ಸೋಮರಡ್ಡಿ ಅಳವಂಡಿ ಕೊಪ್ಪಳ

ಕಾರ್ಖಾನೆಗಳ ವಿರುದ್ಧ ಸುಮಾರು 20 ವರ್ಷಗಳಿಂದ ನಡೆಯುತ್ತಿದ್ದ ಹೋರಾಟ ಈಗ ಬಿಎಸ್ ಪಿಎಲ್ ಕಾರ್ಖಾನೆ ಸ್ಥಾಪನೆಯ ವಿರುದ್ಧ ಕಳೆದ ವರ್ಷ ಗವಿಸಿದ್ಧೇಶ್ವರ ಮಹಾಸ್ವಾಮೀಜಿಗಳ ನೇತೃತ್ವದಲ್ಲಿ ತೀವ್ರ ಸ್ವರೂಪ ಪಡೆದುಕೊಂಡ ನಂತರ ಕೊಪ್ಪಳ ಬಚಾವೋ ಆಂದೋಲನ ಸಮಿತಿ ಹಾಗೂ ಕೊಪ್ಪಳ ತಾಲೂಕು ಪರಿಸರ ಹಿತರಕ್ಷಣಾ ವೇದಿಕೆ ನಿರಂತರ ಹೋರಾಟದಿಂದ ತಾರ್ಕಿಕ ಅಂತ್ಯ ಕಾಣುವ ಲಕ್ಷಣಗಳಿವೆ.

ಅದರಲ್ಲೂ ಹಿರೇಬಗನಾಳ ಗ್ರಾಮ ಹಾಗೂ ಸುತ್ತಮುತ್ತಲ ಗ್ರಾಮಸ್ಥರು ರೊಚ್ಚಿಗೆದ್ದು ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿರುವುದರಿಂದ ಈಗ ತ್ಯಾಜ್ಯ ಹೊರಹಾಕಿ ಜನ, ಜಾನುವಾರುಗಳ ಪ್ರಾಣಕ್ಕೆ ಕುತ್ತಾಗಿರುವ ಕಾರ್ಖಾನೆಗಳಿಗೆ ಬೀಗ ಬೀಳುವ ಕಾಲ ಹತ್ತಿರ ಬಂದಂತೆ ಕಾಣುತ್ತಿದೆ.

ಶಾಸಕ ರಾಘವೇಂದ್ರ ಹಿಟ್ನಾಳ ಅವರನ್ನು ಹಿರೇಬಗನಾಳ ಗ್ರಾಮಸ್ಥರು ಪ್ರಶ್ನೆ ಮಾಡಿದ್ದು ಅಲ್ಲದೆ, ನಮ್ಮೂರ ಸಮಸ್ಯೆ ನೀಗಿಸಿ ಎಂದು ಪಟ್ಟು ಹಿಡಿದು ತರಾಟೆಗೆ ತೆಗೆದುಕೊಂಡ ಬಳಿಕ ಖುದ್ದು ಶಾಸಕ ರಾಘವೇಂದ್ರ ಹಿಟ್ನಾಳ ಈಗ ಅಖಾಡಕ್ಕೆ ಇಳಿದಿದ್ದಾರೆ.

ಅಷ್ಟೇ ಅಲ್ಲ, ಹಿರೇಬಗನಾಳ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಜನರು ತಾವು ಅನುಭವಿಸುತ್ತಿದ್ದ ಯಾತನೆಯನ್ನು ಎಳೆ ಎಳೆಯಾಗಿ ಬಿಡಿಸಿಟ್ಟಿದ್ದಾರೆ. ನಮ್ಮನ್ನು ಇದರಿಂದ ಪಾರು ಮಾಡಿ ಇಲ್ಲವೇ ದಯಾಮರಣವನ್ನಾದರು ಕರುಣಿಸಿ ಎಂದು ಮಹಿಳೆಯರು ಪರಿಪರಿಯಾಗಿ ಬೇಡಿಕೊಂಡಿದ್ದಾರೆ.


ಈ ಹೊಗೆಯ ಕೂಪ, ಧೂಳಿನ ಗೋಳಿನಲ್ಲಿ, ಕರಿಬೂದಿಯ ಮಸಿಯ ಮಧ್ಯೆ ನಾವು ಬದುಕುವುದು ಸಾಧ್ಯವೇ ಇಲ್ಲ. ಕಾರ್ಖಾನೆಗಳನ್ನಾದರೂ ಬಂದ್ ಮಾಡಿ, ಇಲ್ಲವೇ ನಮ್ಮನ್ನಾದರು ಸ್ಥಳಾಂತರ ಮಾಡಿ ಎಂದು ಪಟ್ಟು ಹಿಡಿದಿದ್ದಾರೆ. ಇದ್ಯಾವುದು ಆಗದಿದ್ದರೆ ಮಸಿ, ಕರಿ ಬೂದಿ ಧೂಳಿನಿಂದಾದರೂ ಪಾರು ಮಾಡಿ ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಹಾಗೂ ಮಾಜಿ ಸಂಸದ ಸಂಗಣ್ಣ ಕರಡಿ ಎದುರು ಆಗ್ರಹ ಮಾಡಿದ್ದಾರೆ.

ಬೀಗ ಜಡಿಯಲು ಚಿಂತನೆ:

ಈ ನಡುವೆ ಕಾರ್ಖಾನೆಯ ಧೂಳು ನಿಯಂತ್ರ ಮಾಡಿ ಇಲ್ಲವೇ ಕಾರ್ಖಾನೆಗಳಿಗೆ ಬೀಗ ಜಡಿಯುವಂತೆ ಸೂಚಿಸಲಾಗಿದೆ. ಅಷ್ಟೇ ಅಲ್ಲ, ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ನರೇಂದ್ರಸ್ವಾಮಿ ಅವರಿಗೂ ಈ ಕುರಿತು ಮಾಹಿತಿ ನೀಡಲಾಗಿದೆ.

ಇದಾದ ಬೆಳವಣಿಗೆಯಿಂದ ಎಚ್ಚೆತ್ತಿರುವ ಮಾಲಿನ್ಯ ನಿಯಂತ್ರಣ ಮಂಡಳಿ ಮಾಹಿತಿ ಸಂಗ್ರಹಿಸಿದ್ದು, ಕಾರ್ಖಾನೆಯ ಅವಾಂತರ ಬೆಳಕಿಗೆ ಬಂದಿದೆ. ನಿಯಮ ಬಾಹೀರವಾಗಿ ಕಾರ್ಖಾನೆ ನಡೆಸಿದ್ದು ಅಲ್ಲದೆ. ಬಫರ್ ಜೋನ್ ಸಹ ಇಲ್ಲದೆ ಕಾನೂನು ಬಾಹೀರವಾಗಿ ಕಾರ್ಖಾನೆ ಶುರು ಮಾಡಲಾಗಿದೆ. ಇದಕ್ಕಿಂತ ಮಿಗಿಲಾಗಿ ಸ್ಟೀಲ್ ಕಾರ್ಖಾನೆ ನಡೆಸುವಾಗ ಅನುಸರಿಸಬೇಕಾದ ಶೇ.90 ರಷ್ಟು ನಿಯಮ ಪಾಲನೆಯೇ ಮಾಡಿಲ್ಲ. ಇದೆಲ್ಲವನ್ನು ಪ್ರತಿಷ್ಠಿತ ಕಾರ್ಖಾನೆಯೇ ಮಾಹಿತಿ ನೀಡಿದೆ ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಮತ್ತು ಪರಿಸರ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಹಿರೇಬಗನಾಳ ಗ್ರಾಮ ಸೇರಿದಂತೆ ಸುತ್ತಮುತ್ತಲು ಪ್ರದೇಶದಲ್ಲಿ ಸಭೆ ನಡೆಸಲಿದ್ದಾರೆ.

ಸಭೆಯಲ್ಲಿ ಕಾರ್ಖಾನೆಯ ಅಧಿಕಾರಿಗಳ ಉಪಸ್ಥಿತಿಗೂ ಸೂಚಿಸಲಾಗಿದೆ. ಇದೇ ವೇಳೆಯಲ್ಲಿ ಕಾರ್ಖಾನೆ ತಕ್ಷಣ ಬಂದ್ ಮಾಡಿ ನಂತರ ಆಗಿರುವ ಪರಿಸರ ಹಾನಿ ಪರಿಶೀಲನೆ ನಡೆಸಬೇಕು. ಹೀಗಾಗಿ ಕಾರ್ಖಾನೆಗಳಿಗೆ ಬೀಗ ಜಡಿಯುವ ಸಾಧ್ಯತೆ ದಟ್ಟವಾಗಿದೆ ಎಂದು ಹೇಳಲಾಗುತ್ತಿದೆ.

ಕಾರ್ಖಾನೆಗಳಿಂದ ವಿಪರೀತ ಸಮಸ್ಯೆಯಾಗಿರುವುದನ್ನು ಹಿರೇಬಗನಾಳ ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಮನವರಿಕೆ ಮಾಡಿದ್ದಾರೆ. ಹೀಗಾಗಿ, ಪರಿಸರ ಇಲಾಖೆಯ ಅಧಿಕಾರಿ, ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿಯೇ ಸಭೆ ನಡೆಸುವುದು. ನಿಯಮಾನುಸಾರ ಇರದ ಕಾರ್ಖಾನೆಗಳಿಗೆ ಬೀಗ ಹಾಕುವಂತೆ ಆಗ್ರಹಿಸಲಾಗುವುದು ಎಂದು ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ತಿಳಿಸಿದ್ದಾರೆ.

ಕಾರ್ಖಾನೆಗಳ ಸಮಸ್ಯೆಯಿಂದ ಜನರು ರೋಸಿ ಹೋಗಿದ್ದಾರೆ. ಅವರ ಆರೋಗ್ಯ ಹದಗೆಟ್ಟು ಹೋಗಿದೆ. ಇದರಿಂದ ಮುಕ್ತಿ ಕೊಡಿಸುವವರೆಗೂ ಹೋರಾಟ ಮುಂದುವರೆಯುತ್ತದೆ ಎಂದು ಹೋರಾಟಗಾರ ಡಿ.ಎಚ್.ಪೂಜಾರ ತಿಳಿಸಿದ್ದಾರೆ.