ಲೋಕಸಭಾ ಚುನಾವಣೆ: ಶೇ.೬ರಷ್ಟು ಮತದಾನ ಹೆಚ್ಚಳ ಗುರಿ-ಅಕ್ಷಯ ಶ್ರೀಧರ್‌

| Published : Mar 23 2024, 01:08 AM IST / Updated: Mar 23 2024, 01:09 AM IST

ಲೋಕಸಭಾ ಚುನಾವಣೆ: ಶೇ.೬ರಷ್ಟು ಮತದಾನ ಹೆಚ್ಚಳ ಗುರಿ-ಅಕ್ಷಯ ಶ್ರೀಧರ್‌
Share this Article
  • FB
  • TW
  • Linkdin
  • Email

ಸಾರಾಂಶ

ಹಾವೇರಿ ಲೋಕಸಭಾ ಚುನಾವಣೆ ಮತದಾನ ಪ್ರಮಾಣ ಹೆಚ್ಚಳಕ್ಕೆ ಜಿಲ್ಲಾ ಸ್ವೀಪ್ ಸಮಿತಿಯಿಂದ ಯೋಜಿತ ಕಾರ್ಯಕ್ರಮಗಳನ್ನು ರೂಪಿಸಿದ್ದು, ಕಳೆದ ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆಯ ಮತದಾನ ಪ್ರಮಾಣಕ್ಕಿಂತ ಕನಿಷ್ಠ ಶೇ. ೬ರಷ್ಟು ಪ್ರಮಾಣದಲ್ಲಿ ಹೆಚ್ಚಳ ಮಾಡುವ ನಿಟ್ಟಿನಲ್ಲಿ ಗುರಿಹಾಕಿಕೊಳ್ಳಲಾಗಿದೆ.

ಹಾವೇರಿ: ಹಾವೇರಿ ಲೋಕಸಭಾ ಚುನಾವಣೆ ಮತದಾನ ಪ್ರಮಾಣ ಹೆಚ್ಚಳಕ್ಕೆ ಜಿಲ್ಲಾ ಸ್ವೀಪ್ ಸಮಿತಿಯಿಂದ ಯೋಜಿತ ಕಾರ್ಯಕ್ರಮಗಳನ್ನು ರೂಪಿಸಿದ್ದು, ಕಳೆದ ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆಯ ಮತದಾನ ಪ್ರಮಾಣಕ್ಕಿಂತ ಕನಿಷ್ಠ ಶೇ. ೬ರಷ್ಟು ಪ್ರಮಾಣದಲ್ಲಿ ಹೆಚ್ಚಳ ಮಾಡುವ ನಿಟ್ಟಿನಲ್ಲಿ ಗುರಿಹಾಕಿಕೊಳ್ಳಲಾಗಿದೆ ಎಂದು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರೂ ಆದ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ್ ಶ್ರೀಧರ್ ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ೨೦೧೪ರಲ್ಲಿ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಸರಾಸರಿ ಮತದಾನ ಪ್ರಮಾಣ ಶೇ.೬೭.೦೨ರಷ್ಟು, ಜಿಲ್ಲೆಯ ಪ್ರಮಾಣ ಶೇ.೭೦.೪೨ರಷ್ಟು ಹಾಗೂ ೨೦೧೯ರ ಲೋಕಸಭೆ ಚುನಾವಣೆಯಲ್ಲಿ ರಾಜ್ಯದ ಸರಾಸರಿ ಪ್ರಮಾಣ ಶೇ.೬೮.೬೧ರಷ್ಟಿದ್ದರೆ ಜಿಲ್ಲೆಯ ಸರಾಸರಿ ಮತದಾನ ಪ್ರಮಾಣ ಶೇ.೭೧.೬೩ರಷ್ಟು ಮತದಾನವಾಗಿತ್ತು. ೨೦೨೩ರ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಸರಾಸರಿ ಶೇ.೭೩.೧೯ರಷ್ಟಿದ್ದರೆ ಜಿಲ್ಲೆಯ ಮತದಾನ ಶೇ.೮೧.೫೧ರಷ್ಟು ಪ್ರಮಾಣದಲ್ಲಿ ಮತದಾನವಾಗಿದೆ. ಕಳೆದ ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆಗಿಂತ ಕನಿಷ್ಠ ಶೇ.೬ರಷ್ಟು ಹೆಚ್ಚು ಪ್ರಮಾಣದಲ್ಲಿ ಮತದಾನದ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಣಿಬೆನ್ನೂರು ಹಾಗೂ ನಗರ ವ್ಯಾಪ್ತಿಯಲ್ಲಿ ಮತದಾನ ಪ್ರಮಾಣ ಕಡಿಮೆಯಾಗಿರುವುದು ಕಂಡುಬಂದಿದೆ. ೨೦೧೯ರ ಲೋಕಸಭಾ ಚುನಾವಣೆಯಲ್ಲಿ ವಿಧಾನಸಭಾ ಕ್ಷೇತ್ರವಾರು ಮತಗಟ್ಟೆವಾರು ಕಡಿಮೆ ಮತದಾನವಾದ ಪ್ರದೇಶಗಳನ್ನು ಗುರುತಿಸಲಾಗಿದೆ. ಗಂಗಿಬಾವಿ, ಕೋಡಿಯಾಳ, ಹನುಮನಮಟ್ಟಿ, ಶಿಗ್ಗಾಂವಿ ವಿಧಾನಸಭಾ ಕೇತ್ರ ಹಾಗೂ ಹಾನಗಲ್, ಹಿರೇಕೆರೂರಿನ ಕೆಲ ಮತಗಟ್ಟೆಗಳಲ್ಲಿ ಮತದಾನ ಪ್ರಮಾಣ ಕಡಿಮೆಯಾಗಿದೆ. ಇಂತಹ ೮೦ಕ್ಕೂ ಹೆಚ್ಚು ಬೂತ್‌ಗಳನ್ನು ಗುರುತಿಸಿ ತಾಲೂಕು ಮಟ್ಟದ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಕ ಮಾಡಿ ಈ ಭಾಗದಲ್ಲಿ ಮತದಾನ ಪ್ರಮಾಣ ಹೆಚ್ಚಳಕ್ಕೆ ಈ ಭಾರಿ ಕ್ರಮಕೈಗೊಳ್ಳಲಾಗಿದೆ ಎಂದರು.

ಲೋಕಸಭಾ ಚುನಾವಣೆಯ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯು ೪,೮೨೩ ಚ.ಕಿ.ಮೀ. ವ್ಯಾಪ್ತಿಯ ೯೫೫ ಸ್ಥಳಗಳಲ್ಲಿ ೧೪೮೨ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಮತದಾನ ಜಾಗೃತಿಗಾಗಿ ಗ್ರಾಮ ಮಟ್ಟ, ತಾಲೂಕು ಹಾಗೂ ಜಿಲ್ಲಾ ಮಟ್ಟದ ಸಮಿತಿಗಳ ಜೊತೆಗೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅಂಗವಿಕಲರ ಸುಗಮ ಚುನಾವಣಾ ಕಾರ್ಯದ ನಿಮತ್ತ ಪಂಚಾಯಿತಿ ಮಟ್ಟದ ಸಮಿತಿಗಳನ್ನು ರಚಿಸಲಾಗಿದೆ. ಈಗಾಗಲೇ ಶಾಲಾ-ಕಾಲೇಜುಗಳಲ್ಲಿ ರಸಪ್ರಶ್ನೆ, ಭಿತ್ತಿಪತ್ರ, ಪ್ರಬಂಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಚುನಾವಣೆ ಗೀತೆ ರಚಿಸಿ ಮತದಾನ ಜಾಗೃತಿಗೆ ಬಳಸಿಕೊಳ್ಳಲಾಗಿದೆ. ೬೧೮ ಮತದಾರರ ಸಾಕ್ಷರತಾ ಸಂಘ, ಪ್ರತಿ ಮತಗಟ್ಟೆಗೆ ಒಂದರಂತೆ ೧೪೮೨ ಚುನಾವಣಾ ಜಾಗೃತಿ ಸಂಘ, ಶಾಲಾ-ಕಾಲೇಜುಗಳಲ್ಲಿ ೧೭೧ ಕ್ಯಾಂಪಸ್ ಅಂಬಾಸೀಡರ್‌ಗಳನ್ನು ನೇಮಿಸಲಾಗಿದೆ. ಸರ್ಕಾರಿ ಮತ್ತು ಸರ್ಕಾರೇತರ ಕಚೇರಿಗಳಲ್ಲಿ ೭೩೦ಕ್ಕೂ ಹೆಚ್ಚು ಮತದಾರರ ಜಾಗೃತಿ ಫೋರಂಗಳನ್ನು ಸ್ಥಾಪಿಸಿ ವ್ಯವಸ್ಥಿತವಾಗಿ ಚುನಾವಣೆ ವ್ಯವಸ್ಥೆ ಹಾಗೂ ಮತದಾನದ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರೆಲಾಗಿದೆ ಎಂದು ಮಾಹಿತಿ ನೀಡಿದರು.

೨೦೨೪ರ ಲೋಕಸಭಾ ಚುನಾವಣೆಯಲ್ಲಿ ಮತದಾರರನ್ನು ಆಕರ್ಷಿಸಲು ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಐದರಂತೆ ೩೦ ಸಖಿ ಮತಗಟ್ಟೆ, ತಲಾ ಒಂದರಂತೆ ಆರು ಅಂಗವಿಕಲರ ಮತಗಟ್ಟೆ, ಆರು ತೀಮ್ ಬೇಸ್ಡ್ ಮತಗಟ್ಟೆ, ಆರು ಯಂಗ್ ವೋಟರ್ ಮತಗಟ್ಟೆ ಒಳಗೊಂಡಂತೆ ೪೮ ವಿಶೇಷ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಮತದಾನದ ಬಗ್ಗೆ ಅರಿವು ಮತ್ತು ಜಾಗೃತಿ ಮೂಡಿಸಲು ಖ್ಯಾತ ಹಿನ್ನೆಲೆ ಗಾಯಕ ಕಾಸೀಂ ಅಲಿ, ರಾಜ್ಯ ಪ್ರಶಸ್ತಿ ವಿಜೇತ ಕಲಾವಿದ ಮಾಲತೇಶ ಎಂ.ಗರಡಿಮನಿ ಹಾಗೂ ಸಾಮಾಜಿಕ ಕಾರ್ಯಕರ್ತೆ ಅಕ್ಷತಾ ಕೆ.ಸಿ. ಅವರನ್ನು ಜಿಲ್ಲಾ ಮಟ್ಟದ ಸ್ವೀಪ್ ರಾಯಭಾರಿಗಳನ್ನಾಗಿ ನೇಮಕ ಮಾಡಿಕೊಂಡು ಜಾಗೃತಿ ಮೂಡಿಸಲು ಕ್ರಮವಹಿಸಲಾಗಿದೆ ಎಂದು ಹೇಳಿದರು.

ಮತದಾನ ಜಾಗೃತಿಗಾಗಿ ವಿದ್ಯಾರ್ಥಿಗಳಿಂದ ಪಾಲಕರಿಗೆ ಪತ್ರಬರೆಯುವ ಪತ್ರ ಸಂಕಲ್ಪ, ಪ್ರತಿಜ್ಞಾವಿಧಿ ಸ್ವೀಕಾರ, ನಗರಸಭೆ ಹಾಗೂ ಪುರಸಭೆಗಳ ಎಲ್‌ಇಡಿ ಸ್ಕ್ರೀನ್‌ಗಳಲ್ಲಿ ಮತದಾರರಿಗೆ ಜಾಗೃತಿ ಮೂಡಿಸುವ ವಿಡಿಯೋಗಳ ಪ್ರದರ್ಶನ, ಮತಗಟ್ಟೆ ವ್ಯಾಪ್ತಿಯ ಜಾಗೃತಿ ಗುಂಪುಗಳಿಗೆ, ಚುನಾವಣೆ ಜಾಗೃತಿ ಸಂಘ, ಕ್ಯಾಂಪಸ್ ಅಂಬಾಸಿಡರ್ , ಇ.ಎಲ್.ಸಿ.ಗಳಿಗೆ ತರಬೇತಿಯ ಸುಗಮ ಸಮಾಗಮ, ಮತದಾರರ ಜಾಗೃತಿ ವೇದಿಕೆಗಳ ರಚನೆ, ಸಹಿ ಅಭಿಯಾನ, ವಾರ್ಡ ಹಾಗೂ ಗ್ರಾಮಗಳಲ್ಲಿ ಮತ ಸಭೆ ಆಯೋಜನೆ, ಮತದಾರರ ಜಾಗೃತಿ ಮೂಡಿಸುವ ಚುನಾವಣಾ ಗೀತೆ ಬಿಡುಗಡೆ, ಮೊಬೈಲ್ ಟಾರ್ಚ್ ಮಾರ್ಚ್, ಸ್ವ ಸಹಾಯ ಸಂಘಗಳ ಬೃಹತ್ ಜಾಥಾ, ಅಂಗನವಾಡಿ-ಆಶಾ ಕಾರ್ಯಕತೆಯರ ಜಾಥಾ, ಸ್ವಚ್ಛ ವಾಹಿನಿ ಜಾಥಾ(ವಾಹನ), ಚುನಾವಣಾ ರಾಯಭಾರಿಗಳ ಜಾಥಾ, ಮಾನವ ಸರಪಳಿ, ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳಿಂದ ಮನೆ ಮನೆಗೆ ಭೇಟಿ, ಪಿ.ಡಬ್ಲ್ಯೂಡಿ ಮತದಾರರಿಂದ ಸೈಕಲ್ ಜಾಥಾ, ಬೈಕ್ ರ‍್ಯಾಲಿ, ಉತ್ತಮ ಪರಿಸರಕ್ಕೆ ಒಂದು ಗಿಡ, ಉತ್ತಮ ಸಮಾಜಕ್ಕೆ ಒಂದು ಮತ, ಮತದಾರರ ಜಾಗೃತಿ ಮೂಡಿಸಲು ಬೃಹತ್ ವೇದಿಕೆ ಕಾರ್ಯಕ್ರಮ ಮತ ಹಬ್ಬ ಹಾಗೂ ಪೊಲೀಸ್ ಮಾರ್ಚ್ ಹಮ್ಮಿಕೊಳ್ಳಲಾಗುತ್ತಿದೆ ಎಂದರು.

ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ, ಜಿಪಂ ಉಪ ಕಾರ್ಯದರ್ಶಿ ಸೋಮಶೇಖರ ಮುಳ್ಳಳ್ಳಿ ಉಪಸ್ಥಿತರಿದ್ದರು.

೨೨ಎಚ್‌ವಿಆರ್೧

೨೨ಎಚ್‌ವಿಆರ್೧ಎ-ಮತದಾನ ಜಾಗೃತಿಗಾಗಿ ಪ್ರತಿಜ್ಞಾ ವಿಧಿ ಫಲಕದಲ್ಲಿ ಜಿಲ್ಲಾಧಿಕಾರಿ ಹಾಗೂ ಜಿಪಂ ಸಿಇಒ ಅವರು ಸಹಿ ಹಾಕಿದರು.