ನವಲಗುಂದ:
ಬೃಹತ್ ರಾಷ್ಟ್ರೀಯ ಲೋಕ ಅದಾಲತ್ ಮೂಲಕ 706 ಪ್ರಕರಣ ಇತ್ಯರ್ಥಗೊಂಡಿವೆ ಎಂದು ಹಿರಿಯ ಸಿವಿಲ್ ಹಾಗೂ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ಮಂಜುನಾಥ .ಪಿ. ಪಾನಘಂಟಿ ತಿಳಿಸಿದರು.ಪಟ್ಟಣದ ನ್ಯಾಯಾಲಯಗಳ ಸಂಕೀರ್ಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿಯಿಂದ ಆಯೋಜಿಸಿದ್ದ ರಾಷ್ಟ್ರೀಯ ಲೋಕ ಅದಾಲತ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಕಕ್ಷಿದಾರರು ತಮ್ಮ ವಿವಾದಗಳನ್ನು ಸೌಹಾರ್ದ ಮತ್ತು ತ್ವರಿತವಾಗಿ ಪರಿಹರಿಸಿಕೊಳ್ಳಲು ಲೋಕ ಅದಾಲತ್ ಸಹಾಯವಾಗಿದೆ. ಚೆಕ್ ಬೌನ್ಸ್, ಹಣ ವಸೂಲಾತಿ, ಮೋಟಾರು ವಾಹನ, ಸಿವಿಲ್, ಜನನ ನೋಂದಣಿ, ಲಘು ಪ್ರಕರಣ, ಪೂರ್ವ ವಾಜ್ಯ ಪ್ರಕರಣಗಳು ಸೇರಿದಂತೆ ವಿವಿಧ ಒಟ್ಟು 918 ಪ್ರಕರಣಗಳಲ್ಲಿ 706 ಪ್ರಕರಣ ಇತ್ಯರ್ಥಗೊಳಿಸಲಾಗಿದೆ ಎಂದರು.ಕಕ್ಷಿದಾರರು ನ್ಯಾಯಾಲಯಕ್ಕೆ ಬರುವುದನ್ನು ಕಡಿಮೆ ಮಾಡಬೇಕು. ರಾಜಿ ಮೂಲಕ ಅನೇಕ ಸಮಸ್ಯೆ, ವ್ಯಾಜ್ಯಗಳನ್ನು ಇತ್ಯರ್ಥಪಡಿಸಬಹುದು. ಈ ಉದ್ದೇಶದಿಂದಲೇ ಲೋಕ ಅದಾಲತ್ ನಡೆಸಲಾಗುತ್ತಿದೆ. ಕಕ್ಷಿದಾರರಿಗೆ ಶೀಘ್ರ ನ್ಯಾಯ ಒದಗಿಸಲು ಮತ್ತು ಅವರ ಸಮಯ, ಸಂಬಂಧ, ಹಣ ಉಳಿಸಲು ಲೋಕ ಅದಾಲತ್ ನಲ್ಲಿ ರಾಜಿಸೂತ್ರದ ಮೂಲಕ ಪ್ರಕರಣ ಇತ್ಯರ್ಥಪಡಿಸಲಾಗುತ್ತಿದೆ ಎಂದು ಹೇಳಿದರು.
ಸಿವಿಲ್ ಹಾಗೂ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ನವೀನ ಡಿಸೋಜ, ಸಹಾಯಕ ಸರ್ಕಾರಿ ಅಭಿಯೋಜಕ ಆನಂದ ಮುರಾಳ, ವಕೀಲ ಪಿ.ಸಿ. ಹಿರೇಮಠ, ಎಸ್.ಎಸ್. ಸೋಮನಕಟ್ಟಿ, ವಿ.ಟಿ. ಕುಲಕರ್ಣಿ, ವಿ.ಪಿ. ಪಾಟೀಲ, ಪಿ.ಎಚ್. ಕೋನರಡ್ಡಿ ಸೇರಿದಂತೆ ಹಲವರಿದ್ದರು.