವ ಕೆಲ ಕಟಾವು ಮಾಡುವ ತಂಡಗಳಿಗೆ ಹೆಚ್ಚಿನ ಬೇಡಿಕೆ ಬಂದಿದೆ.

ಕಾರ್ಖಾನೆ ಕಬ್ಬು ಕಟಾವಿಗೆ ಹಣ ನೀಡುತ್ತಿದ್ದರೂ ಕಾರ್ಮಿಕರು ರೈತರಿಂದ ಹೆಚ್ಚುವರಿ ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ. ಕಬ್ಬು ಕಟಾವಿಗೆ ಬಂದಿರುವ ಯಂತ್ರಗಳ ಮಾಲೀಕರು ಟನ್‌ಗೆ ರೈತರಿಂದ ₹೨೦೦-೫೦೦ ರೂಪಾಯಿಗೆ ಬೇಡಿಕೆ ಇಡುತ್ತಿದ್ದಾರೆ. ಒಂದು ಲಾರಿ ಕಬ್ಬು ಕಾರ್ಖಾನೆಗೆ ಸಾಗಿಸಲು ಚಾಲಕನಿಗೆ ₹೪೦೦ ಭತ್ಯೆ, ಕಟಾವು ಯಂತ್ರ ಚಾಲಕನಿಗೆ ದಿನಕ್ಕೆ ₹೫೦೦ ರಿಂದ ೧೦೦೦, ಯಂತ್ರದ ಮಾಲೀಕನಿಗೆ ಟನ್‌ಗೆ ಹೆಚ್ಚುವರಿಯಾಗಿ ₹೨೦೦ ನೀಡಬೇಕಾಗಿದೆ ಎಂದು ರೈತರು ಆರೋಪಿಸಿದ್ದಾರೆ.

ಹೆಚ್ಚು ಹಣ ನೀಡಿದವರ ಬೆಳೆ ಕಟಾವಿಗೆ ಕಾರ್ಮಿಕರು ಹೋಗುತ್ತಿದ್ದಾರೆ. ಇಂದರಿಂದ ರೈತರ ಬೆಳೆ ಒಣಗುತ್ತಿದೆ. ಕಾರ್ಖಾನೆಯವರು ಕಾರ್ಮಿಕರ ಕೊರತೆ ನೆಪ ಹೇಳುವುದನ್ನು ಬಿಟ್ಟು ಕಬ್ಬನ್ನು ತಕ್ಷಣ ಕಟಾವು ಮಾಡಬೇಕು ಎಂಬುದು ರೈತರ ಆಗ್ರಹವಾಗಿದೆ.

ಒಂದು ಟನ್ ಕಬ್ಬಿಗೆ ₹೩೦೭೩ ಎಫ್ಆರ್‌ಪಿ ದರ ನಿಗದಿಯಾಗಿದೆ. ಇದರಲ್ಲಿ ಕಟಾವು ಮತ್ತು ಸಾಗಾಣಿಕೆ ವೆಚ್ಚ ೭೫೦ ರೂಪಾಯಿ ಕಡಿತವಾಗುತ್ತಿದೆ. ಕಾರ್ಖಾನೆ ಹೆಚ್ಚುರಿಯಾಗಿ ೯೨ ರೂಪಾಯಿ ಸೇರಿಸಿ ರೈತರಿಗೆ ೨೪೧೫ ರೂಪಾಯಿ ಪಾವತಿ ಮಾಡುತ್ತಿದೆ. ವಿಐಎನ್‌ಪಿ ಕಾರ್ಖಾನೆ ಜಿಲ್ಲೆಯ ವಿವಿಧೆಡೆ ಹಾಗೂ ಕಾರ್ಖಾನೆಯ ಅಕ್ಕಪಕ್ಕದ ಹಳ್ಳಿಗಳಿಂದಲೂ ಕಬ್ಬು ಖರೀದಿಸುತ್ತಿದೆ. ಆದರೆ, ಎಲ್ಲರಿಗೂ ಒಂದೇ ಸಾಗಾಣಿಕೆ ವೆಚ್ಚ ಕಡಿತ ಮಾಡುತ್ತಿದೆ. ಇದರಿಂದ ಕಾರ್ಖಾನೆ ಸುತ್ತಲಿನ ಹಳ್ಳಿಗಳ ರೈತರಿಗೆ ಅನ್ಯಾಯವಾಗುತ್ತಿದೆ. ಆದ್ದರಿಂದ ಸಾಗಾಣಿಕೆಯಲ್ಲಿ ಆಗುತ್ತಿರುವ ತಾರತಮ್ಯ ಸರಿಪಡಿಸಿ ಕನಿಷ್ಠ ದರ ನಿಗದಿಪಡಿಸಬೇಕು. ಸಕಾಲಕ್ಕೆ ಕಬ್ಬು ಕಟಾವು ಮಾಡಬೇಕು ಎಂದು ಕಬ್ಬು ಬೆಳೆಗಾರ ಜಿನ್ನಪ್ಪ ವರೂರ ಆಗ್ರಹಿಸಿದ್ದಾರೆ.

ಬೇರೆ ಕಾರ್ಖಾನೆಯವರು ಯಾವ ದರ ನೀಡುತ್ತಾರೆ ಎನ್ನುವುದನ್ನು ಆಡಳಿತ ಮಂಡಳಿ ಗಮನಿಸುತ್ತಿದೆ. ಅವರು ಹೆಚ್ಚುವರಿ ದರ ನೀಡಿದರೆ, ನಾವು ನೀಡಬೇಕಾಗುತ್ತದೆ. ಈಗ ನಮ್ಮ ಕಾರ್ಖಾನೆ ಸಾಗಾಣಿಕೆ ಮತ್ತು ಕಟಾವು ವೆಚ್ಚವಾಗಿ ಸರಾಸರಿ ₹೭೫೦ ದರ ನಿಗದಿ ಮಾಡಿದೆ. ಟನ್ ಗೆ ₹೨೪೧೫ ನೀಡುತ್ತಿದ್ದೇವೆ ಎನ್ನುತ್ತಾರೆ ಕೋಣನಕೇರಿಯ ವಿಐಎನ್ಎಪಿ ಸಕ್ಕರೆ ಕಾರ್ಖಾನೆ ಎಂಡಿ ಬಸವನಗೌಡ ಪಾಟೀಲ.