ಲೋಕಸಭಾ ಚುನಾವಣೆ: ಒಬ್ಬರಿಗೆ ಗರಿಷ್ಠ 4 ನಾಮಪತ್ರ ಸಲ್ಲಿಕೆಗೆ ಅವಕಾಶ

| Published : Mar 24 2024, 01:32 AM IST

ಸಾರಾಂಶ

ಲೋಕಸಭಾ ಸಾರ್ವತ್ರಿಕ ಚುನಾವಣೆ-2024ಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗದ ವೇಳಾಪಟ್ಟಿಯನ್ವಯ ಮಾರ್ಚ್ 28 ರಿಂದ ಏಪ್ರಿಲ್ 4ರವರೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ನಡೆಯಲಿದ್ದು, ಓರ್ವ ಅಭ್ಯರ್ಥಿಗೆ ಗರಿಷ್ಠ 4 ನಾಮಪತ್ರಗಳನ್ನು ಸಲ್ಲಿಸಲು ಅವಕಾಶವಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಶುಭಾ ಕಲ್ಯಾಣ್ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ತುಮಕೂರು

ಲೋಕಸಭಾ ಸಾರ್ವತ್ರಿಕ ಚುನಾವಣೆ-2024ಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗದ ವೇಳಾಪಟ್ಟಿಯನ್ವಯ ಮಾರ್ಚ್ 28 ರಿಂದ ಏಪ್ರಿಲ್ 4ರವರೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ನಡೆಯಲಿದ್ದು, ಓರ್ವ ಅಭ್ಯರ್ಥಿಗೆ ಗರಿಷ್ಠ 4 ನಾಮಪತ್ರಗಳನ್ನು ಸಲ್ಲಿಸಲು ಅವಕಾಶವಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಶುಭಾ ಕಲ್ಯಾಣ್ ತಿಳಿಸಿದರು.

ತಮ್ಮ ಕಚೇರಿಯಲ್ಲಿಂದು ನಾಮಪತ್ರಗಳ ಪೂರ್ವ ಪರಿಶೀಲನೆ, ನಮೂನೆಗಳನ್ನು ಸಿದ್ಧಪಡಿಸುವುದು, ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡುವುದು ಸೇರಿದಂತೆ ಮತ್ತಿತರ ಪ್ರಕ್ರಿಯೆಗಳ ಬಗ್ಗೆ ಸಭೆ ನಡೆಸಿ ಮಾತನಾಡಿದ ಅವರು, ನಾಮಪತ್ರವನ್ನು ಮಾರ್ಚ್ 28ರಿಂದ ಏಪ್ರಿಲ್ 4ರವರೆಗೆ ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಸ್ವೀಕರಿಸಲಾಗುವುದು ಎಂದು ತಿಳಿಸಿದರು.

ನಾಮಪತ್ರ ಸಲ್ಲಿಸುವ ಅಭ್ಯರ್ಥಿಯ ಹೆಸರು ಯಾವುದೇ ಲೋಕಸಭಾ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ನೋಂದಾಯಿತವಾಗಿರಬೇಕು. ಅಭ್ಯರ್ಥಿಯು 25 ವರ್ಷ ವಯೋಮಿತಿಯವರಾಗಿದ್ದು, ಭಾರತೀಯ ನಾಗರಿಕರಾಗಿರಬೇಕು. ಮಾನ್ಯತೆ ಪಡೆದ ರಾಷ್ಟ್ರೀಯ ಮತ್ತು ರಾಜ್ಯ ರಾಜಕೀಯ ಪಕ್ಷಗಳ ಅಭ್ಯರ್ಥಿಗಳಿಗೆ ಓರ್ವ ಸೂಚಕರನ್ನು ಹೊಂದಲು ಅವಕಾಶವಿದ್ದು, ಈ ಸೂಚಕರು ಸಂಬಂಧಪಟ್ಟ ಲೋಕಸಭಾ ಕ್ಷೇತ್ರದ ಮತದಾರರಾಗಿರಬೇಕು. ನೋಂದಾಯಿತ ರಾಜಕೀಯ ಪಕ್ಷಗಳು ಹಾಗೂ ಸ್ವತಂತ್ರ ಅಭ್ಯರ್ಥಿಗಳಿಗೆ 10 ಜನ ಸೂಚಕರು ಕಡ್ಡಾಯವಾಗಿ ಇರಬೇಕು. ಎಲ್ಲಾ ಸೂಚಕರು ಸಂಬಂಧಪಟ್ಟ ಲೋಕಸಭಾ ಕ್ಷೇತ್ರದ ಮತದಾರರಾಗಿರಬೇಕು ಎಂದು ತಿಳಿಸಿದರು. ಓರ್ವ ಅಭ್ಯರ್ಥಿಯು ಗರಿಷ್ಠ 4 ನಾಮಪತ್ರಗಳನ್ನು ಸಲ್ಲಿಸಲು ಅವಕಾಶವಿದ್ದು, ಒಂದು ನಾಮಪತ್ರದ ಜೊತೆ ಪೂರ್ಣ ಪ್ರಮಾಣದ ದಾಖಲಾತಿ ನೀಡಿದಲ್ಲಿ ಉಳಿಕೆ ನಾಮಪತ್ರಗಳಿಗೆ ಕೇವಲ ನಾಮಪತ್ರ ಮಾತ್ರ ಸಲ್ಲಿಸಿದರೆ ಸಾಕು. ನಾಮಪತ್ರ ಸ್ವೀಕರಿಸುವ ಕೋಣೆಯಲ್ಲಿ ಒಂದು ಸಿ.ಸಿ.ಟಿ.ವಿ., ಒಂದು ಗೋಡೆ ಗಡಿಯಾರ(ಸರಿಯಾದ ವೇಳೆ ತೋರಿಸುವುದು)ವನ್ನು ಅಳವಡಿಸಲಾಗುವುದಲ್ಲದೆ ಹಾಗೂ ಓರ್ವ ವಿಡಿಯೋಗ್ರಾಫರ್ ಅನ್ನು ನಿಯೋಜಿಸಲಾಗುವುದು ಎಂದು ತಿಳಿಸಿದರು.

ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಒಬ್ಬ ಅಭ್ಯರ್ಥಿಯ ಜೊತೆ 4 ಜನಕ್ಕೆ ಮಾತ್ರ ಚುನಾವಣಾಧಿಕಾರಿಗಳ ಕೊಠಡಿಯ ಒಳಗೆ ಪ್ರವೇಶಾವಕಾಶವಿದ್ದು, ನಾಮಪತ್ರವನ್ನು ಅಭ್ಯರ್ಥಿ ಅಥವಾ ಸೂಚಕ ಸಲ್ಲಿಸಲು ಅವಕಾಶವಿರುತ್ತದೆ ಎಂದು ತಿಳಿಸಿದರು.

ನಾಮಪತ್ರ ಸಲ್ಲಿಸಿದ ನಂತರ ಅಭ್ಯರ್ಥಿಯು ಪ್ರಮಾಣ ಸ್ವೀಕರಿಸಬೇಕು. ಅಭ್ಯರ್ಥಿಯು ಪ್ರಮಾಣವನ್ನು ಸ್ವೀಕರಿಸಲು ಹಾಗೂ ಮತದಾರರ ಪಟ್ಟಿಯ ದೃಢೀಕೃತ ನಕಲು ಸಲ್ಲಿಸಲು ಏಪ್ರಿಲ್ 4ರವರೆಗೆ ಅವಕಾಶವಿರುತ್ತದೆ. ಠೇವಣಿ ಹಣವನ್ನು ಸಾಮಾನ್ಯ ಅಭ್ಯರ್ಥಿಗೆ 25 ಸಾವಿರ ರು. , ಪ.ಜಾತಿ/ಪ.ಪಂಗಡದ ಅಭ್ಯರ್ಥಿಗೆ 12,500/- ರೂ.ಗಳಿಗೆ ನಿಗಧಿಪಡಿಸಲಾಗಿದೆ. ಇದನ್ನು ಚುನಾವಣಾಧಿಕಾರಿಗಳ ಕಛೇರಿಯಲ್ಲಿ ನಗದಾಗಿ ನೀಡಿ ರಸೀದಿ ಪಡೆಯಬೇಕು. ಈ ರಸೀದಿ ಹಾಗೂ ಅಭ್ಯರ್ಥಿಯ ಜಾತಿ ಪ್ರಮಾಣ ಪತ್ರವನ್ನು ನಾಮಪತ್ರದೊಂದಿಗೆ ಲಗತ್ತಿಸಿ ಸಲ್ಲಿಸಬೇಕು ಎಂದು ತಿಳಿಸಿದರು.

ಮಾನ್ಯತೆ ಪಡೆದ ರಾಷ್ಟ್ರೀಯ ಮತ್ತು ರಾಜ್ಯ ರಾಜಕೀಯ ಪಕ್ಷಗಳು ಅಭ್ಯರ್ಥಿಗಳು ಫಾರ್ಮ್‌-ಎ ಮತ್ತು ಫಾರ್ಮ್‌-ಬಿಗಳನ್ನು ನಾಮಪತ್ರ ಸಲ್ಲಿಕೆಯ ಕೊನೆಯ ದಿನ ಅಂದರೆ ಏಪ್ರಿಲ್ ೪ರಂದು ಮಧ್ಯಾಹ್ನ 3 ಗಂಟೆಯ ಒಳಗಾಗಿ ಸಲ್ಲಿಸಬೇಕು. ನಾಮಪತ್ರದ ಜೊತೆ ಇತ್ತೀಚಿನ ಅಂದರೆ ಮೂರು ತಿಂಗಳೊಳಗಿನ ಭಾವಚಿತ್ರವನ್ನು ಲಗತ್ತಿಸಬೇಕು. ಭಾವಚಿತ್ರದ ಹಿಂಭಾಗದಲ್ಲಿ ಬಿಳಿ ಬಣ್ಣದ್ದಾಗಿರಬೇಕು. ಕ್ಯಾಪ್, ಹ್ಯಾಟ್, ಡಾರ್ಕ್ ಸನ್ ಗ್ಲಾಸಸ್, ಯೂನಿಫಾರಂ ಇರುವ ಭಾವಚಿತ್ರಗಳಿಗೆ ಅವಕಾಶವಿರುವುದಿಲ್ಲ .

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ. ಕರಾಳೆ, ಚುನಾವಣಾ ತಹಸೀಲ್ದಾರ್ ರೇಷ್ಮ, ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು. ----------------------

ಈ ಎರಡು ದಿನ ನಾಮಪತ್ರ ಸ್ವೀಕಾರ ಇಲ್ಲ:

ಸಾರ್ವತ್ರಿಕ ರಜಾ ದಿನಗಳಾದ ಮಾರ್ಚ್ 29ರ ಗುಡ್ ಫ್ರೈ ಡೇ ಹಾಗೂ ಮಾ.31ರ ಭಾನುವಾರ ಅಭ್ಯರ್ಥಿಗಳಿಂದ ನಾಮಪತ್ರ ಸ್ವೀಕಾರ ಇಲ್ಲ.

---------------------------

ನಾಮಪತ್ರ ಸ್ವೀಕಾರ ಸಮಯ:ಬೆಳಗ್ಗೆ 11 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಮತ್ತು ಏಪ್ರಿಲ್ ೪ರಂದು ಕೊನೆಯ ದಿನವಾಗಿರುವುದರಿಂದ ಮಧ್ಯಾಹ್ನ 3 ಗಂಟೆಯ ವರೆಗೂ ಸಲ್ಲಿಕೆಗೆ ಅವಕಾಶವಿದೆ.

------------------- ಠೇವಣಿ ಹಣ ಎಷ್ಟು?

ಠೇವಣಿ ಹಣವನ್ನು ಸಾಮಾನ್ಯ ಅಭ್ಯರ್ಥಿಗೆ 25 ಸಾವಿರ ರು. , ಪ.ಜಾತಿ/ಪ.ಪಂಗಡದ ಅಭ್ಯರ್ಥಿಗೆ 12,500/- ರು.ಗಳಿಗೆ ನಿಗದಿಪಡಿಸಲಾಗಿದೆ.