ಸಾರಾಂಶ
ಕನ್ನಡ ರಾಜ್ಯೋತ್ಸವ, ರಾಜ್ಯ ಮಟ್ಟದ ಕವಿಗೋಷ್ಠಿ ಉದ್ಘಾಟಿಸಿ ಮಾಜಿ ಶಾಸಕ ತಿಪ್ಪಾರೆಡ್ಡಿಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಹರಿದು ಹಂಚಿಹೋಗಿದ್ದ ಕರ್ನಾಟಕದ ಭಾಗಗಳನ್ನು ಒಗ್ಗೂಡಿಸುವಲ್ಲಿ ಅನೇಕ ಹಿರಿಯರ ಹೋರಾಟ ತ್ಯಾಗ ಬಲಿದಾನವಿದೆ. ರಾಷ್ಟ್ರದ ಬೆಳವಣಿಗೆಯಲ್ಲಿ ಕರ್ನಾಟಕದ ಕೊಡುಗೆ ಅಪಾರ. ಇಲ್ಲಿನ ಜಲ, ಅರಣ್ಯ, ಖನಿಜ ಸೇರಿ ಅಖಂಡ ಭಾರತದ ಅಭಿವೃದ್ಧಿಯಲ್ಲಿ ಕನ್ನಡಿಗರದು ಪಾಲಿದೆ ಎಂದು ಮಾಜಿ ಶಾಸಕ ತಿಪ್ಪಾರೆಡ್ಡಿ ಹೇಳಿದರು.ಭಾರತೀಯ ಯೋಗ ಶಿಕ್ಷಣ ಸಂಸ್ಥೆ, ಕೋಟೆ ವಾಯುವಿಹಾರಿಗಳ ಸಂಘ ಸಂಯುಕ್ತಾಶ್ರಯದಲ್ಲಿ ಕೋಟೆ ಮುಂಭಾಗದ ಲ್ಲಿರುವ ರಾಘವೇಂದ್ರ ವಿದ್ಯಾಸಂಸ್ಥೆಯಲ್ಲಿ ನಡೆದ 68 ನೇ ಕನ್ನಡ ರಾಜ್ಯೋತ್ಸವ ಹಾಗೂ ರಾಜ್ಯ ಮಟ್ಟದ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಕನ್ನಡ ನಾಡು, ನುಡಿ, ನೆಲ, ಜಲದ ಬಗ್ಗೆ ಒಲವು ಮೂಡಿಸಿಕೊಂಡು ಸಾಹಿತ್ಯ, ಸಂಶೋಧನೆ ಬಗ್ಗೆಯೂ ಆಸಕ್ತಿ ಬೆಳೆಸಿಕೊಳ್ಳುವುದು ಒಳ್ಳೆಯದು ಎಂದರು.
ಇತಿಹಾಸ ಸಂಶೋಧಕ ಡಾ.ಬಿ.ರಾಜಶೇಖರಪ್ಪ ಮಾತನಾಡಿ ಕವಿ, ಕಾವ್ಯದ ಬಗ್ಗೆ ಆಲೋಚಿಸಿದರೆ ಅನೇಕ ಕುತೂಹಲಕಾರಿ ಸಂಗತಿ ನೆನಪಿಗೆ ಬರುತ್ತದೆ. ರಾಜ,ಮಹಾರಾಜರ ಆಸ್ಥಾನದಲ್ಲಿಯೂ ಕವಿಗಳು ಇರುತ್ತಿದ್ದರು. ಕವಿಗಳ ಕಾವ್ಯವಾಚನಕ್ಕೆ ಈಗಲೂ ಪ್ರಾಶಸ್ತ್ಯವಿದೆ. ಕಾವ್ಯ ರಚನೆ ಸೂಕ್ಷ್ಮವಾದುದು ಎಂದರು.ಸರಸ್ವತಿ ಎಂದರೆ ಕೇವಲ ಒಂದು ಹೆಣ್ಣಿನ ಚಿತ್ರವಲ್ಲ. ಭಗವಂತನ ವಾಣಿ ಎಂದು ಪಂಪ ಹೇಳಿದ್ದಾರೆ. ಐದನೇ ಶತಮಾನ ದಲ್ಲಿಯೇ ಕನ್ನಡದ ಹಲ್ಮಿಡಿ ಶಾಸನ ಬೇಲೂರು ತಾಲೂಕಿನಲ್ಲಿ ದೊರೆತಿದೆ. ಮಯೂರ ವರ್ಮನ ಮೊದಲು ಕನ್ನಡದ ಮೊದಲ ದೊರೆ. ಕನ್ನಡ ಸಾಹಿತ್ಯಕ್ಕೆ ಸಮೃದ್ಧವಾದ ಬೆಳವಣಿಗೆಯಿದೆ. ಬಸವಣ್ಣ, ಅಲ್ಲಮಪ್ರಭು ಪ್ರಸಿದ್ಧ ವಚನಕಾರರು. ರಾಜ್ಯೋತ್ಸವ ಆಚರಣೆಯ ಮೂಲಕವಾದರೂ ಪ್ರತಿಯೊಬ್ಬರು ಕನ್ನಡತನವನ್ನು ಬೆಳೆಸಿಕೊಳ್ಳುವ ಸಂಕಲ್ಪ ಮಾಡಿದಾಗ ನಿಜವಾಗಿಯೂ ಕನ್ನಡ ರಾಜ್ಯೋತ್ಸವಕ್ಕೆ ಅರ್ಥವಿರುತ್ತದೆ ಎಂದು ತಿಳಿಸಿದರು.
ಉಪನ್ಯಾಸಕ ವಿ.ಚನ್ನಬಸಪ್ಪ ಪ್ರಾಸ್ತಾವಿಕ ಮಾತನಾಡಿ, ಮಾತೃಭಾಷೆ ಕನ್ನಡವನ್ನು ಬಳಸಿದಷ್ಟು ಅಭಿವೃದ್ಧಿಯಾಗುತ್ತದೆ. ಜಗತ್ತಿನ ಅತ್ಯಂತ ಸುಂದರ ಭಾಷೆಗಳಲ್ಲಿ ಕನ್ನಡವೂ ಒಂದು. ಕನ್ನಡ ನಾಡು, ನುಡಿ, ನೆಲ, ಜಲದ ಉಳಿವಿಗಾಗಿ ಪ್ರತಿಯೊ ಬ್ಬರು ಕಟಿಬದ್ಧರಾಗಬೇಕು. ಕನ್ನಡ ರಾಜ್ಯೋತ್ಸವ ಆಚರಣೆಯ ನೆಪದಲ್ಲಾದರೂ ಭಾಷೆ ಬಗ್ಗೆ ಎಲ್ಲರಲ್ಲಿಯೂ ಜಾಗೃತಿ ಮೂಡಬೇಕಿದೆ ಎಂದು ಹೇಳಿದರು.ಕೋಟೆ ವಾಯುವಿಹಾರಿಗಳ ಸಂಘದ ಅಧ್ಯಕ್ಷ ಆರ್.ಸತ್ಯಣ್ಣ ಅಧ್ಯಕ್ಷತೆ ವಹಿಸಿದ್ದರು. ರಾಘವೇಂದ್ರ ವಿದ್ಯಾಸಂಸ್ಥೆ ಸಂಸ್ಥಾಪಕ ಎಚ್.ಶ್ರೀನಿವಾಸ್, ಕಾಲೇಜು ಶಿಕ್ಷಣ ಇಲಾಖೆ ನಿವೃತ್ತ ಜಂಟಿ ನಿರ್ದೇಶಕ ಟಿ.ವಿ.ಸುರೇಶ್ ಗುಪ್ತ, ನಿವೃತ್ತ ಪ್ರಾಧ್ಯಾಪಕಿ ಡಾ. ಯಶೋಧ ಬಿ.ರಾಜಶೇಖರಪ್ಪ, ಭಾರತೀಯ ಜೀವವಿಮಾ ನಿಗಮದ ಜಿ.ಹರೀಶ್ ಬೇದ್ರೆ, ರಾಘವೇಂದ್ರ ವಿದ್ಯಾಸಂಸ್ಥೆಯ ಪ್ರಾಚಾರ್ಯ ಎ.ಜಿ.ಬಸವರಾಜಪ್ಪ, ವೇದಿಕೆಯಲ್ಲಿದ್ದರು. ಸರ್ವದ ಪ್ರಾರ್ಥಿಸಿದರು. ರವಿ ಅಂಬೇಕರ್ ಸ್ವಾಗತಿಸಿದರು.