ಲೋಕಸಭೆ ಚುನಾವಣೆ ಬಹಿಷ್ಕಾರದ ಎಚ್ಚರಿಕೆ

| Published : Apr 20 2024, 01:09 AM IST

ಲೋಕಸಭೆ ಚುನಾವಣೆ ಬಹಿಷ್ಕಾರದ ಎಚ್ಚರಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ಕುಕನೂರು ಪಟ್ಟಣದ ಗುದ್ನೇಪ್ಪನಮಠದ ಆವರಣದಲ್ಲಿ ತಾಲೂಕಾಡಳಿತ ಕಟ್ಟಡ ನಿರ್ಮಾಣ ಮಾಡುವುದನ್ನು ವಿರೋಧಿಸಿ ಸ್ಥಳೀಯ ನಿವಾಸಿಗಳು ಲೋಕಸಭೆ ಚುನಾವಣೆ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ.

ಕುಕನೂರು: ಪಟ್ಟಣದ ಗುದ್ನೇಪ್ಪನಮಠದ ಆವರಣದಲ್ಲಿ ತಾಲೂಕಾಡಳಿತ ಕಟ್ಟಡ ನಿರ್ಮಾಣ ಮಾಡುವುದನ್ನು ವಿರೋಧಿಸಿ ಸ್ಥಳೀಯ ನಿವಾಸಿಗಳು ಲೋಕಸಭೆ ಚುನಾವಣೆ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ.

ಇತ್ತೀಚೆಗೆ ಗುದ್ನೇಪ್ಪನಮಠದ ಜಾಗದಲ್ಲಿ ಧಾರ್ಮಿಕ ದತ್ತಿ ಇಲಾಖೆ ಒಟ್ಟು 26 ಎಕರೆ ಜಮೀನನ್ನು ತಾಲೂಕಾಡಳಿತ ಕಟ್ಟಡ, ಬುದ್ಧ, ಬಸವ, ಅಂಬೇಡ್ಕರ್ ಭವನ ನಿರ್ಮಾಣ, ಕೋರ್ಟ್‌ ನಿರ್ಮಾಣಕ್ಕೆ ಮಂಜೂರು ಮಾಡಿ ಆದೇಶಿಸಿತ್ತು. ಇದಕ್ಕೆ ನಾವುಗಳು ಒಪ್ಪುವುದಿಲ್ಲ. ಮಠದ ಜಾಗದಲ್ಲಿ ಯಾವುದೇ ಸರ್ಕಾರದ ಕಟ್ಟಡ ನಿರ್ಮಾಣ ಬೇಡ ಎಂದು ಆಗ್ರಹಿಸಿ ಚುನಾವಣೆ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ.

ತಹಸೀಲ್ದಾರ್‌ಗೆ ಮನವಿ ಸಲ್ಲಿಸಿರುವ ನಿವಾಸಿಗಳು, ಪ್ರತಿವರ್ಷ ಹೊಸ್ತಿಲ ಹುಣ್ಣಿಮೆಯ ದಿನದಂದು ನಡೆಯುವ ಗುದ್ನೆಶ್ವರ ಜಾತ್ರೆಗೆ ಲಕ್ಷಾಂತರ ಜನ ಸೇರುತ್ತಾರೆ. ವರ್ಷದಿಂದ ವರ್ಷಕ್ಕೆ ಭಕ್ತಾದಿಗಳ ಸಂಖ್ಯೆ ಹೆಚ್ಚಾಗುತ್ತದೆ. ಆದರೆ ಈಗ ಸರ್ಕಾರ ಗುದ್ನೆಪ್ಪನ ಮಠದ ಆವರಣದಲ್ಲಿ ಸರ್ಕಾರಿ ಕಟ್ಟಡಗಳನ್ನು ನಿರ್ಮಾಣ ಮಾಡಲು ಮುಂದಾಗುತ್ತಿದೆ. ಇದರಿಂದ ನಿವಾಸಿಗಳಿಗೆ, ಸೇವಾದಾರರಿಗೆ ಹಾಗೂ ಜಾತ್ರೆಗೆ ಬರುವ ಭಕ್ತಾದಿಗಳಿಗೆ ಅನಾನುಕೂಲವಾಗಲಿದ್ದು, ಕೂಡಲೇ ಜಾಗವನ್ನು ಸ್ಥಳಾಂತರ ಮಾಡಬೇಕು. ಇಲ್ಲದಿದ್ದರೆ ಬರುವ ಲೋಕಸಭಾ ಚುನಾವಣೆಗೆ ಬಹಿಷ್ಕಾರ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಮಠದ 18 ಜನ ಸೇವಾದಾರರು ಸುಮಾರು ವರ್ಷಗಳಿಂದ ಸೇವೆ ಮಾಡುತ್ತಾ ಬಂದಿದ್ದು ಸೇವಾದಾರರಿಗೆ ಉಪಜೀವನ ನಡೆಸಲು ಮಠದ ಜಮೀನು ನೀಡುವಂತೆ ನ್ಯಾಯಾಲಯ ಆದೇಶ ಮಾಡಿದೆ. ನಮ್ಮ ಕುಟುಂಬಗಳು ಅದೇ ಜಮೀನಿನ ಮೇಲೆ ಅವಲಂಬಿತವಾಗಿದ್ದು, ವ್ಯವಸಾಯ ಮಾಡಿಕೊಂಡು ಜೀವನ ನಡೆಸುತ್ತಿದ್ದೇವೆ. ವ್ಯವಸಾಯ ಮಾಡುವ ಜಮೀನನ್ನೇ ತಾವು ಸರ್ಕಾರಿ ಕಚೇರಿಗಳಿಗೆ ಗುರುತು ಮಾಡಿದ್ದು, ಇದರಿಂದ 40 ರಿಂದ 50 ಕುಟುಂಬಗಳು ಬೀದಿ ಪಾಲಾಗುತ್ತವೆ. ಪಟ್ಟಣದ ಕೇಂದ್ರ ಸ್ಥಾನದಲ್ಲಿಯೇ ಸರ್ಕಾರಿ ಕಟ್ಟಡ ನಿರ್ಮಿಸಲು ಸಾಕಷ್ಟು ಸರ್ಕಾರಿ ಜಮೀನುಗಳಿವೆ. ಆದರೆ ಉದ್ದೇಶ ಪೂರ್ವಕವಾಗಿಯೇ ಗುದ್ನೇಪ್ಪನ ಮಠದ ಆಸ್ತಿಯ ಮೇಲೆ ಕಣ್ಣು ಬಿದ್ದಿದೆ. ಮಠದ ಜಾಗ ಬಿಟ್ಟು ಬೇರೆ ಕಡೆ ಸರ್ಕಾರಿ ಕಟ್ಟಡ ನಿರ್ಮಿಸಲು ಮುಂದಾಗಬೇಕು ಆಗ್ರಹಿಸಿದ್ದಾರೆ.

ತಹಸೀಲ್ದಾರ್ ಕಚೇರಿ ಸಿಬ್ಬಂದಿ ಗಿರೀಶ್ ಮನವಿ ಸ್ವೀಕರಿಸಿದರು.

ವಾರ್ಡಿನ ನಿವಾಸಿಗಳಾದ ಗುದ್ನಯ್ಯ ಬಂಡಿ, ರುದ್ರಯ್ಯ ಗಲಬಿ, ಚನ್ನಬಸಯ್ಯ ದೂಪದ, ರುದ್ರಯ್ಯ ಇನಾಮದಾರ್, ಶರಣಯ್ಯ ಹುಣಸಿಮರದ, ಸಿದ್ದಲಿಂಗಯ್ಯ ಬಂಡಿ, ಜಗನ್ನಾಥ್ ಭೋವಿ, ರುದ್ರಯ್ಯ ವಿರೂಪಣ್ಣವರ್, ಮಲ್ಲಯ್ಯ ಹುಣಸಿಮರದ, ಶರಣಯ್ಯ ಹೂವಿನಾಳ, ಸಂಗಯ್ಯ ಬಂಡಿ ಇತರರು ಇದ್ದರು.