ಶೃಂಗೇರಿ ನ್ಯಾಯಾಲಯದಲ್ಲಿ ನಡೆದ ರಾಷ್ಟ್ರೀಯ ಲೋಕ್ ಅದಾಲತ್

ಕನ್ನಡಪ್ರಭ ವಾರ್ತೆ, ಶೃಂಗೇರಿ

ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳಲ್ಲಿ ಕಾನೂನಿನ ಪ್ರಕಾರ ರಾಜಿಯಾಗಬಹುದಾದ ಮತ್ತು ವ್ಯಾಜ್ಯಪೂರ್ವ ಪ್ರಕರಣಗಳನ್ನು ರಾಜಿ ಸಂದಾನದ ಮೂಲಕ ಇತ್ಯರ್ಥಪಡಿಸುವ ಉದ್ದೇಶದಿಂದ ಲೋಕ್ ಅದಾಲತ್ ಆಯೋಜಿಸಲಾಗುತ್ತಿದೆ ಎಂದು ಶೃಂಗೇರಿ ಸಿವಿಲ್ ಹಾಗೂ ಜೆಎಂಎಫ್ ಸಿ ನ್ಯಾಯಾಲಯದ ನ್ಯಾಯಾಧೀಶ ಆರ್.ಎಸ್.ಜೀತು ಹೇಳಿದರು.

ಶನಿವಾರ ಶೃಂಗೇರಿ ನ್ಯಾಯಾಲಯದಲ್ಲಿ ನಡೆದ ರಾಷ್ಟ್ರೀಯ ಲೋಕ್ ಅದಾಲತ್ ನಲ್ಲಿ ಮಾತನಾಡಿದರು. ನ್ಯಾಯಾಲಯಗಳಲ್ಲಿ ಅನೇಕ ವರ್ಷಗಳಿಂದ ಇತ್ಯರ್ಥವಾಗದೇ ಸಿವಿಲ್, ಕ್ರಿಮಿನಲ್ ಸಹಿತ ಬ್ಯಾಂಕ್ ಪ್ರಕರಣಗಳು, ಕೌಟುಂಬಿಕ ಕಲಹ ಪ್ರಕರಣಗಳು ಬಾಕಿ ಉಳಿದಿವೆ. ಅವುಗಳಲ್ಲಿ ರಾಜಿ ಸಂದಾನಕ್ಕೆ ಬರಬಹುದಾದ ಪ್ರಕರಣಗಳು ಇತ್ಯರ್ಥ ಪಡಿಸಲಾಗುತ್ತದೆ.

ಸಮಸ್ಯೆ, ವ್ಯಾಜ್ಯಗಳಿಂದ ಮುಕ್ತರಾಗಿ ಸಮಾಜದಲ್ಲಿ ಒಳ್ಳೆಯ ಜೀವನ ನಡೆಸಬೇಕು. ವರ್ಷಗಟ್ಟಲೆ ಕಾನೂನು ಸಮರ ನಡೆಸುತ್ತಿರುವ ಬಡಜನರಿಗೆ ಕಾನೂನು ನೆರವು ನೀಡುವ ನಿಟ್ಟಿನಲ್ಲಿ ಆರಂಭವಾದ ಲೋಕ್ ಅದಾಲತ್ ಸಾಕಷ್ಟು ಯಶಸ್ವಿ ಕಾಣುತ್ತಿದೆ. ಜನರ ಸಮಸ್ಯೆ ತ್ವರಿತವಾಗಿ ಇತ್ಯರ್ಥಗೊಳೀಸುವ ಜೊತೆಗೆ ಜನರಿಗೆ ನ್ಯಾಯಾಂಗದ ಮೇಲೆ ಹೆಚ್ಚು ನಂಬಿಕೆ ಬರಬೇಕು. ಸಾರ್ವಜನಿಕರು ಲೋಕ್ ಅದಾಲತ್ ಸದುಪಯೋಗಪಡಿಸಿಕೊಳ್ಳಬೇಕು ಎಂದರು.


ಇದೇ ಸಂದರ್ಭದಲ್ಲಿ ಕೌಟುಂಬಿಕ ಕಲಹದಿಂದ ದೂರವಾಗಿದ್ದ ಕಾವ್ಯ ಹಾಗೂ ಮಣಿಕಂಠ ಕುಟುಂಬವನ್ನು ರಾಜಿ ಸಂದಾನದ ಮೂಲಕ ಒಂದು ಗೂಡಿಸಲಾಯಿತು. ಸಿವಿಲ್ ಕ್ರಿಮಿನಲ್ ಪ್ರಕರಣಗಳು ಸೇರಿದಂತೆ ಒಟ್ಟು 91 ಪ್ರಕರಣಗಳನ್ನು ವಿಚಾರಣೆಗೆ ತೆಗೆದುಕೊಂಡು ಒಟ್ಟು 85 ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಯಿತು. ಸಿವಿಲ್ ಪ್ರಕರಣಗಳು 2, ಚೆಕ್ ಅಮಾನ್ಯ ಪ್ರಕರಣಗಳು 22, ಬ್ಯಾಂಕ್ ಪ್ರಕರಣಗಳು 6, ಪೊಲೀಸ್ ಪ್ರಕರಣಗಳು 42, ಜನನ ಮರಣ ನೋಂದಣಿ ಪ್ರಕರಣಗಳು 9, ಕೌಟುಂಬಿಕ ಕಲಹ ಪ್ರಕರಣ 1, ಜೀವನಾಂಶ ಪ್ರಕರಣ 1, ರಾಜಿ ಸಂದಾನದ ಮೂಲಕ ಇತ್ಯರ್ಥಪಡಿಸಲಾಯಿತು. ಮದ್ಯಸ್ಥಗಾರರಾಗಿ ವಕೀಲೆ ರಾಜೇಶ್ವರಿ ಹೆಗ್ಡೆ, ವಕೀಲರ ಸಂಘದ ಅಧ್ಯಕ್ಷ ಮಹೇಶ್, ವಕೀಲರು, ವಿವಿಧ ಇಲಾಖೆಯ ಅಧಿಕಾರಿಗಳು ಅದಾಲತ್ ನಲ್ಲಿ ಉಪಸ್ಥಿತರಿದ್ದರು.

14 ಶ್ರೀ ಚಿತ್ರ 1-

ಶೃಂಗೇರಿ ನ್ಯಾಯಾಲಯದಲ್ಲಿ ನಡೆದ ಲೋಕ್ ಅದಾಲತ್ ನಲ್ಲಿ ಕೌಟುಂಬಿಕ ಕಲಹದಿಂದ ದೂರಾಗಿದ್ದ ದಂಪತಿಯನ್ನು ನ್ಯಾ.ಆರ್.ಎಸ್.ಜೀತು ಸಮ್ಮುಖದಲ್ಲಿ ರಾಜಿ ಸಂದಾನದ ಮೂಲಕ ಒಂದುಗೂಡಿಸಲಾಯಿತು.