ಲೋಕಸಭಾ ಕ್ಷೇತ್ರ: ಸ್ವಂತಿಕೆ ಕಳೆದುಕೊಂಡ ಚಿಕ್ಕಮಗಳೂರು ಜಿಲ್ಲೆ

| Published : Mar 19 2024, 12:47 AM IST

ಸಾರಾಂಶ

ಸಾರ್ವತ್ರಿಕ ಚುನಾವಣೆ ವಿಷಯದಲ್ಲಿ ಒಂದು ಕಾಲದಲ್ಲಿ ಇಡೀ ಜಗತ್ತಿನ ಗಮನ ಸೆಳೆದಿದ್ದ ಚಿಕ್ಕಮಗಳೂರು ಜಿಲ್ಲೆ ಈ ಬಾರಿ ಲೋಕಸಭೆಯಲ್ಲಿ ಪ್ರತ್ಯೇಕ ಪ್ರಾತಿನಿಧ್ಯದ ಅಸ್ಥಿತ್ವವನ್ನು ಕಳೆದುಕೊಂಡಿದೆ.

- ಚುನಾವಣಾ ಕೇಂದ್ರ ಸ್ಥಾನ ಉಡುಪಿ -ಹಾಸನ । ಕರಾವಳಿಯದ್ದೆ ಪಾರುಪಥ್ಯ

---

- ಈವರೆಗೆ ಲೋಕಸಭಾ ಕ್ಷೇತ್ರ ಮೂರು ಬಾರಿ ವಿಂಗಡನೆ

- ಇಡೀ ಜಗತ್ತಿನ ಗಮನ ಸೆಳೆದಿದ್ದ ಕ್ಷೇತ್ರಕ್ಕೆ ಈಗ ಪ್ರಾತಿನಿಧ್ಯವಿಲ್ಲ

- ಶೋಭಾ ಕರಂದ್ಲಾಜೆ ಎರಡು ಬಾರಿ ಜಯಗಳಿಸಿದರು.ಆರ್‌.ತಾರಾನಾಥ್‌ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಸಾರ್ವತ್ರಿಕ ಚುನಾವಣೆ ವಿಷಯದಲ್ಲಿ ಒಂದು ಕಾಲದಲ್ಲಿ ಇಡೀ ಜಗತ್ತಿನ ಗಮನ ಸೆಳೆದಿದ್ದ ಚಿಕ್ಕಮಗಳೂರು ಜಿಲ್ಲೆ ಈ ಬಾರಿ ಲೋಕಸಭೆಯಲ್ಲಿ ಪ್ರತ್ಯೇಕ ಪ್ರಾತಿನಿಧ್ಯದ ಅಸ್ಥಿತ್ವವನ್ನು ಕಳೆದುಕೊಂಡಿದೆ.ರಾಜಕೀಯ ಇತಿಹಾಸದಲ್ಲಿ ಈವರೆಗೆ ನಡೆದಿರುವ ಕ್ಷೇತ್ರಗಳ ಪುನರ್‌ ವಿಂಗಡಣೆಯಲ್ಲಿ ಮೂರು ಬಾರಿ ಜಿಲ್ಲೆ ತನ್ನ ಭೂಪಟವನ್ನು ಬದಲಾವಣೆ ಮಾಡಿಕೊಂಡಿದೆ. ಮೊದಲಿಗೆ 1952, ಎರಡನೇ ಬಾರಿಗೆ1967 ಹಾಗೂ ಕಡೆಯದಾಗಿ 2008ರಲ್ಲಿ ಕ್ಷೇತ್ರಗಳ ಪುನರ್‌ ವಿಂಗಡಣೆಯಾಗಿದೆ.ದೇಶದಲ್ಲಿ ಸಾರ್ವತ್ರಿಕ ಚುನಾವಣೆ ಪದ್ಧತಿ ಜಾರಿಗೆ ಬಂದಾಗ 1952ರ ಮೊದಲ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಹಾಸನ- ಚಿಕ್ಕಮಗಳೂರು ಜಿಲ್ಲೆಗಳು ಒಳಗೊಂಡ ಕ್ಷೇತ್ರ ಇತ್ತು. 1967ರಲ್ಲಿ ಕ್ಷೇತ್ರಗಳ ಪುನರ್‌ ವಿಂಗಡಣೆಯಾದಾಗ ಚಿಕ್ಕಮಗಳೂರು ಜಿಲ್ಲೆಗೆ ಪ್ರತ್ಯೇಕವಾದ ಲೋಕಸಭಾ ಕ್ಷೇತ್ರದ ಭಾಗ್ಯ ಸಿಕ್ಕಿತು.ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ, ಮೂಡಿಗೆರೆ, ಚಿಕ್ಕಮಗಳೂರು, ಕಡೂರು, ತರೀಕೆರೆ ಹಾಗೂ ಆಗ ಅಸ್ಥಿತ್ವದಲ್ಲಿದ್ದ ಬೀರೂರು ವಿಧಾನಸಭಾ ಕ್ಷೇತ್ರಗಳ ಜತೆಗೆ ನೆರೆಯ ಬೆಳ್ತಂಗಡಿ ಹಾಗೂ ಕಾರ್ಕಳ ವಿಧಾನಸಭಾ ಕ್ಷೇತ್ರಗಳು ಒಳಗೊಂಡಂತೆ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ನೂತನವಾಗಿ ಅಸ್ತಿತ್ವಕ್ಕೆ ಬಂದಿತು.2008ರಲ್ಲಿ ಮತ್ತೆ ಕ್ಷೇತ್ರಗಳ ಪುನರ್‌ ವಿಂಗಡಣೆ ಮಾಡಲಾಯಿತು. ಆಗ ಕಡೂರು ವಿಧಾನಸಭಾ ಕ್ಷೇತ್ರ ಹಾಸನ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಸೇರಿಸಲಾಯಿತು. ಬೆಳ್ತಂಗಡಿ ಕೈ ಬಿಡಲಾಯಿತು. ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ, ಮೂಡಿಗೆರೆ, ಚಿಕ್ಕಮಗಳೂರು ಹಾಗೂ ತರೀಕೆರೆ ಕ್ಷೇತ್ರಗಳ ಜತೆಗೆ ಉಡುಪಿ ಜಿಲ್ಲೆಯ ಕುಂದಾಪುರ, ಉಡುಪಿ, ಕಾಪು ಹಾಗೂ ಕಾರ್ಕಳ ವಿಧಾನಸಭಾ ಸೇರಿದಂತೆ ಒಟ್ಟು 8 ವಿಧಾನಸಭಾ ಕ್ಷೇತ್ರಗಳನ್ನು ಸೇರಿಸಿ ಉಡುಪಿ - ಚಿಕ್ಕಮಗಳೂರು ಲೋಕಸಭಾ ಕ್ಷೇತ್ರವನ್ನು ಪುನಾರಚನೆ ಮಾಡಲಾಯಿತು.ಎರಡು ಜಿಲ್ಲೆಗಳ ತಲಾ ನಾಲ್ಕು ಕ್ಷೇತ್ರಗಳು ಸೇರಿಸಿ ಹೊಸದಾಗಿ ಲೋಕಸಭಾ ಕ್ಷೇತ್ರ ಮಾಡಲಾಯಿತು. ಆದರೆ, ಚುನಾವಣೆ ಕೇಂದ್ರ ಸ್ಥಾನವನ್ನು ಉಡುಪಿ ಜಿಲ್ಲೆಗೆ ನೀಡಲಾಯಿತು. ನಾಮಪತ್ರ ಸಲ್ಲಿಕೆ, ಪರಿಶೀಲನೆ, ಉಮೇದುವಾರಿಕೆ ಹಿಂಪಡೆಯುವಿಕೆ ಮಾತ್ರವಲ್ಲ ಮತ ಎಣಿಕೆಯೂ ಕೂಡ ಅದೇ ಜಿಲ್ಲೆಯಲ್ಲಿ ನಡೆಯಲಿದೆ. ಅಲ್ಲಿನ ಜಿಲ್ಲಾಧಿಕಾರಿಗಳು ಚುನಾವಣಾಧಿಕಾರಿಗಳು.

--- ಬಾಕ್ಸ್‌--ಕರಾವಳಿಯದ್ದೆ ಪಾರುಪಥ್ಯ2008ರಲ್ಲಿ ಕ್ಷೇತ್ರಗಳ ಪುನರ್‌ ವಿಂಗಡಣೆ ಆದ ನಂತರ ಮೊದಲ ಬಾರಿಗೆ ಅಂದರೆ, 2009ರಲ್ಲಿ ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದ ಡಿ.ವಿ. ಸದಾನಂದ ಗೌಡ ಜಯ ಗಳಿಸಿದ್ದರು. ಬಿ.ಎಸ್‌. ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದಂತೆ ಸದಾನಂದಗೌಡ ಅವರಿಗೆ ಸಿಎಂ ಆಗುವ ಅವಕಾಶ ಸಿಕ್ಕಿತು. ಹಾಗಾಗಿ ಸಂಸದ ಸ್ಥಾನಕ್ಕೆ ಅವರು ರಾಜೀನಾಮೆ ನೀಡಿದರು. 2012ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದಿಂದ ಸ್ಪರ್ಧೆ ಮಾಡಿದ್ದ ಕೆ. ಜಯಪ್ರಕಾಶ್‌ ಹೆಗಡೆ ಜಯಗಳಿದರು. 2014 ಹಾಗೂ 2019 ರಲ್ಲಿ ನಡೆದ ಲೋಕಸಭಾ ಚುನಾವಣೆಗಳಲ್ಲಿ ಶೋಭಾ ಕರಂದ್ಲಾಜೆ ಎರಡು ಬಾರಿ ಜಯಗಳಿಸಿದರು.ಕ್ಷೇತ್ರಗಳ ಪುನರ್‌ ವಿಂಗಡಣೆ ನಂತರ ನಡೆದ ಲೋಕಸಭಾ ಚುನಾವಣೆಗಳಲ್ಲಿ ಜಯಗಳಿಸಿದವರೆಲ್ಲರೂ ಕರಾವಳಿ ಜಿಲ್ಲೆಯವರು. ಈ ಚುನಾವಣೆಯಲ್ಲೂ ಬಿಜೆಪಿ ಈಗಾಗಲೇ ಕರಾವಳಿ ಜಿಲ್ಲೆಯವರಿಗೆ ಟಿಕೆಟ್‌ ನೀಡಿದೆ. ಕಾಂಗ್ರೆಸ್‌ ಕೆ.ಜಯಪ್ರಕಾಶ್‌ ಹೆಗಡೆ ಅವರಿಗೆ ಟಿಕೆಟ್‌ ನೀಡಿದರೆ ಈ ಬಾರಿಯೂ ಕರಾವಳಿ ಜಿಲ್ಲೆಯದ್ದೆ ಪಾರುಪಥ್ಯ ಮುಂದುವರಿ ಯಲಿದೆ.ಚಿಕ್ಕಮಗಳೂರು ಜಿಲ್ಲೆ ಲೋಕಸಭೆ ಕ್ಷೇತ್ರವನ್ನು ಕಳೆದುಕೊಂಡಿರುವ ಜತೆಗೆ ತನ್ನದೆಯಾದ ಪ್ರತ್ಯೇಕ ಪ್ರಾತಿನಿಧ್ಯವನ್ನು ಕಳೆದುಕೊಂಡಿದೆ.