ಶಿರಸಿಯಲ್ಲಿ ಶೌಚಾಲಯ ನಿರ್ಮಾಣಕ್ಕೆ ಸ್ಥಳೀಯರ ವಿರೋಧ

| Published : Nov 23 2024, 12:35 AM IST

ಸಾರಾಂಶ

ರಾಘವೇಂದ್ರ ಸರ್ಕಲ್ ಬಳಿಯ ಜಾಗದಲ್ಲಿ ಶೌಚಾಲಯ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ. ನಿತ್ಯ ರಾಘವೇಂದ್ರ ಮಠಕ್ಕೆ ಭಕ್ತರು ಈ ರಸ್ತೆಯಲ್ಲಿ ತೆರಳುತ್ತಾರೆ. ಅಲ್ಲದೇ, ಅರಣ್ಯ ಇಲಾಖೆಯ ಜಾಗವಾಗಿದ್ದು, ಈ ಜಾಗವನ್ನು ಬಿಟ್ಟು ಬೇರೆಡೆ ನಿರ್ಮಾಣ ಮಾಡಲಿ ಎಂದು ಸಾರ್ವಜನಿಕರು ಆಗ್ರಹಿಸಿದರು.

ಶಿರಸಿ: ನಗರದ ರಾಘವೇಂದ್ರ ಸರ್ಕಲ್ ಬಳಿ ನಗರಸಭೆಯಿಂದ ಶೌಚಾಲಯ ನಿರ್ಮಾಣಕ್ಕೆ ಸಿದ್ಧತೆ ನಡೆಸಿದ್ದು, ಈ ಜಾಗದಲ್ಲಿ ಶೌಚಾಲಯ ಯಾವುದೇ ಕಾರಣಕ್ಕೂ ನಿರ್ಮಿಸಬಾರದು ಎಂದು ನೂರಾರು ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿದರು.ನಗರದ ರಾಘವೇಂದ್ರ ಮಠಕ್ಕೆ ತೆರಳುವ ಮುಖ್ಯ ಮಾರ್ಗವಾಗಿದ್ದು, ನೂರಾರು ಭಕ್ತಾದಿಗಳು ಈ ರಸ್ತೆಯಲ್ಲಿ ಸಂಚರಿಸುತ್ತಾರೆ. ಈ ರಸ್ತೆಯ ಪಕ್ಕದಲ್ಲಿ ಶೌಚಾಲಯ ನಿರ್ಮಿಸಿದರೆ ಸುತ್ತಮುತ್ತಲಿನ ಪರಿಸರ ಮಲೀನಗೊಳ್ಳುತ್ತದೆ. ಅಲ್ಲದೇ ಮಾರಿಕಾಂಬಾ ದೇವಿ ಜಾತ್ರೆಯ ಮತ್ತು ಗಣೇಶ ಚತುರ್ಥಿ ಸಂದರ್ಭದಲ್ಲಿ ಈ ಜಾಗದಲ್ಲಿ ಅನ್ನದಾನ ನಡೆಯುತ್ತದೆ. ಈ ಜಾಗವನ್ನು ಬಿಟ್ಟು ಬೇರೆ ಜಾಗದಲ್ಲಿ ಶೌಚಾಲಯ ನಿರ್ಮಿಸಿದರೆ ನಮ್ಮ ಅಭ್ಯಂತರವಿಲ್ಲ ಎಂದು ಸ್ಥಳೀಯರು ಪಟ್ಟು ಹಿಡಿದರು.ಸ್ಥಳಕ್ಕಾಗಮಿಸಿದ ವಾರ್ಡ್ ಸದಸ್ಯೆ ದೀಪಾ ಮಹಾಲಿಂಗಣ್ಣನವರ್ ಹಾಗೂ ಪೌರಾಯುಕ್ತ ಕಾಂತರಾಜು, ಸಾರ್ವಜನಿಕರ ವಿರೋಧದ ನಡುವೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತದೆ ಎಂದು ಭರವಸೆ ನೀಡಿದರು.ಶಿರಸಿ ಜೀವಜಲ ಕಾರ್ಯಪಡೆ ಅಧ್ಯಕ್ಷ ಹಾಗೂ ರಾಘವೇಂದ್ರ ಸೇವಾ ಸಮಿತಿ ಸದಸ್ಯ ಶ್ರೀನಿವಾಸ ಹೆಬ್ಬಾರ್ ಮಾತನಾಡಿ, ಸಾರ್ವಜನಿಕ ಶೌಚಾಲಯ ನಿರ್ಮಿಸುವುದರ ಜತೆ ಸ್ಬಚ್ಛತೆಗೂ ಹೆಚ್ಚಿನ ಆದ್ಯತೆ ನೀಡಬೇಕು. ರಾಘವೇಂದ್ರ ಸರ್ಕಲ್ ಬಳಿಯ ಜಾಗದಲ್ಲಿ ಶೌಚಾಲಯ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ. ನಿತ್ಯ ರಾಘವೇಂದ್ರ ಮಠಕ್ಕೆ ಭಕ್ತರು ಈ ರಸ್ತೆಯಲ್ಲಿ ತೆರಳುತ್ತಾರೆ. ಅಲ್ಲದೇ, ಅರಣ್ಯ ಇಲಾಖೆಯ ಜಾಗವಾಗಿದ್ದು, ಈ ಜಾಗವನ್ನು ಬಿಟ್ಟು ಬೇರೆಡೆ ನಿರ್ಮಾಣ ಮಾಡಲಿ ಎಂದು ಆಗ್ರಹಿಸಿದರು.ರಾಘವೇಂದ್ರ ಯುವಕ ಮಂಡಳದ ಸಚಿನ ಅರ್ಗೇಕರ ಮಾತನಾಡಿದರು. ರಾಘವೇಂದ್ರ ಸೇವಾ ಸಮಿತಿ ಅಧ್ಯಕ್ಷ ಡಿ.ಡಿ. ಮಾಡಗೇರಿ, ಗಣಪತಿ ಶೆಟ್ಟಿ, ಗೌತಮ, ವಿಶಾಲ ನಾಯ್ಕ, ಸಂತೋಷ ಕಾರಳ್ಳಿ, ಮಂಜುನಾಥ ದೇಶಳ್ಳಿ, ಸಂತೋಷ ನಾಯ್ಕ, ಲೋಹಿತ ಕಾನಡೆ ನೂರಾರು ಸಾರ್ವಜನಿಕರು ಇದ್ದರು.ಗ್ರಾಮಸ್ಥರಿಂದಲೆ ರಸ್ತೆ ದುರಸ್ತಿ ಕಾರ್ಯ

ಜೋಯಿಡಾ: ತಾಲೂಕಿನ ಗಾಂಗೋಡಾ ರಸ್ತೆಯನ್ನು ಗ್ರಾಮಸ್ಥರೇ ದುರಸ್ತಿ ಮಾಡುವ ಮೂಲಕ ಮಾದರಿಯಾಗಿದ್ದಾರೆ.ಗಾಂಗೋಡಾ ರಸ್ತೆ ತುಂಬಾ ಹಾಳಾಗಿತ್ತು. ಕಳೆದ ಎಂಟು ವರ್ಷಗಳ ಹಿಂದೆ ₹4 ಕೋಟಿ ವೆಚ್ಚದಲ್ಲಿ ರಸ್ತೆಯನ್ನು ನಿರ್ಮಿಸಲಾಗಿತ್ತು. ಸರಿಯಾಗಿ ರಸ್ತೆ ನಿರ್ಮಿಸದ ಕಾರಣ ಹಾಳಾಗಿತ್ತು. ಅತಿಯಾದ ಮಳೆಯಿಂದ ಹಾಳಾದ ರಸ್ತೆಯನ್ನು ಇಲಾಖೆಯವರು ಸರಿಪಡಿಸದ ಕಾರಣ ಗ್ರಾಮಸ್ಥರೇ ರಸ್ತೆ ದುರಸ್ತಿ ಮಾಡಿದ್ದಾರೆ. ಇದರಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಶಾಲೆ- ಕಾಲೇಜುಗಳಿಗೆ ಹೋಗಲು ಬಸ್ ಸೇವೆ ಆರಂಭಿಸಲು ಅನುಕೂಲ ಆಗಲಿದೆ. ಕಳೆದ ಮೂರು ವರ್ಷಗಳಿಂದ ಗ್ರಾಮಸ್ಥರೇ ಮರಾಠ ಸಮಾಜದ ಅಧ್ಯಕ್ಷ ಚಂದ್ರಕಾಂತ ದೇಸಾಯಿ ನೇತೃತ್ವದಲ್ಲಿ ರಸ್ತೆ ದುರಸ್ತಿ ಮಾಡುತ್ತಿದ್ದು, ಈ ವರ್ಷ ಗಾಂಗೋಡಾ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರವೀಣ ದೇಸಾಯಿ ಕೂಡಾ ಸಾಥ್‌ ನೀಡಿದ್ದಾರೆ.