ಲೋಕಸಭಾ ಚುನಾವಣೆ ಮತಗಳು ಬಹುತೇಕ ಬಿಜೆಪಿ ಬುಟ್ಟಿಗೆ!

| Published : Apr 09 2024, 12:46 AM IST

ಸಾರಾಂಶ

ಈ ಬಾರಿ ಕಾಂಗ್ರೆಸ್‌ ಮತ್ತು ಬಿಜೆಪಿ ಪ್ರಮುಖ ಎದುರಾಳಿಯಾಗಿದ್ದರೂ, ಜೆಡಿಎಸ್‌ ಎನ್‌ಡಿಎ ಕೂಟದಲ್ಲಿ ಸೇರ್ಪಡೆಯಾಗಿರುವುದರಿಂದ ಭದ್ರಾವತಿ ವಿಧಾನಸಭಾ ಕ್ಷೇತ್ರದಲ್ಲಿ ಮತ ಹಂಚಿಕೆ ವ್ಯತ್ಯಾಸವಾಗುವ ಸಾಧ್ಯತೆ ಇದೆ

ಅನಂತಕುಮಾರ್

ಕನ್ನಡಪ್ರಭ ವಾರ್ತೆ ಭದ್ರಾವತಿ

ವಿಧಾನಸಭಾ ಚುನಾವಣೆ ಎಂದರೆ ಸಂಗಮೇಶ್‌ ಬಳಗ ಅಥವಾ ದಿ.ಅಪ್ಪಾಜಿಗೌಡರ ಬಳಗದ ನಡುವೆಯೇ ಕದನ. ಪಕ್ಷ ಯಾವುದೇ ಇರಲಿ, ಇವರ ನಡುವೆಯೇ ಯುದ್ಧ. 2009ರ ಬಳಿಕ ಲೋಕಸಭಾ ಚುನಾವಣೆ ಚಿತ್ರಣದಲ್ಲಿ ಮಾತ್ರ ಸ್ವಲ್ಪ ಬದಲಾವಣೆ. ಲೋಕಸಭಾ ಚುನಾವಣೆ ಮತಗಳಲ್ಲಿ ಬಹುತೇಕ ಬಿಜೆಪಿ ಬುಟ್ಟಿಗೆ! ಇದು ಯಾಕೆ ಮತ್ತು ಹೇಗೆ ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ.

ಇದೀಗ ಇನ್ನೊಂದು ಲೋಕಸಭಾ ಚುನಾವಣೆ ಎದುರಾಗಿದೆ. ಆದರೆ ಈ ಬಾರಿ ಪರಿಸ್ಥಿತಿ ಸ್ವಲ್ಪ ಭಿನ್ನ. ಹೀಗಾಗಿ ಈ ಚುನಾವಣೆಯಲ್ಲಿ ಮತ ಹಂಚಿಕೆ ಲೆಕ್ಕಾಚಾರದಲ್ಲಿ ಬದಲಾಗಬಹುದೇ ಎಂಬ ಕುತೂಹಲ ಎಲ್ಲರಲ್ಲಿ ಕಾಣುತ್ತಿದೆ.

ಈ ಬಾರಿ ಕಾಂಗ್ರೆಸ್‌ ಮತ್ತು ಬಿಜೆಪಿ ಪ್ರಮುಖ ಎದುರಾಳಿಯಾಗಿದ್ದರೂ, ಜೆಡಿಎಸ್‌ ಎನ್‌ಡಿಎ ಕೂಟದಲ್ಲಿ ಸೇರ್ಪಡೆಯಾಗಿರುವುದರಿಂದ ಭದ್ರಾವತಿ ವಿಧಾನಸಭಾ ಕ್ಷೇತ್ರದಲ್ಲಿ ಮತ ಹಂಚಿಕೆ ವ್ಯತ್ಯಾಸವಾಗುವ ಸಾಧ್ಯತೆ ಇದೆ. ಸಂಗಮೇಶ್‌ ಮತ್ತು ಅಪ್ಪಾಜಿ ಬಳಗ ಇಬ್ಬರಿಗೂ ತಮ್ಮ ಮತಗಳನ್ನು ಹಿಡಿದಿಟ್ಟುಕೊಳ್ಳುವ ಅನಿವಾರ್ಯತೆಯಂತೂ ಇದ್ದೇ ಇರುವುದರಿಂದ ಜೆಡಿಎಸ್‌ ತನ್ನ ಮತಗಳನ್ನು ಸಾರಸಗಟಾಗಿ ತನ್ನ ಮುಷ್ಟಿಯಿಂದ ಹಿಡಿದು ಬಿಜೆಪಿ ಸೆರಗಿಗೆ ಸುರಿಯಬಹುದು ಎಂಬ ಮಾತುಗಳಿವೆ. ಆದರೆ ಪಕ್ಷದ ಮುಖಂಡರು ವಿಧಾನಸಭಾ ಚುನಾವಣೆಯಲ್ಲಿ ಮತ ಬೇಟೆಗೆ ಇಳಿದಂತೆ ಈಗಲೂ ಇಳಿಯುತ್ತಾರೆಯೇ ಎಂಬುದು ಇನ್ನೂ ನಿಗೂಢ. ಇನ್ನೊಂದೆಡೆ ಕಾಂಗ್ರೆಸ್‌ ಪಾಳಯದಲ್ಲಿ ಶಾಸಕರಾಗಿ ಆಯ್ಕೆಯಾಗಿರುವ ಬಿ. ಕೆ. ಸಂಗಮೇಶ್‌ಗೆ ತನ್ನ ಮತಗಳನ್ನು ಹಿಡಿದಿಟ್ಟುಕೊಳ್ಳುವುದು ಅನಿವಾರ್ಯದ ಜೊತೆಗೆ ಪಕ್ಷದ ಹೈಕಮಾಂಡ್‌ ನೀಡಿರುವ ಟಾಸ್ಕ್‌ನಲ್ಲಿ ಗೆಲ್ಲಲೇಬೇಕು. ತಮ್ಮ ಕ್ಷೇತ್ರದಲ್ಲಿ ಪಕ್ಷಕ್ಕೆ ಲೀಡ್‌ ಕೊಡಿಸಬೇಕೆಂದು ಆದೇಶ ಬಂದಿದೆ. ಈ ಕಾರಣಕ್ಕೆ ಪ್ರಯತ್ನವಂತೂ ಜೋರಾಗಿಯೇ ಇರುವ ಸಾಧ್ಯತೆ ಇದೆ.ವಿಧಾನಸಭಾ ಚುನಾವಣೆಯಲ್ಲಿ ಸಂಗಮೇಶ್‌ ಅವರ ಮತ ಬ್ಯಾಂಕ್‌ ಲೋಕಸಭಾ ಚುನಾವಣೆಯಲ್ಲಿ ಪಲ್ಲಟಗೊಳ್ಳುತ್ತಿದ್ದ ಸಂದರ್ಭದಲ್ಲಿ ಸಂಗಮೇಶ್‌ ಮತ್ತು ಯಡಿಯೂರಪ್ಪ ನಡುವೆ ಹೊಂದಾಣಿಕೆ ನಡೆದಿರಬೇಕು ಎಂಬ ಆರೋಪ ತೆರೆಮರೆಯಲ್ಲಿ ಕೇಳಿ ಬಂದಿತ್ತು. ಇಬ್ಬರೂ ಲಿಂಗಾಯಿತ ಸಮುದಾಯದವರಾಗಿದ್ದರಿಂದ ಈ ನಂಟು ಬೆಳೆದಿರಬಹುದು ಎಂಬ ಟೀಕೆಗಳು ಕೇಳಿ ಬಂದಿದ್ದವು. ಆದರೆ ಈ ಬಾರಿ ಇದನ್ನು ಸುಳ್ಳು ಮಾಡುವ ಅನಿವಾರ್ಯತೆ ಅವರಿಗಿದೆ.

ಕ್ಷೇತ್ರದಲ್ಲಿ ಬಿಜೆಪಿ ಮತಗಳು ಎಂಬುದು ದೊಡ್ಡ ಸಂಖ್ಯೆಯಲ್ಲಿ ಇಲ್ಲ. ಆದರೆ ಬದಲಾದ ರಾಜಕೀಯ ಲೆಕ್ಕಾಚಾರದಲ್ಲಿ ಈ ಬಾರಿ ಬಿಜೆಪಿಗೆ ಮತಗಳು ಬರಲಿದೆ. ಆದರೆ ಈ ನಡುವೆ ಈಶ್ವರಪ್ಪ ಆರ್ಭಟ ಜೋರಾಗುತ್ತಿದ್ದು, ಇವರು ಯಾರ ಮತ ಬುಟ್ಟಿಗೆ ಕೈ ಹಾಕುತ್ತಾರೆ ಸ್ಪಷ್ಟವಾಗುತ್ತಿಲ್ಲ. ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಸಹ ಕ್ಷೇತ್ರದಲ್ಲಿ ಸ್ವಲ್ಪ ಪ್ರಮಾಣದ ವರ್ಚಸ್ಸಿನ ಮತಗಳನ್ನು ಹೊಂದಿದ್ದು, ಜೊತೆಗೆ ಹಿಂದೂಪರ ಸಂಘಟನೆಗಳ ಮತಗಳನ್ನು ಒಡೆಯುವ ಸಾಧ್ಯತೆ ಕಂಡು ಬರುತ್ತಿದೆ.

ಕ್ಷೇತ್ರದಲ್ಲಿ ಒಕ್ಕಲಿಗರು, ಲಿಂಗಾಯಿತರು ಹಾಗೂ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದು, ನಂತರದ ಸಾಲಿನಲ್ಲಿ ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗದವರಿದ್ದಾರೆ.

ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ಬಿ.ಕೆ. ಸಂಗಮೇಶ್ವರ್ ಹಾಗೂ ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿಯವರ ಪ್ರಭಾವ ಹೆಚ್ಚಿನದ್ದಾಗಿದ್ದು, ಅಪ್ಪಾಜಿ ನಿಧನದ ನಂತರವೂ ಸಹ ಆ ಮತಗಳು ಜೆಡಿಎಸ್‌ ಜೊತೆಗೇ ಉಳಿದುಕೊಂಡಿವೆ ಎಂಬುದು ಗಮನಾರ್ಹ.

ಹಿಂದಿನ ಚುನಾವಣೆಯ ಮತ ಗಳಿಕೆ ವಿವರ:

2009 ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಬಿ.ವೈ. ರಾಘವೇಂದ್ರ 56,235, ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಮಾಜಿ ಮುಖ್ಯಮಂತ್ರಿ ದಿವಂಗತ ಎಸ್. ಬಂಗಾರಪ್ಪ 53,394 ಮತ್ತು 2014 ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ 56,466, ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಮಂಜುನಾಥ ಭಂಡಾರಿ 34,000 ಹಾಗೂ 2019 ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಬಿ.ವೈ ರಾಘವೇಂದ್ರ 73,366, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿದ್ದ ಮಧು ಬಂಗಾರಪ್ಪ 67,721 ಮತಗಳನ್ನು ಪಡೆದುಕೊಂಡಿದ್ದಾರೆ.

ಮತದಾರರ ವಿವರ :

ಕ್ಷೇತ್ರದಲ್ಲಿ ಪ್ರಸ್ತುತ ಒಟ್ಟು 2,14,070 ಮತದಾರರಿದ್ದಾರೆ. ಈ ಪೈಕಿ 1.03,722 ಪುರುಷ ಹಾಗೂ 1,10,343 ಮಹಿಳಾ ಮತದಾರರಿದ್ದು, 3,718 ಯುವ ಮತದಾರರು, 1,435 ಮಂದಿ 85 ವರ್ಷ ಮೇಲ್ಪಟ್ಟ ಮತದಾರರು, 49 ಮಂದಿ 100 ವರ್ಷ ಮೇಲ್ಪಟ್ಟ ಮತದಾರರು ಹಾಗು 2,269 ಅಂಗವಿಕಲ ಮತದಾರರು ಮತ್ತು 188 ಸೇವಾ ಮತದಾರರು ಇದ್ದಾರೆ.