ಲೋಕಸಭಾ ಚುನಾವಣೆ: ಬಂಟ್ವಾಳದಲ್ಲಿ ೨೨೭೯೫೬ ಮತದಾರರು

| Published : Mar 19 2024, 12:47 AM IST

ಸಾರಾಂಶ

ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಹಾಗೂ ತಿದ್ದುಪಡಿಗೆ ಮಾ.24ರ ವರೆಗೆ ಅವಕಾಶವಿದ್ದು, ಸದ್ಯ ಮತದಾರರ ಪಟ್ಟಿಯಲ್ಲಿ ಬಂಟ್ವಾಳದಲ್ಲಿ ಒಟ್ಟು 227956 ಮತದಾರರು ಇದ್ದು, 1,12,159 ಪುರುಷರು, 1,15,836 ಮಹಿಳೆಯರು ಇದ್ದಾರೆ. ಯುವ ಮತದಾರರು 4,672 ಇದ್ದು, ಇವರ ಪೈಕಿ 2426 ಪುರುಷರು, 2246 ಮಹಿಳೆಯರು ಇದ್ದಾರೆ.

ಕನ್ನಡಪ್ರಭ ವಾರ್ತೆ ಬಂಟ್ವಾಳ

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಚುನಾವಣಾ ಆಯೋಗ ನೀತಿಸಂಹಿತೆ ಜಾರಿಗೊಳಿಸಿದ್ದು, ಶಾಂತಿಯುತ ಚುನಾವಣೆ ನಡೆಸಲು ಸರ್ವರ ಸಹಕಾರ ಅಗತ್ಯ ಎಂದು ಬಂಟ್ವಾಳ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಡಾ.ಉದಯ ಶೆಟ್ಟಿ ಹೇಳಿದರು.

ಬಂಟ್ವಾಳ ತಾಲೂಕು ಆಡಳಿತ ಸೌಧದಲ್ಲಿರುವ ಚುನಾವಣಾ ಕಚೇರಿಯಲ್ಲಿ ಭಾನುವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಹಾಗೂ ತಿದ್ದುಪಡಿಗೆ ಮಾ.24ರ ವರೆಗೆ ಅವಕಾಶವಿದ್ದು, ಸದ್ಯ ಮತದಾರರ ಪಟ್ಟಿಯಲ್ಲಿ ಬಂಟ್ವಾಳದಲ್ಲಿ ಒಟ್ಟು 227956 ಮತದಾರರು ಇದ್ದು, 1,12,159 ಪುರುಷರು, 1,15,836 ಮಹಿಳೆಯರು ಇದ್ದಾರೆ. ಯುವ ಮತದಾರರು 4,672 ಇದ್ದು, ಇವರ ಪೈಕಿ 2426 ಪುರುಷರು, 2246 ಮಹಿಳೆಯರು ಇದ್ದಾರೆ. 85ಕ್ಕೂ ಮೇಲ್ಪಟ್ಟವರ ಪೈಕಿ 1774 ಮಂದಿ ಇದ್ದು, ಇವರಲ್ಲಿ 100 ವರ್ಷ ದಾಟಿದವರು 17 ಮಂದಿ, 85ರಿಂದ 89 ವರ್ಷದವರು 1160, 90ರಿಂದ 99ವರ್ಷದವರು 597 ಮಂದಿ ಇದ್ದಾರೆ ಎಂದವರು ಮಾಹಿತಿ ನೀಡಿದರು.

* ನೀತಿ ಸಂಹಿತೆ ಅನುಷ್ಠಾನಕ್ಕೆ ಕಠಿಣ ಕ್ರಮ

ಮಾದರಿ ನೀತಿ ಸಂಹಿತೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ತಂಡಗಳನ್ನು ರಚಿಸಲಾಗಿದ್ದು, ಸಭೆ, ಸಮಾರಂಭ, ಧಾರ್ಮಿಕ ಕಾರ್ಯಕ್ರಮ, ರಾಜಕೀಯ ಸಭೆ, ಪ್ರಚಾರ ಸಭೆ ಇತ್ಯಾದಿಗಳನ್ನು ನಡೆಸಲು ಸಾರ್ವಜನಿಕರು, ರಾಜಕೀಯ ಪಕ್ಷದವರು ಚುನಾವಣಾಧಿಕಾರಿಗಳು, ಸಹಾಯಕ ಚುನಾವಣಾಧಿಕಾರಿಗಳಿಂದ ಅನುಮತಿ ಪಡೆದುಕೊಳ್ಳಬೇಕಾಗಿದೆ. ಜಿಲ್ಲಾ ಮಟ್ಟದ ನೋಡಲ್ ಅಧಿಕಾರಿಗಳಾಗಿ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಆನಂದ ಕೆ. ಇದ್ದು, ವಿಧಾನಸಭಾ ಕ್ಷೇತ್ರದ ನೋಡಲ್ ಅಧಿಕಾರಿಯಾಗಿ ಶಮಂತ್ ಕುಮಾರ್ ಇರಲಿದ್ದಾರೆ. ಬಂಟ್ವಾಳ ಕ್ಷೇತ್ರದಲ್ಲಿ ಮೂರು ಚೆಕ್ ಪೋಸ್ಟ್‌ಗಳನ್ನು ರಚಿಸಲಾಗಿದ್ದು, ಆನೆಕಲ್ಲು, ಸಾಲೆತ್ತೂರಿನ ಮದು, ಹಾಗೂ ಕರೋಪಾಡಿಯ ನೆಲ್ಲಿಕಟ್ಟೆಯಲ್ಲಿ ಇವೆ ಎಂದರು.* ನೀತಿ ಸಂಹಿತೆ ಉಲ್ಲಂಘಿಸಿದರೆ ದೂರು ನೀಡಿ

ಚುನಾವಣಾ ಸಂಬಂಧಿಸಿದಂತೆ 08255-232500 ಕಂಟ್ರೋಲ್ ರೂಮ್ ನಂಬರ್ ಆಗಿದ್ದು, ದಿನದ 24 ತಾಸುಗಳೂ ಕಾರ್ಯಾಚರಣೆ ನಡೆಸುತ್ತಿವೆ. ನೀತಿ ಸಂಹಿತೆ ಉಲ್ಲಂಘನ ದೂರುಗಳನ್ನು ಇದಕ್ಕೆ ನೀಡಬಹುದು ಅಲ್ಲದೆ, ಸಿ-ವಿಝಿಲ್ ಮೊಬೈಲ್ ಆಪ್ ಮೂಲಕ ಜಿಲ್ಲೆಯಲ್ಲಿ ಚುನಾವಣಾ ಸಂಬಂಧಿಸಿದಂತೆ ಉಲ್ಲಂಘನೆ ಪ್ರಕರಣಗಳು ಕಂಡುಬಂದಲ್ಲಿ ಸಾರ್ವಜನಿಕರು ಫೊಟೋ ಹಾಗೂ ವಿಡಿಯೋಗಳ ಮೂಲಕ ದೂರು ದಾಖಲಿಸಬಹುದಾಗಿದೆ. ಅಭ್ಯರ್ಥಿಗಳು, ರಾಜಕೀಯ ಪಕ್ಷಗಳು ಸುವಿಧಾ ಆಪ್ ಮೂಲಕ ಚುನಾವಣಾ ಪ್ರಚಾರ ಕಾರ್ಯಗಳಿಗೆ ಅನುಮತಿ ಪಡೆಯಬಹುದು ಎಂದು ಡಾ.ಉದಯ ಶೆಟ್ಟಿ ಹೇಳಿದರು.

ಚುನಾವಣೆಗೆ ಸಂಬಂಧಿಸಿದಂತೆ ಹಲವು ವಿಚಾರಗಳಿಗೆ ತಾಲೂಕು ಮಟ್ಟದಲ್ಲಿ 15 ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಉಪತಹಸೀಲ್ದಾರ್ ನವೀನ್ ಬೆಂಜನಪದವು, ಅಧಿಕಾರಿಗಳಾದ ಶಮಂತ್‌ ಕುಮಾರ್‌ ಮೊದಲಾದವರಿದ್ದರು.