ಶಿರಹಟ್ಟಿ: ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಕೆಲಸ ಒದಗಿಸದಿರುವುದನ್ನು ಖಂಡಿಸಿ ಕೂಲಿ ಕಾರ್ಮಿಕರು ತಾಲೂಕಿನ ಮಜ್ಜೂರ ಗ್ರಾಮ ಪಂಚಾಯಿತಿ ಕಾರ್ಯಾಲಯಕ್ಕೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು. ಕೂಡಲೇ ಕೆಲಸ ನೀಡುವಂತೆ ಆಗ್ರಹಿಸಿ ಪಿಡಿಒ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಈ ವೇಳೆ ಪ್ರತಿಭಟನಾನಿರತರು ಮಾತನಾಡಿ, ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ೧೫೦ ಮಾನವ ದಿನಗಳ ಕೂಲಿ ಕೆಲಸ ನೀಡಬೇಕೆಂದು ಮಜ್ಜೂರ ಗ್ರಾಪಂ ಪಿಡಿಒಗೆ ಹಲವು ಬಾರಿ ಕೇಳಿಕೊಂಡರೂ ಸ್ಪಂದಿಸುತ್ತಿಲ್ಲ. ತಮಗೆ ಬೇಕಾದವರಿಗೆ ಮಾತ್ರ ಕಾಮಗಾರಿ ಮಾಡಿಸದೇ ಬಿಲ್ ನೀಡುತ್ತಿರುವುದು ಗಮನಕ್ಕೆ ಬಂದಿದೆ. ಹೊಸ ಕಾಮಗಾರಿಗಳನ್ನು ನೀಡದಿರುವ ಅಧಿಕಾರಿ ವಿರುದ್ಧ ಹರಿಹಾಯ್ದರು.ಮೊದಲು ಮುಂಗಾರು ಮಳೆ ಅಬ್ಬರಿಸಿ ಹೋಗಿದ್ದು, ಹೊಲ ಹದ ಮಾಡಿ ಹೆಸರು, ಗೋವಿನಜೋಳ, ತೊಗರಿ ಸೇರಿದಂತೆ ಇನ್ನಿತರ ಬೆಳೆ ಬೆಳೆದು ಮಳೆಗಾಗಿ ಆಕಾಶದತ್ತ ಮುಖ ಮಾಡಿದ್ದು, ಮಳೆಯೂ ಬರುತ್ತಿಲ್ಲ. ಸಧ್ಯ ಹೊಲದಲ್ಲಿಯೂ ಕೆಲಸವಿಲ್ಲದೆ ಜೀವನ ಸಾಗಿಸುವುದು ಕಷ್ಟವಾಗಿದೆ. ಪಂಚಾಯಿತಿಗೆ ಆಡಳಿತಾಧಿಕಾರಿಯಾಗಿ ನೇಮಕಗೊಂಡಿರುವ ಹಿರಿಯ ಅಧಿಕಾರಿಗಳು ಪಿಡಿಒ ಅವರಿಗೆ ನಿರ್ದೇಶನ ನೀಡಬೇಕು ಎಂದು ಆಗ್ರಹಿಸಿದರು.ಪಿಡಿಒ ಗ್ರಾಮದಲ್ಲಿ ಡಂಗೂರ ಸಾರಿಸದೇ ತಮಗೆ ಬೇಕಾದವರಿಗೆ ಮಾತ್ರ ಕೆಲಸ ನೀಡಿ ಬಿಲ್ ತೆಗೆಯುತ್ತಿದ್ದಾರೆ. ಉಳಿದವರೆಲ್ಲರಿಗೂ ಜಾಬ್ ಕಾರ್ಡ್ ಮಾಡಿಸಿ, ಬ್ಯಾಂಕ್ ಖಾತೆ ಲಿಂಕ್ ಮಾಡಿಸಿ ಅಂತೆಲ್ಲ ಸಬೂಬ ಹೇಳುತ್ತಾ ಸತಾಯಿಸುತ್ತಿದ್ದಾರೆ. ಕೆರೆ, ಕಾಲುವೆ ಹೂಳು ತೆಗೆಯುವುದು, ಬದು ನಿರ್ಮಾಣದಂಥ ಅನೇಕ ಕಾಮಗಾರಿಗಳು ಇರುವುದರಿಂದ ಯಾವೊಂದು ಕಾಮಗಾರಿಯನ್ನು ಕೂಲಿ ಕೆಲಸಗಾರರಿಗೆ ನೀಡದೇ ಬೇಜವಾಬ್ದಾರಿ ತೋರುತ್ತಿದ್ದಾರೆ ಎಂದು ಆರೋಪಿಸಿದರು.ಕಾಮಗಾರಿ ವಾಸ್ತವಾಗಿ ನಡೆಯದೇ ಇದ್ದರೂ ಅದರ ಹೆಸರಿನಲ್ಲಿ ಬಿಲ್ ಪಾವತಿ ಮಾಡಿಸಿಕೊಂಡಿದ್ದಾರೆ. ತಮಗೆ ಬೇಕಾದ ಕಾರ್ಮಿಕರ ಹೆಸರಿನಲ್ಲಿ ತಾವೇ ಜಾಬ್ ಕಾರ್ಡ್ ಮೂಲಕ ಹಣ ಜಮೆ ಮಾಡಿಸಿ ನಿಜವಾದ ಕೃಷಿ ಕೂಲಿ ಕಾರ್ಮಿಕರಿಗೆ ಪಂಚಾಯಿತಿ ಅಧಿಕಾರಿಗಳು ಮೋಸ ಮಾಡುತ್ತಿದ್ದಾರೆ. ಜಿಪಂ ಸಿಇಒ ಹಾಗೂ ಗ್ರಾಪಂ ಆಡಳಿತಾಧಿಕಾರಿಗಳು ನಿಷ್ಪಕ್ಷಪಾತ ತನಿಖೆ ನಡೆಸಿ ದುರ್ಬಳಕೆಯಾಗಿರುವ ಸರ್ಕಾರತದ ಲಕ್ಷಾಂತರ ಹಣ ಪತ್ತೆ ಮಾಡಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.

ಪ್ರತಿಭಟನೆಯಲ್ಲಿ ದೇವಕ್ಕ ವೆಂಕಟಾಪೂರ, ಜೈತುನಬಿ ಹಳ್ಳಿ, ರತ್ನವ್ವ ಶೆರೇವಾಡ, ಮಾಬೂಸಾಬ ಸೊರಟೂರ, ಮಂಜನಗೌಡ ಪಾಟೀಲ, ದೇವಪ್ಪ ಛಬ್ಬಿ, ನೂರಜಾನಬಿ ಜಂಗಳಿ, ಬಶೀರ ಹೆಸರೂರ, ಚನ್ನವ್ವ ನೋಟಗಾರ, ಮಂಜವ್ವ ಗುಬ್ಬಿ, ಸೋಮವ್ವ ನೋಟಗಾರ, ಬಸವಣ್ಣೆವ್ವ ಬೂದಿಹಾಳ, ಮಂಜಕ್ಕ ನೋಟಗಾರ, ಮಹಾಂತೇಶ ಶೆರೇವಾಡ, ದುರಗವ್ವ ನೋಟಗಾರ ಸೇರಿದಂತೆ ಅನೇಕರು ಇದ್ದರು.

ಎರಡ್ಮೂರು ದಿನದಲ್ಲಿ ಕೆಲಸ: ಉದ್ಯೋಗ ಖಾತರಿ ಕೆಸಲಕ್ಕೆ ಬರುವಂತೆ ಗ್ರಾಮದಲ್ಲಿ ಡಂಗೂರ ಸಾರಿ ಸಾರ್ವಜನಿಕರಿಗೆ ತಿಳಿಸಲಾಗಿದೆ. ಮೊದಲು ಆಧಾರ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ನೀಡಬೇಕು. ನಿಮ್ಮ ಖಾತೆ ಲಿಂಕ್ ಆದ ಬಳಿಕ ನೇರವಾಗಿ ನಿಮಗೆ ಕೂಲಿ ಹಣ ದೊರೆಯುತ್ತದೆ ಎಂದು ತಿಳಿಸಲಾಗಿದೆ. ಎರಡ್ಮೂರು ದಿನಗಳಲ್ಲಿ ತಪ್ಪದೇ ಗ್ರಾಮದ ಜನರಿಗೆ ಉದ್ಯೋಗ ಖಾತರಿ ಕೆಲಸ ನೀಡಲಾಗುವುದು ಎಂದು ಮಜ್ಜೂರ ಗ್ರಾಮ ಪಂಚಾಯಿತಿ ಪಿಡಿಒ ಎಸ್.ಎಫ್. ಹಿರೇಮಠ ತಿಳಿಸಿದರು.