ಸಾರಾಂಶ
ಹಾವೇರಿ: ಲೋಕಸಭಾ ಚುನಾವಣೆಗೆ ಏ. ೧೨ರಂದು ಅಧಿಸೂಚನೆ ಹೊರಡಿಸಲಾಗುವುದು. ಶುಕ್ರವಾರದಿಂದಲೇ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ರಘುನಂದನ್ ಮೂರ್ತಿ ತಿಳಿಸಿದರು.ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಏ.೧೨ರಿಂದ ಸಾರ್ವತ್ರಿಕ ರಜಾದಿನ ಹೊರತುಪಡಿಸಿ ಏ.೧೯ರ ವರೆಗೆ ಬೆಳಗ್ಗೆ ೧೧ ಗಂಟೆಯಿಂದ ಮಧ್ಯಾಹ್ನ ೩ ಗಂಟೆವರೆಗೆ ಹಾವೇರಿ ಜಿಲ್ಲಾಧಿಕಾರಿಗಳ ಕಚೇರಿ ಕೋರ್ಟ್ ಹಾಲ್‌ನಲ್ಲಿ ನಾಮಪತ್ರ ಸಲ್ಲಿಸಬಹುದಾಗಿದೆ. ನಾಮಪತ್ರ ಸಲ್ಲಿಕೆಯ ಚುನಾವಣಾಧಿಕಾರಿಗಳ ಕೊಠಡಿಯಲ್ಲಿ ಸ್ಥಾಪಿಸಿರುವ ಗಡಿಯಾರದಲ್ಲಿ ತೋರಿಸುವ ಸಮಯವನ್ನೇ ಅಂತಿಮ ಎಂದು ಪರಿಗಣಿಸಲಾಗುತ್ತದೆ. ಮಧ್ಯಾಹ್ನ ೩ ಗಂಟೆ ನಂತರ ಯಾವುದೇ ಕಾರಣಕ್ಕೂ ನಾಮಪತ್ರಗಳನ್ನು ಸ್ವೀಕರಿಸಲಾಗುವುದಿಲ್ಲ. ಸಾರ್ವತ್ರಿಕ ರಜಾ ದಿನವಾದ ಏ. ೧೩ ಹಾಗೂ ೧೪ರಂದು ನಾಮಪತ್ರ ಸ್ವೀಕರಿಸುವುದಿಲ್ಲ ಎಂದು ಮಾಹಿತಿ ನೀಡಿದರು.ಏ. ೨೦ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಏ. ೨೨ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ಮೇ ೭ರಂದು ಬೆಳಗ್ಗೆ ೭ರಿಂದ ೬ ಗಂಟೆವರೆಗೆ ಮತದಾನ ನಡೆಯಲಿದೆ. ಜೂ. ೪ರಂದು ಮತ ಎಣಿಕೆ ನಡೆಯಲಿದೆ ಎಂದು ತಿಳಿಸಿದರು.ಚುನಾವಣಾಧಿಕಾರಿಗಳ ಕಚೇರಿಯ ಕಾರ್ಯಾಲಯದ ೧೦೦ ಮೀಟರ್ ಪರಿಧಿಯೊಳಗೆ ಕೇವಲ ಮೂರು ವಾಹನಗಳಿಗೆ ಮಾತ್ರ ಪ್ರವೇಶಾವಕಾಶವಿರುತ್ತದೆ. ನಾಮಪತ್ರಗಳ ಸ್ವೀಕೃತಿ ಕೊಠಡಿಯೊಳಗೆ ಐದು ಜನರಿಗೆ ಮಾತ್ರ ಪ್ರವೇಶವಿರುತ್ತದೆ. ಅಭ್ಯರ್ಥಿ, ಒಬ್ಬ ಸೂಚಕರು ಹಾಗೂ ಇತರೆ ಮೂರು ಜನರಿಗೆ ಅವಕಾಶವಿದೆ ಅಥವಾ ಅಭ್ಯರ್ಥಿ ಜೊತೆಗೆ ಇತರ ನಾಲ್ಕು ಜನರಿಗೆ ಅವಕಾಶವಿದೆ. ಅಭ್ಯರ್ಥಿ ಪರ ಸೂಚಕ ನಾಮಪತ್ರ ಸಲ್ಲಿಸಲು ಇಚ್ಛಿಸಿದರೆ ಅವರೊಂದೊಂದಿಗೆ ಇತರೆ ನಾಲ್ಕು ಜನರು ನಾಮಪತ್ರ ಸಲ್ಲಿಕೆ ವೇಳೆ ಕೊಠಡಿಯೊಳಗೆ ಪ್ರವೇಶಾವಕಾಶವಿದೆ ಎಂದು ತಿಳಿಸಿದರು.ಮಾನ್ಯತೆ ಪಡೆದ ನೋಂದಾಯಿತ ರಾಷ್ಟ್ರೀಯ ಮತ್ತು ರಾಜ್ಯ ಪಕ್ಷಗಳು ತಲಾ ಒಬ್ಬ ಸೂಚಕರನ್ನು ಹಾಗೂ ನೋಂದಾಯಿತ ಮತ್ತು ಪಕ್ಷೇತರ ಅಭ್ಯರ್ಥಿಗಳು ಹತ್ತು ಜನ ಸೂಚಕರ ಸಹಿಯೊಂದಿಗೆ ನಾಮಪತ್ರ ಸಲ್ಲಿಸಬೇಕು. ಅಭ್ಯರ್ಥಿ ಯಾವುದೇ ಮತಕ್ಷೇತ್ರವಾಗಿರಬಹುದು. ಆದರೆ ಸೂಚಕರು ಮಾತ್ರ ಹಾವೇರಿ ಲೋಕಸಭಾ ಮತ ಕ್ಷೇತ್ರದವರಾಗಿರಬೇಕು ಎಂದು ತಿಳಿಸಿದರು.ನಾಮಪತ್ರ ಸಲ್ಲಿಸುವಿಕೆ ಸಂದರ್ಭದಲ್ಲಿ ನಡೆಸಲಾಗುವ ಯಾವುದೇ ರ‍್ಯಾಲಿ ಮತ್ತು ಪ್ರಚಾರ ಸಭೆಗಳಿಗೆ ಅನುಮತಿ ಕಡ್ಡಾಯವಾಗಿದೆ. ಈ ಸಭೆ-ಸಮಾರಂಭಗಳ ವೆಚ್ಚವನ್ನು ಅಭ್ಯರ್ಥಿಗಳ ಚುನವಣಾ ವೆಚ್ಚಕ್ಕೆ ಸೇರಿಸಲಾಗುವುದು ಎಂದು ತಿಳಿಸಿದರು.೧,೬೦೦ ಜನ ಮನೆಯಿಂದ ಮತದಾನಕ್ಕೆ ಒಪ್ಪಿಗೆ: ಹಾವೇರಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಹಾವೇರಿ ಹಾಗೂ ಗದಗ ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ೧,೬೦೦ ಜನರು ಮನೆಯಿಂದಲೇ ಮತದಾನ ಮಾಡಲು ಒಪ್ಪಿಗೆ ನೀಡಿದ್ದಾರೆ. ೮೫ ವರ್ಷ ಮೇಲ್ಪಟ್ಟ ಹಾಗೂ ಅಂಗವಿಕಲರಿಗೆ ಮತಗಟ್ಟೆಗೆ ಬಂದು ಮತ ಚಲಾಯಿಸುವ ಬದಲು ಮನೆಯಲ್ಲೇ ಮತದಾನ ಮಾಡಲು ಇಚ್ಛಿಸುವವರು ೧೨ಡಿ ನಮೂನೆ ವಿತರಿಸಲಾಗಿತ್ತು. ಈ ಪೈಕಿ ೧,೬೦೦ ಜನ ಮನೆಯಲ್ಲೇ ಮತದಾನ ಮಾಡುವುದಾಗಿ ೧೨ಡಿ ನಮೂನೆಯನ್ನು ಭರ್ತಿಮಾಡಿ ಹಿಂದಿರುಗಿಸಿದ್ದಾರೆ ಎಂದರು.ಮತದಾನದ ದಿನ ಗೈರು ಹಾಜರಾತಿ ಮತದಾರರೆಂದು ಗುರುತಿಸಲಾದ ಅಗ್ನಿಶಾಮ ದಳ, ವೈದ್ಯಕೀಯ ಸಿಬ್ಬಂದಿ, ಮಾಧ್ಯಮ ಪ್ರತಿನಿಧಿಗಳಿಗೆ ೧೨ಡಿ ವಿತರಿಸಲಾಗಿತ್ತು. ಈ ಪೈಕಿ ೫೫೦ ಜನರಿಗೆ ಅವಕಾಶ ಕಲ್ಪಿಸಲಾಗಿದೆ ಎಂದರು.ಮತದಾನ ಪ್ರಕ್ರಿಯೆಗೆ ಈಗಾಗಲೇ ಜಿಲ್ಲಾಡಳಿತ ಎಲ್ಲ ಸಿದ್ಧತೆಗಳನ್ನು ಕೈಗೊಂಡು ಮತಗಟ್ಟೆ ಅಧಿಕಾರಿಗಳು ಹಾಗೂ ಸಹಾಯಕ ಮತಗಟ್ಟೆ ಅಧಿಕಾರಿಗಳಿಗೆ ಮೊದಲ ಸುತ್ತಿನ ತರಬೇತಿಯನ್ನು ನೀಡಲಾಗಿದೆ. ಚುನಾವಣಾ ಸಾಮಾನ್ಯ ವೀಕ್ಷಕರು ಕ್ಷೇತ್ರಕ್ಕೆ ಬಂದಾಗ ಮತಗಟ್ಟೆ ಅಧಿಕಾರಿಗಳ ಗಣಕೀಕೃತ ರ‍್ಯಾಂಡಮೈಜೇಷನ್ ಮಾಡಿ ಏ. ೩೦ರೊಳಗೆ ಎರಡನೇ ಸುತ್ತಿನ ತರಬೇತಿಯನ್ನು ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.ಇದುವರೆಗೂ ಜಿಲ್ಲೆಯಲ್ಲಿ ಯಾವುದೇ ಮಾದರಿ ನೀತಿ ಸಂಹಿತೆ ಉಲ್ಲಂಘನೆಯ ಪ್ರಕರಣಗಳು ದಾಖಲಾಗಿಲ್ಲ. ದಾಖಲೆಗಳಿಲ್ಲದೆ ಸಾಗಾಣಿಕೆ ಮಾಡುತ್ತಿದ್ದ ಹಣವನ್ನು ಪ್ರತ್ಯೇಕ ಪ್ರಕರಣಗಳಲ್ಲಿ ಒಟ್ಟಾರೆ ರು.೧೧.೪೩ ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ. ರು. ೮೧,೭೯,೫೨೯ ಮೊತ್ತದ ೩೫.೧೪೯ ಲೀಟರ್ ಮದ್ಯ ವಶಪಡಿಸಿಕೊಳ್ಳಲಾಗಿದೆ. ರು.೪೮,೩೮೪ ಮೊತ್ತದ ೧.೯೪ ಕೆ.ಜಿ. ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ. ರು.೫.೫೦ ಲಕ್ಷ ಮೊತ್ತದ ೯೭೫ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಕ್ರಮ ಮದ್ಯ ಸಾಗಾಣಿಕೆ ಬಳಸಿದ ೩೧ ವಾಹನಗಳನ್ನು ಸೀಜ್ ಮಾಡಲಾಗಿದೆ. ಇದರ ಮೊತ್ತ ರು.೧,೨೮ ಕೋಟಿ ಅಂದಾಜಿಸಲಾಗಿದೆ. ೫೫೨ ಅಬಕಾರಿ ಪ್ರಕರಣಗಳನ್ನು ದಾಖಲಿಸಲಾಗಿದೆ. ಒಟ್ಟಾರೆ ೨,೨೮ ಕೋಟಿ ರು. ಮೊತ್ತದ ವಸ್ತು, ಮದ್ಯ ಹಾಗೂ ನಗದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಲೋಕಸಭಾ ಚುನಾವಣೆಯ ಜಿಲ್ಲಾ ಮಾದರಿ ನೀತಿ ಸಂಹಿತೆ ನಿಗಾ ಸಮಿತಿ ಅಧ್ಯಕ್ಷ ಅಕ್ಷಯ್ ಶ್ರೀಧರ್ ಹಾಗೂ ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ ಉಪಸ್ಥಿತರಿದ್ದರು.